ಇತ್ತೀಚಿನ ಸುದ್ದಿ
ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ ಆರೋಪ
09/01/2026, 22:55
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಐಟಿಸಿ ಕಂಪನಿಯ ಕಿಂಗ್ ಸಿಗರೇಟ್ ಪ್ಯಾಕ್ ಮೇಲೆ ಮುದ್ರಿತ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ₹170 ಆಗಿದ್ದರೂ, ಹಲವು ಚಿಲ್ಲರೆ ಅಂಗಡಿಗಳಲ್ಲಿ ಅದೇ ಪ್ಯಾಕ್ ಅನ್ನು ₹230ರಿಂದ ₹250ರವರೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಒಂದು ಪ್ಯಾಕ್‌ನಲ್ಲಿರುವ ಸಿಗರೇಟ್‌ಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುವ ಸಂದರ್ಭಗಳಲ್ಲಿ ಪ್ರತಿ ಕಿಂಗ್ ಸಿಗರೇಟ್‌ಗೆ ₹25ವರೆಗೆ ಹಣ ವಸೂಲಿ ಮಾಡಲಾಗುತ್ತಿದೆ. ಎಂಆರ್‌ಪಿ ಲೆಕ್ಕಾಚಾರ ಪ್ರಕಾರ ಪ್ರತಿ ಸಿಗರೇಟ್‌ಗೆ ಸುಮಾರು ₹17 ಮಾತ್ರ ಆಗಬೇಕಾದರೂ, ಅದಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ಗ್ರಾಹಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಲೆ ಕುರಿತು ಪ್ರಶ್ನಿಸಿದಾಗ ಕೆಲ ಅಂಗಡಿದಾರರು ಸ್ಪಷ್ಟ ಉತ್ತರ ನೀಡದೆ, ತಮ್ಮದೇ ದರ ನಿಗದಿ ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಇನ್ನೂ ಕೆಲ ವ್ಯಾಪಾರಿಗಳು, “ಸಿಗರೇಟ್ ಮಾರಾಟ ಪ್ರತಿನಿಧಿಗಳು ನಮಗೆ ಹೆಚ್ಚಿನ ದರಕ್ಕೆ ಸರಕು ನೀಡುತ್ತಾರೆ. ಅದಕ್ಕಾಗಿ ಹೆಚ್ಚಾಗಿ ಮಾರಾಟ ಮಾಡಬೇಕಾಗುತ್ತದೆ” ಎಂದು ಕಾರಣ ನೀಡುತ್ತಿರುವುದು ಗಮನಾರ್ಹವಾಗಿದೆ.
ಗ್ರಾಹಕ ಹಕ್ಕು ಕಾಯ್ದೆ ಪ್ರಕಾರ ಎಂಆರ್‌ಪಿಗಿಂತ ಹೆಚ್ಚಿನ ದರಕ್ಕೆ ವಸ್ತು ಮಾರಾಟ ಮಾಡುವುದು ಕಾನೂನುಬಾಹಿರವಾಗಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಗ್ರಾಹಕ ಸಂರಕ್ಷಣಾ ಅಧಿಕಾರಿಗಳು ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವ ಅವಕಾಶವಿದೆ.

ಅಕ್ರಮ ದರ ವಸೂಲಿನ ವಿರುದ್ಧ ತಕ್ಷಣ ತಪಾಸಣೆ ನಡೆಸಿ, ತಪ್ಪಿತಸ್ಥ ಅಂಗಡಿದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಎಂಆರ್‌ಪಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಗ್ರಾಹಕರಿಗೆ ನ್ಯಾಯ ಒದಗಿಸಬೇಕೆಂಬುದು ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿದೆ.













