ಇತ್ತೀಚಿನ ಸುದ್ದಿ
ಸಂತ ಆಗ್ನೇಸ್ ಕಾಲೇಜಿನಲ್ಲಿ ವಾರ್ಷಿಕ ಕ್ರಿಸ್ಮಸ್ ದತ್ತಿ ಕಾರ್ಯಕ್ರಮ “ನವಿದಾದ್”: ಕ್ಯಾರೋಲ್ಸ್ , ನೃತ್ಯಗಳು, ಲೈವ್ ಬ್ಯಾಂಡ್ ಪ್ರದರ್ಶನ
24/12/2025, 16:01
ಮಂಗಳೂರು(reporterkarnataka.com): ಸಂತ ಆಗ್ನೇಸ್ ಕಾಲೇಜಿನ (ಸ್ವಾಯತ್ತ) ವಾರ್ಷಿಕ ಕ್ರಿಸ್ಮಸ್ ದತ್ತಿ ಕಾರ್ಯಕ್ರಮವಾದ ನವಿದಾದ್ ಜರಗಿತು.
ಕಾಲೇಜು ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಂತರ ಜಿಲ್ಲಾ ಮಟ್ಟದ ಕ್ಯಾರಲ್ಸ್ ಗಾಯನ ಸ್ಪರ್ಧೆಯಾದ ‘ಕ್ಯಾರೋಲ್ ಕ್ಲಾಶ್’ ನಡೆಯಿತು. ಈ ಗಾಯನ ಸ್ಪರ್ಧೆಗೆ ಮೂರು ವಿಭಾಗಗಳು ಇದ್ದವು. ೩ – ೧೦ ವರ್ಷಗಳು, ೧೧ – ೧೫ ವರ್ಷಗಳು ಮತ್ತು ೧೫ ವರ್ಷಕ್ಕಿಂತ ಮೇಲ್ಪಟ್ಟವರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಲ್ವಿನ್ ಮ್ಯೂಸಿಕಲ್ ನ ಸಂಸ್ಥಾಪಕ ಮತ್ತು ಬ್ಯಾಂಡ್ ಚರಿತ್ರದ ಸ್ಥಾಪಕ ಸದಸ್ಯ ಲಾಯ್ ಸಲ್ಡಾನಾ ಆಗಮಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ಅವರು ಕಾಲೇಜಿನ ಹಿರಿಮೆಯನ್ನು ಶ್ಲಾಘಿಸಿದರು ಮತ್ತು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ನಿಧಿ ಸಂಗ್ರಹಿಸಿ ನಿರ್ಗತಿಕ ಕುಟುಂಬಕ್ಕೆ ಮನೆ ನಿರ್ಮಿಸಲು ಸಹಾಯ ಮಾಡುವ ಕಾರ್ಯವನ್ನು ಕೊಂಡಾಡಿದರು.
ಪ್ರಾಂಶುಪಾಲರಾದ ಸಿಸ್ಟರ್ ಡಾ. ವೆನಿಸ್ಸಾ ಎ.ಸಿ ತಮ್ಮ ಸಂದೇಶದಲ್ಲಿ ದತ್ತಿ ನಿಧಿಗೆ ಉದಾರವಾಗಿ ದಾನ ನೀಡಿದ ಸರ್ವರಿಗೂ ಅಭಿನಂದನೆ ಸಲ್ಲಿಸಿದರು ಮತ್ತು ೨೦೨೫ ರ ಸಾಲಿನ ಫಲಾನುಭವಿಯಾಗಿ ಸಂತ ಆಗ್ನೇಸ್ ಕಾಲೇಜಿನ ಒಂಟಿ ಪೋಷಕ ಮತ್ತು ಬೋಧಕೇತರ ಸಿಬ್ಬಂದಿಯಾದ ಶ್ರೀಮತಿ ಅನುಷಾ ಅವರು ಆಯ್ಕೆ ಆಗಿರುವುದನ್ನು ಘೋಷಿಸಿದರು.
ಕಾರ್ಯಕ್ರಮದ ಅಂಗವಾಗಿ ಕ್ಯಾರೋಲ್ಸ್ , ನೃತ್ಯಗಳು, ಲೈವ್ ಬ್ಯಾಂಡ್ ಪ್ರದರ್ಶನ , ಸಾಮರಸ್ಯ ಕ್ರಿಸ್ಮಸ್ ಪ್ಲೇ ಮುಂತಾದ ನಾನಾ ಮನೋರಂಜನಾ ಕಾರ್ಯಕ್ರಮಗಳು, ನಾನಾ ರೀತಿಯ ಆಟಗಳು, ಕರಕುಶಲ ವಸ್ತುಗಳ ಮಳಿಗೆಗಳು , ರುಚಿಕರವಾದ ಆಹಾರ ಮಳಿಗೆಗಳು ಗಮನ ಸೆಳೆಯಿತು. ವಿದ್ಯಾರ್ಥಿಗಳಾದ ದಿಯಾ ಶಂಕರ್, ಸಾನ್ವಿ ಮತ್ತು ಆಗ್ನಸ್ ಪ್ರಿನ್ಸ್ ಕಾರ್ಯಕ್ರಮ ನಿರೂಪಿಸಿದರು.













