ಇತ್ತೀಚಿನ ಸುದ್ದಿ
ಉಡುಪಿ ಪರ್ಯಾಯ: ಸರ್ವಜ್ಞ ಪೀಠ ಅಲಂಕರಿಸಿದ ಶೀರೂರು ಮಠದ ವೇದ ವರ್ಧನ ತೀರ್ಥರು; ಪುತ್ತಿಗೆ ಶ್ರೀಗಳಿಂದ ಪೂಜಾಧಿಕಾರ ಹಸ್ತಾಂತರ
18/01/2026, 11:23
ಉಡುಪಿ(reporterkarnataka.com):ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರು ಶೀರೂರು ಶ್ರೀಗಳಿಗೆ ಪಯಾರ್ಯ ಪೂಜಾಧಿಕಾರವನ್ನು ಹಸ್ತಾಂತರ ಮಾಡಿದರು. ಪರ್ಯಾಯ ನಂತರ ಭವ್ಯ ಮೆರವಣಿಗೆ ಮೂಲಕ ಸಾಗಿ ಉಡುಪಿ ಶ್ರೀ ಕೃಷ್ಣ ಮಠ ಪ್ರವೇಶಿಸಿದ ಶೀರೂರು ಶ್ರೀಗಳಿಗೆ ಸುಗುಣೇಂದ್ರ ತೀರ್ಥರು ಭವ್ಯ ಸ್ವಾಗತ ಕೋರಿದರು. ಅಕ್ಷಯ ಪಾತ್ರೆ ಮತ್ತು ಬೆಳ್ಳಿಯ ಸುಟ್ಟುಗವನ್ನು ನೀಡಿದರು. ಈ ಕಾರ್ಯಗಳು ಪೂರ್ಣಗೊಳ್ಳುತ್ತಿದ್ದಂತೆ ಶೀರೂರು ಶ್ರೀಗಳನ್ನು ಸರ್ವಜ್ಞ ಪೀಠದಲ್ಲಿ ಕೂರಿಸಲಾಯಿತು. ಇದಕ್ಕು ಮುನ್ನ ಶೀರೂರು ಶ್ರೀಗಳು ಅನಂತೇಶ್ವರ ಹಾಗೂ ಚಂದ್ರ ಮೌಳೆಶ್ವರ ದೇವಸ್ಥಾನಕ್ಕೆ ತೆರಳಿದರು ಪೂಜೆ ಸಲ್ಲಿಸಿದರು.
ಧಾರ್ಮಿಕ ಕಾರ್ಯಕ್ರಮ ಹಿನ್ನೆಲೆ ವಾದ್ಯ, ಕೊಂಬು ಇನ್ನಿತರ ಮಂಗಳವಾದ್ಯಗಳ ನಿನಾದ ಮೊಳಗಿತ್ತು. ಶ್ರೀ ಕೃಷ್ಣ ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಠದಲ್ಲಿ ದೇವರ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆಗಳು ಜರುಗಿದವು. ಇಡೀ ಮಠದ ಯತಿಗಳು ಶ್ರೀಗಳ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಮತ್ತೊಂದು ಮೆರಗು ನೀಡಿತ್ತು. ಪೀಠ ಅಲಂಕರಿಸಿದ ಶ್ರೀಗಳು ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದರು.
253ನೇ ದ್ವೈವಾರ್ಷಿಕ ಪರ್ಯಾಯ
ಜರುಗಿದ 253ನೇ ದ್ವೈವಾರ್ಷಿಕ ಪರ್ಯಾಯವು ಶ್ರೀ ಕೃಷ್ಣ ಮಠದ ಇತಿಹಾಸ ಪುಟ ಸೇರಿತು. ವೇದವರ್ಧನ ತೀರ್ಥರ ಪ್ರಥಮ ಪರ್ಯಾಯ ಇದಾಗಿದೆ. ಅಧಿಕಾರ ಹಸ್ತಾಂತರ ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ಮಧ್ಯ ರಾತ್ರಿಯಿಂದಲೇ ಆರಂಭವಾಗಿದ್ದವು. ಬೆಳಗಿನ ಜಾವ 1.30ಕ್ಕೆ ಕಾಪು ತಾಲೂಕಿನ ದಂಡ ತೀರ್ಥದಲ್ಲಿ ಪವಿತ್ರ ಸ್ನಾನ ನಡೆದು, ಬೆಳಗಿನ ಜಾವ 3 ಗಂಟೆಗೆ ಜೋಡುಕಟ್ಟೆಯಿಂದ ಮೆರಣಿಗೆ ಅರಂಭವಾಯಿತು. ಈ ಸಂಬಂಧ ಮಠದ ಸುತ್ತಮುತ್ತಲಿನ ಬೀದಿಗಳು ವಿದ್ಯುತ್ ಅಲಂಕಾರಗಳಿಂದ ಕಂಗೊಳಿಸಿದವು. ಇಡಿ ಉಡುಪಿ ನಗರ ಜಗಮಗಿಸುತ್ತಿತ್ತು.

ಎರಡು ವರ್ಷಗಳಿಗೊಮ್ಮೆ ಶ್ರೀ ಕೃಷ್ಣ ಮಠದ ಆಡಳಿತ ಹಸ್ತಾಂತರವು ಅಷ್ಟಮಠಗಳ ಮಧ್ಯೆ ನಡೆಯುತ್ತದೆ. ಇದೊಂದು ಪುರಾತನ ಮತ್ತು ವೈಶಿಷ್ಟ್ಯತೆಯಿಂದ ಕೂಡಿದ ಧಾರ್ಮಿಕ ವಿಧಿ ವಿಧಾನಗಳಲ್ಲಿ ಒಂದಾಗಿದೆ. ಕೃಷ್ಣ ಮಠದ ಈ ಪರ್ಯಾಯ ಪದ್ಧತಿಯು ತಲಾ 2 ವರ್ಷಗಳ ಅವಧಿಗೆ ಅಷ್ಟಮಠಗಳಿಗೆ ನಡುವೆ ನಡೆಯುತ್ತಿದೆ. ಶ್ರೀಕೃಷ್ಣ ಮಠದ ಜವಾಬ್ದಾರಿ ಮತ್ತು ದೇವರ ಪೂಜೆಯ ಅಧಿಕಾರ ಈ ಮೂಲಕ ಇನ್ನೊಂದು ಮಠಕ್ಕೆ ಹಸ್ತಾಂತರಿಸಲಾಗುತ್ತದೆ. ಈ ಅಪರೂಪದ ಕ್ಷಣಕ್ಕೆ ಭಾನುವಾರ ಬೆಳಗ್ಗೆ ಸಾವಿರಾರು ಭಕ್ತರು ಸಾಕ್ಷಿಯಾದರು. ಉಡುಪಿಯಲ್ಲಿ ಇದೊಂದು ಜಾತ್ರೆ ರೀತಿಯಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ.













