ಇತ್ತೀಚಿನ ಸುದ್ದಿ
ಮೈಸೂರು-ಎಲಿಯೂರು ರೈಲ್ವೆ ಮಾರ್ಗದ ಸುರಕ್ಷತೆ: ತಿವಾರಿ ನೇತೃತ್ವದ ಸುರಕ್ಷತೆ ಪರಿಶೋಧನಾ ತಂಡದಿಂದ ಪರಿಶೀಲನೆ
04/12/2021, 12:00
ಮೈಸೂರು(reporterkarnataka.com):
ನೈಋತ್ಯ ರೈಲ್ವೆ ಪ್ರಧಾನ ಕಚೇರಿಯಿಂದ ಸುರಕ್ಷತಾ ಪರಿಶೋಧನಾ ತಂಡವು ಮೈಸೂರು ವಿಭಾಗದ ಮೈಸೂರು-ಎಲಿಯೂರು ಭಾಗದ ಸುರಕ್ಷತೆಯ ಪರಿಶೀಲನೆ ನಡೆಸಿತು.
ರೈಲುಗಳ ಸುರಕ್ಷಿತ ಕಾರ್ಯಾಚರಣೆಗಾಗಿ, ನಿಗದಿತ ನಿಯಮಗಳು ಮತ್ತು ಮಾರ್ಗಸೂಚಿಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮತ್ತು ಸಾಮಾನ್ಯ ನ್ಯೂನತೆಗಳನ್ನು ಗುರುತಿಸಲು, ನೈಋತ್ಯ ರೈಲ್ವೆ ಪ್ರಧಾನ ಕಚೇರಿಯ ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಅಲೋಕ್ ತಿವಾರಿ ನೇತೃತ್ವದ ರೈಲ್ವೆ ಅಧಿಕಾರಿಗಳ ಬಹು-ಇಲಾಖಾ ತಂಡವು ಎರಡು ದಿನಗಳ ಕಾಲ ಮೈಸೂರು ವಿಭಾಗದ ಮೈಸೂರು-ಎಲಿಯೂರು ಭಾಗದಲ್ಲಿ ಸುರಕ್ಷತಾ ಆಡಿಟ್ ತಪಾಸಣೆ ನಡೆಸಿತು.
ತಂಡವು ವಿದ್ಯುತ್, ಯಾಂತ್ರಿಕ, ಕಾರ್ಯಾಚರಣೆ, ಸುರಕ್ಷತೆ ಮತ್ತು ಸಂವಹನ ಮತ್ತು ದೂರಸಂಪರ್ಕ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಒಳಗೊಂಡಿತ್ತು.
ತoಡವು ಗುರುವಾರ ಶ್ರೀರಂಗಪಟ್ಟಣದಲ್ಲಿನ ಪ್ರಮುಖ ಮತ್ತು ಸಣ್ಣ ಸೇತುವೆಗಳನ್ನು ಪರಿಶೀಲಿಸಿತು. ಮಾರ್ಗದಲ್ಲಿ ನಾಗನಹಳ್ಳಿ ಹಾಗೂ
ಪಾಂಡವಪುರ ನಿಲ್ದಾಣಗಳಲ್ಲಿನ ಪಾಯಿಂಟ್‌ಗಳು ಮತ್ತು ಕ್ರಾಸಿಂಗ್‌ಗಳು, ಲೆವೆಲ್ ಕ್ರಾಸಿಂಗ್ ಗೇಟ್‌ಗಳು ಮತ್ತು ಮೈಸೂರು-ಬೆಂಗಳೂರು ಹಳಿ ದ್ವಿಪಥದ ಮುಖ್ಯ ಮಾರ್ಗದ ಟ್ರಾಕ್ಷನ್, ಉಪ ನಿಲ್ದಾಣಗಳನ್ನು ಸಹ ಪರಿಶೀಲಿಸಿತು.
ಲೆವೆಲ್ ಕ್ರಾಸಿಂಗ್ ಗೇಟ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯೊoದಿಗೆ ಅಧಿಕಾರಿಗಳು ಮಾತನಾಡಿ ಲೆವೆಲ್ ಕ್ರಾಸಿಂಗ್ ಗೇಟ್‌ಗಳನ್ನು ರಕ್ಷಿಸುವುದರ ಹೊರತಾಗಿ ರೈಲು ಬೇರ್ಪಡುವುದು ಗಮನಕ್ಕೆ ಬಂದಾಗ, ಅವರು ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗು ಇತರೆ ನಿಯಮಗಳ ಬಗ್ಗೆ, ಅವರ ಜ್ಞಾನವನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಸಂವಾದ ನಡೆಸಿದರು. ನಿಲ್ದಾಣದ ವ್ಯವಸ್ಥಾಪಕರುಗಳ ತಪಾಸಣಾ ವೇಳಾಪಟ್ಟಿಯನ್ನು ಮತ್ತು ಅವರು ನಿರ್ವಹಿಸಬೇಕಾದ ಇತರ ಪ್ರಮುಖ ದಾಖಲೆ ಪುಸ್ತಕಗಳನ್ನು ತಂಡವು ಪರಿಶೀಲಿಸಿತು.
ಮೈಸೂರಿನಲ್ಲಿ ಇಂದು ಮೈಸೂರು ನಿಲ್ದಾಣದ ಪಿಟ್‌ಲೈನ್‌ಗಳು, ಎಲೆಕ್ಟ್ರಿಕಲ್ ಇಂಟರ್‌ಲಾಕಿoಗ್, ಯಾರ್ಡ್, ಕೋಚಿಂಗ್ ಡಿಪೋ, ಸಿಬ್ಬಂದಿ ಅಂಗಳ ಮತ್ತು ಚಾಲನಾ ಸಿಬ್ಬಂದಿ ಕೊಠಡಿಯ ಎಲ್ಲಾ ಸುರಕ್ಷತಾ ಮಾನದಂಡಗಳ ಮತ್ತು ಅವುಗಳ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ತೀವ್ರ ತಪಾಸಣೆ ನಡೆಸಲಾಯಿತು. ನಂತರ ತಿವಾರಿ ಅಧ್ಯಕ್ಷತೆಯಲ್ಲಿ ಇರ್ವಿನ್ ರಸ್ತೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯ ಸಭಾಂಗಣದಲ್ಲಿ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ರೊಂದಿಗೆ ಸುರಕ್ಷತಾ ವಿಚಾರ ಸಂಕಿರಣವನ್ನು ಸಹ ನಡೆಸಲಾಯಿತು. ಸೆಮಿನಾರ್‌ನಲ್ಲಿ ಮುಖ್ಯ ಎಲೆಕ್ಟ್ರಿಕಲ್ ಜನರಲ್ ಇಂಜಿನಿಯರ್ ಆರ್.ಕೆ.ಶರ್ಮಾ, ಮುಖ್ಯ ಸಂಚಾರ ಯೋಜನಾ ವ್ಯವಸ್ಥಾಪಕ ಎಚ್.ಎಂ.ದಿನೇಶ್, ಮುಖ್ಯ ರೋಲಿಂಗ್ ಸ್ಟಾಕ್ ಎಂಜಿನಿಯರ್ ಆರ್.ವಿ.ಎನ್.ಶರ್ಮಾ ನೈಋತ್ಯ ರೈಲ್ವೆ ಮುಖ್ಯ ಜನರಲ್ ಇಂಜಿನಿಯರ್ ಮಹೇಶ್ ಕುಮಾರ್ ಉಪಸ್ಥಿತರಿದ್ದರು.
ವಲಯ ರೈಲ್ವೆಯು ಪರಿಶೋಧನೆಯ ಸಮಯದಲ್ಲಿ ಮಾಡಿದ ಅವಲೋಕನಗಳ ಕುರಿತು, ಸುರಕ್ಷತಾ ಪರಿಶೋಧನಾ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸುತ್ತದೆ.