ಇತ್ತೀಚಿನ ಸುದ್ದಿ
ಡಾ.ರಾಜೇಂದ್ರ ಕುಮಾರ್ ವಿಜಯ ಯಾತ್ರೆ ಆರಂಭ: ಚುನಾವಣಾ ಕಚೇರಿ ಉದ್ಘಾಟಿಸಿ ಐಕಳ ಹರೀಶ್ ಶೆಟ್ಟಿ
17/11/2021, 10:34
ಮಂಗಳೂರು(reporterkarnataka.com): ಪ್ರಾಮಾಣಿಕ ಜನ ಸೇವಕ, ಅತ್ಯಂತ ಸರಳ ಸಹಕಾರಿ ಧುರೀಣ ಡಾ.ಎಂ.ಎನ್. ರಾಜೇಂದ್ರ ಕುಮಾರ್‌ರ ವಿಜಯ ಯಾತ್ರೆಯು ಇಲ್ಲಿಂದಲೇ ಆರಂಭಗೊಂಡಿದೆ. ರಾಜೇಂದ್ರ ಕುಮಾರ್ ಪಕ್ಷಾತೀತ ವ್ಯಕ್ತಿ. ಸಮಾಜ ಸೇವೆಗೆ ಯಾವುದೇ ಪಕ್ಷದ ಅಗತ್ಯವಿಲ್ಲ ಎಂದು ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ಮಂಗಳವಾರ ನಗರದ ಇನ್‌ಲ್ಯಾಂಡ್ ಓರ್ನೆಟ್‌ನಲ್ಲಿ ಅವರು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ವಿಧಾನ ಪರಿಷತ್ ಚುನಾವಣಾ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಜನಸಾಮಾನ್ಯರ ಸಹಕಾರವೇ ಶಕ್ತಿಯಾಗಿದೆ. ಈ ಶಕ್ತಿಯಿಂದಲೇ ರಾಜೇಂದ್ರ ಕುಮಾರ್ ವಿಧಾನ ಪರಿಷತ್ ಸದಸ್ಯರಾಗಿ ಗೆದ್ದು ಸಚಿವರಾಗಿ ಜನಸೇವೆ ಮುಂದುವರಿಸಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ವಿಧಾನ ಪರಿಷತ್‌ನಲ್ಲಿ ಅವಕಾಶ ಕೊಡಿ ಎಂದು ಸಾಕಷ್ಟು ಬಾರಿ ಮನವಿ ಮಾಡಿದರೂ, ಸ್ಪಂದಿಸಲಿಲ್ಲ. ಹಾಗಾಗಿ ಸಹಕಾರಿಗಳ, ಸಾಮಾಜಿಕ, ಧಾರ್ಮಿಕ ಮುಖಂಡರ ಒತ್ತಡಕ್ಕೆ ಮಣಿದು ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಈಗಾಗಲೇ ಎಲ್ಲಾ ಪಕ್ಷದವರ ಜೊತೆಗೆ ಸಹಕಾರ ನೀಡಿ, ಒಂದು ಬಾರಿ ಗೆಲ್ಲಿಸಿಕೊಡುವಂತೆ ಕೇಳಿಕೊಂಡಿದ್ದೆನೆ. ನಾನು ಎಂಎಲ್‌ಸಿ ಆದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಲಿದ್ದೇನೆ. ನಾನು ಎಂಎಲ್‌ಸಿ ಆದರೆ ಎಲ್ಲರೂ ಎಂಎಲ್‌ಸಿ ಆದಂತೆ ಎಂದು ಹೇಳಿದರು.
ನಾಮಪತ್ರ ಹಿಂದಕ್ಕೆ ಪಡೆಯಲು ಬೇರೆ ಬೇರೆ ಕಡೆಯಿಂದ ಸಾಕಷ್ಟು ಒತ್ತಡಗಳು ಬರುತ್ತಿದ್ದು, ಅದಕ್ಕೆ ಸಹಕಾರಿಗಳು ಹಿಂಪಡೆಯದಂತೆ ಬೆಂಬಲಿಸುತ್ತಿದ್ದಾರೆ. ಸುಮಾರು ೬ ಸಾವಿರ ಮತದಾರರನ್ನು ತಲುಪಲು ಸಹಕಾರಿ ರಂಗದ ೪ ಲಕ್ಷ ಜನರು ನನ್ನೊಂದಿಗೆ ಇದ್ದಾರೆ ಎಂದರು.
ಉದ್ಯಮಿ ಶ್ರೀನಾಥ್ ಹೆಬ್ಬಾರ್, ಕಂಬಳ ಅಕಾಡಮಿಯ ಅಧ್ಯಕ್ಷ ಗುಣಪಾಲ ಕಡಂಬ, ಧರ್ಮಗುರುಗಳಾದ ರೆ.ಫಾ. ಸಂತೋಷ್ ಕುಮಾರ್, ಮುಹಮ್ಮದ್ ಕಾಮಿಲ್ ಸಖಾಫಿ, ಪುರೋಹಿತ ರಮೇಶ್ ಭಟ್, ಹಿರಿಯ ಸಹಕಾರಿಗಳಾದ ವಿನಯ ಕುಮಾರ್ ಸೂರಿಂಜೆ, ಈಶ್ಚರ ಭಟ್ ಪುತ್ತೂರು, ಉದ್ಯಮಿಗಳಾದ ರೋಹನ್ ಮೊಂತೆರೋ, ಸಿರಾಜ್ ಅಹ್ಮದ್ ಇನ್‌ಲ್ಯಾಂಡ್, ಲಕ್ಷ್ಮೀಶ ಭಂಡಾರಿ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಸುಂದರ ಮಾಸ್ಟರ್, ಉಡುಪಿ ಜಿಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಪ್ರಮುಖ ಸಂಘಟನೆಗಳ ಮುಖಂಡರಾದ ವರ್ಗೀಸ್ ಕಡಬ, ಜಯಕರ ಶೆಟ್ಟಿ ಇಂದ್ರಾಳಿ, ಕೆ.ಪಿ. ಥಾಮಸ್ ನೆಲ್ಯಾಡಿ, ಪ್ರಸಾದ್ ಕೌಶಲ್ಯ ಶೆಟ್ಟಿ, ವೈ. ಸುಧೀರ್ ಕುಮಾರ್, ಪದ್ಮಶೇಖರ್ ಜೈನ್ ಮತ್ತಿತರರು ಇದ್ದರು.
ಬೆಳಪು ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ,ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಶಿಕುಮಾರ್ ರೈ ಬಾಲ್ಯೊಟ್ಟು ವಂದಿಸಿದರು. ಅರ್‌ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.
22ರಂದು ಜಿಲ್ಲಾಧಿಕಾರಿ ಕಚೇರಿಗೆ ನಾಮಪತ್ರ ಸಲ್ಲಿಸಲು ತೆರಳಲಿದ್ದು, 2500 ಮತದಾರರನ್ನು ಭಾಗಹಿಸುವಂತೆ ಕೋರಲಾಗಿದೆ.10 ಜನ ಸೇರುವ ನಿರೀಕ್ಷೆ ಇದೆ. ಎಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್.