ಇತ್ತೀಚಿನ ಸುದ್ದಿ
ಮೈಸೂರು ಬ್ಲಾಸ್ಟ್ ಪ್ರಕರಣ: ಬಲೂನು ಮಾರುವ ಸಲೀಂ ಹೆಸರಿನಲ್ಲಿತ್ತು ಐದೆಕರೆ ಜಮೀನು!
28/12/2025, 11:05
ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com
ಮೈಸೂರು ಅರಮನೆಯ ಆವರಣದಲ್ಲಿ ಹೀಲಿಯಂ ಸಿಲಿಂಡರ್ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿದ್ದ ಸಂಬಂಧ,ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕುಗೊಳಿಸಲಾಗಿದ್ದು, ಮೃತ ಸಲೀಂ ಬಳಿ ಉತ್ತರ ಪ್ರದೇಶದಲ್ಲಿ 5 ಎಕರೆ ಜಮೀನು ಹೊಂದಿದ್ದ ಎಂದು ತಿಳಿದು ಬಂದಿದೆ.
ಗುರುವಾರ ರಾತ್ರಿ ಸುಮಾರು 8.30ರ ವೇಳೆಗೆ ಉತ್ತರ ಪ್ರದೇಶದ ಸಲೀಂ ಎಂಬವರು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಹೀಲಿಯಂ ಬಲೂನ್‌ಗಳನ್ನು ಮಾರಾಟ ಮಾಡುತ್ತಿದ್ದರು. ಬಲೂನ್‌ಗಳಿಗೆ ಗ್ಯಾಸ್ ತುಂಬಿಸುತ್ತಿದ್ದ ಸಂದರ್ಭದಲ್ಲೇ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ.
ಸ್ಫೋಟಕ ತೀವ್ರತೆಗೆ ಬಲೂನ್ ಬರುತ್ತಿದ್ದ ಸಲೀಂ ಸ್ಥಳದಲ್ಲೇ ಸಾವನ್ನಪ್ಪಿದ್ದ, ಈತನ ಸುತ್ತ ಸಾಕಷ್ಟು ಅನುಮಾನಗಳು ವ್ಯಕ್ತವಾದ ಹಿನ್ನಲೆ ಸಲೀಂನ ಹಿನ್ನಲೆಯನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಅದರಂತೆ ಇದೀಗ ಉತ್ತರ ಪ್ರದೇಶದ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಕನೋಜ್ ಜಿಲ್ಲೆಯ ತೊಫಿಯಾ ಗ್ರಾಮದ ನಿವಾಸಿಯಾದ ಸಲೀಂ ತನ್ನ ಊರಿನಲ್ಲಿ ಕೃಷಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ. ಐದು ಎಕರೆ ಜಮೀನಿನ ಮಾಲೀಕರಾಗಿದ್ದ ಅವರು ಹಲವು ವರ್ಷಗಳಿಂದ ಕೃಷಿಯನ್ನೇ ಜೀವನೋಪಾಯವಾಗಿಸಿಕೊಂಡಿದ್ದರು. ಆದರೆ ಕೃಷಿ ಕೆಲಸವನ್ನು ಬಿಟ್ಟು ಸುಮಾರು ಒಂದು ತಿಂಗಳ ಹಿಂದೆ ಸಲೀಂ ಮೈಸೂರಿಗೆ ಬಂದಿದ್ದರು.
ಕೃಷಿ ವೃತ್ತಿಯನ್ನು ತೊರೆದು ಮೈಸೂರಿಗೆ ಬಲೂನ್ ಮಾರಾಟಕ್ಕೆ ಸಲೀಂ ಬಂದಿರುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ಪೊಲೀಸರು ಇದೀಗ ಅವರ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಐದು ಎಕರೆ ಜಮೀನು ಇದ್ದರೂ ಬಲೂನ್ ವ್ಯಾಪಾರಕ್ಕೆ ಇಳಿದಿರುವ ಹಿನ್ನಲೆ ಏನು? ಅದರಲ್ಲೂ ಮೈಸೂರಿನಲ್ಲೇ ಮಾರಾಟ ಆರಂಭಿಸಿದ ಕಾರಣವೇನು ಎಂಬ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಸಿಗಬೇಕಿದೆ.
ಮೈಸೂರಿನಲ್ಲಿ ನಡೆದ ಹಿಲಿಯಂ ಸಿಲಿಂಡರ್ ಸ್ಫೋಟದಿಂದಾಗಿ ಗಂಬೀರವಾಗಿ ಗಾಯಗೊಂಡಿದ್ದ ಲಕ್ಷ್ಮಿಯನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಇನ್ನು ಘಟನೆಯಲ್ಲಿ ಲಕ್ಷ್ಮೀ ಅವರ ಮಗಳು ಡಿಂಪಲ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಯಿಯನ್ನು ಕಳೆದುಕೊಂಡ ದುಃಖದಲ್ಲಿ ಪುತ್ರಿ ಕಣ್ಣೀರಿಟ್ಟಿರುವ ದೃಶ್ಯಗಳು ಮನಕಲಕುವಂತಿವೆ.
ಮೈಸೂರಿನಲ್ಲಿ ಹೂವಿನ ವ್ಯಾಪಾರ ನಡೆಸುತ್ತಿದ್ದ ಮಂಜುಳ ಅವರು ವ್ಯಾಪಾರ ಮುಗಿಸಿಕೊಂಡು ಬಸ್ ಹತ್ತಲು ತೆರಳುತ್ತಿದ್ದ ಸಂದರ್ಭದಲ್ಲೇ ಸಂಭವಿಸಿದ ಸಿಲಿಂಡರ್ ಸ್ಫೋಟಕ್ಕೆ ಗುರಿಯಾಗಿದ್ದರು. ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.












