ಇತ್ತೀಚಿನ ಸುದ್ದಿ
ನಂಜನಗೂಡು | ಹೆಚ್ಚುತ್ತಿರುವ ಅಪರಾಧ ಪ್ರಕರಣ: ವಿಧಾನಸಭೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಪ್ರಸ್ತಾಪ
29/01/2026, 15:56
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡು ವಿಧಾನಸಭಾ ಕ್ಷೇತ್ರದ ಪಟ್ಟಣ ಪ್ರದೇಶದಲ್ಲಿ ಕಳೆದ ಮೂರು ತಿಂಗಳಿಂದ ಅಪರಾಧಗಳು ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿರುವ ಕುರಿತು ಶಾಸಕರಾದ ದರ್ಶನ್ ಧ್ರುವನಾರಾಯಣ್ ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದರು. ನಂಜನಗೂಡು ವಿಧಾನಸಭಾ ಕ್ಷೇತ್ರದ ಪಟ್ಟಣ ಪ್ರದೇಶದಲ್ಲಿ ಕಳೆದ ಮೂರು ತಿಂಗಳಿಂದ ಅಪರಾಧಗಳು, ವಿಶೇಷವಾಗಿ ಮನೆ ಕಳ್ಳತನ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿರುವ ಹಿನ್ನೆಲೆ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಗಮನಕ್ಕೆ ತಂದ ತಕ್ಷಣ, ಅಪರಾಧ ನಿಯಂತ್ರಣದ ಉದ್ದೇಶದಿಂದ ಗೃಹ ಇಲಾಖೆ ಈಗಾಗಲೇ ಡಿ.ಆರ್ ಟೀಮ್ ಸಿಬ್ಬಂದಿಯನ್ನು ನಿಯೋಜಿಸಿ, ಸಂಜೆ ಸಮಯದಲ್ಲಿ ರೌಂಡ್ಸ್ ನಡೆಸಲು ಸಹಕರಿಸಿದ್ದಾರೆ.
ನಂಜನಗೂಡು ಪಟ್ಟಣವು ವಿವಿಧ ತಾಲ್ಲೂಕು ಹಾಗೂ ರಾಜ್ಯಗಳಿಂದ ಆಗಮಿಸುವ ಜನರಿಂದ ವಾಸ್ತವ್ಯ ಹೊಂದಿರುವ ದೊಡ್ಡ ಹಾಗೂ ವ್ಯಾಪಕ ಪ್ರದೇಶವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಗೃಹ ಇಲಾಖೆಯಿಂದ ಇನ್ನಷ್ಟು ಸಹಕಾರ ಅಗತ್ಯವಾಗಿದೆ. ಪ್ರಸ್ತುತ ನಂಜನಗೂಡು ಪಟ್ಟಣ, ಗ್ರಾಮಾಂತರ ಹಾಗೂ ಹುಲ್ಲಹಳ್ಳಿ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿದ್ದು, ಈ ಕೊರತೆಯನ್ನು ತುರ್ತಾಗಿ ಸರಿದೂಗಿಸಬೇಕೆಂದು ವಿಧಾನಸೌಧದಲ್ಲಿ ನಡೆದ ಅಧಿವೇಶನದಲ್ಲಿ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಮನವಿ ಮಾಡಿದರು.
ಅದೇ ರೀತಿ ಕವಲಂದೆ ಹಾಗೂ ಸಂಚಾರಿ ಪೊಲೀಸ್ ಠಾಣೆಗಳಿಗೆ ನಾಲ್ಕು ಚಕ್ರದ ವಾಹನಗಳನ್ನು ಒದಗಿಸಬೇಕೆಂಬ ಬೇಡಿಕೆಯನ್ನೂ ಮುಂದಿಟ್ಟಿದ್ದು, ಪಟ್ಟಣ ಪ್ರದೇಶದಲ್ಲಿ ಹೊಸದಾಗಿ ಸೇರ್ಪಡೆಯಾಗುತ್ತಿರುವ ಬಡಾವಣೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.
ಈ ಎಲ್ಲಾ ಬೇಡಿಕೆಗಳಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.












