ಇತ್ತೀಚಿನ ಸುದ್ದಿ
ಕೋಮು ಪ್ರಚೋದನೆ ಆರೋಪ: ಚೈತ್ರಾ ಕುಂದಾಪುರ ವಿರುದ್ದ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲು
08/10/2021, 16:10
ಮಂಗಳೂರು(reporterkarnataka.com):
ಸುರತ್ಕಲ್‌ನಲ್ಲಿ ಭಜರಂಗದಳ ಮತ್ತು ದುರ್ಗಾವಾಹಿನಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಚೈತ್ರಾ ಕುಂದಾಪುರ ಎಂಬವರ ಮೇಲೆ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಮಾವೇಶದಲ್ಲಿ ಚೈತ್ರಾ ಅವರು ಮುಸ್ಲಿಂ ಮಹಿಳೆಯರನ್ನು ಮತ್ತು ತುಳುನಾಡಿನ ದೈವಗಳಾದ ಕೋಟಿಚೆನ್ನಯ್ಯ ಅವರನ್ನು ಕೆಟ್ಟದಾಗಿ ಉದಾಹರಿಸಿ ಕೋಮುಗಲಭೆಗೆ ಪ್ರಚೋದಿಸಿದ್ದರು ಎಂದು ರಾಜ್ಯ ಕಾಂಗ್ರೆಸ್ ಸಂಯೋಜಕ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರು ಸುರತ್ಕಲ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಚೈತ್ರಾ ಕುಂದಾಪುರ ಮತ್ತು ಕಾರ್ಯಕ್ರಮ ಸಂಘಟಿಸಿದವರನ್ನು ಬಂಧಿಸಬೇಕು ಎಂದು ದೂರಿನಲ್ಲಿ ವಿನಂತಿಸಿದ್ದಾರೆ.
ಕೋಟಿ ಚೆನ್ನಯ್ಯ ಅವರನ್ನು ಕಾರ್ಯಕ್ರಮದಲ್ಲಿ ಅವಮಾನಿಸಿದ್ದಾರೆ. ದೈವಗಳ ಕೈಯ್ಯಲ್ಲಿ ಇರುವುದು ಸುರಿಯ ಎಂಬ ಆಯುಧವೇ ಹೊರತು, ತಲವಾರು ಅಲ್ಲ. ತಲವಾರು ಹಿಡಿಯುವುದು ರೌಡಿಗಳು, ದುಷ್ಟರು. ತುಳುನಾಡಿನ ಮಹಾಪುರುಷರು ಹೋರಾಡಿದ್ದು ಆಗಿನ ಜಮೀನ್ದಾರಿ ವಿರುದ್ದವೆ ಹೊರತು ಮುಸ್ಲಿಮರ ವಿರುದ್ದ ಅಲ್ಲ. ಆದರೆ ಇವರು ದೈವಗಳ ಕುರಿತು ತಪ್ಪು ಕಲ್ಪನೆಯನ್ನು ಜನರ ತಲೆಗೆ ತುಂಬಿಸಿ ಕೋಮುಗಲಭೆಗೆ ಪ್ರಚೋದಿಸಿದ್ದಾರೆ ಎಂದು ಚಿತ್ತರಂಜನ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.