ಇತ್ತೀಚಿನ ಸುದ್ದಿ
ಗುಲಾಬ್ ಚಂಡಮಾರುತ: ರಾಜ್ಯದ ಕರಾವಳಿ ಸೇರಿದಂತೆ ಹಲವೆಡೆ ಮಳೆ; ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರದಲ್ಲಿ ಭಾರಿ ವರ್ಷಾಧಾರೆ
27/09/2021, 10:03
ಹೊಸದಿಲ್ಲಿ(reporterkarnataka.com): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಕರ್ನಾಟಕದ ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಹಾಗೂ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ತೀರಗಳಲ್ಲಿ ಮುಂದಿನ 3 ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೋಮವಾರ ಮುಂಜಾನೆಯಿಂದಲೇ ಹಗುರದಿಂದ ಸಾಧಾರಣ ಮಳೆಯಾಗುತ್ತಿದೆ. ದಕ್ಷಿಣ ಕನ್ನಡದ ಮಂಗಳೂರು ನಗರದಲ್ಲಿ ಮುಂಜಾನೆಯಿಂದಲೇ ಸಂಪೂರ್ಣ ಮೋಡ ಕವಿದ ವಾತಾವರಣ ನೆಲೆಸಿದ್ದು, ಹಗುರ ಮಳೆಯಾಗುತ್ತಿದೆ. ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿಯೂ ಮಳೆಯಾಗುತ್ತಿದೆ. ಚಂಡಮಾರುತದ ಪರಿಣಾಮ ರಾಜ್ಯದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ತಿಳಿದು ಬಂದಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸೆಪ್ಟೆಂಬರ್ 28ರವರೆಗೂ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ವಾಯುಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತವನ್ನು ಗುಲಾಬ್ ಎಂದು ಹೆಸರಿಸಲಾಗಿದೆ. ಗುಲಾಬ್ ಚಂಡ ಮಾರುತದ ವೇಗ ಗಂಟೆಗೆ 70-80 ಕಿ.ಮೀ. ಇರಲಿದೆ. ಚಂಡಮಾರುತ ಹಾದುಹೋಗಲಿರುವ ಕಾಳಿಂಗಪಟ್ಟಣಂ, ವಿಶಾಖಪಟ್ಟಣಂ ಮತ್ತು ಗೋಪಾಲಪುರಗಳಲ್ಲಿ ಈಗಾಗಲೇ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಗೋಪಾಲಪುರದಿಂದ ಪೂರ್ವ-ಆಗ್ನೇಯ ದಿಕ್ಕಿನಲ್ಲಿ 470 ಕಿ.ಮೀ. ದೂರ ಮತ್ತು ಕಾಳಿಂಗಪಟ್ಟಣಂನ ಪೂರ್ವದಲ್ಲಿ 540 ಕಿ.ಮೀ. ದೂರದಲ್ಲಿ ತೀವ್ರವಾದ ವಾಯುಭಾರ ಕುಸಿತ ಆಗಿರುವ ಹಿನ್ನೆಲೆ ಗುಲಾಬ್ ಚಂಡಮಾರುತ ಏಳಲಿದೆ.
ಈ ನಡುವೆ ಚಂಡಮಾರುತದ ಪ್ರಭಾವ ಹೆಚ್ಚಾಗಿ ಉಂಟಾಗಲಿರುವ ಪರಿಸ್ಥಿತಿ ಎದುರಿಸಲು ಒಡಿಶಾ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.
ಗಾಳಿ-ಮಳೆ ಜಾಸ್ತಿ ಇರಲಿದ್ದು, ಸೆಪ್ಟೆಂಬರ್ 25ರ ನಂತರ ಮುಂದಿನ ಸೂಚನೆವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯುವಂತಿಲ್ಲ ಎಂದು ಹವಾಮಾನ ಇಲಾಖೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ.
ಆಂಧ್ರಪ್ರದೇಶದ ಕರಾವಳಿ ತೀರದ ಸುತ್ತಲಿನ ಪ್ರದೇಶಗಳಲ್ಲಿ ಅತಿ ಹೆಚ್ಚು ಭಾನುವಾರ ಮಳೆಯಾಗಲಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ಹಾಗೇ, ಮುಂದಿನ 2 ದಿನಗಳ ಕಾಲ ಒಡಿಶಾ ಮತ್ತು ಛತ್ತೀಸ್ಗಢ್ನಲ್ಲೂ ಮಳೆ-ಪ್ರವಾಹದ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರಲ್ಲಿ ಮಳೆ: ‘ಗುಲಾಬ್’ ಚಂಡಮಾರುತದ ಪ್ರಭಾವದಿಂದ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಹಗುರದಿಂದ ಸಾಧಾರಣವಾಗಿ ಮಳೆಯಾಗಿದ್ದು, ರಾತ್ರಿ ಗಾಳಿ ಸಹಿತ ಜೋರು ಮಳೆಗೆ ಸಂಜಯನಗರದಲ್ಲಿ ಒಂದು ಮರ ಉರುಳಿ ಬಿದ್ದಿದೆ.
‘ಗುಲಾಬ್’ ಚಂಡಮಾರುತ ಸದ್ಯ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಭಾಗದಲ್ಲಿದ್ದು, ಅದರ ಪ್ರಭಾವದಿಂದ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ರಾತ್ರಿ ಮಳೆ ಸುರಿಯಿತು. ಸೆ.27ರವರೆಗೂ ನಗರದಲ್ಲಿ ಇದೇ ರೀತಿ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.