11:31 PM Saturday20 - December 2025
ಬ್ರೇಕಿಂಗ್ ನ್ಯೂಸ್
ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ…

ಇತ್ತೀಚಿನ ಸುದ್ದಿ

ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

20/12/2025, 21:48

*ಗಾಂಧಿ ಪ್ರತಿಮೆ ಮುಂದೆ ನಿಂತು ಹೋರಾಟ ಮಾಡುವ ಹಕ್ಕನ್ನು ಬಿಜೆಪಿ ಕಳೆದುಕೊಂಡಿದೆ*

*ಸತ್ಯಕ್ಕೆ ಸಾವಿಲ್ಲ, ಸುಳ್ಳು ಕೇಸ್ ಗಳಿಗೆ ಆಯುಷ್ಯವಿಲ್ಲ*

*ದೇಶಕ್ಕಾಗಿ ಆಸ್ತಿ, ಅಧಿಕಾರ, ಪ್ರಾಣ ತ್ಯಾಗ ಮಾಡಿದ್ದು ಗಾಂಧಿ ಕುಟುಂಬ*

ಬೆಂಗಳೂರು(reporterkarnataka.com): ದೇಶದ ಐಕ್ಯತೆ ಹಾಗೂ ಸ್ವಾತಂತ್ರ್ಯಕ್ಕೆ ಪ್ರಾಣ ತ್ಯಾಗ ಮಾಡಿದ ಮಹಾತ್ಮ ಗಾಂಧಿಜಿ ಅವರ ಹೆಸರನ್ನು ನಾಥೂರಾಮ್ ಗೋಡ್ಸೆ ಪಕ್ಷದವರು ತೆಗೆಯಲು ಮುಂದಾಗಿದ್ದಾರೆ. ಗಾಂಧಿ ಭಾರತವನ್ನು ಗೋಡ್ಸೆ ಭಾರತವನ್ನಾಗಿ ಮಾಡಲು ಕಾಂಗ್ರೆಸಿಗರು ಬಿಡುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸಂದೇಶ ರವಾನಿಸಿದರು.
ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ನಡೆದ ಸತ್ಯಮೇವ ಜಯತೆ ಪ್ರತಿಭಟನಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
ಈ ದೇಶದ ಸ್ವಾತಂತ್ರ್ಯದ ನಾಯಕತ್ವ ವಹಿಸಿದ ಮಹಾತ್ಮಾ ಗಾಂಧೀಜಿ ಅವರು ನೂರು ವರ್ಷಗಳ ಹಿಂದೆ ಕನ್ನಡ ನೆಲ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದರು. ಈ ದೇಶಕ್ಕೆ ಸ್ವಾತಂತ್ರ್ಯದ ಬುನಾದಿ ಹಾಕಿದರು. ಕಳೆದ ವರ್ಷ ನಾವು ಗಾಂಧಿ ಭಾರತ ಕಾರ್ಯಕ್ರಮ ಮಾಡಿದೆವು. ಮಹತ್ಮಾ ಗಾಂಧೀಜಿ ಅವರ ಹೆಸರಿನಲ್ಲಿ ನಮ್ಮ ಸರ್ಕಾರ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದಿತು. ಈ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಭೂಮಿ ಮಟ್ಟ ಮಾಡಲು, ಕೊಟ್ಟಿಗೆ ನಿರ್ಮಾಣ, ಆಶ್ರಯಮನೆ ನಿರ್ಮಾಣ ಮಾಡಲು ಸರ್ಕಾರ ಕೂಲಿ ನೀಡುತ್ತದೆ. ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಮನಮೋಹನ್ ಸಿಂಗ್ ಅವರು ಈ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಮಹಾತ್ಮಾ ಗಾಂಧೀಜಿ ಅವರ ಹೆಸರಿನಲ್ಲಿ ತಂದ ಈ ಯೋಜನೆಯಲ್ಲಿ ಈ ಸರ್ಕಾರ ಗಾಂಧೀಜಿ ಅವರ ಹೆಸರು ತೆಗೆಯುತ್ತಿದೆ. ಬಿಜೆಪಿಗೆ ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧಿ ಚಿತ್ರವನ್ನು ತೆಗೆಯಿರಿ ಎಂದು ಹೇಳಿದೆ. ಮಹಾತ್ಮಾ ಗಾಂಧಿ ಅವರ ಹೆಸರು ಅಜರಾಮರ ಎಂದು ತಿಳಿಸಿದರು.

*ಬಿಜೆಪಿಗರು ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಬೇಡಿ:*
ಬಿಜೆಪಿಗರು ಗಾಂಧಿ ಪ್ರತಿಮೆ ಮುಂದೆ ನಿಂತು ಹೋರಾಟ ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಹಾಗೂ ಶಾಸಕರು ಇನ್ನು ಮುಂದೆ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಬಾರದು ಎಂದು ಸವಾಲು ಹಾಕುತ್ತೇನೆ. ಬಡವರಿಗೆ ಉದ್ಯೋಗ ನೀಡುವ ಯೋಜನೆಯ ಹೆಸರಿನಿಂದ ನೀವು ಗಾಂಧೀಜಿ ಅವರ ಹೆಸರು ತೆಗೆಯುತ್ತಿದ್ದೀರಿ ಎಂದರೆ ನೀವು ದೇಶದ್ರೋಹಿಗಳು. ಬೇರೆ ದೇಶದ ನಾಯಕರು ನಮ್ಮ ದೇಶಕ್ಕೆ ಬಂದರೆ ಮೊದಲು ಅವರು ಗಾಂಧಿ ಸಮಾಧಿಗೆ ಹೋಗಿ ಪೂಜೆ ಮಾಡುತ್ತಾರೆ. ಗಾಂಧಿ ಭಾವಚಿತ್ರಕ್ಕೆ ನಮಿಸುತ್ತಾರೆ. ಆದರೆ ಗಾಂಧಿ ಅವರ ಹೆಸರು ತೆಗೆಯುವ ಮೂಲಕ ಮತ್ತೊಮ್ಮೆ ಗಾಂಧಿ ಅವರನ್ನು ಕೊಲ್ಲುತ್ತಿದ್ದೀರಿ.

*ಸತ್ಯಕ್ಕೆ ಸಾವಿಲ್ಲ, ಸುಳ್ಳು ಕೇಸ್ ಗಳಿಗೆ ಆಯುಷ್ಯವಿಲ್ಲ:*
ನ್ಯಾಷನಲ್ ಹೆರಾಲ್ಡ್ ದೇಶದ ಆಸ್ತಿ. ದ್ವೇಷ ಬಿಜೆಪಿ ಆಸ್ತಿ. ಸತ್ಯಕ್ಕೆ ಸಾವಿಲ್ಲ, ಸುಳ್ಳು ಕೇಸ್ ಗಳಿಗೆ ಆಯುಷ್ಯವಿಲ್ಲ. ಇಂದು ಸತ್ಯಮೇವ ಜಯತೆ ಎಂದು ಹೋರಾಟ ಮಾಡುತ್ತಿದ್ದೇವೆ. ಬಿಜೆಪಿಗೆ ಘನತೆ ಇಲ್ಲದೆ ಬದುಕುತ್ತಿದ್ದಾರೆ. ಪಿತೂರಿಯಿಂದ ಸೋಲಿಸಲು, ದ್ವೇಷದಿಂದ ಕುಗ್ಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ದೇಶದ ಭವಿಷ್ಯ ರೂಪಿಸಲು ಸಂವಿಧಾನದ ರೂಪದಲ್ಲಿ ಕಾರ್ಯಕ್ರಮಗಳನ್ನು ಕೊಟ್ಟುಕೊಂಡು ಬಂದಿದೆ ಎಂದು ತಿಳಿಸಿದರು.
ಈ ದೇಶದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರು ಬ್ಯಾಂಕ್ ರಾಷ್ಟ್ರೀಕರಣ, ಉಳುವವನಿಗೆ ಭೂಮಿ, ಮನಮೋಹನ್ ಸಿಂಗ್ ಅವರು ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮೋಟಮ್ಮ ಅವರ ನೇತೃತ್ವದಲ್ಲಿ ಸ್ತ್ರೀಶಕ್ತಿ ಸಂಘ ಪ್ರಾರಂಭಿಸಿದರು. ನಮ್ಮ ಈ ಯೋಜನೆಗಳನ್ನು ಬೇರೆ ಸರ್ಕಾರಗಳು ತೆಗೆದುಹಾಕಲು ಸಾಧ್ಯವಾಯಿತಾ ಇಲ್ಲ. ನಮ್ಮ ಐದು ಗ್ಯಾರಂಟಿಗಳನ್ನೂ ಕೂಡ ತೆಗೆದುಹಾಕಲು ಸಾಧ್ಯವಿಲ್ಲ. ಇದು ಕಾಂಗ್ರೆಸ್ ಸರ್ಕಾರಗಳ ಕಾರ್ಯಕ್ರಮ. ಅಮಿತ್ ಶಾ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಹೇಳುವುದನ್ನು ಟೀಕಿಸಿದ್ದರು. ಅದಕ್ಕೆ ನಾವು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಮಾಡಿದೆವು ಎಂದರು.
ನ್ಯಾಷನಲ್ ಹೆರಾಲ್ಡ್ ಈ ದೇಶದ ಸ್ವಾತಂತ್ರ್ಯ ಹೋರಾಟದ ವೇಳೆ ಹುಟ್ಟಿಕೊಂಡ ಪತ್ರಿಕೆ. 1937ರಲ್ಲಿ ನೆಹರು ಅವರು ಈ ಪತ್ರಿಕೆ ಆರಂಭಿಸಿದರು. ಇದು ಕಾಂಗ್ರೆಸ್ ಪಕ್ಷದ ಆಸ್ತಿ. ಇದು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಆಸ್ತಿಯಲ್ಲ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದು, ಕೆಲವು ಸಂಸ್ಥೆಗಳ ಅದ್ಯಕ್ಷನಾಗಿದ್ದು, ಆ ಸಂಸ್ಥೆಗಳ ಆಸ್ತಿಗಳೆಲ್ಲವೂ ನನ್ನ ವೈಯಕ್ತಿಕ ಆಸ್ತಿಯಾಗಲು ಸಾಧ್ಯವೇ? ನಾನು ಈ ಹುದ್ದೆಯಲ್ಲಿ ಇರುವವರೆಗೂ ಈ ಸಂಸ್ಥೆಗಳು ನನ್ನ ಜವಾಬ್ದಾರಿ, ನನ್ನ ನಂತರ ಎಐಸಿಸಿ ಅವರು ಈ ಸ್ಥಾನಕ್ಕೆ ಯಾರನ್ನು ಕೂರಿಸುತ್ತಾರೋ, ಅವರಿಗೆ ಈ ಸಂಸ್ಥೆಯ ಆಸ್ತಿಗಳ ಜವಾಬ್ದಾರಿ ಹೋಗುತ್ತದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋಹ್ರಾ, ಆಸ್ಕರ್ ಫರ್ನಾಂಡೀಸ್ ಅವರ ಹೆಸರಿನಲ್ಲಿ ಸ್ವಲ್ಪ ಷೇರುಗಳನ್ನು ನೀಡಲಾಗಿತ್ತು. ಅದಕ್ಕೆ ಇವರ ಮೇಲೆ ಪಿಎಂಎಲ್ಎ ಪ್ರಕರಣ ದಾಖಲಿಸಿ ಕೊಡಬಾರದ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದರು.
ನನ್ನ ಮೇಲೂ ಸುಳ್ಳು ಪ್ರಕರಣ ದಾಖಲಿಸಿ, ಪೋಲೀಸ್ ಠಾಣೆ, ಕೋರ್ಟ್ ಜೈಲು ಸುತ್ತುವಂತೆ ಮಾಡಿದರು. ಆಗ ನೀವೆಲ್ಲರೂ ನನಗಾಗಿ ಪ್ರಾರ್ಥನೆ ಮಾಡಿದಿರಿ. ನಂತರ ನನ್ನ ಮೇಲಿನ ಪ್ರಕರಣ ವಜಾಗೊಂಡಿತು. ಅದೇ ರೀತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮೇಲೆ ಇಡಿ ದಾಖಲಿಸಿದ್ದ ಆರೋಪ ಪಟ್ಟಿಯನ್ನು ಕೋರ್ಟ್ ವಜಾಗೊಳಿಸಿದೆ. ಆದರೆ ಅವರು ಇಲ್ಲಿಗೆ ನಿಲ್ಲಿಸುವುದಿಲ್ಲ. ಮೊನ್ನೆ ಹೊಸದಾಗಿ ಎಫ್ಐಆರ್ ದಾಖಲಿಸಿ ನೋಟೀಸ್ ನೀಡಿದ್ದಾರೆ. ಅವರ ವಿಚಾರಣೆಗೆ ಹಾಜರಾಗಲು ನಾನು ದೆಹಲಿಗೆ ತೆರಳುತ್ತಿದ್ದೇನೆ. ಅವರಿಗೆ ಎಫ್ಐಆರ್ ಪ್ರತಿ ನೀಡುವಂತೆ ಕೇಳಿದ್ದೇನೆ ಎಂದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ನಾನು ಹಾಗೂ ನನ್ನ ಸಹೋದರ ಡಿ.ಕೆ. ಸುರೇಶ್ ದೇಣಿಗೆ ನೀಡಿದ್ದೇವೆ. ಶಾಮನೂರು ಶಿವಶಂಕರಪ್ಪ ಅವರು ಕೊಡಿಸಿದ್ದಾರೆ. ನಮ್ಮೆಲ್ಲರಿಗೂ ನೋಟೀಸ್ ನೀಡಿದ್ದಾರೆ. ನಾವು ಇದನ್ನು ಎದುರಿಸುತ್ತೇವೆ. ನಾವೆಲ್ಲರೂ ಕಾಂಗ್ರೆಸಿಗರು. ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ನಮ್ಮ ಶಾಸಕರು ಪ್ರತಿ ತಿಂಗಳು ತಮ್ಮ ವೇತನದಲ್ಲಿ 25 ಸಾವಿರ ನೀಡುತ್ತಿದ್ದಾರೆ. ಹೀಗೆ ಪಕ್ಷಕ್ಕೆ ದೇಣಿಗೆ ಕೊಟ್ಟವರ ಮೇಲೆ ಪ್ರಕರಣ ದಾಖಲಿಸಲು ಸಾಧ್ಯವೇ? ಅದೇ ರೀತಿ ನ್ಯಾಷನಲ್ ಹೆರಾಲ್ಡ್ ಆಸ್ತಿ ಉಳಿಸಿಕೊಳ್ಳಲು ಸುಮಾರು 100 ಕೋಟಿಯಷ್ಟು ಹಣವನ್ನು ಕಾಂಗ್ರೆಸಿಗರು ನೀಡಿದರು. ಈ ಹಣ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಖಾತೆಗೆ ಹಣ ಹೋಗಿಲ್ಲ. ಆದರೂ ಮನಿ ಲಾಂಡರಿಂಗ್ ಕೇಸ್ ದಾಖಲಿಸಿದ್ದಾರೆ ಎಂದು ಕಿಡಿಕಾರಿದರು.

*ದೇಶಕ್ಕಾಗಿ ಆಸ್ತಿ, ಅಧಿಕಾರ, ಪ್ರಾಣ ತ್ಯಾಗ ಮಾಡಿದ್ದು ಗಾಂಧಿ ಕುಟುಂಬ:*
ಮೋತಿಲಾಲ್ ನೆಹರೂ ಅವರ ಕುಟುಂಬ ಅತಿ ದೊಡ್ಡ ಶ್ರೀಮಂತ ಕುಟುಂಬ. ಅವರು ತಮ್ಮ ಆಸ್ತಿಗಳನ್ನು ಸರ್ಕಾರಕ್ಕೆ ದಾನ ಮಾಡಿದರು. ಈ ದೇಶಕ್ಕಾಗಿ ತಮ್ಮ ಆಸ್ತಿ, ಅಧಿಕಾರ, ಪ್ರಾಣವನ್ನು ತ್ಯಾಗ ಮಾಡಿದವರು ಯಾರಾದರೂ ಇದ್ದರೆ ಅದು ಗಾಂಧಿ ಕುಟುಂಬದವರು. ನೆಹರು ಅವರು ಆಸ್ತಿ ತ್ಯಾಗ ಮಾಡಿದರೆ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅಧಿಕಾರ ತ್ಯಾಗ ಮಾಡಿದ್ದಾರೆ. ಅಂತಹ ಪಕ್ಷದಲ್ಲಿ ನಾವು ನೀವು ಇದ್ದೇವೆ. ನಾವು ಗಾಂಧಿ ಕುಟುಂಬದ ಮಕ್ಕಳು. ಕಾಂಗ್ರೆಸಿಗರಿಗೆ ಮಾತ್ರ ಈ ತ್ರಿವರ್ಣ ಧ್ವಜ ಧರಿಸುವ ಹಕ್ಕಿದೆ. ಮೊನ್ನೆ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಲ್ಕೈದು ಸಾವಿರ ಜನ ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಭಾಗವಹಿಸಿದ್ದರು. ನಾವು ಈ ಹೋರಾಟ ಮುಂದುವರಿಸಬೇಕು. ನಮ್ಮ ಇತಿಹಾಸವನ್ನು ತಿರುಚಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದು, ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ಈ ಪ್ರತಿಭಟನೆಯಲ್ಲಿ ಭಾಗವಹಿಸಿರುವುದಕ್ಕೆ ನಿಮಗೆ ಅಭಿನಂದನೆಗಳು ಎಂದರು.

*ಮಾಧ್ಯಮ ಪ್ರತಿಕ್ರಿಯೆ:*
ಸದಾಶಿವನಗರ ಹಾಗೂ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಬಗ್ಗೆ ಕೇಳಿದಾಗ, “ಕೇಂದ್ರ ಸರ್ಕಾರ ಮನರೇಗಾ ಯೋಜನೆಯಲ್ಲಿ ಮಹಾತ್ಮಾ ಗಾಂಧಿ ಹೆಸರನ್ನು ತೆಗೆಯಲು ಮುಂದಾಗಿದ್ದಾರೆ. ಅವರು ದೇಶದ ನೋಟಿನ ಮೇಲಿರುವ ಗಾಂಧಿ ಭಾವಚಿತ್ರವನ್ನು ಬದಲಾಯಿಸಲಿ ನೋಡೋಣ. ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರ ನಾಯಕತ್ವದಲ್ಲಿ ನಿರುದ್ಯೋಗ ನಿವಾರಣೆಗೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತರಿ ನೀಡುವ ಯೋಜನೆ ಜಾರಿಗೆ ತಂದಿದ್ದೇವೆ. ಈ ಯೋಜನೆಗೆ ನಮ್ಮ ದೇಶದ ಮಹಾನ್ ನಾಯಕನ ಹೆಸರಿನಲ್ಲಿ ತರಲಾಗಿದೆ. ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹೊರತಾಗಿ ಬೇರೆ ಯಾವುದೇ ಹುದ್ದೆಯನ್ನು ಅಲಂಕರಿಸಿದವರಲ್ಲ. ಅವರು ಮಹಾತ್ಮ. ಕೇಂದ್ರ ಸರ್ಕಾರ ಈ ಯೋಜನೆಯನ್ನು ನಾಶ ಮಾಡಬೇಕು ಎಂದು ಮುಂದಾಗಿದ್ದಾರೆ. ಇದರ ವಿರುದ್ಧ ರಾಜ್ಯದಲ್ಲಿ ದೊಡ್ಡ ಆಂದೋಲನ ಆರಂಭವಾಗಲಿದೆ. ನಮಗೆ ಹಾಗೂ ದೇಶಕ್ಕೆ ಗಾಂಧಿ ಬೇಕು. ಅವರ ಹೆಸರನ್ನು ತೆಗೆಯುವುದು ಅವರಿಗೆ ಮಾಡಲಾಗುವ ಅಪಮಾನ. ಈ ರೀತಿ ಯಾವ ಸರ್ಕಾರವು ಮಾಡಿರಲಿಲ್ಲ. ಈ ಸರ್ಕಾರ ಮಾಡಿದೆ. ಇದಕ್ಕೆ ದೇಶದ ಜನ ಉತ್ತರ ನೀಡಲಿದ್ದಾರೆ” ಎಂದು ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು