ಇತ್ತೀಚಿನ ಸುದ್ದಿ
ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ: ಬಿಜೆಪಿಗೆ ಹಿನ್ನಡೆ, ಕಾಂಗ್ರೆಸ್ ಮೇಲುಗೈ; ಇದು ಆಡಳಿತ ವಿರೋಧಿ ಅಲೆಯೇ?
30/12/2021, 23:10
ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ರಾಜ್ಯದ ವಿವಿಧ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿಗೆ ಹಿನ್ನಡೆ ಉಂಟಾಗಿದ್ದು, ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಇದರೊಂದಿಗೆ ಪಕ್ಷೇತರರು ಕೂಡ ಪ್ರಾಬಲ್ಯ ಮೆರೆದಿದ್ದಾರೆ.
ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಇಂದು ಹೊರಬಿದ್ದಿದೆ. ಆಡಳಿತರೂಢ ಬಿಜೆಪಿಗಿಂತ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಹಲವು ಕಡೆಗಳಲ್ಲಿ ಪಕ್ಷೇತರರು ಜಯ ಸಾಧಿಸಿದ್ದಾರೆ.
ರಾಜ್ಯದಲ್ಲಿ 5 ನಗರಸಭೆ, 19 ಪುರಸಭೆ, 34 ಪಟ್ಟಣ ಪಂಚಾಯಿತಿಗಳ 1185 ವಾರ್ಡ್‍ಗಳಿಗೆ ನಡೆದ ಚುನಾವಣೆ ನಡೆದಿತ್ತು. ಇದರಲ್ಲಿ ಕಾಂಗ್ರೆಸ್ ಪ್ರಥಮ, ಬಿಜೆಪಿ ದ್ವಿತೀಯ ಸ್ಥಾನ ಪಡೆದಿದೆ.
ಪಟ್ಟಣ ಪಂಚಾಯಿತಿ ಒಟ್ಟಾರೆ 1185 ವಾರ್ಡ್‍ಗಳಲ್ಲಿ ಕಾಂಗ್ರೆಸ್ 501, ಬಿಜೆಪಿ 431 ಅಭ್ಯರ್ಥಿಗಳು ಜಯಗಳಿಸಿದೆ. ಜೆಡಿಎಸ್‍ನಿಂದ 45 ಅಭ್ಯರ್ಥಿಗಳು ವಿಜೇತರಾಗಿದ್ದಾರೆ.
ಪಕ್ಷೇತರರು 207 ಕಡೆ ಗೆಲವು ಪಡೆದಿದ್ದಾರೆ.ನಗರಸಭೆಯಲ್ಲಿ ಬಿಜೆಪಿಯೇ ಮುನ್ನಡೆ ಸಾಧಿಸಿದೆ.
ಒಟ್ಟು 166 ಸ್ಥಾನಗಳಲ್ಲಿ 67 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಪ್ರಬಲ ಪೈಪೋಟಿಯೊಡ್ಡಿರುವ ಕಾಂಗ್ರೆಸ್ 61ರಲ್ಲಿ ಜಯ ಸಾಧಿಸಿದರೆ ಜೆಡಿಎಸ್ 12ರಲ್ಲಿ ಗೆದ್ದಿದೆ. ಪಕ್ಷೇತರರು 26 ಸ್ಥಾನಗಳಲ್ಲಿ ಗೆಲುವಿನ ನಗೆ ಸೂಸಿದ್ದಾರೆ. 5 ನಗರಸಭೆಗಳ ಪೈಕಿ ಚಿಕ್ಕಮಗಳೂರು ಮತ್ತು ಹೆಬ್ಬಗೋಡಿಯಲ್ಲಿ, ಗದಗ ಬೆಟಗೆರಿಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಶಿರಾ, ಹೊಸಪೇಟೆಯಲ್ಲಿ ಅತಂತ್ರ ಫಲಿತಾಂಶ ಬಂದಿದ್ದು, ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ಮುಂದಾಗಿದೆ. 19 ಪುರಸಭೆಗಳಲ್ಲಿ 7 ಕಡೆ ಕಾಂಗ್ರೆಸ್ ಅಧಿಕಾರ ಹಿಡಿಯುವ ಬಹುಮತ ಸಾಧಿಸಿದೆ. 5ರಲ್ಲಿ ಬಿಜೆಪಿ, 4ರಲ್ಲಿ ಅತಂತ್ರ ಪರಿಸ್ಥಿತಿ ಉಂಟಾಗಿದೆ. ಒಂದು ಕಡೆ ಪಕ್ಷೇತರರು ಪ್ರಾಬಲ್ಯ ಸಾಧಿಸಿ ಅಧಿಕಾರ ಹಿಡಿಯುವತ್ತ ಸಾಗಿದ್ದಾರೆ.