ಇತ್ತೀಚಿನ ಸುದ್ದಿ
ಸಿದ್ದರಾಮಯ್ಯ ಸರ್ಕಾರಕ್ಕೆ ಕೋಮುವಾದ, ದ್ವೇಷಭಾಷಣದ ವಿರುದ್ದ ನೈಜ ಕಾಳಜಿ ಇಲ್ಲ: ಮುನೀರ್ ಕಾಟಿಪಳ್ಳ
22/12/2025, 21:48
ಬೆಂಗಳೂರು(reporterkarnataka.com): ಸಿದ್ದರಾಮಯ್ಯ ಸರ್ಕಾರ ದ್ವೇಷಭಾಷಣದ ಕಾಯ್ದೆ ಮಂಡಿಸಿ ಬೀಗುತ್ತಿದೆ. ವಾಸ್ತವವಾಗಿ ರಾಜ್ಯ ಸರ್ಕಾರಕ್ಕೆ ದ್ವೇಷ ಭಾಷಣ ತಡೆಯುವ ಇಚ್ಚಾಶಕ್ತಿ ಇಲ್ಲ. ದ್ವೇಷಭಾಷಣಕಾರರ ಮೇಲೆ ದಾಖಲಾಗಿರುವ 38 ಮೊಕದ್ದಮೆಗಳಿಗೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ಸಿದ್ದರಾಮಯ್ಯ ಸರ್ಕಾರ ತೆರವುಗೊಳಿಸಲು ಕ್ರಮ ಕೈಗೊಳ್ಳದೆ ಮೃದು ಹಿಂದುತ್ವ ಧೋರಣೆ ಅನುಸರಿಸುತ್ತಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆದ ಜನದನಿ ರ‌್ಯಾಲಿಯಲ್ಲಿ ಅವರು ಮಾತನಾಡುತ್ತಿದ್ದರು.
‘ರಾಜ್ಯದ ಜನಸಾಮಾನ್ಯರ ಬದುಕಿನ ಪ್ರಶ್ನೆ ಮುನ್ನಲೆಗೆ ಬಾರದಂತೆ ಕೋಮುವಾದವನ್ನು ಬಳಕೆ ಮಾಡಲಾಗುತ್ತಿದೆ. 2014 ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಆರ್ ಎಸ್ ಎಸ್ ಜಾಲ ಎಲ್ಲಾ ಕ್ಷೇತ್ರಗಳಲ್ಲಿ ಕೈಚಾಚಿದೆ. ಕಾಂಗ್ರೆಸ್ ನ ಒಳಗೇ ಕೂಡಾ ಆರ್ ಎಸ್ ಎಸ್ ಕಾರ್ಯನಿರ್ವಹಿಸುತ್ತಿದೆ. ಸಿದ್ದರಾಮಯ್ಯ ಸರ್ಕಾರ ಬಂದಾಗ ಅಲ್ಪಸಂಖ್ಯಾತರಿಗೆ ಭಾರೀ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ’ ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಸೇರಿದಂತೆ ಹಲವಾರು ಕೋಮುವಾದದ ನಿಲುವುಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಯಾವ ವ್ಯತ್ಯಾಸವೂ ಇಲ್ಲ. ಜಾನುವಾರ ಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ಬಳಸಿಕೊಂಡು ಹಲವಾರು ಮುಸ್ಲಿಮರ ಮನೆಗಳನ್ನು ಸಿದ್ದರಾಮಯ್ಯ ಸರ್ಕಾರ ಜಪ್ತಿ ಮಾಡಿದೆ. ನಮ್ಮ ಸಿಪಿಎಂ ತಂಡ ಸಿದ್ದರಾಮಯ್ಯ ಸರ್ಕಾರ ಸೀಝ್ ಮಾಡಿದ ಮನೆ, ಆಸ್ತಿಗಳನ್ನು ಬಿಡಿಸಿಕೊಟ್ಟಿದೆ ಎಂದು ಮುನೀರ್ ಕಾಟಿಪಳ್ಳ ಮಾಹಿತಿ ನೀಡಿದರು.
ಪುನೀತ್ ಕೆರೆಹಳ್ಳಿ ಸೇರಿದಂತೆ ಯಾವುದೇ ಮತೀಯ ಪುಂಡರನ್ನು ನಿಯಂತ್ರಿಸುವ ಕನಿಷ್ಠ ಸಾಮರ್ಥ್ಯವೂ ರಾಜ್ಯ ಸರ್ಕಾರಕ್ಕೆ ಇಲ್ಲ. ಸರ್ಕಾರ ಬಂದು ಎರಡುವರೆ ವರ್ಷವಾದರೂ ಒಬ್ಬನೇ ಒಬ್ಬ ಕೋಮುವಾದಿ ಕ್ರಿಮಿನಲ್ ಅನ್ನು ಜೈಲಿನಲ್ಲಿರಿಸಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.




ಸಿದ್ದರಾಮಯ್ಯ ಸರ್ಕಾರ ಬಂದ ಬಳಿಕ ಈವರೆಗೆ ಎರಡುವರೆ ವರ್ಷದಲ್ಲಿ 38 ಧ್ವೇಷ ಭಾಷಣ ಮೊಕದ್ದಮೆಗಳಿಗೆ ಕೋಮುವಾದಿಗಳು ಹೈಕೋರ್ಟ್ ನಿಂದ ತಡೆಯಾಜ್ಞೆ ಪಡೆದುಕೊಂಡು ಕೃತ್ಯಗಳನ್ನು ಪುನರಾವರ್ತನೆ ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರ ಈವರೆಗೂ ಒಂದೇ ಒಂದು ತಡೆಯಾಜ್ಞೆಯನ್ನು ತೆರವುಗೊಳಿಸುವ ಕನಿಷ್ಠ ಪ್ರಯತ್ನ ಮಾಡುತ್ತಿಲ್ಲ. ನಾವು ಎಡಪಂಥೀಯರು ಸಣ್ಣ ತಂಡ ಕಟ್ಟಿಕೊಂಡು ಹೈಕೋರ್ಟ್ ನಲ್ಲಿರುವ ಹಲವು ಧ್ವೇಷಭಾಷಣ ಪ್ರಕರಣಗಳ ತಡೆಯಾಜ್ಞೆ ತೆರವುಗೊಳಿಸಲು ಯತ್ನಿಸುತ್ತಿದ್ದೇವೆ. ನಮಗೆ ಸಾಧ್ಯವಾಗುವುದು ಸರ್ಕಾರಕ್ಕೆ ಯಾಕೆ ಸಾಧ್ಯವಿಲ್ಲ ? ಯಾಕೆಂದರೆ ಧ್ವೇಷಭಾಷಣಕಾರರ ವಿರುದ್ದದ ಸರ್ಕಾರದ ಕಾಳಜಿ ನೈಜವಾದುದಲ್ಲ” ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.












