ಇತ್ತೀಚಿನ ಸುದ್ದಿ
ಬಾಳೆಹೊನ್ನೂರು: ಹೆರಿಗೆ ವೇಳೆ ತಾಯಿ-ಮಗು ಸಾವು; ಪ್ರತಿಭಟನಾಕಾರರ ಚದುರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ
12/12/2021, 23:03
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ವೈದ್ಯರ ನಿರ್ಲಕ್ಷ್ಯದಿಂದ ತುಂಬು ಗರ್ಭಿಣಿಯೊಬ್ಬರು ಮೃತಪಟ್ಟಿದ್ದು, ತಾಯಿ ಹೊಟ್ಟೆಯಲ್ಲೇ ಹಸುಗೂಸು ಕೂಡ ಸಾವನ್ನಪ್ಪಿದ ದಾರುಣ ಘಟನೆಯನ್ನು ವಿರೋಧಿಸಿ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರ ಎದುರು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ವೈದ್ಯರ ನಿರ್ಲಕ್ಷ್ಯ ದಿಂದ ಬಾಳೆಹೊನ್ನೂರು ನಿವಾಸಿ ಶ್ವೇತಾ (27) ಎಂಬ ಗರ್ಭಿಣಿ ಯುವತಿ ಮೃತಪಟ್ಟಿದ್ದರು. ಇದನ್ನು ವಿರೋಧಿಸಿ ಮೃತರ ಸಂಬಂಧಿಕರು ಹಾಗೂ ಸ್ಥಳೀಯರು ವೈದ್ಯರನ್ನು ಬಂಧಿಸುವಂತೆ ಆಗ್ರಹಿಸಿ ಪ್ರಾಥಮಿಕ ಆರೋಗ್ಯ ಕೇಂದ್ರ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಒಂದು ಹಂತದಲ್ಲಿ ಪೊಲೀಸ್ ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆದು ಪೊಲೀಸರು ಗುಂಪನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.
ವೈದ್ಯ ಎಲ್ಡೋಸ್ ಅವರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಇವರು ಎನ್.ಆರ್.ಪುರ, ಶೃಂಗೇರಿಯಲ್ಲಿ ಅಮಾನತ್ತಾಗಿದ್ದ ವೈದ್ಯರು ಎನ್ನಲಾಗಿದೆ.
ಪೋಷಕರು ಗರ್ಭಿಣಿಯನ್ನ ಚಿಕ್ಕಮಗಳೂರಿಗೆ ಕರೆದೊಯ್ಯಲು ಮುಂದಾಗಿದ್ದರು. ಅಷ್ಟರಲ್ಲಿ ವೈದ್ಯರು ನಾನೇ ಹೆರಿಗೆ ಮಾಡಿಸುತ್ತೇನೆಂದು ತಡೆದರು. ಇದೀಗ ವೈದ್ಯರ ನಿರ್ಲಕ್ಷ್ಯದಿಂದ ತಾಯಿ-ಮಗು ಸಾವು ಸಂಭವಿಸಿದೆ ಎಂದು ಸಂಬಂಧಿಕರು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ.