9:29 AM Tuesday3 - October 2023
ಬ್ರೇಕಿಂಗ್ ನ್ಯೂಸ್
ಅನಧಿಕೃತ ಕೃಷಿ ಕೀಟ ನಾಶಕ ಮಾರಾಟ: ಕೆಮಿಕಲ್ ಮಳಿಗೆಗೆ ಕೃಷಿ ಅಧಿಕಾರಿಗಳ ದಿಢೀರ್… ಹೈಕೋರ್ಟ್ ಆದೇಶ ಉಲ್ಲಂಘಿಸಿ ವಿದ್ಯಾರ್ಥಿಗಳ ಮರುಹಂಚಿಕೆಗೆ ಕ್ರಮ? ವೈದ್ಯಕೀಯ ಶಿಕ್ಷಣ ಸಚಿವ ಶರಣ್… ಕೆಜೆ ಹಳ್ಳಿ-ಡಿಜೆಹಳ್ಳಿ-ಹುಬ್ಬಳ್ಳಿ ಕೇಸ್ ಸಂದರ್ಭದಲ್ಲಿ ಕಾಂಗ್ರೆಸ್ ದೇಶದ್ರೋಹಿಗಳ ಪರ ನಿಂತಿತ್ತು: ಕೇಂದ್ರ ಸಚಿವೆ… ಜೆಡಿಎಸ್- ಬಿಜೆಪಿ ಸಖ್ಯ: ಕೇಸರಿ ಪಾಳಯ ತೊರೆದು ದಳ ಸೇರಿದ್ದ ಮೂಡಿಗೆರೆ ಮಾಜಿ… ಕೊಟ್ಟಿಗೆಹಾರ ಸುತ್ತಮುತ್ತ 3 ದಿನಗಳಿಂದ ನಿರಂತರ ಧಾರಾಕಾರ ಮಳೆ: ಆತಂಕಕ್ಕೀಡಾದ ಕಾಫಿ ಬೆಳೆಗಾರರು ಮೆಸ್ಕಾಂ ನಿರ್ಲಕ್ಷ್ಯ: ಹೆಮ್ಮಾಡಿ ಕಾಲು ದಾರಿಯಲ್ಲಿ ವಿದ್ಯುತ್ ಶಾಕ್ ತಗುಲಿ ದಂಪತಿ ದಾರುಣ… ಬೆಳಗಾವಿಯಲ್ಲಿ 2 ದಿನಗಳ ಮೋಡ ಬಿತ್ತನೆಗೆ ಚಾಲನೆ: 20 ಸಾವಿರ ಅಡಿ ಎತ್ತದರದಲ್ಲಿರುವ… ಶೃಂಗೇರಿ: ತುಂಗಾ ನದಿಯ ನಡುಗಡ್ಡೆಯಲ್ಲಿ ಪ್ರವಾಹಕ್ಕೆ ಸಿಲುಕಿದ ಇಬ್ಬರ ರಕ್ಷಣೆ; ಅಗ್ನಿ ಶಾಮಕ… ಕಾವೇರಿ ನದಿ ನೀರು ಹಂಚಿಕೆ ವಿವಾದ: ಅಥಣಿಯಲ್ಲಿ ಪ್ರತಿಭಟನೆ; ಮಾನವ ಸರಪಳಿ ಮಂಗಳೂರಿನಲ್ಲಿ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಬಸ್ ಶೆಲ್ಟರ್ ಇಲ್ಲ!: ಆದ್ಯತೆ ಮೇರೆಗೆ ನಿರ್ಮಾಣ…

ಇತ್ತೀಚಿನ ಸುದ್ದಿ

ಲೋಕಸಭೆ ಚುನಾವಣೆ: ನಳಿನ್, ಡಿವಿ, ಮಂಗಳಾ ಅಂಗಡಿ ಸಹಿತ 10ಕ್ಕೂ ಹೆಚ್ಚು ಸಂಸದರು ಸ್ಪರ್ಧೆಯಿಂದ ಔಟ್?

03/06/2023, 13:09

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಏಟು ತಿಂದ ಬಿಜೆಪಿ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದು, ಕನಿಷ್ಠ 10 ಮಂದಿ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆಗಳು ದಟ್ಟವಾಗಿದೆ.
ಮೊನ್ನೆ ಮೊನ್ನೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಸೋಲಿನ ಕಾರಣ ಕಂಡುಕೊಳ್ಳಲು ಕೋರ್ ಕಮಿಟಿ ಸಭೆ ಕರೆಯಲು ಕೂಡ ಬಿಜೆಪಿ ಸಾಧ್ಯವಾಗಲಿಲ್ಲ. ಪಕ್ಷದ ಕೋರ್ ಕಮಿಟಿಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಲಕ್ಷಣ ಸವದಿ ಅವರು ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಹೊಸ ಕೋರ್ ಕಮಿಟಿ ರಚನೆಯ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ. ರಾಜ್ಯದಲ್ಲಿ ಪಕ್ಷದ ಹೀನಾಯ ಸೋಲಿನ ಕಾರಣವನ್ನು ಬಿಜೆಪಿ ಹೈಕಮಾಂಡ್ ಕೇಳಿದೆ. ಇವೆಲ್ಲದರ ನಡುವೆ ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷರ ಹಾಗೂ ಪ್ರತಿಪಕ್ಷದ ನಾಯಕನ ಆಯ್ಕೆ ನಡೆಯಬೇಕಾಗಿದೆ. ಇದೆಲ್ಲ ಪ್ರಸ್ತುತ ಬಿಜೆಪಿ ಮುಂದಿರುವ ಸವಾಲುಗಳಾಗಿವೆ.
ಮುಂಬರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಬದಲಾವಣೆ ಪ್ರಕ್ರಿಯೆ ಪಕ್ಷದ ರಾಜ್ಯಾಧ್ಯರಾಗಿರುವ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಂದಲೇ ಆರಂಭವಾಗಲಿದೆ. ಕರಾವಳಿ ಭಾಗದಲ್ಲಿ ಪಕ್ಷದೊಳಗೆ ನಳಿನ್ ವಿರುದ್ದ ಅಸಮಾಧಾನ ದಿನ ಕಳೆದಂತೆ ಹೆಚ್ಚಾಗುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಬಂಡಾಯವಾಗಿ ಸ್ಪರ್ಧಿಸಿದ್ದ ಅರುಣ್ ಪುತ್ತಿಲ ಅವರು 60 ಸಾವಿರ ಮತಗಳನ್ನು ಪಡೆದು ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ವಿಧಾನ ಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಕಾಂಗ್ರೆಸ್ ನ ಅಶೋಕ್ ಕುಮಾರ್ ರೈ ಎದುರು ಸೋಲು ಅನುಭವಿಸಿದ ಪುತ್ತಿಲ್ಲ ಅವರನ್ನು ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆ ಲೋಕಸಭೆಯ ಅಭ್ಯರ್ಥಿಯಾಗಿ ಬಿಂಬಿಸಲಾಗಿದೆ. ಪುತ್ತಿಲ ಪರಿವಾರ ರಚನೆ ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯ ಬಳಿಕ ನಳಿನ್ ವಿರುದ್ಧ ಬಿಜೆಪಿ ಕಾರ್ಯಕರ್ತರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರ ಹಾಕಲಾರಂಭಿಸಿದ್ದಾರೆ. ಬಿಜೆಪಿ ಅಧ್ಯಕ್ಷರ ಕಾರನ್ನು ಅಲುಗಾಡಿಸುವುದರಿಂದ ಆರಂಭಗೊಂಡ ಶೇಕಿಂಗ್ ಪ್ರಕ್ರಿಯೆ ರಾಜ್ಯಾಧ್ಯಕ್ಷ ಕುರ್ಚಿ ಅಲುಗಾಡುವವರೆಗೆ ಮುಂದುವರಿದಿದೆ.
ವಿಧಾನ ಸಭೆ ಫಲಿತಾಂಶದ ಬಗ್ಗೆ ಬಿಜೆಪಿ ಹೈಕಮಾಂಡ್ ಫುಲ್ ಗರಂ ಆಗಲು ಕಾರಣ ಕೂಡ ಇದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಪಾಲಿಗೆ ಹೆಬ್ಬಾಗಿಲಿನಂತಿದ್ದ ಕರ್ನಾಟಕದಲ್ಲಿ ಪಕ್ಷ ಸೋತಿರುವುದು ಹೈಕಮಾಂಡ್ ಗೆ ಅರಗಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯನ್ನು ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಸ್ಪರ್ಧೆಯಿಂದ ತಾವಾಗಿಯೇ ಹಿಂದೆ ಸರಿಯುವಂತೆ ರಾಜ್ಯದ ಹಾಲಿ 25 ಮಂದಿ ಬಿಜೆಪಿ ಸಂಸದರ ಪೈಕಿ ಸುಮಾರು 10 ಮಂದಿ ಸಂಸದರಿಗೆ ಸೂಚನೆ ನೀಡಲು ಬಿಜೆಪಿ ಹೈಕಮಾಂಡ್ ತಯಾರಿ ನಡೆಸಿದೆ ಎನ್ನಲಾಗಿದೆ. ಬೆಳಗಾವಿಯಿಂದ ಮಂಗಳಾ ಅಂಗಡಿ, ಮಂಗಳೂರಿನಿಂದ ನಳಿನ್ ಕುಮಾರ್ ಕಟೀಲ್, ಬೆಂಗಳೂರು ಉತ್ತರದಿಂದ ಡಿ.ವಿ.ಸದಾನಂದ ಗೌಡ ಅವರಿಗೆ ಟಿಕೆಟ್ ನಿರಾಕರಿಸಲಾಗುತ್ತದೆ. ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿಯಾದ ಮಂಗಳಾ ಅಂಗಡಿ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಕುಟುಂಬ ರಾಜಕಾರಣಕ್ಕೆ ಪಕ್ಷದಲ್ಲಿ ಅವಕಾಶವಿಲ್ಲ ಎಂದು ಹೇಳುತ್ತಾ ಬಂದಿರುವ ಬಿಜೆಪಿ ಬೆಳಗಾವಿಯಲ್ಲಿ ಮಂಗಳಾ ಅಂಗಡಿ ಅವರಿಗೆ ಮಣೆ ಹಾಕಿದರೆ, ಬೆಂಗಳೂರು ದಕ್ಷಿಣದಲ್ಲಿ ಅನಂತ ಕುಮಾರ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಪತ್ನಿ ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಅವಕಾಶ ನೀಡಲಿಲ್ಲ. ಡಿಎನ್ ಎ ನೋಡಿ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿಕೆ ನೀಡಿದ್ದರು. ಇಷ್ಟೇ ಅಲ್ಲದೆ ಮಂಗಳಾ ಅಂಗಡಿ ಅವರು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಅದಲ್ಲದೆ ಮಂಗಳಾ ಅವರ ಸೊಸೆ ಇತ್ತೀಚೆಗೆ ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಡರ್ ಅವರ ಪುತ್ರಿಯಾಗಿದ್ದಾರೆ.
ಹಾಗೆ ವಿಜಯಪುರದಿಂದ ರಮೇಶ್ ಜಿಗಜಿಣಗಿ, ತುಮಕೂರಿನಿಂದ ಜೆ.ಎಸ್. ಬಸವರಾಜು, ಚಿಕ್ಕಬಳ್ಳಾಪುರದಿಂದ ಬಚ್ಚೇಗೌಡ, ದಾವಣಗೆರೆಯಿಂದ ಸಿದ್ದೇಶ್ವರ, ಚಾಮರಾಜನಗರದಿಂದ ಶ್ರೀನಿವಾಸ ಪ್ರಸಾದ್, ಉತ್ತರ ಕನ್ನಡದಿಂದ ಅನಂತ ಕುಮಾರ್ ಹೆಗಡೆ ಅವರು ಸ್ಪರ್ದೆಯಿಂದ ಹಿಂದೆ ಸರಿಯುವ ಸಾಧ್ಯತೆಗಳಿವೆ. ರಮೇಶ್ ಜಿಗಜಿಣಗಿ, ಶ್ರೀನಿವಾಸ ಪ್ರಸಾದ್ ಹಾಗೂ ಬಚ್ಚೇಗೌಡ ಅವರು ವಯಸ್ಸಿನ ಕಾರಣ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲದ ಹಿನ್ನೆಲೆಯಲ್ಲಿ ತಾವಾಗಿಯೇ ಸ್ಪರ್ಧೆಯಿಂದ ಹಿಂದೆ ಸರಿಯುವ ಸಾಧ್ಯತೆ ಹೆಚ್ಚಾಗಿದೆ.
ಉತ್ತರ ಕನ್ನಡದ ಅನಂತ ಕುಮಾರ್ ಹೆಗಡೆ ಅವರು ಸುಮಾರು 2 ವರ್ಷಗಳಿಂದ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಸಂದರ್ಭ ದಲ್ಲೂ ಅನಂತ ಕುಮಾರ್ ಹೆಗಡೆ ಅವರು ಆಗಮಿಸಲಿಲ್ಲ. ಹಾಗೆಂತ ಅನಂತ ಕುಮಾರ್ ಹೆಗಡೆ ಬಿಜೆಪಿ ತೊರೆಯುತ್ತಾರೆ ಅಥವಾ ಹಿಂದುತ್ವ ಕೈಬಿಡುತ್ತಾರೆ ಎಂದು ಅರ್ಥವಲ್ಲ. ಆರೋಗ್ಯ ಸಮಸ್ಯೆಯಿಂದ ಅವರಿಗೆ ರಾಜಕೀಯ ಚಟುವಟಿಕೆ ನಡೆಸಲಾಗುತ್ತಿಲ್ಲ ಎಂಬ ಮಾಹಿತಿ ಇದೆ. ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಬಚ್ಚೇಗೌಡ ಅವರು ಕಾಂಗ್ರೆಸ್ ಪರ ಒಲವು ಹೊಂದಿದ್ದಾರೆ. ಅವರ ಮಗ ಶರತ್ ಬಚ್ಚೇಗೌಡ ಅವರು ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ. ಇನ್ನು ಹಾವೇರಿ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಅವರು ಕೂಡ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ. ಇವೆಲ್ಲದರ ನಡುವೆ ಬಿಜೆಪಿಗೆ ಸುಮಾರು ಒಂದು ಡಜನ್ ಕ್ಷೇತ್ರಗಳಿಗೆ ಅಭ್ಯರ್ಥಿ ಗಳ ಹುಡುಕಾಟ ಅನಿವಾರ್ಯವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು