ಇತ್ತೀಚಿನ ಸುದ್ದಿ
ತವರಿಗೆ ಬಂದ ಸೇನಾನಿಗಳಿಗೆ ಅದ್ದೂರಿ ಸ್ವಾಗತ: ಹೂ ಕೊಟ್ಟು ಹೀರೋಗಳಿಗೆ ಸೆಲ್ಯೂಟ್ ಮಾಡಿದ ಪುಟಾಣಿಗಳು.!
09/01/2022, 22:02
ಚಿಕ್ಕಮಗಳೂರು(reporterkarnataka.com): ಇಡೀ ಜೀವನವನ್ನೇ ಸೇವೆಗಾಗಿ ಮುಡಿಪಾಗಿಟ್ಟು ಹುಟ್ಟೂರಿಗೆ ಬಂದ ಯೋಧರಿಗೆ ಅದ್ದೂರಿ ಸ್ವಾಗತ ಕೋರಲಾಯಿತು.
ದೇಶ ಕಾಯುವ ಹೀರೋಗಳಿಗೂ ಕೊಟ್ಟ ಸ್ವಾಗತ ನಿಜಕ್ಕೂ ವೀರ ಯೋಧರನ್ನು ಮೂಕ ವಿಸ್ಮಿತಗೊಳಿಸಿತು.
ಅಲ್ಲಿ ಇಡೀ ಊರಿಗೆ ಊರೇ ಹಬ್ಬದ ಸಡಗರದಲ್ಲಿ ಮುಳುಗಿತ್ತು. ಎತ್ತ ನೋಡಿದ್ರೂ ಪಟಾಕಿಯ ಸದ್ದು, ಡೊಳ್ಳಿನ ಕುಣಿತ..! ಭಾರತಾಂಬೆಗೆ ಜೈ, ವೀರಯೋಧರಿಗೆ ಜೈ ಅನ್ನೋ ಜೈಕಾರ..! ರಸ್ತೆಯುದ್ದಕ್ಕೂ ನಿಂತು ತಮ್ಮ ನೆಚ್ಚಿನ ಹೀರೋಗಳಿಗೆ ಶಾಲಾ ಮಕ್ಕಳು ಸ್ವಾಗತ ಕೋರುತ್ತಿದ್ದರು..!
ಅಷ್ಟಕ್ಕೂ ಈ ಸಡಗರ ಸಂಭ್ರಮಕ್ಕೆ ಕಾರಣವಾಗಿದ್ದು ಆ ಮೂವರು ಯೋಧರು.
ಈ ದೃಶ್ಯ ಕಂಡು ಬಂದಿದ್ದು ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ.. ಭಾರತಾಂಬೆಯನ್ನ ಸೇವೆ ಮುಗಿಸಿ ಯೋಧರು ತಮ್ಮೂರಿನ ಬರುವಿಕೆಯನ್ನು ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಗ್ರಾಮದ ವೃದ್ಧರವರೆಗೂ ಕಾತರ-ಕುತೂಹಲದಿಂದ ನೋಡುತ್ತಿದ್ದರು.
ಭಾರತೀಯ ಸೇನೆಯಲ್ಲಿ ಬರೋಬ್ಬರಿ 20ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ತವರೂರಿಗೆ ಆಗಮಿಸಿದ ಏರ್ಫೋರ್ಸ್ ನ ಆರ್ ಶ್ರೀಕಾಂತ್, ಬಿಎಸ್ಎಫ್ ನ ಕೃಷ್ಣಮೂರ್ತಿ, ಗುರಪ್ಪರವರನ್ನು ಅದ್ಧೂರಿಯಾಗಿ ಸ್ವಾಗತಿಸಿದ ಅಜ್ಜಂಪುರದ ಜನತೆ ಆತ್ಮೀಯವಾಗಿ ಬರಮಾಡಿಕೊಂಡರು.
ಪಟ್ಟಣದ ಮೂರ್ನಾಲ್ಕು ಕಿಲೋ ಮೀಟರ್ ತೆರೆದ ಜೀಪಿನಲ್ಲಿ ರಾಲಿ ಮಾಡಿ ಸಂಭ್ರಮಿಸಿದರು. ದಾರಿಯುದ್ದಕ್ಕೂ ಭಾರತ್ ಮಾತಾಕಿ ಜೈ, ವಂದೇ ಮಾತರಾಂ ಅನ್ನೋ ಘೋಷ ವಾಕ್ಯ ಮೊಳಗಿತ್ತು.
ವೀರ ಯೋಧರು ಊರಿಗೆ ಆಗಮಿಸುತ್ತಿದ್ದಂತೆ ಶಾಲಾ ಮಕ್ಕಳು ತಮ್ಮ ನೆಚ್ಚಿನ ಹೀರೋಗಳಿಗೆ ಹೂ ನೀಡಿ, ಸೆಲ್ಯೂಟ್ ಹೊಡೆದು ದೇಶಪ್ರೇಮ ಮೆರದರು.
ತಮ್ಮೂರಿನ ಜನರು ನೀಡಿದ ಗ್ರ್ಯಾಂಡ್ ವೆಲ್ಕಂ ನೋಡಿ ಮೂವರು ಯೋಧರು ಸೇವೆಯ ಸಾರ್ಥಕತೆ ಅನುಭವಿಸಿದರು. ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಬಂದಾಗ ಈ ರೀತಿಯ ಒಂದು ಸತ್ಕಾರ ಸಿಗುತ್ತೆ ಅನ್ನೋ ಕಲ್ಪನೆ ಯೋಧರಿಗಿರಲಿಲ್ಲ.
ಯೋಧರಿಗೆ ಜೈಕಾರ ಹಾಕಿ ದೇಶಪ್ರೇಮ ಮೆರೆದರು.