ಇತ್ತೀಚಿನ ಸುದ್ದಿ
ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ
30/12/2025, 21:59
ಬೆಂಗಳೂರು(reporterkarnataka.com): ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ ಅದು ಸಿದ್ದರಾಮಯ್ಯನವರು ಅಂತ ಭಾವಿಸಿದ್ದೆವು. ಆದರೆ, ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು ಇದ್ದಾರೆ. ಒಬ್ಬರು ದೆಹಲಿಯಲ್ಲಿ ಇದ್ದಾರೆ. ಅವರು ಕೆ.ಸಿ.ವೇಣುಗೋಪಾಲ್. ಸಿದ್ದರಾಮಯ್ಯನವರು ವೇಣುಗೋಪಾಲ್ ಅವರ ಆದೇಶವನ್ನು ಪಾಲಿಸಲಿಕ್ಕೆ ಕರ್ನಾಟಕದಲ್ಲಿ ಸಿಎಂ ಸ್ಥಾನದಲ್ಲಿದ್ದಾರೆ ಎಂಬುದು ಈ ಮೂರು ದಿನದೊಳಗೆ ನಮಗೆ ಗೊತ್ತಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಹತ್ವದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೇರಳ ಸರಕಾರದ ಆದೇಶಗಳು ಜಾರಿ ಆಗುತ್ತಿವೆ ಎಂದು ಸುದ್ದಿಯಾಗುತ್ತಿದೆ ಎಂಬುದಾಗಿ ಆಕ್ಷೇಪಿಸಿದರು. ನಾನು ಬಡವರ ಬಗ್ಗೆ ವಿರೋಧ ಅಲ್ಲ. ಯಾರು ನಿಜವಾಗಿಯೂ ನಮ್ಮ ನಾಡಿನವರು ಬಡವರಿದ್ದಾರೋ ಅಂತವರಿಗೆ ಸೂರು ಕಟ್ಟಿಕೊಡಲಿಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಸಿದ್ದರಾಮಯ್ಯನವರ ಸರ್ಕಾರ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು ಹಿಂದುಳಿದವರ ಹೆಸರು ಮೇಲೆ ಅಧಿಕಾರಕ್ಕೆ ಬಂದಂತ ಒಬ್ಬ ಅಹಿಂದ ನಾಯಕ ಸ್ವಂತ ವಿವೇಚನೆಯಿಂದ ಅಧಿಕಾರ ನಡೆಸುತ್ತಿಲ್ಲವೆಂದರೆ, ಅವರು ಯಾವ ಸೀಮೆ ಮುಖ್ಯಮಂತ್ರಿಗಳು ಎಂದು ಕೇಳಿದರು.
ದೆಹಲಿಯಲ್ಲಿ ಕೂತವರು ಟಮ್ರ್ಸ್ ಡಿಕ್ಟೇಟ್ ಮಾಡುತ್ತಾರೆ. ಅವರು ಹೇಳಿದಂತೆ ಅವರ ಅಣತಿಯಂತೆ ನಡೆಯುತ್ತದೆ. ಬೆಂಗಳೂರಿನವರು, ನಮ್ಮವರೇ ಕಲ್ಯಾಣ ನಗರ ಕಮ್ಮನಹಳ್ಳಿ ಒಳಗೆ ಎಸ್ಸಿ ಜನಾಂಗದವರು ಅನಧಿಕೃತವಾಗಿ ಮನೆಗಳನ್ನು ನಿರ್ಮಾಣ ಮಾಡಿಕೊಂಡು ಅನೇಕ ವರ್ಷಗಳಿಂದ ಇದ್ದರು. ಅವರನ್ನು ಬುಲ್ಡೋಜರ್ ಬಳಸಿ ಸಿದ್ದರಾಮಯ್ಯನವರ ಸರ್ಕಾರ ಖಾಲಿ ಮಾಡಿಸಿತು. ಅವರ ಬಗ್ಗೆ ಯಾರೂ ಸಹಾನುಭೂತಿ ವ್ಯಕ್ತ ಮಾಡಲಿಲ್ಲ. ಅವರಿಗೊಂದು ಮನೆ ಕೊಡುವುದಾಗಿ ಹೇಳಲಿಲ್ಲ. ಆದರೆ ಇವತ್ತು ಕೋಗಿಲು ಕ್ರಾಸ್ ನಲ್ಲಿ ಇರುವವರಲ್ಲಿ ಹೊರಗಿನವರು ಎಷ್ಟು, ಹೊರಗಿನ ದೇಶದವರು ಎಷ್ಟು ಎಂಬ ಬಗ್ಗೆ ನಗರದಲ್ಲಿ ಬಹಳ ದೊಡ್ಡ ಸುದ್ದಿಯಾಗಿ ಚರ್ಚೆ ನಡೆದಿದೆ ಎಂದು ತಿಳಿಸಿದರು.
ಅವರ ಬಗ್ಗೆ ಕೇರಳದ ಮುಖ್ಯಮಂತ್ರಿ ಮತ್ತು ವೇಣುಗೋಪಾಲ್ ಅವರ ಅಣತಿಯಂತೆ ಸ್ವತಃ ಮುಖ್ಯಮಂತ್ರಿಗಳು, ಡಿಸಿಎಂ ಮೀಟಿಂಗ್ ಮಾಡಿ ಮನೆ ಕಟ್ಟಿ ಕೊಡುವ ಕುರಿತು 24 ಗಂಟೆ ಒಳಗೆ ಒಂದು ಯೋಜನೆ ಸಿದ್ಧಪಡಿಸಿ ಆದೇಶ ಮಾಡುತ್ತಾರೆ. ನಮ್ಮವರು, ದಲಿತರು ಅದರಲ್ಲೂ ಅಸ್ಪೃಶ್ಯ ಜನಾಂಗದವರು ಕಮ್ಮನಹಳ್ಳಿಯಲ್ಲಿ ಇರುವವರಿಗೆ ಒಂದೇ ಒಂದು ಗುಂಟೆ ಜಾಗ ಕೊಟ್ಟಿಲ್ಲ. ಒಂದು ಮನೆ ಕೊಟ್ಟಿಲ್ಲ. ಸಿದ್ದರಾಮಯ್ಯನವರದು ದಲಿತ ವಿರೋಧಿ ಸರ್ಕಾರ ಅಂತ ನಾವು ಹೇಳಬೇಕಾಗುತ್ತದೆ ಎಂದರು.

ಸಿದ್ದರಾಮಯ್ಯನವರು ಕೆಲವು ತಿಂಗಳುಗಳ ಹಿಂದೆ ಡಿಜೆ ಹಳ್ಳಿ ಕೆಜೆಹಳ್ಳಿ ಪ್ರಕರಣದ ಆರೋಪಿಗಳ ವಿರುದ್ಧ ಇದ್ದ ಕೇಸನ್ನು ವಾಪಸ್ ಪಡೆಯಲಿದ್ದಾರೆಂದು ಮಾಧ್ಯಮಗಳಲ್ಲಿ ಬಹಳ ಜೋರಾಗಿ ಸುದ್ದಿ ಆಯಿತು. ಕಾಂಗ್ರೆಸ್ ಶಾಸಕ, ಇಡೀ ರಾಜ್ಯದಲ್ಲಿ ಹೆಚ್ಚು ಮತಗಳನ್ನು ಪಡೆದು ಬಂದಂತ ಒಬ್ಬ ಗೌರವಾನ್ವಿತ ವ್ಯಕ್ತಿ ಅಖಂಡ ಶ್ರೀನಿವಾಸಮೂರ್ತಿ. ಅವರನ್ನು ರಾಜಕೀಯವಾಗಿ ಮುಗಿಸಿದರು. ಮನೆ ಸುಟ್ಟರು; ಮನೆನ ಕೆಡವಿ ಹಾಕಿದ್ದರು. ಆದರೆ, ಅದರ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಒಬ್ಬರಿಗೂ ಕಳಕಳಿ ಹುಟ್ಟಲಿಲ್ಲ; ರಾಹುಲ್ ಗಾಂಧಿಗೂ ಹುಟ್ಟಲಿಲ್ಲ; ಸೋನಿಯಾ ಗಾಂಧಿಗೂ ಹುಟ್ಟಲಿಲ್ಲ; ಸಿದ್ದರಾಮಯ್ಯಗೂ ಇಲ್ಲ, ಡಿಕೆ ಶಿವಕುಮಾರ್ ಅವರಿಗೂ ಇಲ್ಲ. ಇದು ದಲಿತರ ಬಗ್ಗೆ ಕಾಂಗ್ರೆಸ್ಸಿನ ನೀತಿ ಎಂದು ದೂರಿದರು.
ಕೋಗಿಲು ಕ್ರಾಸ್‍ನ ಮಾದರಿಯಲ್ಲೇ ಕಲ್ಯಾಣ ನಗರದಲ್ಲಿ ಇರುವ, ಕಮ್ಮನಹಳ್ಳಿಯಲ್ಲಿ ಇರುವ ಎಸ್ಸಿ ಎಸ್ಟಿ ಜನಾಂಗದವರಿಗೂ ಮನೆ ಕಟ್ಟಿಕೊಡುದಂತ ಕೆಲಸ ನೀವು ಮಾಡಬೇಕಲ್ಲವೇ ಸಿದ್ದರಾಮಯ್ಯನವರೇ ಎಂದು ಕೇಳಿದರು. ನಿಮ್ಮ ಕುರ್ಚಿ ಕಾದಾಟದಲ್ಲಿ ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ನಿಷ್ಕ್ರಿಯ ಆಗಿದೆ; ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ ಎಂದು ಅರೋಪಿಸಿದರು. ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ಎಸ್‍ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಅವರು ಇದ್ದರು.












