1:59 AM Friday26 - April 2024
ಬ್ರೇಕಿಂಗ್ ನ್ಯೂಸ್
ಚಳ್ಳಕೆರೆ ತಾಲೂಕಿನಲ್ಲಿ ಶಾಂತಿಯುತ ಮತದಾನ: ಚುನಾವಣೆ ಕರ್ತವ್ಯನಿರತ ಮಹಿಳಾ ಸಿಬ್ಬಂದಿ ಸಾವು ನಂಜನಗೂಡಿನಲ್ಲಿ ಶಾಂತಿಯುತ ಚುನಾವಣೆ: ಸಂಜೆ 4ಕ್ಕೆ ಸುಮಾರು ಶೇ.65 ಮತದಾನ ಸ್ಪೀಕರ್ ಖಾದರ್ ಆಪ್ತ ಸಹಾಯಕ ಮಹಮ್ಮದ್ ಲಿಬ್ಝೆತ್ ಮತದಾನ ; ಪದ್ಮರಾಜ್ ಗೆಲುವಿನ… ಜನಾರ್ದನ ಪೂಜಾರಿ ಮಾದರಿಯಲ್ಲಿ ಪದ್ಮರಾಜ್ ಪೂಜಾರಿ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ: ಲಿಬ್‌ಝಿತ್ ಅಭಿಮತ ನೈಟ್ ಸರ್ವಿಸ್ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ನಿವಾಸಿಯ ಬಂಧನ ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಕರಾವಳಿಯಲ್ಲಿ ಸಕಲ ಸಿದ್ದತೆ;… ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಮತಗಟ್ಟೆಯ ಅಧಿಕಾರಿಗಳಿಗೆ ಪಾಠ; ಜಾಗೃತಿಯಾಗಿ ಕರ್ತವ್ಯ… ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್…

ಇತ್ತೀಚಿನ ಸುದ್ದಿ

ಸೂರಿಕುಮೇರು ಕೆ ಗೋವಿಂದ ಭಟ್ಟರ ಹೊಸ ಪುಸ್ತಕ `ಎಪ್ಪತ್ತು ತಿರುಗಾಟಗಳು’ ಯಕ್ಷ ಅನುಭವದ ಕಥನ

18/11/2021, 23:24

ಮಂಗಳೂರು (Reporterkarnataka.com)

ತೆಂಕುತಿಟ್ಟು ಯಕ್ಷಗಾನದ ‘ದಶಾವತಾರಿ’ ಎಂದೇ ಪ್ರಸಿದ್ಧವಾಗಿರುವ ಸೂರಿಕುಮೇರು ಕೆ ಗೋವಿಂದ ಭಟ್ಟರು ತೆಂಕುತಿಟ್ಟು ಯಕ್ಷಗಾನಕ್ಕೆ ಎರಡನೇ ರಾಷ್ಟ್ರಪ್ರಶಸ್ತಿ ತಂದು ಕೊಟ್ಟವರು.

ಅವರು ಯಕ್ಷರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ದಾಖಲೆಯ ಎಪ್ಪತ್ತು ವರ್ಷಗಳ ಕಾಲ ತಿರುಗಾಟದಲ್ಲಿ ಬದುಕನ್ನು ಸವೆಸಿದವರು. ಧರ್ಮಸ್ಠಳ ಒಂದೇ ಮೇಳದಲ್ಲಿ ಗೋವಿಂದ ಭಟ್ಟರು 54 ವರ್ಷಗಳ ಕಾಲ ದುಡಿದವರು. ಇದೂ ದಾಖಲೆಯೇ. ಯಕ್ಷಲೋಕದ ಸಜ್ಜನ ಕಲಾವಿದರಾದ ಇವರು, ತಮ್ಮ ಯಕ್ಷ ತಿರುಗಾಟದ ಅನುಭವ ಕಥನವನ್ನು `ಎಪ್ಪತ್ತು ತಿರುಗಾಟಗಳು’ ಎಂಬ ಕೃತಿಯಲ್ಲಿ ನಿರೂಪಿಸಿದ್ದಾರೆ.

ಮಂಜಾದ ಕಣ್ಣು, ನಡುಗುತ್ತಿರುವ ಕೈಬೆರಳುಗಳು, ವಯೋ ಸಹಜ ಮರೆವು, ಹೆಚ್ಚು ಹೊತ್ತು ಕುಳಿತುಕೊಳ್ಳಲು ಶಕ್ತರಾಗದಿದ್ದರೂ ಎಲ್ಲವನ್ನೂ ಮೀರಿ ಎಂಬತ್ತರ ಇಳಿಹರೆಯದಲ್ಲೂ ಈ ಪುಸ್ತಕವನ್ನು ಅವರು ಬರೆದು ಮುಗಿಸಿದ್ದಾರೆ. ಇಂಥಾ ಅಪೂರ್ವ ಕಲಾವಿದರ ಅಪರೂಪದ ಕೃತಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಪ್ರಕಾಶನದ ಮೂಲಕ ಇದೇ 25ನೇ ತಾರೀಕಿನಂದು ಲೋಕಾರ್ಪಣೆಗೊಳ್ಳಲಿದೆ.

1951ರಿಂದ 2020ರವರೆಗಿನ ಯಕ್ಷಗಾನ ಚರಿತ್ರೆ, ಆ ಕಾಲದ ಕಲಾವಿದರ ಬದುಕು ಜೊತೆಗೆ ಕರಾವಳಿ ಜಿಲ್ಲೆಯ ಸಾಂಸ್ಕೃತಿಕ ಲೋಕವೇ ಇಲ್ಲಿ ತೆರೆದುಕೊಂಡಿದೆ.
`ಎಪ್ಪತ್ತು ತಿರುಗಾಟಗಳು’ ಕೃತಿಯ ಭಾಗವೊಂದನ್ನು ನಮ್ಮ ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇವೆ.

ಬರಿಗೈಲಿ ಹೊರಟವನ ಒಂದು ಮಾತು
‘ದಿವಸ ಕೊಳಗದಿನ್ ಆಯುರಾಶಿಯನು ರವಿಯಳೆಯಲ್ ಅವನ ಮಗ ಜವನದರ ಲೆಕ್ಕವಿರಿಸುವನು’ ಡಿ ವಿ ಜಿಯವರು ಮಂಕುತಿಮ್ಮನ ಬಾಯಿಯಿಂದ ಹೇಳಿಸಿದ ಮಾತಿದು. ದಿವಸವೆಂಬ ಕೊಳಗದಿಂದ ನಮ್ಮ ಆಯಸ್ಸನ್ನು ಸೂರ್ಯ ಅಳೆದರೆ, ಅವನ ಮಗ ಯಮರಾಯ ಅದರ ಲೆಕ್ಕವನ್ನು ಇಡುತ್ತಾನೆ ಎಂಬ ಈ ಮಾತು ಮತ್ತೆ ಮತ್ತೆ ನನಗೆ ನೆನಪಾಗುತ್ತದೆ. ಮನುಷ್ಯನ ಆಯುಷ್ಯ ಕ್ಷಣಿಕ. ಜೀವನಯಾತ್ರೆ ಸುದೀರ್ಘ. ಆತ ತಾನು ಯಾವುದನ್ನು ಸಾಧಿಸಬೇಕೆಂದು ಆಶಿಸುತ್ತಾನೋ, ಏನು ನಿರೀಕ್ಷೆ ಇಟ್ಟುಕೊಂಡಿರುತ್ತಾನೋ ಅದನ್ನು ಲಕ್ಷಿಸಿಕೊಂಡು ಬದುಕಿನ ಪಯಣವನ್ನು ಆರಂಭಿಸುತ್ತಾನೆ. ಈ ಯಾತ್ರೆಯಲ್ಲಿ ಎಷ್ಟೋ ಬಯಕೆಗಳು ಹುಟ್ಟುತ್ತವೆ, ಹೆಚ್ಚಾಗುತ್ತವೆ, ಬದಲಾಗುತ್ತವೆ. ಕೆಲವು ಸಾಯುತ್ತವೆ, ಮತ್ತೆ ಹುಟ್ಟುತ್ತವೆ. ಸಮುದ್ರದ ತೆರೆಗಳಂತೆ ಕೊನೆಯಿಲ್ಲದ ಆಸೆಗಳು.

ಸಿಕ್ಕಿದಷ್ಟೂ ಸಾಲದೆನ್ನುವ ಮನುಷ್ಯ, ದೊರೆತುದರಲ್ಲಿ ತೃಪ್ತನಾಗುವುದೇ ಇಲ್ಲವೇನೋ?
ಕನಸುಗಳೇ ಇಲ್ಲದೆ ಬರಿಗೈಯಲ್ಲಿ ಅಂದು ನಾನು ಹೊರಟಿದ್ದೆ. ಇರಲು ನೆಲೆ ಇಲ್ಲದ, ಹೊಟ್ಟೆಗೆ ಹಿಟ್ಟಿಗೂ ಗತಿಯಿಲ್ಲದ, ಮೈಮುಚ್ಚಿಕೊಳ್ಳಲು ಬಟ್ಟೆಗೂ ವ್ಯವಸ್ಥೆಯಿಲ್ಲದ ಈ ಬಡಪಾಯಿ ಎಂಟು ದಶಕಗಳ ಕಾಲ ಬದುಕಿದ್ದೇ ಪವಾಡವಲ್ಲವೇ? ಮನುಷ್ಯ ದಾರಿಯ ಮೇಲೆ ಕಾಲಿಡುತ್ತ ಹೋದಂತೆ ದಾರಿ ತೆರೆದುಕೊಳ್ಳುತ್ತ ಹೋಗುತ್ತದೆ. ಆತ ಸಾಗುತ್ತಾನೆ. ಹಾಗೆಯೇ ಸಾಗಿದವನು ನಾನು. ನಾನಾ ಸ್ವಭಾವದ ಜನರೊಂದಿಗೆ ಬೆರೆತು, ಊರೆಲ್ಲ ಸುತ್ತಿ, ಬಂಧು ಬಾಂಧವರ ಅನಾದರಕ್ಕೊಳಗಾಗಿ, ಸಾಮಾಜಿಕರಲ್ಲಿ ಗುರುತಿಸಿಕೊಂಡ ಜೀವನದ ಪಾಡಿದು. ರಂಗಸ್ಥಳದಲ್ಲಿ ಆಟಗಳನ್ನು ನೋಡಿ ಮೆಚ್ಚಿ, ಸಂತೋಷದಿಂದ ಹೊಗಳುವವರು, ಇಂದಿನ ಆಟದ ಪ್ರಸಂಗವೇ ಇವನಿಂದ ಹಾಳಾಯಿತು, ಇಂಥವರನ್ನೆಲ್ಲಾ ಮೇಳದಲ್ಲಿ ಯಾಕಿಟ್ಟುಕೊಳ್ಳುತ್ತಾರೋ? ಎನ್ನುವ ಮಂದಿಗಳೂ ಕಡಿಮೆಯಿರಲಿಲ್ಲ. ಸ್ನೇಹಿತರಾಗಿ ಬರುವ, ಅಭಿಮಾನಿಗಳಾಗಿ ಬರುವ ಎಲ್ಲರನ್ನೂ ಕಂಡಿದ್ದೇನೆ. ನಾನಾದರೋ ಯಕ್ಷಗಾನ ಕಲಾವಿದನೆಂದು ಹೇಳಿಕೊಳ್ಳುತ್ತಾ, ಹೇಳಿಸಿಕೊಳ್ಳುತ್ತಾ ತಿರುಗಾಡಿದ್ದೇನೆ. ಬೀದಿಯಲ್ಲಿ ತಿರುಪೆ ಎತ್ತುವವನಿಂದ ತೊಡಗಿ, ಭವ್ಯ ಬಂಗಲೆಗಳಲ್ಲಿ ವಾಸ ಮಾಡುವ ಶ್ರೀಮಂತರವರೆಗೆ ಸಂಪರ್ಕವಿಟ್ಟುಕೊಂಡಿದ್ದೇನೆ.

ದಿನಗೂಲಿಗೆ ದುಡಿವ ಶ್ರೀ ಸಾಮಾನ್ಯನಿಂದ ಆರಂಭಿಸಿ ದೇಶ-ವಿದೇಶಗಳಲ್ಲಿ ಉತ್ತಮ ಉದ್ಯೋಗದಲ್ಲಿರುವ ಮಹಾನುಭಾವರ ತನಕ ಸ್ನೇಹ, ಪ್ರೀತಿ, ವಿಶ್ವಾಸಗಳನ್ನು ಗಳಿಸಿದ್ದೇನೆ. ಇಷ್ಟೆಲ್ಲಾ ಲಭ್ಯವಾದುದು ಮೇಳಗಳ ತಿರುಗಾಟದಿಂದ. ಆ ತಿರುಗಾಟಗಳು ಹೇಗಿದ್ದುವು? ಅದರ ಸುಖ ದುಃಖಗಳೇನು? ಎಂಬುದರ ಅವಲೋಕನವಿದು.
ನಾನು ಸುಳುಗೋಡಲ್ಲಿದ್ದಾಗ ಇನ್ಫೋಸಿಸ್ ಕಂಪೆನಿ ಸ್ಥಾಪಕ ನಾರಾಯಣ ಮೂರ್ತಿಯವರ ಶ್ರೀಮತಿ ಸುಧಾಮೂರ್ತಿ ಅವರ `ಮನದ ಮಾತು’ ಪುಸ್ತಕ ನನ್ನ ಕಣ್ಣಿಗೆ ಬಿತ್ತು. ಓದಲೆಂದು ಅದನ್ನು ಕೈಗೆತ್ತಿಕೊಂಡೆ. ಅದೊಂದು ಪುಟ್ಟ ಪುಟ್ಟ ಲೇಖನಗಳ ಅಂಕಣ ಬರಹ ಸಂಗ್ರಹ. ಸುಧಾಮೂರ್ತಿಯವರು ತಮ್ಮ ಜೀವನಾನುಭವವನ್ನು ಬರಹಕ್ಕಿಳಿಸಿದ ಕೃತಿ ಅದು. ಮನುಷ್ಯನಲ್ಲಿರಬೇಕಾದ ಆರ್ದ್ರತೆ, ಸಹೃದಯತೆ, ಮಾನವೀಯತೆ ಕಾಲಗತಿಯಲ್ಲಿ ಮಸುಕಾಗುತ್ತ ಹೇಗೆ ಮೂಲಸ್ವರೂಪವನ್ನು ಕಳೆದುಕೊಳ್ಳುತ್ತದೆ ಎಂಬುದನ್ನು ಕೆಲವೊಂದು ನಿದರ್ಶನಗಳ ಮೂಲಕ ಸುಧಾಮೂರ್ತಿಯವರು ಅತ್ಯಂತ ಸರಳವಾಗಿ ಮನಮುಟ್ಟುವಂತೆ ಅಲ್ಲಿ ಚಿತ್ರಿಸಿದ್ದಾರೆ. ಮನುಷ್ಯ ಬಾಳುವುದಕ್ಕಾಗಿ ಜೀವನದುದ್ದಕ್ಕೂ ನಡೆಸುವ ಹೋರಾಟ, ಅವನ ವೃತ್ತಿ ಮತ್ತು ಸ್ವಭಾವಕ್ಕೆ ಸಂಬಂಧಿಸಿದಂತೆ ಈ ಪುಸ್ತಕ ಕೊಟ್ಟ ಸಣ್ಣ ಹೊಳಹು ನನಗೆ ನನ್ನ ತಿರುಗಾಟವನ್ನು ನೆನಪಿಸಿತು. ಪಿ ಲಂಕೇಶ್ ಅವರು ತಮ್ಮ ಸೃಜನಶೀಲ ಬರಹಗಳಲ್ಲಿ ಮತ್ತೆ ಮತ್ತೆ ಹೇಳಲೆತ್ನಿಸಿದ ಮನುಷ್ಯನೊಳಗಿನ ಕೇಡಿಗತನದ ಬಗ್ಗೆ ನನಗಾಗ ನೆನಪಾಗತೊಡಗಿತು. ಕೆಲವೊಮ್ಮೆ ಪಾತಕಿಯಂತೆ ಬದುಕುವ ಮನುಷ್ಯ ಖ್ಯಾತಿಗಾಗಿ, ಕೀರ್ತಿಗಾಗಿ, ಧನ-ಕನಕಾದಿಗಳಿಗಾಗಿ ವಿಲಕ್ಷಣ ಶಕ್ತಿಯನ್ನು ಪಡೆದುಕೊಳ್ಳುತ್ತಾನೆ. ಸೋಗಲಾಡಿತನವನ್ನು ಮೈವೆತ್ತುತ್ತಾ ಬದುಕುವ ಅವನು ನೂರಾರು ವೇಷಗಳನ್ನು ತೊಡುತ್ತಾನೆ. ಇಂಥಾ ಅನೇಕ ಜೀವಿಗಳ ಜೊತೆಗೆ ತಿರುಗಾಟ ಮಾಡಿದ ನನಗೆ ಯಕ್ಷ ತಿರುಗಾಟ ಎಂಬುದು ಗೆದ್ದು ಟ್ರೋಫಿ ಹಿಡಿದು ಬೀಗುವ ಆಟಗಾರನ ಭಾವವನ್ನು ಎಂದೂ ತಂದಿಲ್ಲ.
ತಿರುಗಾಟದ ನನ್ನ ಕಥಾನಕವನ್ನು ಬರೆದು ಪ್ರಕಟಪಡಿಸಬೇಕು, ಇದನ್ನು ಎಲ್ಲರೂ ಓದಬೇಕು ಇತ್ಯಾದಿ ಉದ್ದೇಶಗಳು ನನಗಿರಲಿಲ್ಲ. ಮುಂದೊಂದು ದಿನ ಮಕ್ಕಳೋ, ಮೊಮ್ಮಕ್ಕಳೋ ಓದಿ ನೋಡಿದರೆ ನಮ್ಮ ಹಿರಿಯರೊಬ್ಬರು ಹೀಗಿದ್ದರು ಎಂದಾದರೂ ಹೇಳಬಹುದೇನೋ ಎಂಬ ಯೋಚನೆಯಲ್ಲಿ ಸುಮ್ಮನೆ ಗೀಚಲು ಆರಂಭಿಸಿದೆ. ಗೀಚಾಟ ಮುಂದುವರಿಯುತ್ತಾ ಮುಂದುವರಿಯುತ್ತಾ ಬರವಣಿಗೆಯ ರೂಪವನ್ನು ಪಡೆದುಕೊಂಡಿತು. ಆಪ್ತೇಷ್ಟರಲ್ಲಿ ನನ್ನ ತಿರುಗಾಟದ ಬಗ್ಗೆ ಹೀಗೆ ಸುಮ್ಮನೆ ಹೇಳುತ್ತಿದ್ದೆ. ಆಗೆಲ್ಲ ಅವರು ನನ್ನನ್ನು ಬರೆಯುವಂತೆ ಹುರಿದುಂಬಿಸಿದರು, ಪ್ರೋತ್ಸಾಹಿಸಿದರು. ಕೆಲವೊಬ್ಬರು ಕೆಲವೊಂದು ಸಲಹೆ-ಸೂಚನೆಗಳನ್ನೂ ನೀಡಿದ್ದರು.

ನನಗೆ ಸಂಬಂಧಿಸಿದಂತೆ ಈಗಾಗಲೇ ಎರಡು ಕೃತಿಗಳು ಹೊರಬಂದಿವೆ. ಆ ಎರಡು ಕೃತಿಗಳಲ್ಲಿ ನನಗೆ ಸಂಬಂಧಿಸಿದ ಬಹುತೇಕ ಎಲ್ಲ ಸಂಗತಿಗಳು ನಮೂದಿತವಾಗಿವೆ. ಹೀಗಿರುವಾಗ ನಾನಿಲ್ಲಿ ಹೊಸತಾಗಿ ಹೇಳಲು ಏನಿದೆ ಎಂಬೆಲ್ಲ ಪ್ರಶ್ನೆಗಳು ಆಗಾಗ ಸುಳಿಯುತ್ತಿದ್ದವು, ತಲೆ ತಿನ್ನುತ್ತಿದ್ದವು. ಹಾಗಾಗಿ ಅಲ್ಲಿ ಇಲ್ಲದಿರುವ ಸಂಗತಿಗಳನ್ನು ಮಾತ್ರ ನಾನಿಲ್ಲಿ ಹೇಳಬೇಕಾಗಿತ್ತು. ಅದನ್ನು ನರ‍್ವಹಿಸುವುದು ನನಗೆ ಸವಾಲಿನ ಕೆಲಸವಾಗಿತ್ತು. ನನ್ನ ಆತ್ಮಕಥನ `ಯಕ್ಷೋಪಾಸನೆ’ಯಲ್ಲಿ ಹೇಳದೇ ಇರುವಂಥ ತಿರುಗಾಟದ ಬಗೆಗೆ ಮಾತ್ರ ನಾನಿಲ್ಲಿ ಹೇಳಬೇಕೆಂದು ಯೋಚಿಸಿ ಹೊರಟವನು. ಆದರೂ ಅಲ್ಲಲ್ಲಿ ಆತ್ಮಕಥನದಲ್ಲಿ ನಿರೂಪಿಸಲ್ಪಟ್ಟ ಘಟನೆಗಳು ತಿರುಗಾಟದ ಭಾಗವಾಗಿರುವುದರಿಂದ ಇಲ್ಲಿ ಅನಿವರ‍್ಯವಾಗಿ ಉಲ್ಲೇಖಗೊಂಡಿವೆ. ಇದರ ಬಗ್ಗೆ ನನಗೆ ಎಚ್ಚರವಿದೆ. ಹಾಗಿದ್ದರೂ ಈ ಬರವಣಿಗೆ ಸಂಪೂರ್ಣವಾಗಿ ನನ್ನ ಯಕ್ಷ ತಿರುಗಾಟದ ಅನುಭವ ಕಥನವಾಗಿದೆ.

******

ಇತ್ತೀಚಿನ ಸುದ್ದಿ

ಜಾಹೀರಾತು