ಇತ್ತೀಚಿನ ಸುದ್ದಿ
ಕರಾವಳಿಯಲ್ಲಿ ಹೆಚ್ಚುತ್ತಿರುವ ನೈತಿಕ ಪೊಲೀಸ್ ಗಿರಿ: ಮುಖ್ಯಮಂತ್ರಿ ಬೊಮ್ಮಾಯಿ ಮಂಗಳೂರಿನಲ್ಲಿ ಹೇಳಿದ್ದೇನು?
13/10/2021, 12:44
ಮಂಗಳೂರು(reporterkarnataka.com): ಕರಾವಳಿ ಭಾಗದಲ್ಲಿ ಆಗಾಗ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟಾಗೆ ಮಾತನಾಡಿದ್ದಾರೆ. ಸಮಾಜದಲ್ಲಿ ಹಲವಾರು ಭಾವನೆಗಳಿವೆ. ಇವುಗಳಿಗೆ ಧಕ್ಕೆಯಾಗದ ಹಾಗೆ ಸೌಹಾರ್ದತೆಯಿಂದ ನಾವು ಬದುಕಬೇಕು. ಆದರೆ ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆಕ್ಷನ್ ಆ್ಯಂಡ್ ರಿಯಾಕ್ಷನ್ ನಡೆಯುತ್ತದೆ ಎಂದು ಒಂದು ರೀತಿಯಲ್ಲಿ ಅನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿ ಸಿಎಂ ಮಾತನಾಡಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ನೈತಿಕ ಪೊಲೀಸ್ ಗಿರಿ ಕುರಿತು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಈ ರೀತಿ ಹಾರಿಕೆ ಉತ್ತರ ನೀಡಿದರು.
ಕಾನೂನು ಸುವ್ಯವಸ್ಥೆ ಜತೆಗೆ ಸಾಮಾಜಿಕ ಸಾಮರಸ್ಯ ಕಾಪಾಡುವುದು ಸರಕಾರದ ಕರ್ತವ್ಯ. ಯುವಕರು ಕೂಡ ಸಾಮಾಜಿಕ ಸಾಮಸ್ಯಕ್ಕೆ ಧಕ್ಕೆಯಾಗದ ಹಾಗೆ ನೋಡಿಕೊಳ್ಳಬೇಕು. ನೈತಿಕತೆ ಇಲ್ಲದೆ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ. ಶಾಂತಿ ಸುವ್ಯವಸ್ಥೆ ನಮ್ಮ ನೈತಿಕತೆಯನ್ನು ಅವಲಂಬಿಸಿ ಇದೆ ಎಂದು ಅವರು ನುಡಿದರು.
ಗಡಿ ಭಾಗದಲ್ಲಿ ಕೋವಿಡ್ ನಿಬಂಧನೆಯ ಕುರಿತು ದಸರಾ ಮುಗಿದ ತಕ್ಷಣ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು. 1ನೇ ತರಗತಿಯಿಂದ ಶಾಲೆ ಆರಂಭಿಸುವ ಕುರಿತು ಕೂಡ ಅದೇ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಬೊಮ್ಮಾಯಿ ನುಡಿದರು.