ಇತ್ತೀಚಿನ ಸುದ್ದಿ
ಇಲ್ಲಿ ಒಂದು ವರ್ಷ ಎಂದರೆ ಬರೇ 22 ಗಂಟೆ ಮಾತ್ರ!!: ಪತ್ತೆಯಾಯ್ತು ಆಲೂಗಡ್ಡೆ ರೂಪದ ಗ್ರಹ
16/01/2022, 09:34
ವಾಷಿಂಗ್ಟನ್(reporterkarnataka.com): ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಆಲೂಗಡ್ಡೆ ಅಥವಾ ರಗ್ಬಿಯನ್ನು ಹೋಲುವ ಗ್ರಹವೊಂದನ್ನು ಪತ್ತೆ ಹಚ್ಚಿದ್ದಾರೆ.
WASP-103b ಎಂಬ ಗ್ರಹವನ್ನು ಗುರುತಿಸಿದ್ದು, ಈ ಗ್ರಹ ಹರ್ಕ್ಯುಸಲ್ ನಕ್ಷತ್ರಪುಂಜದಲ್ಲಿದೆ. ಭೂಮಿಯಿಂದ 1,800 ಜ್ಯೋತಿವರ್ಷ ದೂರದಲ್ಲಿದೆ.
ಈ ಗ್ರಹವು ನೋಡಲು ಆಲೂಗಡ್ಡೆ ಅಥವಾ ರಗ್ಬಿಯ ಮಾದರಿಯಲ್ಲಿ ಇದೆ. WASP-103b ಗ್ರಹವು ಸೂರ್ಯನಿಗೆ ಹತ್ತಿರದಲ್ಲೇ ಇದೆ. ಅಂದರೆ ಭೂಮಿಯು ಸೂರ್ಯನ ಸುತ್ತ ಒಂದು ಸುತ್ತು ಹಾಕಲು 365 ದಿನಗಳು ಬೇಕು. ಆದರೆ WASP-103b ಸೂರ್ಯನಿಂದ ಸುಮಾರು 50 ಪಟ್ಟು ಹತ್ತಿರದಲ್ಲೇ ಇದೆ. ಈ ಗ್ರಹ ಕೇವಲ 22 ಗಂಟೆಯಲ್ಲಿ ತನ್ನ ಸೂರ್ಯನನ್ನು ಒಂದು ಸುತ್ತು ಸುತ್ತುತ್ತದೆ. ಈ ಗ್ರಹದಲ್ಲಿ ಒಂದು ವರ್ಷ ಎಂದರೆ 22 ಗಂಟೆಗಳು ಮಾತ್ರ.
2014 ರಲ್ಲೇ ಈ ಗ್ರಹವನ್ನು ಮೊದಲ ಬಾರಿಗೆ ಗುರುತಿಸಲಾಗಿತ್ತು. ಇದೀಗ ಅದರ ಆಕಾರವನ್ನು ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆ ಖಚಿತಪಡಿಸಿದೆ. ಅತಿಥೇಯ ನಕ್ಷತ್ರದ ಸಾಮೀಪ್ಯದಿಂದ ಉಂಟಾದ ಗ್ರಹದ ಬಲವಾದ ಉಬ್ಬರವಿಳಿತದ ಶಕ್ತಿಯ ಕಾರಣದಿಂದಾಗಿ ಬೇರೆ ಗ್ರಹಗಳ ರೀತಿ ಇದು ಗುಂಡಾಗಿಲ್ಲ. ಇದರ ಆಕಾರ ವಿಭಿನ್ನವಾಗಿದೆ ಎಂದಿದ್ದಾರೆ.
ಸಂಶೋಧನೆಯ ಸಹ ಲೇಖಕರಾದ ಪ್ಯಾರಿಸ್ ಅಬ್ಸರ್‌ವೇಟರಿಯ ಜಾಕ್ವೆಸ್ ಲಸ್ಕರ್ ಹೇಳುವಂತೆ ಈ ಗ್ರಹದ ಆಕಾರ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಮೊದಲ ಬಾರಿಗೆ ಈ ಆಕಾರದ ಗ್ರಹ ಕಂಡುಬಂದಿದೆ. ಈ ಗ್ರಹವನ್ನು ಗಮನಿಸಲಾಗುವುದು, ಸೂರ್ಯನಿಗೆ ಬಹಳ ಸಮೀಪ ಇರುವ ಕಾರಣ ಇಲ್ಲಿ ಅತಿಯಾದ ಬಿಸಿ ವಾತಾವರಣ ಇರಲಿದೆ ಎಂದು ಹೇಳಿದ್ದಾರೆ. ಗುರು ಗ್ರಹಕ್ಕಿಂತ ಒಂದೂವರೆ ಪಟ್ಟು ದೊಡ್ಡದಾದ ಗಾತ್ರ ಈ ಗ್ರಹಕ್ಕಿದೆ ಎಂದು ಅಂದಾಜಿಸಲಾಗಿದೆ.