ಇತ್ತೀಚಿನ ಸುದ್ದಿ
ಹಾಜಬ್ಬರಿಗೊಂದು ಸಲಾಂ: ಕಿತ್ತಳೆ ಬುಟ್ಟಿಯಿಂದ ಶಾಲೆ ಮೆಟ್ಟಲಿನವರೆಗೆ: ಹರೇಕಳದಿಂದ ದೆಹಲಿಗೆ ಅಕ್ಷರ ಸಂತನ ಯಾನ!
22/10/2021, 08:25
ಅಶೋಕ್ ಕಲ್ಲಡ್ಕ ಮಂಗಳೂರು
info.reporterkarnataka@gmail.com
ಮೊಣಕಾಲಿನಿಂದ ಮೇಲೆ ಉಟ್ಟ ಬಿಳಿ ಪಂಚೆ, ಮೇಲೊಂದು ಮಾಸಿದ ಬಿಳಿ ಶರ್ಟ್, ಕಾಲಿಗೆ ಹವಾಯಿ ಚಪ್ಪಲಿ, ಕೈಯಲ್ಲಿ ಕಿತ್ತಳೆ ಬುಟ್ಟಿ. ಇದು ಅಕ್ಷರ ಸಂತ ಹರೇಕಳ ಹಾಜಬ್ಬ ಅವರ ನಿಜ ಸ್ವರೂಪ. ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಗೊಂಡ ಹಾಜಬ್ಬ ಅವರು ನವೆಂಬರ್ 8ರಂದು ಹೊಸದಿಲ್ಲಿಯಲ್ಲಿ ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕರಿಸಲಿರುವರು.
ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾದಾಗ ನಾನು ವಿಜಯ ಕರ್ನಾಟಕದಲ್ಲಿ ರಿಪೋರ್ಟರ್ ಆಗಿದ್ದೆ. ಹಾಜಬ್ಬ ಅವರ ಭೇಟಿಗೆ
ಮಂಗಳೂರಿನ ಪತ್ರಕರ್ತರ ತಂಡದೊಂದಿಗೆ ಅವರ ಮನೆಗೆ ಹೋಗಿದ್ದೆ. ತುಂಬಾ ಸಂಕೋಚ ಸ್ವಭಾವದ ಅಕ್ಷರ ಪ್ರೇಮಿ. ಮಗುವಿನ ಮುಗ್ಧತೆ, ಭಗೀರಥನ ಛಲ, ಕೋಮಲ ಹೃದಯ. ನಮ್ಮನ್ನು ಕಾಣುತ್ತಿದ್ದಂತೆ ಮನೆಯಲ್ಲಿ ಕೊಡಲು ಏನಿಲ್ಲ ಅಂತ ಹಪಹಪಿಸಲಾರಂಭಿಸಿದರು. ನಿಂತಲ್ಲಿ ನಿಲ್ಲದ ಅವರು ಯಾರನ್ನೋ ಕರೆದು ಮನೆಯ ತಂಗಿನ ಮರದಿಂದ ಸೀಯಾಳ ಇಳಿಸಿಯೇ ಬಿಟ್ಟರು.
ಹಾಜಬ್ಬ ಅವರು ಬಹಳ ಕಷ್ಟದಿಂದ ಕಟ್ಟಿದ ಅಚ್ಚುಕಟ್ಟಾದ ಸಣ್ಣ ಮನೆ ಅದು. ಮನೆಯ ಒಂದು ಕೊಠಡಿ ತುಂಬಾ ಪ್ರಶಸ್ತಿಗಳ ಸಾಲು ಸಾಲು. ಇದರ ಮೇಲೆಲ್ಲ ಕಣ್ಣಾಡಿಸಿದ ಬಳಿಕ ಹಾಜಬ್ಬ ಅವರು ಮಾತಿಗೆ ಸಿಕ್ಕಿದರು. ಒಂದು ಕಡೆ ಕುಳಿತು ಮಾತನಾಡುವ ಜಾಯಮಾನ ಅವರದಲ್ಲ, ಅಷ್ಟು ಕ್ರಿಯಾಶೀಲ ವ್ಯಕ್ತಿತ್ವ ಅವರದ್ದು.
ರಾಜ್ಯದ ಶಿಕ್ಷಣ ಇಲಾಖೆಗೆ ಹಾಜಬ್ಬರಿಂದ ಕೀರ್ತಿ ಬಂದಿದೆ, ಘನತೆ ಹೆಚ್ಚಿದೆ. ಮಂಗಳೂರಿನಲ್ಲಿ ಶಿಕ್ಷಣವನ್ನೇ ವ್ಯಾಪಾರ ಮಾಡಿಕೊಂಡು
ಸಾಮ್ರಾಜ್ಯ ವಿಸ್ತರಿಸಿದವರು, ಯುನಿವರ್ಸಿಟಿ ಕಟ್ಟಿದವರು ಸಾಕಷ್ಟು ಮಂದಿ ಇದ್ದರೂ ಇದೆಲ್ಲ ಶಿಕ್ಷಣದ ಮಾರಾಟವಾಗಿರುವುದರಿಂದ ಪದ್ಮಶ್ರೀ ಹಾಜಬ್ಬರಿಗೆ ಒಲಿದು ಬಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಅವರ ಸಾಧನೆಗಾಗಿ ಪದ್ಮ ಪ್ರಶಸ್ತಿ ಬಂದಿರುವುದರಿಂದ ಅಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹುಡುಕಿಕೊಂಡು ಹಾಜಬ್ಬ ಅವರ ಶಾಲೆಗೆ ಬಂದಿದ್ದರು.
ತಾನು ಅಕ್ಷರ ಕಲಿಯದಿದ್ದರೂ ತನ್ನ ಊರಿನ ಮಕ್ಕಳು ಅಕ್ಷರದಿಂದ ವಂಚಿತರಾಗಬಾರದೆಂಬ ಕಳಕಳಿ ಹಾಜಬ್ಬರನ್ನು ಕಿತ್ತಳೆ ಬುಟ್ಟಿಯಿಂದ ಶಾಲೆಯತ್ತ ಪಯಣಿಸುವಂತೆ ಮಾಡಿತು. ತಾನು ಕಟ್ಟಿಸಿದ ಆ ಶಾಲೆಯನ್ನು ಅವರೆಷ್ಟು ಪ್ರೀತಿಸುತ್ತಿದ್ದಾರೆ ಎಂದರೆ
ಶಾಲೆಯ ಬೀಗ ತೆರೆಯುವುದು ಕೂಡ ಹಾಜಬ್ಬ ಅವರೇ.ಮಕ್ಕಳು ಬರುವ ಮುಂಚೆಯೇ ಅವರು ಶಾಲೆಯ ಜಗುಲಿಯಲ್ಲಿ ಹಾಜರು. ಇವತ್ತಿಗೂ ಬೆಳಗ್ಗೆ ಬಂದು ಶಾಲೆಯ ಜಗುಲಿ ಮೇಲೆ ಕೂರುತ್ತಾರೆ. ಪದ್ಮಶ್ರೀ ಪ್ರಶಸ್ತಿ ವಿಜೇತ ಅನ್ನೋ ಯಾವುದೇ ತಾಕಲಾಟ ಅವರ ಮನಸ್ಸಿನಲ್ಲಿ ಇಲ್ಲ.