10:45 PM Saturday27 - December 2025
ಬ್ರೇಕಿಂಗ್ ನ್ಯೂಸ್
ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್, ಹೋಂ ಸ್ಟೇ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಡಗಿನಲ್ಲಿ ಅರಣ್ಯ ರಕ್ಷಕರಿಂದಲೇ ಮರಗಳ ಲೂಟಿ: ಲೋಡರ್ ಬಂಧನ; ನಾಲ್ವರು ಪರಾರಿ ಖಾಸಗಿ ವಾಹನಕ್ಕೆ ನಾಮಫಲಕ | ಪೊಲೀಸಪ್ಪನಿಂದೇ ಕಾನೂನು ಉಲ್ಲಂಘನೆ: ದಂಡ ಯಾವತ್ತೇ ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ: ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ ಭಾರತ ರತ್ನ ವಾಜಪೇಯಿ ಗ್ರಂಥಾಲಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟನೆ ಜಿಲ್ಲಾ ಮತ್ತು ಕ್ಲಸ್ಟರ್ ಮಟ್ಟದಲ್ಲಿ ಡಿಜಿಟಲ್ ಆರ್ಥಿಕತೆಗೆ ಒತ್ತು: ಕೆಡಿಇಎಂ ಮತ್ತು ಎಫ್‌ಕೆಸಿಸಿಐ… ಪ್ರೀತಿಯ ಸಂಸ್ಕೃತಿ ಬೆಳೆಸಿ: ರೊಸಾರಿಯೋ ಕೆಥೆಡ್ರಲ್‌ನಲ್ಲಿ ಬಿಷಪ್ ಡಾ. ಸಲ್ಡಾನರಿಂದ ಕ್ರಿಸ್ಮಸ್ ಸಂದೇಶ ಕಲಬುರ್ಗಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ | ಮುಂದಿನ ತಿಂಗಳು ಉನ್ನತ ಮಟ್ಟದ ಸಭೆ:…

ಇತ್ತೀಚಿನ ಸುದ್ದಿ

ಗ್ಯಾರಂಟಿ ಹೆಸರಿನಲ್ಲಿ ರಾಜ್ಯಕ್ಕೆ ಅನ್ಯಾಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

27/12/2025, 22:41

ಬೆಂಗಳೂರು(reporterkarnataka.com): ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರವು ಗೊಂದಲದ ಹಾಗೂ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಗ್ಯಾರಂಟಿ ಹೆಸರು ಹೇಳಿಕೊಂಡು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಹತ್ವದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಬುರುಡೆ ಗ್ಯಾಂಗ್ ವಿಚಾರ- ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಷಡ್ಯಂತ್ರ ಕುರಿತು ರಾಜ್ಯ, ದೇಶ, ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆದಿದೆ. ಅಪಪ್ರಚಾರದಿಂದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರನ ಭಕ್ತಾಧಿಗಳಿಗೆ ಆದ ಮಾನಸಿಕ ಕಿರುಕುಳದ ಚರ್ಚೆಯೂ ಆಗಿದೆ ಎಂದರು.
ಅರ್ಬನ್ ನಕ್ಸಲರ ಕೋರಿಕೆ ಮೇರೆಗೆ ಮುಖ್ಯಮಂತ್ರಿ ರಾತ್ರೋರಾತ್ರಿ ಎಸ್.ಐ.ಟಿ. ರಚಿಸಿದ್ದರು. ನಾವು ಕೂಡ ಧರ್ಮಸ್ಥಳ ಚಲೋ ಮೂಲಕ ಜಾಗೃತಿ, ಸರಕಾರದ ಬೇಜವಾಬ್ದಾರಿತನದ ರಾಜ್ಯದ ಜನರ ಗಮನಕ್ಕೆ ತರುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಹಾದಿಬೀದಿಯಲ್ಲಿ ಹೋಗುವವರ ಮಾತು ಕೇಳಿ ಮುಖ್ಯಮಂತ್ರಿಗಳು ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತರುವ ತೀರ್ಮಾನ ಮಾಡಿದ್ದಾರಲ್ಲವೇ? ಅಪಪ್ರಚಾರಕ್ಕೆ ಬೆಲೆ ಕಟ್ಟುವವರು ಯಾರು? ಹಿಂದೂ ಭಾವನೆಗೆ ಧಕ್ಕೆ ತಂದ ಮುಖ್ಯಮಂತ್ರಿಗಳು ಇವತ್ತಿಗೂ ಕ್ಷಮೆ ಯಾಚಿಸಿಲ್ಲ. ಬದಲಾಗಿ ತಾವು ಮಾಡಿದ್ದೇ ಸರಿ ಎಂದು ಕೈತೊಳೆದುಕೊಂಡಿದ್ದಾರೆ. ಇದರಡಿ ಬುರುಡೆ ಗ್ಯಾಂಗ್ ನೆಪ ಮಾತ್ರ. ಷಡ್ಯಂತ್ರದ ಹಿಂದಿನ ದುಷ್ಟ ಶಕ್ತಿಗಳು ಯಾರೆಂದು ಬಯಲಾಗಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ಸಿನವರು ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಾರೆ. ಸದನ ನಡೆಯುವಾಗ ದ್ವೇಷ ಭಾಷಣ ಸಂಬಂಧಿ ಮಸೂದೆ ತಂದು ಚರ್ಚೆಗೂ ಅವಕಾಶ ಕೊಡದೆ ಮಂಜೂರು ಮಾಡಿದ್ದಾರೆ. ಇದೊಂದು ದುಸ್ಸಾಹಸ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರವು ತನ್ನ ವೈಫಲ್ಯ ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಬಿಜೆಪಿ, ಜೆಡಿಎಸ್, ಖಾಸಗಿ ವ್ಯಕ್ತಿಗಳು, ಮಾಧ್ಯಮದವರು ಟೀಕಿಸದಂತೆ ಮಸೂದೆ ತಂದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದರೆ ಒದ್ದು 9-10 ವರ್ಷ ಒಳಗೆ ಹಾಕುವ ಷಡ್ಯಂತ್ರವನ್ನು ಸರಕಾರ ಮಾಡಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಇಂದಿರಾ ಗಾಂಧಿಯವರು 1975ರಲ್ಲಿ ತುರ್ತು ಪರಿಸ್ಥಿತಿ ಹೇರುವ ಕೆಲಸ ಮಾಡಿದ್ದರು. ಆ ಕರಾಳ ದಿನ ಮರುಕಳಿಸುವ ಕಾಯ್ದೆಯನ್ನು ಸರಕಾರ ತಂದಿದೆ ಎಂದರು. ಇದು ಅಸಹಿಷ್ಣುತೆಯ ಪ್ರತೀಕ. ಪ್ರಜಾಪ್ರಭುತ್ವದ ಕಗ್ಗೊಲೆ ಇದು ಎಂದು ಟೀಕಿಸಿದರು.
ಗೋವುಗಳನ್ನು ಅಕ್ರಮವಾಗಿ ಸಾಗಣೆ ಮಾಡುವವರನ್ನು ಪೊಲೀಸರು ಬಂಧಿಸಿ, ವಾಹನ ವಶಕ್ಕೆ ಪಡೆದರೆ ಕೋರ್ಟಿನಲ್ಲಿ ಜಾಮೀನು ಪಡೆಯಬೇಕಿತ್ತು. ಸಿದ್ದರಾಮಯ್ಯರ ಸರಕಾರವು ಪೊಲೀಸರೇ ಠಾಣೆಯಲ್ಲಿ ಜಾಮೀನು ಕೊಡುವಂತೆ, ಬಾಂಡ್ ನೀಡಿ ವಾಹನ ಬಿಡುಗಡೆ ಮಾಡುವಂತೆ ಮಾಡಲು ಸಿದ್ಧತೆ ನಡೆದಿತ್ತು. ಇದು ದೇಶದ್ರೋಹದ ಕೆಲಸವಲ್ಲವೇ? ಹಿಂದೂ ಭಾವನೆಗೆ ಧಕ್ಕೆ ತರುವ ಕೆಲಸವಲ್ಲವೇ? ಯಾಕೆ ಇವರಿಗೆ ಅನುಕಂಪ ಎಂದು ಪ್ರಶ್ನಿಸಿದರು. ಅಲ್ಪಸಂಖ್ಯಾತರ ಓಲೈಕೆಗಾಗಿ ರಾಜ್ಯ ಸರಕಾರ ಇಷ್ಟು ಕೀಳು ಮಟ್ಟಕ್ಕೆ ಇಳಿದುದು ಅಕ್ಷಮ್ಯ ಅಪರಾಧ ಎಂದು ನುಡಿದರು. ಹಿಂದೂಗಳ ಮತ ಬರುವುದನ್ನೂ ಕಳಕೊಳ್ಳುವಂಥ ಮಸೂದೆ ಇದಾಗಿದ್ದು, ಇಂಥ ದುಸ್ಸಾಹಸ ಬೇಡ ಎಂದು ಸಂಪುಟದಲ್ಲಿ ಸಚಿವರು ಎಚ್ಚರಿಸಿದ್ದರಿಂದ ಮಸೂದೆ ತರಲಿಲ್ಲ ಎಂದು ವಿವರಿಸಿದರು.
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ ರಾಜ್ಯ, ದೇಶ, ಜಗತ್ತಿನ ಗಮನ ಸೆಳೆದಿತ್ತು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ತಮ್ಮ ಪುಕ್ಕಟೆ ಪ್ರಚಾರಕ್ಕಾಗಿ ಎರಡೆರಡು ಕಡೆ ಕಾರ್ಯಕ್ರಮ, ಮೆರವಣಿಗೆ ನಡೆಸಿದ್ದು, 10ಕ್ಕೂ ಹೆಚ್ಚು ಯುವಜನರ ಮಾರಣಹೋಮಕ್ಕೆ ರಾಜ್ಯ ಸರಕಾರ ಕಾರಣವಾಗಿತ್ತು. ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳು ಬಹಳ ಸುಲಲಿತವಾಗಿ ಕೈ ತೊಳೆದುಕೊಂಡರು. ಸರಕಾರದ ಬೇಜವಾಬ್ದಾರಿಯಿಂದ ಹೀಗಾಗಿದೆ. ಮುಖ್ಯಮಂತ್ರಿ- ಆರೋಪಿ ನಂ.1, ಉಪ ಮುಖ್ಯಮಂತ್ರಿಗಳು ಎರಡನೇ ಆರೋಪಿ ಆಗಬೇಕಿತ್ತು ಎಂದು ತಿಳಿಸಿದರು.
ಎಲ್ಲವನ್ನೂ ಆರ್‍ಸಿಬಿ, ಡಿಎನ್‍ಎ, ಬೇರೆ ಬೇರೆ ಏಜೆನ್ಸಿಗಳ ಮೇಲೆ ಹಾಕಿ ಎಸ್‍ಐಟಿ ರಚಿಸಿ ಅವರ ಮೇಲೆ ಆರೋಪ ಹೊರಿಸಿ ಕೈ ತೊಳಕೊಂಡರು. ಅವರು ನಿರಪರಾಧಿಗಳೆಂದಲ್ಲ ಎಂದರಲ್ಲದೆ, ಚಿನ್ನಸ್ವಾಮಿ ಕ್ರೀಡಾಂಗಣ ಒಂದು ಚರಿತ್ರಾರ್ಹ ಕೊಡುಗೆ ನೀಡಿದ ಸ್ಥಳ. ದೇಶದ ಕ್ರಿಕೆಟ್‍ಗೆ ಕರ್ನಾಟಕ ಅತಿ ದೊಡ್ಡ ಕೊಡುಗೆ ನೀಡಿದೆ ಎಂದು ವಿವರಿಸಿದರು. ಜಗತ್ ಪ್ರಸಿದ್ಧ ಆಟಗಾರರು ಇಲ್ಲಿನವರು ಎಂದರು. ಈ ಕ್ರೀಡಾಂಗಣದ ಸ್ಮಶಾನ ಮೌನಕ್ಕೆ ರಾಜ್ಯ ಸರಕಾರದ ಷಡ್ಯಂತ್ರ ಕಾರಣವಲ್ಲವೇ ಎಂದು ಕೇಳಿದರು. ವಿಜಯ್ ಹಜಾರೆ ಟ್ರೋಫಿಗೆ ಅನುಮತಿ ಕೊಟ್ಟಿಲ್ಲ. ಇದು ಸರಕಾರದ ಉದ್ಧಟತನ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಗ್ಯಾರಂಟಿ ಬಗ್ಗೆ ಸಿಎಂ, ಡಿಸಿಎಂ ಭಾರೀ ಪ್ರಚಾರ ನೀಡಿದರು. ರಾಜ್ಯ ಸರಕಾರ ಗೃಹಲಕ್ಷ್ಮಿ ವಿಚಾರದಲ್ಲಿ ದ್ವಂದ್ವ ನಿಲುವು ಅನುಸರಿಸುತ್ತಿದೆ. ಒಂದೆಡೆ 2 ಸಾವಿರ ಕೊಡುವುದಾಗಿ ಹೇಳಿ ಮತ್ತೊಂದೆಡೆ ಹೆಂಡದ, ಅಬಕಾರಿ ಟಾರ್ಗೆಟ್ ಅನ್ನು ವರ್ಷ ವರ್ಷ ಜಾಸ್ತಿ ಮಾಡುತ್ತಿದೆ. ಕಳೆದ 2.5 ವರ್ಷದಲ್ಲಿ ಅನುಭವಿ ಸಿಎಂ ಸಿದ್ದರಾಮಯ್ಯನವರು ರಾಜ್ಯದ ಖಜಾನೆಗೆ ಹಣ ತುಂಬಿಸಲು ತಮ್ಮ ಗ್ಯಾರಂಟಿಗಳಿಗೆ ಹಣ ಕ್ರೋಡೀಕರಿಸಲು ಸಾಧ್ಯವಾಗದೇ ಅಬಕಾರಿ ಗುರಿಯನ್ನು ಶೇ 35ರಷ್ಟು ಹೆಚ್ಚಿಸಿದ್ದಾರೆ ಎಂದು ದೂರಿದರು. ಇನ್ನೊಂದು ಕಡೆ ಅಬಕಾರಿಯ 500- 600 ಲೈಸನ್ಸ್ ಅನ್ನು ಸರಕಾರ ಹರಾಜು ಮಾಡಲು ಹೊರಟಿದೆ. ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ? ಎಂದು ಕೇಳಿದರು. ಒಂದೆಡೆ ಗೃಹಲಕ್ಷ್ಮಿ ಎನ್ನುತ್ತಾರೆ. ಮತ್ತೊಂದು ಕಡೆ ಹೆಂಡ, ಮದ್ಯ ಮಾರಾಟ ಹೆಚ್ಚಿಸಲು ವ್ಯಾಪಾರಿಗಳ ಮೇಲೆ ಒತ್ತಡ ಹಾಕುತ್ತಾರೆ. ಕುಡುಕರ ಕಾಟದಿಂದ ಬಡ ಹೆಣ್ಮಕ್ಕಳಿಗೆ ಅನ್ಯಾಯ ಆಗಲಿದೆ. ಇದರ ಕುರಿತು ಮುಖ್ಯಮಂತ್ರಿಗಳು ಯೋಚಿಸಿದ್ದಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಒಂದು ಕೈಯಿಂದ 2 ಸಾವಿರ ಕೊಟ್ಟು ಮತ್ತೊಂದು ಕೈಯಿಂದ 20 ಸಾವಿರ ಕಿತ್ತುಕೊಳ್ಳುವ ನೀತಿ ಇವರದು ಎಂದು ಟೀಕಿಸಿದರು. ಇದರ ಕುರಿತು ಮುಖ್ಯಮಂತ್ರಿಗಳು ಸ್ಪಷ್ಟತೆ ನೀಡಲಿ ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ ಶಿಕ್ಷಣ ತಜ್ಞರು ಸಿಗಲಿಲ್ಲವೇ?
ಈ ಸರಕಾರವು ಎನ್‍ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ರದ್ದು ಮಾಡಿದೆ. ರಾಜ್ಯ ಶಿಕ್ಷಣ ನೀತಿ ತರಲು ಆಯೋಗ ರಚಿಸಿದ್ದಾರೆ. ಮಹಾರಾಷ್ಟ್ರದ ಪ್ರೊ.ಸುಖದೇವ್ ಥೋರತ್ ಅವರನ್ನು ಚೇರ್ಮನ್ ಮಾಡಿದ್ದಾರೆ. ಮುಖ್ಯಮಂತ್ರಿಗಳೇ ಕರ್ನಾಟಕದಲ್ಲಿ ನಿಮಗೆ ತಜ್ಞರು ಸಿಗಲಿಲ್ಲವೇ? ಎಂದು ಪ್ರಶ್ನಿಸಿದರು. ಪ್ರೊ.ಸುಖದೇವ್ ಥೋರತ್ ಅವರನ್ನು ನಾನು ಟೀಕಿಸುತ್ತಿಲ್ಲ; ಅವರ ಬಗ್ಗೆ ಗೌರವವಿದೆ. ನಮ್ಮ ರಾಜ್ಯದ ತಜ್ಞರು ನಿಮಗ್ಯಾರೂ ಸಿಗಲಿಲ್ಲವೇ ಎಂದು ಪ್ರಶ್ನಿಸಿದರು. ಎರಡೂವರೆ ವರ್ಷ ಆದರೂ ಸ್ಪಷ್ಟ ಶಿಕ್ಷಣ ನೀತಿ ಇಲ್ಲದೇ ರಾಜ್ಯದ ವಿದ್ಯಾರ್ಥಿವೃಂದಕ್ಕೆ ಕಾಂಗ್ರೆಸ್ ಸರಕಾರ ಅನ್ಯಾಯ ಮಾಡುತ್ತಿದೆ ಎಂದು ಆಕ್ಷೇಪಿಸಿದರು.

ಉದ್ಯಮಿಗಳಿಗೆ ಧಮ್ಕಿ ಹಾಕುವ ರಾಜ್ಯದ ಡಿಸಿಎಂ
ಫಾಕ್ಸ್ ಕಾನ್ ಕುರಿತು ಚರ್ಚೆ ಆಗುತ್ತಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಏಥರ್ ಇಲೆಕ್ಟ್ರಾನಿಕ್ ಸ್ಕೂಟರ್‍ನಿಂದ ಹಿಡಿದು ಹಲವು ಸಂಸ್ಥೆಗಳು ಬೇರೆ ರಾಜ್ಯಕ್ಕೆ ಹೋಗಿವೆ. ಟೊಯೊಟಾ ಬೇರೆ ರಾಜ್ಯಕ್ಕೆ ಹೋಗಿದೆ. ಫಾಕ್ಸ್ ಕಾನ್ ಎರಡನೇ ಯೂನಿಟ್ ಬೇರೆ ರಾಜ್ಯಕ್ಕೆ ಹೋದುದು ಚರ್ಚೆ ನಡೆದಿದೆ. ಅನೇಕ ಉದ್ಯಮಿಗಳು ರಾಜ್ಯದಲ್ಲಿ ಕಾಂಗ್ರೆಸ್ಸಿನ ಹೂಡಿಕೆ ವಿರೋಧಿ ನೀತಿಯನ್ನು ಧಿಕ್ಕರಿಸಿ ಬೇರೆ ರಾಜ್ಯಕ್ಕೆ ಹೋಗುತ್ತಿದ್ದಾರೆ. ಫಾಕ್ಸ್ ಕಾನ್ ಕುರಿತು ಬೊಮ್ಮಾಯಿಯವರು ಸಿಎಂ ಇದ್ದಾಗ ಒಡಂಬಡಿಕೆಗೆ ಸಹಿ ಆಗಿದೆ ಎಂದು ಗಮನ ಸೆಳೆದರು. ಪ್ರಿಯಾಂಕ್ ಖರ್ಗೆ, ಕೈಗಾರಿಕಾ ಸಚಿವರು ಇದಕ್ಕೇನು ಹೇಳುತ್ತಾರೆ ಎಂದರು. ರಾಜ್ಯದ ಡಿಸಿಎಂ ಉದ್ಯಮಿಗಳಿಗೆ ಧಮ್ಕಿ ಹಾಕುತ್ತಾರೆ ಎಂದು ಟೀಕಿಸಿದರು.

ರಾಜ್ಯ ಸರಕಾರ ಗೂಂಡಾಗರ್ದಿಗೆ ಇಳಿದಂತಿದೆ..
ಅಪಾರ್ಟ್‍ಮೆಂಟ್ ಅಸೋಸಿಯೇಶನ್‍ನವರು ಮನವಿ ನೀಡಿದ್ದಾರೆ. ಅವರಿಗೂ ಧಮ್ಕಿ ಹಾಕಿದ್ದಾರೆ. ರಾಜ್ಯ ಸರಕಾರ ಗೂಂಡಾಗರ್ದಿಗೆ ಇಳಿದಂತಿದೆ ಎಂದು ಟೀಕಿಸಿದರು. ಎಲ್ಲ ವಿಚಾರದಲ್ಲೂ ರಾಜ್ಯ ಸರಕಾರ ಎಡವುತ್ತಿದೆ ಎಂದು ದೂರಿದರು. ವಸತಿ ಸಚಿವ ಜಮೀರ್ ಅಹ್ಮದ್ ಅವರ ಆಪ್ತ ಸಹಾಯಕ ಸರ್ಫರಾಜ್ ಖಾನ್ ಅವರ ಮೇಲೆ ಲೋಕಾಯುಕ್ತ ದಾಳಿ ಆದಾಗ 14.35 ಕೋಟಿ ವಶಕ್ಕೆ ಪಡೆದಿದ್ದಾರೆ. ಇದು ಭ್ರಷ್ಟಾಚಾರ ಅಲ್ಲವೇ? ನೀವು ಭ್ರಷ್ಟಾಚಾರದ ಮಾತನಾಡುತ್ತೀರಾ ಎಂದು ಕೇಳಿದರು. ಕಾಂಗ್ರೆಸ್ಸಿನ ಹಿರಿಯ ಶಾಸಕ ಬಿ.ಆರ್.ಪಾಟೀಲರು ಒಂದು ವರ್ಷದ ಹಿಂದೆ ಸರ್ಫರಾಜ್ ಖಾನ್ ಲಂಚ ಕೇಳಿದ ಬಗ್ಗೆ ಆರೋಪಿಸಿದ್ದರು. ಆಡಿಯೋ ಟೇಪ್ ಲೀಕ್ ಆಗಿತ್ತು. ಮುಖ್ಯಮಂತ್ರಿಗಳು ಏನು ಮಾಡಿದ್ದರು ಎಂದು ಕೇಳಿದರು. ಈ ವಿಷಯದಲ್ಲಿ ಸಿಎಂ ಮೃದು ಧೋರಣೆ ಯಾಕೆ ಎಂದರು.

ಮೋದಿಯವರನ್ನು ಟೀಕಿಸುವ ನೈತಿಕತೆ ಕಾಂಗ್ರೆಸ್ಸಿನವರಿಗೆ ಇದೆಯೇ
ರಾಹುಲ್ ಗಾಂಧಿ, ಸಿದ್ದರಾಮಯ್ಯ, ಕಾಂಗ್ರೆಸ್ಸಿನವರಿಗೆ ಪ್ರಧಾನಿ ನರೇಂದ್ರ ಮೋದಿಜೀ ಅವರನ್ನು ಕಂಡರೆ ಆಗುವುದಿಲ್ಲ. ಅವರ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ. ಕೇಂದ್ರ ಸರಕಾರದ ವಿರುದ್ಧ ದೂರುತ್ತಾರೆ. ಇವರು ಕಡಿದು ಕಟ್ಟೆ ಹಾಕಿದ್ದು ಏನೂ ಇಲ್ಲ. ಕೇಂದ್ರ ಸರಕಾರವು ಮನ್‍ರೇಗಾ ಹೆಸರನ್ನು, ವಿ ಬಿ ರಾಮ್ ಜಿ ಎಂದು ಬದಲಿಸಿದೆ. ಅದಕ್ಕೂ ಚರ್ಚೆ; ಮೋದಿಯವರನ್ನು ಟೀಕಿಸುತ್ತಾರೆ. ಮೋದಿಯವರನ್ನು ಟೀಕಿಸುವ ನೈತಿಕತೆ ಕಾಂಗ್ರೆಸ್ಸಿನವರಿಗೆ ಇದೆಯೇ ಎಂದು ಕೇಳಿದರು.
ಮಹಾತ್ಮ ಗಾಂಧಿಯವರ ಸ್ವಚ್ಛ ಭಾರತದ ಕನಸನ್ನು ಮೋದಿಜೀ ಅವರು ಜಾರಿಗೊಳಿಸಿದ್ದಾರೆ. ನೀವು ಮಹಾತ್ಮ ಗಾಂಧಿಯವರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತೀರಾ? ಮಹಾತ್ಮ ಗಾಂಧಿ, ಸರದಾರ್ ವಲ್ಲಭಭಾಯಿ ಪಟೇಲ್, ಬಾಬಾ ಸಾಹೇಬ ಅಂಬೇಡ್ಕರ್ ಇರಬಹುದು; ಇವರನ್ನು ದೇಶದ ಯುವಪೀಳಿಗೆ ನೆನಪಿಸಿಕೊಳ್ಳಲು ಮೋದಿಜೀ ನೇತೃತ್ವದ ಎನ್‍ಡಿಎ ಸರಕಾರ ಸ್ಮಾರಕಗಳನ್ನು ಮಾಡಿದೆ. ಇದು ಕಾಂಗ್ರೆಸ್ಸಿನವರು ಮಾಡಿದ್ದಲ್ಲ ಎಂದು ತಿರುಗೇಟು ನೀಡಿದರು. 12 ಕೋಟಿ ಶೌಚಾಲಯಗಳನ್ನು ಮೋದಿಜೀ ನೇತೃತ್ವದ ಸರಕಾರ ನಿರ್ಮಿಸಿದೆ. ಸಬರ್‍ಮತಿ ಆಶ್ರಮದ ಅಭಿವೃದ್ಧಿ ಮಾಡಿದ್ದಾರೆ. ಕೇವಲ ಹೆಸರು ಬದಲಿಸಿದ್ದಕ್ಕೆ ಕಾಂಗ್ರೆಸ್, ಸಿದ್ದರಾಮಯ್ಯನವರು ಟೀಕೆ ಮಾಡುತ್ತಾರೆ ಎಂದು ಆಕ್ಷೇಪಿಸಿದರು. ಅತಿ ಹಿಂದುಳಿದ ವರ್ಗದ ಪ್ರಧಾನಿ ಮೋದಿಜೀ ಅವರನ್ನು ಸಹಿಸಿಕೊಳ್ಳಲು ಕಾಂಗ್ರೆಸ್ಸಿನವರಿಗೆ ಆಗುತ್ತಿಲ್ಲ ಎಂದು ಟೀಕಿಸಿದರು.
ಬೆಳಗಾವಿಯಲ್ಲಿ ಈಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಬೇಕು; ಉತ್ತರಿಸಬೇಕೆಂಬ ವ್ಯವಧಾನ ಸಚಿವರಲ್ಲಿ ಇರಲಿಲ್ಲ ಎಂದು ವಿವರಿಸಿದರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹ ಲಕ್ಷ್ಮಿ ಯೋಜನೆಯಡಿ ಹಣ ಬಿಡುಗಡೆ ವಿಚಾರದಲ್ಲಿ ಸದನಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಸಚಿವೆ ಬಳಿಕ ಕ್ಷಮೆ ಯಾಚಿಸುವ ಪರಿಸ್ಥಿತಿ ಬಂತು ಎಂದು ವಿವರಿಸಿದರು. ಮತ್ತೊಂದೆಡೆ ಕೃಷ್ಣಬೈರೇಗೌಡರ ಭೂಹಗರಣದ ಕುರಿತು ಚರ್ಚೆ ಆಗಿದೆ ಎಂದರು.
ಅಧಿವೇಶನದಲ್ಲಿ ಸುದೀರ್ಘವಾಗಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ ಆಗಿದೆ. ನಾಡಿನ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಆಗಿದೆ. ಕಾನೂನು- ಸುವ್ಯವಸ್ಥೆಯ ಚರ್ಚೆಯೇನೋ ಆಗಿದೆ. ಆದರೆ, ರಾಜ್ಯ ಸರಕಾರದ ಕಡೆಯಿಂದ ಅಥವಾ ಮುಖ್ಯಮಂತ್ರಿಗಳು ರೈತರ- ಉತ್ತರ ಕರ್ನಾಟಕದ ಸಮಸ್ಯೆಗಳಿಗೆ, ಆ ಭಾಗದ ನೀರಾವರಿ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಯಾವುದೇ ಸಮರ್ಪಕ ಉತ್ತರ ನೀಡಿಲ್ಲ ಎಂದು ಟೀಕಿಸಿದರು.
ಅಧಿವೇಶನಕ್ಕೆ ಒಂದು ತಿಂಗಳ ಮೊದಲೇ ಸಚಿವರು ತಿಂಗಳಾನುಗಟ್ಟಲೆ ಬ್ರೇಕ್‍ಫಾಸ್ಟ್, ಡಿನ್ನರ್ ಸಭೆಯಲ್ಲೇ ಕಾಲಹರಣ ಮಾಡಿದ್ದರು. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಉತ್ತರ- ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿವೇಶನ ಮಾಡಿ; ಅಲ್ಲಿಯೂ ಸಿಎಂ ಕುರ್ಚಿ ಪೈಪೋಟಿ, ಕಾಳಗ, ಬ್ರೇಕ್‍ಫಾಸ್ಟ್, ಲಂಚ್, ಡಿನ್ನರ್ ಸಭೆ ಮುಂದುವರೆಸುವುದೇ ಆದರೆ, ನಾಯಕತ್ವದ ಇತ್ಯರ್ಥ ಮಾಡದೇ ಅಧಿವೇಶನ ಮಾಡಬೇಡಿ, ಮುಂದೂಡುವಂತೆ ಕಿವಿಮಾತು ಹೇಳಿದ್ದೆ ಎಂದು ಗಮನ ಸೆಳೆದರು.
ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್, ಶಾಸಕರಾದ ಎಂ. ಕೃಷ್ಣಪ್ಪ, ಕೆ. ಗೋಪಾಲಯ್ಯ, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು