ಇತ್ತೀಚಿನ ಸುದ್ದಿ
4 ವರ್ಷದಲ್ಲಿ 300ಕ್ಕೂ ಅಧಿಕ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ: ಶಾಸಕ ವೇದವ್ಯಾಸ ಕಾಮತ್
14/10/2022, 11:09
ಮಂಗಳೂರು(reporterkarnataka.com):ರಾಜ್ಯ ಸರಕಾರದ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಇಲಾಖೆಯಿಂದ ಮಂಗಳೂರು ನಗರ ದಕ್ಷಿಣ ವ್ಯಾಪ್ತಿಯಲ್ಲಿರುವ 108 ದೇವಸ್ಥಾನ, ದೈವಸ್ಥಾನ ಹಾಗೂ ಮಂದಿರಗಳ ಅಭಿವೃದ್ಧಿಗಾಗಿ 6 ಕೋಟಿಗೂ ಅಧಿಕ ಅನುದಾನ ಬಂದಿದ್ದು, ಶಾಸಕ ವೇದವ್ಯಾಸ್ ಕಾಮತ್ ಅವರು ಕ್ಷೇತ್ರದ ಪ್ರಮುಖರಿಗೆ ಆದೇಶ ಪತ್ರವನ್ನು ವಿತರಿಸಿದರು.
ಉರ್ವಸ್ಟೋರ್ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ನಗರದ ದೇವಸ್ಥಾನ, ದೈವಸ್ಥಾನ ಹಾಗೂ ಮಂದಿರಗಳ ಅಭಿವೃದ್ಧಿಯ ನೆಲೆಯಲ್ಲಿ ಕಳೆದ 4 ವರ್ಷಗಳಲ್ಲಿ ಕೋಟ್ಯಾಂತರ ರೂಪಾಯಿ ಅನುದಾನ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸದ್ಯ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ 108 ದೇವಸ್ಥಾನ, ದೈವಸ್ಥಾನ ಮತ್ತು ಮಂದಿರಗಳ ಅಭಿವೃದ್ಧಿಗೆ 6 ಕೋಟಿ ರೂಪಾಯಿಗೂ ಅಧಿಕ ಅನುದಾನ ಬಂದಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕ್ಷೇತ್ರದ ಆಡಳಿತ ಸಮಿತಿಯ ಪ್ರಮುಖರ ಸಭೆ ಕರೆದು ಆದೇಶ ಪತ್ರ ವಿತರಿಸಲಾಗಿದೆ ಎಂದು ಹೇಳಿದರು.
ಅನುದಾನ ಪಡೆಯುವ ಸಂದರ್ಭದಲ್ಲಿ ಪೂರಕ ದಾಖಲೆಗಳ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಪಡೆದುಕೊಂಡು ಕ್ಷೇತ್ರದ ಅಭಿವೃದ್ಧಿಪಡಿಗೆ ಸಹಕಾರ ನೀಡಲು ಅಧಿಕಾರಿಗೆ ಸೂಚನೆ ನೀಡಲಾಗಿದೆ. ಕಳೆದ 4 ವರ್ಷಗಳಿಂದ ಮಂಗಳೂರು ನಗರದ ಸರಿಸುಮಾರು 300ಕ್ಕೂ ಅಧಿಕ ದೇವಸ್ಥಾನ, ದೈವಸ್ಥಾನ, ನಾಗಬನ, ಮಂದಿರಗಳ ಅಭಿವೃದ್ಧಿಗೆ ಗರಿಷ್ಠ ಪ್ರಮಾಣದ ಅನುದಾನ ಬಿಡುಗಡೆಗೊಳಿಸಿದ್ದೇನೆ. ಈ ಹಿಂದಿನ ಸರಕಾರ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಕಡೆಗಣಿಸಿದ್ದು, ನಮ್ಮ ಸರಕಾರದಿಂದ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಮೂಲಕ ಐತಿಹಾಸಿಕ ಪ್ರಮಾಣದ ಅನುದಾನ ಬಿಡುಗಡೆಗೊಳಿಸಲಾಗಿದೆ, ಬೇರೆ ಸರಕಾರದ ಅವಧಿಯಲ್ಲಿ ಈ ಮಟ್ಟದ ಅನುದಾನಗಳೇಕೆ ಬಂದಿಲ್ಲ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದ್ದು, 50 ರಿಂದ 60 ಕ್ಷೇತ್ರಗಳ ಅಭಿವೃದ್ಧಿಯ ಯೋಜನೆಯಿದೆ. ನಗರದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಇಲಾಖೆಯಿಂದ 20 ಕೋಟಿಗೂ ಅಧಿಕ ಅನುದಾನ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದಿದ್ದಾರೆ.
ಹಿಂದೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಪಡೆಯುವ ಕುರಿತು ಮಂಗಳೂರು ಮಹಾನಗರ ಪಾಲಿಕೆಯ ಶಾಸಕ ವೇದವ್ಯಾಸ್ ಕಾಮತ್ ಅವರ ಕಚೇರಿಯಲ್ಲಿ ಮಾಹಿತಿ ಪಡೆದುಕೊಳ್ಳಲು ಶಾಸಕ ಕಾಮತ್ ತಿಳಿಸಿದ್ದು, ಕ್ಷೇತ್ರದ ನೊಂದಾಣಿಯಾದ ದಾಖಲೆ, ಬ್ಯಾಂಕ್ ಖಾತೆಯ ವಿವರ, ಕಾಮಗಾರಿ ಕೈಗೊಳ್ಳಲಿರುವ ಸ್ಥಳದ ಪಹಣಿ ಪತ್ರ, ಕಟ್ಟಡ ಪರವಾನಗಿ ಪತ್ರ, ಕಾಮಗಾರಿಯ ಅಂದಾಜು ಪಟ್ಟಿ, ಹಾಗೂ ಸ್ಟಾಂಪ್ ಪೇಪರ್ ಮೂಲಕ ಅನುದಾನ ದುರ್ಬಳಕೆಯಾಗದಂತೆ ಪ್ರಮಾಣಪತ್ರವನ್ನು ಅಫಿಡವಿತ್ ಸಲ್ಲಿಸಿದರೆ ಅನುದಾನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಪೂರ್ಣಿಮಾ, ಪಾಲಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಕಿಶೋರ್ ಕೊಟ್ಟಾರಿ, ನಿಕಟಪೂರ್ವ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು,ಮಾಜಿ ಕಾರ್ಪೋರೇಟರ್ ವಿಜಯ್ ಕುಮಾರ್ ಶೆಟ್ಟಿ, ರಾಜ್ಯ ಮೀನುಗಾರಿಕಾ ನಿಗಮದ ನಿಕಟಪೂರ್ವ ಅಧ್ಯಕ್ಷರಾದ ನಿತಿನ್ ಕುಮಾರ್, ಪಾಲಿಕೆಯ ಸದಸ್ಯರು, ಸಂಬಂಧಪಟ್ಟ ಅಧಿಕಾರಿಗಳು, ಕ್ಷೇತ್ರಗಳ ಆಡಳಿತ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.