7:13 PM Friday16 - January 2026
ಬ್ರೇಕಿಂಗ್ ನ್ಯೂಸ್
ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸರ್ವ ಸಜ್ಜು: ಜ.18ರಂದು ಶೋಭಾ ಯಾತ್ರೆ; ಶೀರೂರು ಶ್ರೀಗಳಿಂದ… ಕೊಡಗಿನ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ…

ಇತ್ತೀಚಿನ ಸುದ್ದಿ

ಒಕ್ಕೂಟ ವ್ಯವಸ್ಥೆ ಹಾಳು ಮಾಡಲು ಸಿಎಂ ಕುತಂತ್ರ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ

16/01/2026, 18:49

ಬೆಳಗಾವಿ(reporterkarnataka.com): ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ ಬಗ್ಗೆ ಪದೇಪದೇ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ಕುತಂತ್ರ ನಡೆಸುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸುಧಾರಣೆಗಳ ಜೊತೆ ಮನ್ ರೇಗಾವನ್ನು ವಿಬಿ ಜಿ ರಾಮ್ ಜಿ ಯೋಜನೆ ಎಂದು ಪರಿವರ್ತಿಸಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಜೀ ಅವರು ಜಾರಿಗೊಳಿಸುತ್ತಿದ್ದಾರೆ. ದೇಶದ ಬಡವರು, ಕಾರ್ಮಿಕರಿಗೆ ಅನುಕೂಲ ಆಗಬೇಕೆಂದು ಈ ಕಾಯ್ದೆ ತಂದಿದ್ದಾರೆ. ಇದರ ಕುರಿತು ಚರ್ಚಿಸುವ ನೆಪದಲ್ಲಿ ವಿಶೇಷ ಅಧಿವೇಶನವನ್ನು ಕರೆದು ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರದ ವಿರುದ್ಧ ದ್ವೇಷ ಸಾಧಿಸಲು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಹೊರಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಶಾಸನಸಭೆಯ ಪಾವಿತ್ರ್ಯವನ್ನು ಹಾಳು ಮಾಡುವಂಥ ಕೆಲಸಕ್ಕೆ ಸರಕಾರ ಮುಂದಾಗಿದೆ. ಯಾವ ಸದನದಲ್ಲಿ ಈ ನಾಡಿನ ಜನರ ಒಳಿತು, ಯೋಜನೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಆಗಬೇಕಿತ್ತೋ ಅದನ್ನು ಕೇಂದ್ರ ಸರಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟುವುದಕ್ಕೆ ಬಳಸುತ್ತಿರುವುದನ್ನು ಬಿಜೆಪಿ ಖಂಡಿಸುತ್ತದೆ ಎಂದು ತಿಳಿಸಿದರು.
ನಾಡಿನ ಹಿತವನ್ನು ಮರೆತು ಪದೇಪದೇ ಕೇಂದ್ರ ಸರಕಾರದ ವಿರುದ್ಧ ವಿಷ ಕಾರುವ ರಾಜ್ಯದ ಮುಖ್ಯಮಂತ್ರಿಗಳು, ಈ ರಾಜ್ಯದ ಒಳಿತಿನ ಕುರಿತು ಚಿಂತನೆ ಮಾಡದೇ ಜನರನ್ನು ಎತ್ತಿಕಟ್ಟುವ ಕಾರ್ಯದಲ್ಲಿ ಕಳೆದ ಎರಡೂವರೆ ವರ್ಷ ಕಳೆದಿದ್ದಾರೆ ಎನ್ನುವುದು ಸತ್ಯ ಎಂದು ವಿಶ್ಲೇಷಿಸಿದರು.
ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಕುಮಾರಸ್ವಾಮಿಯವರು ರಾಜ್ಯ ರಾಜಕಾರಣಕ್ಕೆ ಬರುವುದರಲ್ಲಿ ತಪ್ಪೇನಿದೆ ಎಂದು ಮರುಪ್ರಶ್ನೆ ಹಾಕಿದರು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ನಾಡಿಗೆ ಅವರದೇ ಆದ ಕೊಡುಗೆ ನೀಡಿದ್ದಾರೆ. ಮತ್ತೆ ರಾಜ್ಯ ರಾಜಕಾರಣಕ್ಕೆ ಬರುವುದಾದರೆ ಅದರಲ್ಲಿ ತಪ್ಪೇನಿದೆ ಎಂದು ಕೇಳಿದರು.
*ಕಾಲಹರಣ, ಕುರ್ಚಿ ಉಳಿಸಿಕೊಳ್ಳಲು ಚಾಣಾಕ್ಷ ನಡೆ..*
ಸಿದ್ದರಾಮಯ್ಯನವರು ಚಾಣಾಕ್ಷ ನಡೆ ಅನುಸರಿಸುತ್ತಿದ್ದಾರೆ ಎಂದು ನನಗೆ ಅನಿಸುತ್ತಿದೆ. ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುವುದು ಒಂದು ಆದ್ಯತೆ ಅವರದ್ದಾಗಿದೆ. ಮತ್ತೊಂದು ಕಡೆ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು, ಕಾಲಹರಣ ಮಾಡಲು, ಡಿ.ಕೆ.ಶಿವಕುಮಾರ್ ರಿಗೆ ಕೈ ಕೊಡಲು ಸದನ- ಅಧಿವೇಶನವನ್ನು ಬಳಸುತ್ತಿದ್ದಾರೆ ಎಂಬುದನ್ನು ರಾಜ್ಯದ ಜನರು ಚರ್ಚೆ ಮಾಡುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

*ಸಾಧನೆ ಕುರಿತಂತೆ ಚರ್ಚೆಗೆ ಬನ್ನಿ..*
ಮುಖ್ಯಮಂತ್ರಿಗಳೇ ನಿಮ್ಮ ಸರಕಾರ ಬಂದು ಎರಡೂವರೆ ವರ್ಷ ಕಳೆದಿದೆ. 3 ವರ್ಷಕ್ಕೆ ಹತ್ತಿರ ಬರುತ್ತಿದೆ. ನೀವೇನು ಸಾಧನೆ ಮಾಡಿದ್ದೀರಿ? ಜನಪರ ಯೋಜನೆಗಳನ್ನೇನು ಕೊಟ್ಟಿದ್ದೀರಿ? ಏನು ಕಡಿದು ಕಟ್ಟೆ ಹಾಕಿದ್ದೀರಿ ಎಂಬ ಬಗ್ಗೆ ಚರ್ಚಿಸಿದರೆ ಒಳಿತು ಎಂದು ಕಿವಿಮಾತು ಹೇಳಿದರು.
ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದ ಅವರು, ಪಾದಯಾತ್ರೆ ವಿಷಯದಲ್ಲಿ ನಮಗೆ ಯಾವುದೇ ಗೊಂದಲ ಇಲ್ಲ. ಹಿಂದೆಯೂ ನಾವು ಸಿದ್ದರಾಮಯ್ಯನವರ ಸರಕಾರದ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುವಾಗ ಕೆಲವು ಗೊಂದಲಗಳಿಗೆ ಕಾರಣವಾಗಿತ್ತು. ಈ ರೀತಿ ಗೊಂದಲಕ್ಕೆ ಅವಕಾಶ ಕೊಡಬಾರದು ಎಂಬ ಭಾವನೆ ನಮ್ಮದು. ಹೋರಾಟ, ಪಾದಯಾತ್ರೆ ಇರಬಹುದು; ರಾಜ್ಯದ ಅಧ್ಯಕ್ಷನಾಗಿ ನಾನು ಏನೇ ತೀರ್ಮಾನ ತೆಗೆದುಕೊಂಡರೂ ಕೇಂದ್ರದ ವರಿಷ್ಠರ ಗಮನಕ್ಕೆ ತಂದು ನಿರ್ಧರಿಸಬೇಕಾಗುತ್ತದೆ. ರಾಜ್ಯದ ಪ್ರಮುಖರ ಜೊತೆ ಚರ್ಚೆ ಮಾಡಿದ್ದೇನೆ. ಅವರ ಅಭಿಪ್ರಾಯಗಳನ್ನು ಕೇಂದ್ರದ ವರಿಷ್ಠರಿಗೆ ತಿಳಿಸಿದ್ದೇನೆ ಎಂದರು.
19, 20ರಂದು ಹೊಸ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಬಹುಶಃ ತಡವಾಗಿದೆ. 19, 20ರಂದು ನಾನು ಕೂಡ ದೆಹಲಿಯಲ್ಲಿರುವೆ. ಅದಾದ ಬಳಿಕ ಕೇಂದ್ರದ ವರಿಷ್ಠರ ಜೊತೆ ಚರ್ಚಿಸುವೆ ಎಂದು ತಿಳಿಸಿದರು. ಪಾದಯಾತ್ರೆ ವಿಷಯದಲ್ಲಿ ನನ್ನ ವೈಯಕ್ತಿಕ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು. ಜಿಬಿಎ ಚುನಾವಣೆಗೆ ಕಾರ್ಯತಂತ್ರ ರೂಪಿಸುವುದಾಗಿ ಅವರು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಇತ್ತೀಚಿನ ಸುದ್ದಿ

ಜಾಹೀರಾತು