11:39 PM Monday22 - December 2025
ಬ್ರೇಕಿಂಗ್ ನ್ಯೂಸ್
ರಾಮೇಶ್ವರಂ ಕೆಫೆ ವಿರುದ್ಧದ ಪ್ರಕರಣದಲ್ಲಿ ಹೆಚ್ಚಿನ ತನಿಖೆಗೆ ಕರ್ನಾಟಕ ಹೈಕೋರ್ಟ್ ವತಿಯಿಂದ ತಡೆಯಾಜ್ಞೆ;… ಅಟಲ್ ಜೀ ವೃಕ್ಷ ಯೋಜನೆಯಡಿ 2240 ಸಸಿ ಸಂರಕ್ಷಣೆ: ವರ್ಷಪೂರ್ತಿ ಅಟಲ್ ಜನ್ಮ… ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ

ಇತ್ತೀಚಿನ ಸುದ್ದಿ

ಅಟಲ್ ಜೀ ವೃಕ್ಷ ಯೋಜನೆಯಡಿ 2240 ಸಸಿ ಸಂರಕ್ಷಣೆ: ವರ್ಷಪೂರ್ತಿ ಅಟಲ್ ಜನ್ಮ ಶತಮಾನೋತ್ಸವ

22/12/2025, 21:52

ಬೆಂಗಳೂರು(reporterkarnataka.com): ಮೇರು ವ್ಯಕ್ತಿತ್ವದ ಆಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಬದುಕಿನ, ಅವರ ಜೀವನ ಮೌಲ್ಯಗಳನ್ನು ದೇಶಾದ್ಯಂತ ಪಸರಿಸಲು ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯ ಎಲ್ಲ ಕಾರ್ಯಕರ್ತರಿಗೆ ವಾಜಪೇಯಿಯವರ ಜೀವನ, ಕಾರ್ಯಗಳ ಪರಿಚಯಕ್ಕೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದರು. ಅಟಲ್ ಜೀ ಅವರು ದೇಶ ಕಂಡ ಮಹಾನ್ ರಾಜನೀತಿಜ್ಞ ಎಂದು ತಿಳಿಸಿದರು. ಆಜಾತಶತ್ರು, ಈ ದೇಶದ ನೆಚ್ಚಿನ ಪ್ರಧಾನಿ ಆಗಿದ್ದವರು. ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಹಿಂದಿಯಲ್ಲಿ ಭಾಷಣ ಮಾಡಿ ಜಗತ್ತಿನ ಗಮನ ಸೆಳೆದವರು ಎಂದು ವಿವರಿಸಿದರು.
ಪ್ರಧಾನಿ ಆಗಿದ್ದಾಗ ಮೂಲಭೂತ ಸೌಕರ್ಯಗಳಿಗೆ ಒತ್ತು ಕೊಟ್ಟು, ಮೊದಲ ಬಾರಿಗೆ ಸುವರ್ಣ ಚತುಷ್ಪಥ ಎಂಬ ಅದ್ಭುತವಾದ ಸಂಪರ್ಕ ವ್ಯವಸ್ಥೆ ನಿರ್ಮಿಸಿದ್ದರು. ದಿಟ್ಟತನದ ನಿರ್ಣಯಗಳ ಜೊತೆ ದೇಶದ ಅಣುನೀತಿ ಪರಿಷ್ಕರಿಸಿದ ಕೀರ್ತಿ ಪಡೆದವರು ಎಂದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲಕ ದೇಶದ ಉದ್ದಗಲದಲ್ಲಿ ಗುಣಮಟ್ಟದ ರಸ್ತೆ ನಿರ್ಮಸಿದ್ದಾರೆ ಎಂದು ವಿವರಿಸಿದರು. ಶಿಕ್ಷಣದ ಕಡೆಗಣನೆ ಸಂದರ್ಭದಲ್ಲಿ ಸರ್ವ ಶಿಕ್ಷಾ ಅಭಿಯಾನದ ಮೂಲಕ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ಕೊಟ್ಟವರು. ಮೌಲ್ಯಾಧಾರಿತ ರಾಜಕಾರಣಕ್ಕೆ ಆದ್ಯತೆ ಕೊಟ್ಟವರು ಎಂದು ತಿಳಿಸಿದರು. ವಿಚಾರಗೋಷ್ಠಿ, ಚರ್ಚಾಸ್ಪರ್ಧೆ, ಪ್ರದರ್ಶಿನಿ ಇರುತ್ತದೆ ಎಂದರು.
ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಅವರು ಮಾತನಾಡಿ, ಒಂದು ವರ್ಷ ಕಾಲ ಅಟಲ್‍ಜೀ ಜೀವನದ ವಿಚಾರಧಾರೆಗಳನ್ನು ಇಂದಿನ ಯುವಕರಿಗೆ, ಜನತೆಗೆ ತಿಳಿಸಲಾಗಿದೆ. ಸುಶಾಸನ ದಿನವನ್ನು ರಾಜ್ಯಾದ್ಯಂತ ಸೇವಾದಿನವಾಗಿ ಆಚರಿಸಿದ್ದೇವೆ. ಅಟಲ್ ಜೀ ಅವರ ಒಡನಾಡಿಗಳ, ಅವರ ಕರ್ನಾಟಕದ ನಂಟಿನ ವಿವರ ಸಂಗ್ರಹ ಮಾಡಿದ್ದೇವೆ. 350ಕ್ಕೂ ಹೆಚ್ಚು ಹಿರಿಯ ಕಾರ್ಯಕರ್ತರನ್ನು ಇದಕ್ಕಾಗಿ ಭೇಟಿ ಮಾಡಿದ್ದೇವೆ. ಎಲ್ಲ ಪತ್ರ, ಸ್ಮರಣಿಕೆ ಸಂಗ್ರಹ ನಡೆಸಿದ್ದೇವೆ ಎಂದು ತಿಳಿಸಿದರು.
ಅಟಲ್ ಜೀ ಅವರ ಜೊತೆ ಸಂಪರ್ಕ ಹೊಂದಿದ್ದ ಹಿರಿಯರನ್ನು ಗೌರವಿಸಿದ್ದೇವೆ. ಅಟಲ್ ಜೀ ವ್ಯಕ್ತಿತ್ವ, ನೇತೃತ್ವ, ಕರ್ತೃತ್ವ- ಈ 3 ವಿಚಾರಧಾರೆ ಇಟ್ಟುಕೊಂಡು ಅಟಲ್ ವಿರಾಸತ್ ಸಮ್ಮೇಳನವನ್ನು ಜಿಲ್ಲೆಗಳಲ್ಲಿ ನಡೆಸಿದ್ದೇವೆ. ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಭಾಷಣ ಸ್ಪರ್ಧೆ ನಡೆಸಿದ್ದೇವೆ ಎಂದು ವಿವರ ನೀಡಿದರು.
ಅಟಲ್ ಜೀ ವೃಕ್ಷ ಎಂಬ ಸಸಿ ನೆಡುವ ಕಾರ್ಯಕ್ರಮವು ರಾಜ್ಯದ ವೈಶಿಷ್ಟ್ಯ. ವಿಧಾನಸಭಾ ಕ್ಷೇತ್ರದ ಒಂದು ಶಾಲೆಯಲ್ಲಿ 10 ಸಸಿ ನೆಡುವ ಕಾರ್ಯ ಇದಾಗಿದೆ ಎಂದು ತಿಳಿಸಿದರು. 224 ಕ್ಷೇತ್ರಗಳಲ್ಲಿ 2240 ಸಸಿ ನೆಟ್ಟು 3 ವರ್ಷ ಸಂರಕ್ಷಿಸಿ, ಸಸಿಯನ್ನು ವೃಕ್ಷವನ್ನಾಗಿ ಮಾಡುವ ಕಾರ್ಯವನ್ನು ಅದೇ ಶಾಲೆ ವಿದ್ಯಾರ್ಥಿಗಳಿಗೆ ನೀಡುವ ಮಹತ್ವದ ಕಾರ್ಯ ಇದೆಂದು ವಿವರಿಸಿದರು.
ಸಸಿಗಳು ಸಿದ್ಧವಿದ್ದು, ಶಾಲೆಗಳನ್ನೂ ಗುರುತಿಸಲಾಗಿದೆ. 25ರಿಂದ 31ರವರೆಗೆ ಇದನ್ನು ನಡೆಸುತ್ತೇವೆ ಎಂದರು. ಬೆಂಗಳೂರು ಬಿಜೆಪಿಯ 3 ಜಿಲ್ಲೆಗಳ ನೇತೃತ್ವದಲ್ಲಿ ಜಗನ್ನಾಥ ಭವನದಲ್ಲಿ ಒಂದು ದೊಡ್ಡ ಆರೋಗ್ಯ ತಪಾಸಣಾ ಶಿಬಿರವನ್ನು ನಾವು ನಡೆಸಲಿದ್ದೇವೆ. ಅತಿ ಹೆಚ್ಚು ರಕ್ತದಾನ ಮಾಡುವ ಶಿಬಿರ ಇದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕ್ಯಾನ್ಸರ್ ತಪಾಸಣೆಯನ್ನು ಈ ಶಿಬಿರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಹಿಂದಿನ ನಗರ ಕಚೇರಿ ಇದ್ದ ಭಾವುರಾವ್ ದೇಶಪಾಂಡೆ ಭವನದಲ್ಲಿ ಅಟಲ್ ಗ್ರಂಥಾಲಯ ಉದ್ಘಾಟನೆ ನೆರವೇರಿಸಲಿದ್ದೇವೆ ಎಂದರು.
ಅಟಲ್ ಅವರ ಕನಸಿನ ಕೂಸು ಹೆದ್ದಾರಿಗಳಲ್ಲಿ ಸಿಹಿ ಹಂಚುವ ಕಾರ್ಯ ನಡೆಯಲಿದೆ. ಗ್ರಾಮ ಸಡಕ್ ಯೋಜನೆ ಜಾರಿಯಾದ ಕಡೆಗಳಲ್ಲಿ ಅಟಲ್ ನಡಿಗೆ ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತೇವೆ ಕಾರ್ಕಳದಲ್ಲಿ 10 ಸಾವಿರ ಕಾರ್ಯಕರ್ತರ, ಹಿತೈಷಿಗಳ ಸಮ್ಮೇಳನ ಇದೇ 25ರಂದು ನಡೆಯಲಿದೆ ಎಂದು ತಿಳಿಸಿದರು.


ರಾಜ್ಯ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್ ಗೌಡ, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಬೆಂಗಳೂರು ಮಹಾನಗರ ಮಾಜಿ ಜಿಲ್ಲಾಧ್ಯಕ ಸದಾಶಿವ, ಅಟಲ್ ಜೀ ಜನ್ಮಶತಮಾನೋತ್ಸವ ಕಾರ್ಯಕ್ರಮದ ರಾಜ್ಯ ಸಮಿತಿ ಸದಸ್ಯರಾದ ಮಮತಾ ಉದಯ್ ಮತ್ತು ಪ್ರಮುಖರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು