ಇತ್ತೀಚಿನ ಸುದ್ದಿ
ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ
27/12/2025, 19:40
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಸಾಂಸ್ಕೃತಿಕ ನಗರಿ ಮೈಸೂರಿನ ಇತಿಹಾಸದಲ್ಲೇ ಅತ್ಯಂತ ಕರಾಳ ಎನ್ನಬಹುದಾದ ಅರಮನೆ ಮುಂಭಾಗದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣವು ಈಗ ಮತ್ತಷ್ಟು ಭೀಕರ ರೂಪ ಪಡೆದಿದೆ. ಗುರುವಾರ ರಾತ್ರಿ ಸಂಭವಿಸಿದ ಈ ದುರಂತದಲ್ಲಿ ಗಾಯಗೊಂಡು ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರು ಮೂಲದ ಲಕ್ಷ್ಮಿ ಅವರು ಶನಿವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಲಿಯಾದವರ ಒಟ್ಟು ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.


ಸ್ಫೋಟದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡು ಕೆ.ಆರ್. ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಬೆಂಗಳೂರು ಮೂಲದ ಲಕ್ಷ್ಮಿ ಅವರು ಚಿಕಿತ್ಸೆ ಫಲಿಸದೆ ಶನಿವಾರ (ಡಿ.27) ಕೊನೆಯುಸಿರೆಳೆದಿದ್ದಾರೆ. ಇನ್ನು ಶುಕ್ರವಾರವಷ್ಟೇ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಮಹಿಳೆ ಮಂಜುಳಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
*ಘಟನೆಯ ಹಿನ್ನೆಲೆ:* ಅರಮನೆ ಮಂಡಳಿಯು ಆಯೋಜಿಸಿದ್ದ ‘ಮಾಗಿ ಉತ್ಸವ’ದ ಅಂಗವಾಗಿ ಖ್ಯಾತ ಗಾಯಕ ವಾಸುಕಿ ವೈಭವ್ ಅವರ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅರಮನೆಯ ಜಯಮಾರ್ತಂಡ ದ್ವಾರದ ಬಳಿ ಸುಮಾರು 8:30ಕ್ಕೆ ಬಲೂನ್ ವ್ಯಾಪಾರಿ ಸಲೀಂ ತನ್ನ ಸೈಕಲ್‌ನಲ್ಲಿ ತಂದಿದ್ದ ಹೀಲಿಯಂ ಸಿಲಿಂಡರ್ ಒಮ್ಮಿಂದೊಮ್ಮೆಗೆ ಸ್ಫೋಟಗೊಂಡಿತ್ತು. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸಲೀಂನ ದೇಹ ಸ್ಥಳದಲ್ಲೇ ಛಿದ್ರಛಿದ್ರವಾಗಿತ್ತು. ಘಟನೆಯಲ್ಲಿ ನಂಜನಗೂಡಿನ ಮಂಜುಳಾ ಹಾಗೂ ಲಕ್ಷ್ಮಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
*ಪ್ರಕರಣದ ಸುತ್ತ ಭುಗಿಲೆದ್ದ ಅನುಮಾನ:*
ಮೊದಲಿಗೆ ಇದೊಂದು ಸಾಮಾನ್ಯ ಸಿಲಿಂಡರ್ ಎಂಬಂತೆ ಕಂಡು ಬಂದಿತ್ತು. ಆದರೆ ಈ ಪ್ರಕರಣದ ಕೇಂದ್ರಬಿಂದುವಾಗಿರುವ ಮೃತ ಬಲೂನ್ ವ್ಯಾಪಾರಿ ಸಲೀಂನ ಹಿನ್ನೆಲೆ ಪೊಲೀಸರಲ್ಲಿ ಹಲವು ಅನುಮಾನಗಳನ್ನು ಮೂಡಿಸಿದೆ. ಉತ್ತರ ಪ್ರದೇಶದಿಂದ ಬಂದಿದ್ದ ಈತ ಕಳೆದ 15 ದಿನಗಳಿಂದ ಮೈಸೂರಿನ ಲಷ್ಕರ್ ಮೊಹಲ್ಲಾದ ಲಾಡ್ಜ್‌ನಲ್ಲಿ ವಾಸವಿದ್ದನು. ಈತ ಮೈಸೂರಿಗೆ ಬರಲು ಕಾರಣವೇನು? ಬಲೂನ್ ವ್ಯಾಪಾರದ ಸೋಗಿನಲ್ಲಿ ಅರಮನೆ ಮುಂಭಾಗದಂತಹ ಸೂಕ್ಷ್ಮ ಪ್ರದೇಶಕ್ಕೆ ಬಂದಿದ್ದೇಕೆ? ಎಂಬ ಪ್ರಶ್ನೆಗಳಿಗೆ ಪೊಲೀಸರು ಉತ್ತರ ಹುಡುಕುತ್ತಿದ್ದಾರೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಭೇಟಿ ನೀಡಿ, ಸ್ಫೋಟಗೊಂಡ ಸಿಲಿಂಡರ್‌ನ ಅವಶೇಷಗಳು ಮತ್ತು ಹರಡಿದ್ದ ರಾಸಾಯನಿಕ ಮಾದರಿಗಳನ್ನು ಸಂಗ್ರಹಿಸಿ ತನಿಖೆಗೆ ಕಳುಹಿಸಿದ್ದಾರೆ.
*ಭದ್ರತಾ ಲೋಪದ ಚರ್ಚೆ:*
ಹೊಸ ವರ್ಷಾಚರಣೆಗೆ ಇನ್ನೇನು ನಾಲ್ಕು ದಿನಗಳಿರುವಾಗ, ಅರಮನೆಯಂತಹ ಜಗತ್ಪ್ರಸಿದ್ಧ ಪ್ರವಾಸಿ ತಾಣದ ಬಳಿಯೇ ಇಂತಹ ಸ್ಫೋಟ ಸಂಭವಿಸಿರುವುದು ಭದ್ರತಾ ಲೋಪದ ಮೇಲೆ ಬೆಳಕು ಚೆಲ್ಲಿದೆ. ಗೃಹ ಸಚಿವ ಜಿ. ಪರಮೇಶ್ವರ್ ಅವರು ಈಗಾಗಲೇ ಸಮಗ್ರ ತನಿಖೆಗೆ ಆದೇಶಿಸಿದ್ದು, ಅರಮನೆ ಸುತ್ತಮುತ್ತ ಬೀದಿ ವ್ಯಾಪಾರಿಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲು ಪ್ರವಾಸೋದ್ಯಮ ಇಲಾಖೆಗೆ ಸೂಚಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರ ಇಬ್ಬರ ಸ್ಥಿತಿಯೂ ಗಂಭೀರವಾಗಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.












