ಇತ್ತೀಚಿನ ಸುದ್ದಿ
ಮಂಗಳೂರು ಧರ್ಮಪ್ರಾಂತ್ಯದಲ್ಲಿ ಸಂತ ವಿನ್ಸೆಂಟ್ ಪೌಲ್ ಸಂಸ್ಥೆಯ ಸ್ಥಾಪನಾ ಶತಮಾನೋತ್ಸವ ಸಮಾರೋಪ
27/01/2026, 17:03
ಮಂಗಳೂರು(reporterkarnataka.com): ನಮ್ಮ ಸ್ಥಾಪಕರಾದ ಫ್ರೆಡರಿಕ್ ಒಝನಾಮ್ ಅವರು – ದಾನ ಧರ್ಮ ಮಾಡುವುದೆಂದರೆ ಸಂಕಷ್ಟದಲ್ಲಿರುವವರನ್ನು ನಮ್ಮ ಸಮಾನರಂತೆ ಕಾಣುವುದು, ಇದರಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ- ಎಂದು ಹೇಳಿದ್ದರು. ಅವರ ಆಶಯದಂತೆ ಕಳೆದ ಒಂದು ಶತಮಾನದಿಂದ ಮಂಗಳೂರು ಧರ್ಮಪ್ರಾಂತ್ಯದ ಎಸ್‌ಎಸ್‌ವಿಪಿ ಸದಸ್ಯರು ನಿಸ್ವಾರ್ಥತೆಯಿಂದ ಪರರ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದಾರೆ ಎಂದು ಸಂತ ವಿನ್ಸೆಂಟ್ ದೆ ಪೌಲ್ ಸೊಸಾಯ್ಟಿಯ ಅಂತರಾಷ್ಟ್ರೀಯ ಅಧ್ಯಕ್ಷರಾದ ಜುವಾನ್ ಮ್ಯಾನುಯೆಲ್ ಬಿ. ಗೊಮೆಜ್ ಅಭಿಪ್ರಾಯಪಟ್ಟರು.
ಅವರು ಜನವರಿ 25 ರಂದು ನಗರದ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಜರಗಿದ ಮಂಗಳೂರು ಧರ್ಮಪ್ರಾಂತ್ಯದ ಸಂತ ವಿನ್ಸೆಂಟ್ ದಿ ಪೌಲ್ ಸೊಸಾಯ್ಟಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸ್ಪೇಯ್ನ್ ದೇಶದಿಂದ ಬಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರು ಮೂತ್ರಪಿಂಡ ಚಿಕಿತ್ಸೆ ಪಡೆಯುತ್ತಿರುವ ದಕ್ಷಿಣ ಕನ್ನಡದ ಅರ್ಹ ಬಡರೋಗಿಗಳ ಡಯಾಲಿಸಿಸ್ ಮತ್ತು ಇತರ ಚಿಕಿತ್ಸಾ ವೆಚ್ಚದ ಶೇ 50ರಷ್ಟನ್ನು ಭರಿಸುವ ಜೋಸೆಫ್ ಎಲಿಯಾಸ್ ಮಿನೇಜಸ್ ಸಾಸ್ತಾನ ಇವರ ಟ್ರಿನಿಟಿ ಮೆಡಿಕೇರ್ ಟ್ರಸ್ಟ್ ಹಾಗೂ ಎಸ್‌ಎಸ್‌ವಿಪಿ ಕೇಂದ್ರಿಯ ಸಮಿತಿಯ ಜಂಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶತಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ. ಡಾ ಪೀಟರ್ ಪಾವ್ಲ್ ಸಲ್ಡಾನ್ಹ ಬಡವರಿಗಾಗಿ ಮಾಡುವ ಸೇವೆಗೆ ದೇವರ ಆಶೀರ್ವಾದ ಯಾವಾಗಲೂ ಇರುತ್ತದೆ, ವಿನ್ಸೆಂಟ್ ಪೌಲ್ ಸೊಸಾಯ್ಟಿಯ ಸದಸ್ಯರ ಸೇವಾ ಕಾರ್ಯಕ್ರಮಗಳ ಬಗ್ಗೆ ಜನರಿಗೆ ವಿಶೇಷ ಗೌರವವಿದೆ ಎಂದು ಹೇಳಿದರು.
ಗೌರವ ಅತಿಥಿಗಳಾದ ಎಸ್‌ಎಸ್‌ವಿಪಿಯ ರಾಷ್ಟ್ರೀಯ ಅಧ್ಯಕ್ಷ ಜೂಡ್ ಮಂಗಳರಾಜ್ ಶತಮಾನೋತ್ಸವ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ ಭಾರತದಲ್ಲಿರುವ ಕೇವಲ 2.5% ಕ್ರೈಸ್ತ ಸಮುದಾಯ ಯಾವುದೇ ಮತ ಬೇಧವಿಲ್ಲದೆ ದೇಶದ ಎಲ್ಲಾ ಸಮುದಾಯಗಳಿಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಸೇವೆಯನ್ನು ನೀಡಿದೆ. ಇದರಲ್ಲಿ ಎಸ್‌ಎಸ್‌ವಿಪಿ ಸಂಸ್ಥೆಯ ಪಾಲು ದೊಡ್ಡ ಪ್ರಮಾಣದಲ್ಲಿದೆ ಎಂದು ಅಭಿನಂದಿಸಿದರು.
ಅತಿಥಿಗಳಾಗಿ ಅಂತಾರಾಷ್ಟ್ರೀಯ ಜನರಲ್ ಕೌನ್ಸಿಲ್ ಪದಾಧಿಕಾರಿ ಜೋಸೆಫ್ ಪಾಂಡ್ಯನ್, ರಾ಼ಷ್ಟ್ರೀಯ ಕಾರ್ಯದರ್ಶಿ ಸಾಂತಿಗೊ ಮಾಣಿಕ್ಯಮ್, ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕ ವಂ. ಫಾವುಸ್ತಿನ್ ಲೋಬೊ, ಟ್ರಿನಿಟಿ ಮೆಡಿಕೇರ್ ಟ್ರಸ್ಟಿನ ಜೋಸೆಫ್ ಮಿನೇಜಸ್ ಭಾಗವಹಿಸಿದರು.















ಎಸ್‌ಎಸ್‌ವಿಪಿ ರಾಷ್ಟ್ರೀಯ ಪದಾಧಿಕಾರಿಗಳಾದ ಆಶಾ ವಾಜ್ ಮತ್ತು ಆಲಿಸ್ಟರ್ ನಜ್ರೆತ್, ಮಂಗಳೂರು ಕೇಂದ್ರಿಯ ಸಮಿತಿಯ ಆಧ್ಯತ್ಮಿಕ ಸಲಹೆಗಾರರಾದ ವಂ. ಫ್ಲೇವಿಯನ್ ಲೋಬೊ, ಕೋಶಾಧಿಕಾರಿ ಕ್ಲೇರೆನ್ಸ್ ಮಚಾದೊ, ಶತಮಾನೋತ್ಸವ ಕಾರ್ಯಕ್ರಮದ ಸಂಚಾಲಕಿ ಫಿಲೋಮಿನ ಮಿನೇಜಸ್, ಮಾಜಿ ಕೇಂದ್ರಿಯ ಅಧ್ಯಕ್ಷರಾದ ಗಿಲ್ಬರ್ಟ್ ಪಿಂಟೊ, ಹೆರಾಲ್ಡ್ ಮೊಂತೆರೋ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೇಂದ್ರಿಯ ಸಮಿತಿ ಅಧ್ಯಕ್ಷ ಗ್ಯಾಬ್ರಿಯಲ್ ಜ್ಯೋ ಕುವೆಲ್ಲೊ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಲಿಗೋರಿ ಫೆರ್ನಾಂಡಿಸ್ ವಂದಿಸಿದರು. ಲೆಸ್ಲಿ ರೇಗೊ ನಿರೂಪಿಸಿದರು.












