ಇತ್ತೀಚಿನ ಸುದ್ದಿ
ಭಕ್ತ ಸಾಗರದ ಹರ್ಷೋದ್ಗಾರದೊಂದಿಗೆ ನಡೆದ ನಂಜನಗೂಡಿನ ದೊಡ್ಡ ಜಾತ್ರೆ: ಶ್ರೀ ಗೌತಮ ಪಂಚ ಮಹಾರಥೋತ್ಸವ
30/03/2026, 20:17
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಜನ… ಜನ… ಜನ…. ಎಲ್ಲಿ ನೋಡಿದರಲ್ಲಿ ಜನ… ಅಂತಹ ಒಂದು ಜನ ಜಾತ್ರೆಗೆ ಸಾಕ್ಷಿಯಾಯಿತು ನಂಜನಗೂಡಿನ ದೊಡ್ಡ ಜಾತ್ರೆ.
ದಕ್ಷಿಣ ಕಾಶಿ ನಂಜನಗೂಡಿನ ಇತಿಹಾಸ ಪ್ರಸಿದ್ಧ ಶ್ರೀಕಂಠೇಶ್ವರ ಸ್ವಾಮಿ ಅವರ ದೊಡ್ಡ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ಶ್ರೀ ಗೌತಮ ಪಂಚಮಹಾ ರಥೋತ್ಸವ ಇಂದು ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ಕೂಡಿ ಜನ ಜಾತ್ರೆಗೆ ಸಾಕ್ಷಿಯಾಯಿತು.
ಇಂದು ಬೆಳಗ್ಗೆ 5:50ರಿಂದ 6:30ರ ಒಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಪ್ರಧಾನ ಅರ್ಚಕರಾದ ನಾಗಚಂದ್ರ ದೀಕ್ಷಿತ್ ಆಚಾರ್ಯತ್ವದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಭಾಲದಂಡಿ ನೇತೃತ್ವದಲ್ಲಿ ತೇರುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಲಕ್ಷಾಂತರ ಭಕ್ತರ ಹರ್ಷೋದ್ಗಾರದೊಂದಿಗೆ ಪಂಚ ಮಹಾರಥಗಳು ಒಂದರ ಹಿಂದೆ ಒಂದರಂತೆ ನಗರದ ರಥ ಬೀದಿಯಲ್ಲಿ ವಿರಾಜಮಾನವಾಗಿ ಸಾಗಿ ಸ್ವಸ್ಥಾನ ಸೇರಿದವು.








ಇದಕ್ಕೂ ಮುಂಚೆ ಗಣಪತಿ ಸುಬ್ರಹ್ಮಣ್ಯ ಚಂಡಿಕೇಶ್ವರ ಸೇರಿದಂತೆ ವಜ್ರಾಭರಣ ಹಾಗೂ ಹೂಗಳಿಂದ ಅಲಂಕೃತನಾದ ಶ್ರೀ ಶ್ರೀಕಂಠೇಶ್ವರ ಹಾಗೂ ಶ್ರೀ ಪಾರ್ವತಿ ಅಮ್ಮನವರ ಉತ್ಸವಮೂರ್ತಿಗಳನ್ನು ದೇವಾಲಯದ ಪ್ರಾಂಗಣದಲ್ಲಿ ಇರಿಸಿ ಪೂಜೆ ಸಲ್ಲಿಸಿದ ನಂತರ ವಿಶೇಷವಾಗಿ ಬಣ್ಣ ಬಣ್ಣದ ಹೂವು ಬಾವುಟ ಹಾಗೂ ಬಂಟಿಂಗ್ಸ್ ಗಳಿಂದ ಅಲಂಕೃತಗೊಂಡ ರಥಗಳಲ್ಲಿ ಕೂರಿಸಲಾಯಿತು.
ಬಳಿಕ ಒಂದರ ಹಿಂದೆ ಒಂದರಂತೆ ಮೊದಲಿಗೆ ಗಣಪತಿ ನಂತರ ಶ್ರೀ ಶ್ರೀಕಂಠೇಶ್ವರ ಸ್ವಾಮಿ ಅವರ ದೊಡ್ಡ ತೇರು ಅದರ ಹಿಂದೆ ಸುಬ್ರಹ್ಮಣ್ಯ ನಂತರ ಚಂಡಿಕೇಶ್ವರ ಸೇರಿದಂತೆ ಕೊನೆಯಲ್ಲಿ ಶ್ರೀ ಪಾರ್ವತಿ ಅಮ್ಮನವರ ರಥಗಳು ಯಾವುದೇ ಅಡೆತಡೆ ಇಲ್ಲದೆ ಸಾಗಿ ಸ್ವಸ್ಥಾನ ಸೇರಿದವು.
ರಾಜ್ಯವು ಸೇರಿದಂತೆ ವಿವಿಧ ಕಡೆಯಿಂದ ಲಕ್ಷಾಂತರ ಭಕ್ತರು ಭಾನುವಾರ ರಾತ್ರಿಯೇ ನಂಜನಗೂಡಿನ ದೊಡ್ಡ ಜಾತ್ರೆಗೆ ಆಗಮಿಸಿ ದೇವಾಲಯದ ಸುತ್ತಮುತ್ತ ಬೀಡು ಬಿಟ್ಟಿದ್ದರು. ಇಂದು ಬೆಳಗ್ಗೆ ಜರುಗಿದ ಜಾತ್ರೆಯಲ್ಲಿ ಪಾಲ್ಗೊಂಡು ಐದು ರಥಗಳಿಗೂ ಹಣ್ಣು ಜವನ ಎಸೆಯುವ ಮೂಲಕ ತಮ್ಮ ಭಕ್ತಿ ಭಾವ ಸಮರ್ಪಿಸಿದರು.
ಬಂದ ಎಲ್ಲಾ ಭಕ್ತರಿಗೆ ಜಿಲ್ಲಾ ಆಡಳಿತದ ವತಿಯಿಂದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಅಲ್ಲದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ವಹಿಸಲಾಗಿತ್ತಾದರೂ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಉಳಿದಂತೆ ಜಾತ್ರೆಗೆ ಬಂದ ಲಕ್ಷಾಂತರ ಭಕ್ತರ ಹಸಿವು ಹಾಗೂ ದಾಹ ನೀಗಿಸಲು ದೇವಾಲಯವು ಸೇರಿದಂತೆ ನಂಜನಗೂಡು ನಗರದಾದ್ಯಂತ ಅನ್ನದಾಸೋಹ, ಸಿಹಿ, ಮಜ್ಜಿಗೆ ಪಾನಕ ಕುಡಿಯುವ ನೀರು ಸೇರಿದಂತೆ ವಿವಿಧ ಖಾದ್ಯಗಳನ್ನು ವಿತರಿಸಲಾಯಿತು.
ಇದೇ ಸಂದರ್ಭ ಪಟ್ಟಣದ ಶ್ರೀ ಶ್ರೀಕಂಠೇಶ್ವರ ಹೋಟೆಲ್ ಮಾಲೀಕರಾದ ರಾಜು ಎಂಬುವವರು ತಮ್ಮ ಹೋಟೆಲ್ ನಲ್ಲಿ ಇಂದು ಪೂರ್ತಿ ದಿನ ಬಂದ ಎಲ್ಲಾ ಗ್ರಾಹಕರಿಗೆ ಉಚಿತವಾಗಿ ವಿವಿಧ ತಿಂಡಿ ತಿನಿಸು ಕುಡಿಯುವ ನೀರು, ಕಾಫಿ -ಟೀ ಸಹ ವಿತರಣೆ ಮಾಡಿದ್ದು ವಿಶೇಷವಾಗಿತ್ತು.
ಜಾತ್ರೆಗೆ ಚಾಲನೆ ನೀಡಿ ದರ್ಶನ್ ಧ್ರುವನಾರಾಯಣ್ ಹಾಗೂ ಅಪರ ಜಿಲ್ಲಾಧಿಕಾರಿ ಡಾ. ಶಿವರಾಜ್ ಮಾತನಾಡಿ ಜಾತ್ರೆಯ ಬಗ್ಗೆ ವಿವರಿಸಿ ಬಂದ ಎಲ್ಲ ಭಕ್ತರಿಗೆ ಶುಭಾಶಯ ತಿಳಿಸಿದರು.
ಇದೇ ಸಂದರ್ಭ ವಿನಾಯಕ ಮಿತ್ರ ಬಳಗದ ವತಿಯಿಂದ 11ನೇ ವರ್ಷದ ಪ್ರಸಾದ ವಿತರಣೆ ಮಾಡಿ ಬಳಗದ ಅಧ್ಯಕ್ಷ ಬಾಲ ಕುಮಾರ್ ಮಾತನಾಡಿ ಕಾರ್ಯಕ್ರಮದ ಬಗ್ಗೆ ತಿಳಿಸಿದರು.
ಉಳಿದಂತೆ ಭಕ್ತರು ಸಹ ಮಾತನಾಡಿ ದೊಡ್ಡ ಜಾತ್ರೆಯ ಬಗ್ಗೆ ತಮ್ಮ ತಮ್ಮ ಅನಿಸಿಕೆಗಳನ್ನು ತಿಳಿಸಿ ಜಾತ್ರೆಯ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.
ಇಂದು ಬೆಳಗ್ಗೆ ರಥೋತ್ಸವಕ್ಕೂ ಮುನ್ನ ಜಾತ್ರೆಗೆ ಬಂದಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿಯ ನಂಜುಂಡಸ್ವಾಮಿ ಎಂಬವರು ಹೃದಯ ಘಾತದಿಂದ ಕುಸಿದು ಸಾವನ್ನಪ್ಪಿದರೆ, ರಥೋತ್ಸವದ ವೇಳೆ ಕಾಲ್ತುಳಿತಕ್ಕೆ ಸಿಲುಕಿ ನಂಜನಗೂಡು ಪಟ್ಟಣದ ಶಂಕರಪುರ ನಿವಾಸಿಗಳಾದ ರಂಗಸ್ವಾಮಿ ಮತ್ತು ಆತನ ಮಗ ಅಪ್ಪು ಎಂಬುವವರು ಗಾಯಾಳುಗಳಾಗಿ ಹಾಗೂ ಉಸಿರಾಟದ ತೊಂದರೆಯಿಂದ ಅವರನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಲಾಯಿತು.
ಉಳಿದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾತ್ರೆಯು ಸಾಂಗವಾಗಿ ನಡೆಯಿತು.
ಸಂಸದ ಸುನಿಲ್ ಬೋಸ್, ತಹಸಿಲ್ದಾರ್ ಸ್ಮಿತಾ ರಾಮು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ, ಕೃಷ್ಣ, ಮಾಜಿ ಶಾಸಕ ಕೇಶವಮೂರ್ತಿ, ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.













