9:05 PM Friday26 - April 2024
ಬ್ರೇಕಿಂಗ್ ನ್ಯೂಸ್
ನಂಜನಗೂಡಿನಲ್ಲಿ ಶಾಂತಿಯುತ ಚುನಾವಣೆ: ಸಂಜೆ 4ಕ್ಕೆ ಸುಮಾರು ಶೇ.65 ಮತದಾನ ಸ್ಪೀಕರ್ ಖಾದರ್ ಆಪ್ತ ಸಹಾಯಕ ಮಹಮ್ಮದ್ ಲಿಬ್ಝೆತ್ ಮತದಾನ ; ಪದ್ಮರಾಜ್ ಗೆಲುವಿನ… ಜನಾರ್ದನ ಪೂಜಾರಿ ಮಾದರಿಯಲ್ಲಿ ಪದ್ಮರಾಜ್ ಪೂಜಾರಿ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ: ಲಿಬ್‌ಝಿತ್ ಅಭಿಮತ ನೈಟ್ ಸರ್ವಿಸ್ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ನಿವಾಸಿಯ ಬಂಧನ ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಕರಾವಳಿಯಲ್ಲಿ ಸಕಲ ಸಿದ್ದತೆ;… ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಮತಗಟ್ಟೆಯ ಅಧಿಕಾರಿಗಳಿಗೆ ಪಾಠ; ಜಾಗೃತಿಯಾಗಿ ಕರ್ತವ್ಯ… ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್… ಬಹಿರಂಗ ಪ್ರಚಾರದ ಕೊನೆಯ ದಿನ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರಿಂದ ಪಂಪ್’ವೆಲ್’…

ಇತ್ತೀಚಿನ ಸುದ್ದಿ

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಆನ್ ಲೈನ್ ಶಿಕ್ಷಣದ ಅನಿವಾರ್ಯತೆ: ತರಗತಿ ರಹಿತ ಬೋಧನಾ ವ್ಯವಸ್ಥೆ

12/07/2021, 23:45

ಆನ್ಲೈನ್ ತಂತ್ರಜ್ಞಾನವೆಂಬ ಅನಿವಾರ್ಯತೆ ಅಪಾಯಕಾರಿ ಹಾಗೂ ಅಷ್ಟೇ ವೇಗದಲ್ಲಿ ಹರಡುತ್ತಿರುವ ಸಾಂಕ್ರಾಮಿಕ ರೋಗವಾದ ಕೊರೊನಾ ಅಥವಾ ಕೋವಿಡ್-೧೯ ಸಂಪೂರ್ಣ ಜಗತ್ತನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ತಲ್ಲಣಗೊಳಿಸಿದೆ.ಇದಲ್ಲದೆ ಶೈಕ್ಷಣಿಕ ಕ್ಷೇತ್ರದಲ್ಲೂ ಅನೇಕ ರೀತಿಯ ಬದಲಾವಣೆಗಳನ್ನು ತಂದಿದೆ. ಜೂನ್ ತಿಂಗಳಿನಿಂದ ಏಪ್ರಿಲಿಗೆ ಸೀಮಿತವಾಗಿದ್ದ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯು ಇಂದು ಅಂತರ್ಜಾಲ ಹಾಗೂ ದೂರಸಂಪರ್ಕದ ಮೂಲಕ ಪ್ರತೀಯೊಂದು ವಿದ್ಯಾರ್ಥಿಗೆ ತಲುಪಲೇ ಬೇಕಾಗಿದ ಸ್ಥಿತಿಗೆ ಬಂದೊದಗಿದೆ. 

ತಾತ್ಕಾಲಿಕವಾಗಿ ಎಲ್ಲಾ ಶಾಲಾ-ಕಾಲೇಜುಗಳು ಮುಚ್ಚಿರುವುದಲ್ಲದೆ, ವಿದ್ಯಾರ್ಥಿಯ ವಿದ್ಯಾಭ್ಯಾಸ ಹಾಗೂ ಭವಿಷ್ಯವನ್ನು ಕೂಡ ತಾತ್ಕಾಲಿಕವಾಗಿ ತಡೆಹಿಡಿದಿದೆ. ಇಂತಹ ಸಂದರ್ಭದಲ್ಲಿ ಪ್ರಸಿದ್ಧಿಯನ್ನು ಪಡೆದ ಪದ್ಧತಿಯೇ ‘ಆನ್-ಲೈನ್ ಶಿಕ್ಷಣ’. ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಈ ಕಾಲ ಘಟ್ಟದಲ್ಲಿ ನಾವು ಪ್ರತಿಯೊಂದು ಬದಲಾವಣೆಗೆ ಒಗ್ಗಿಕೊಳ್ಳುವುದು ಅನಿವಾರ್ಯವಾಗಿದೆ. ಅಂತೆಯೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ‌ಸಲುವಾಗಿ ಆನ್ಲೈನ್ ಶಿಕ್ಷಣಕ್ಕೆ ಹೊಂದಿಕೊಳ್ಳುವುದು ಬಹು ಮುಖ್ಯವಾಗಿದೆ. ಶಿಕ್ಷಕನು ತನ್ನ ವಿದ್ಯಾರ್ಥಿಗೆ ಅವನಿರುವ ಜಾಗದಲ್ಲೇ ರೇಡಿಯೋ, ದೂರದರ್ಶನ, ಗಣಕಯಂತ್ರ, ಮೊಬೈಲ್ ಹಾಗೂ ಇತರ ಯಾವುದೇ ‌ಮಾಹಿತಿ ತಂತ್ರಜ್ಞಾನದ ಮೂಲಕ ಬೋಧಿಸುವುದೇ ‘ಆನ್ಲೈನ್ ಶಿಕ್ಷಣ’ 

ಈ ಸಾಂಕ್ರಾಮಿಕ ಕಾಲದ ಮೊದಲೇ ಅನೇಕ ಖಾಸಗಿ ಶೈಕ್ಷಣಿಕ ಸಂಸ್ಥೆಗಳು ಆನ್ಲೈನ್ ಶಿಕ್ಷಣದ ಮೂಲಕ ಅನೇಕ ವಿದ್ಯಾರ್ಥಿ ಸಂಕುಲವನ್ನು ಆಕರ್ಷಿಸಿದ್ದವು. ಅನೇಕ ಕೋಚಿಂಗ್ ಸಂಸ್ಥೆಗಳು ಈ ತಂತ್ರಜ್ಞಾನದ ಮೂಲಕ ಅನೇಕ ವಿದ್ಯಾರ್ಥಿಗಳನ್ನು ಸಂಪಾದಿಸಿಯೂ ಇತ್ತು. ತರಗತಿ ರಹಿತ ಬೊಧನಾ ಕ್ರಮವು ಕಡಿಮೆ ಖರ್ಚಿನಲ್ಲಿ ತರಗತಿ ನಿರ್ವಹಣೆ ಮಾಡುವುದರಲ್ಲಿ ಯಶಸ್ವಿಯಾಗಿದೆ. ಸದಾ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿರುವ ಅಧ್ಯಾಪಕ ವೃಂದಕ್ಕೆ ತನ್ನ ವಿಷಯಗಳನ್ನು ವ್ಯವಸ್ಥಿತವಾಗಿ ಮುಗಿಸಲು ಬಹಳ ನೆರವಾಗಿದೆ. ಸಾರಿಗೆಯಲ್ಲಿ ಬಹಳ ಕಾಲಕ್ಷೇಪವಾಗದೆ ಕ್ಲುಪ್ತ ಕಾಲದಲ್ಲಿ ವಿದ್ಯಾರ್ಥಿಗಳನ್ನು ಸಂಧಿಸಲು ಸಾಧ್ಯವಾಗುತ್ತದೆ. ಕಪ್ಪು ಹಲಗೆಗೆ ಸೀಮಿತವಾಗಿದ್ದ ಬೊಧನ ಕ್ರಮವನ್ನು ಇನ್ನೂ ಪ್ರಾಯೋಗಿಕವಾಗಿ, ಆಧುನಿಕ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಸಹಕಾರಿಯಾಗಿದೆ. ಇದರಲ್ಲಿ ನೇರಪ್ರಸಾರ ಹಾಗೂ ಅವುಗಳ ಮರುಪ್ರಸಾರ ಈ ಎರಡೂ ಸೌಲಭ್ಯಗಳು ಇರುವುದರಿಂದ ವಿದ್ಯಾರ್ಥಿಗೆ ಮತ್ತೆ ಪುನರ್ ಮನನ ಮಾಡಲು ಸಹಾಯಕವಾಗಿದೆ. ಅರ್ಥವಾಗದ ಹಾಗೂ ಮತ್ತೊಮ್ಮೆ ವಿಷಯಗಳನ್ನು ತಿಳಿದುಕೊಳ್ಳಬೇಕಾದಲ್ಲಿ ದೃಶ್ಯವನ್ನು ಹಿಂದೆ ಅಥವಾ ಮುಂದೆ ಕೊಂಡೊಯ್ಯುವ ಸವಲತ್ತು ಕೂಡಾ ಇದರಲ್ಲಿದೆ. ಇದಿಷ್ಟು ಅಲ್ಲದೆ ಸಾಮಾನ್ಯ ತರಗತಿಯಲ್ಲಿ ಇರುವ ಹಾಗೆಯೇ ವಿದ್ಯಾರ್ಥಿಯು ವಿಷಯಕ್ಕೆ ಸಂಬಂಧಿಸಿದ ಅನುಮಾನಗಳನ್ನು ಇಲ್ಲಿಯೂ ಪರಿಹರಿಸಬಹುದು.

ಇಂತಹ ಅನೇಕ ಸಾಧಕಗಳು ಆನ್ಲೈನ್ ತಂತ್ರಜ್ಞಾನದಲ್ಲಿ ಇದ್ದರೂ ಮುಖ್ಯವಾಗಿ ಶಿಕ್ಷಕ ಹಾಗೂ ವಿದ್ಯಾರ್ಥಿಯ ನಡುವಿನ ಸಂಬಂಧಕ್ಕೆ ಎಳೆಯಾದ ತಡೆ ಬಿದ್ದಿದೆ. ಈ ಕ್ಷೇತ್ರದಲ್ಲಿ ಬಹುಮುಖ್ಯವಾದ ಅಂಶವೆಂದರೆ ಉಪನ್ಯಾಸವನ್ನು ನೀಡುವ ಮುನ್ನ ಶಿಕ್ಷಕರು ಅವರ ವಿದ್ಯಾರ್ಥಿಗಳ ಅರಿವಿನ ಮಟ್ಟವನ್ನು ಮೊದಲು ಅಳೆಯಬೇಕಾಗುತ್ತದೆ, ತದನಂತರ ಅದಕ್ಕೆ ಹೊಂದಿಕೊಂಡು ಪಾಠ-ಪ್ರವಚನವನ್ನು ನೀಡಬೇಕಾಗುತ್ತದೆ. ಆದರೆ ಇಲ್ಲಿ ವಿದ್ಯಾರ್ಥಿಗಳ ಮಟ್ಟವನ್ನು ಅರಿಯದೆ ಬೊಧಿಸುವುದು ಕೆಲವು ವಿದ್ಯಾರ್ಥಿಗಳಿಗೆ ಅನಾನುಕುಲವಾಗಬಹುದು. ತರಗತಿಯಲ್ಲಿ ಶಿಸ್ತಿನೊಂದಿಗೆ ಸಾಗುತ್ತಿದ್ದ ಕಲಿಕಾ ಪ್ರಕ್ರಿಯೆಯು ಇಂದು ವಿದ್ಯಾರ್ಥಿಯ ಹಾಜರಾತಿಯೊಂದನ್ನು ಬಿಟ್ಟು, ವಿದ್ಯಾರ್ಥಿಯು ಮಾನಸಿಕವಾಗಿ ತರಗತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವನೇ ಇಲ್ಲವೇ ಎಂದು ತಿಳಿಯಲಾಗಿದ ಸ್ಥಿತಿಗೆ ಬಂದಿದೆ. 

ಆನ್ಲೈನ್ ತಂತ್ರಜ್ಞಾನವು ಅನೇಕ ಅವಕಾಶಗಳಿಗೆ ಎಡೆ ಮಾಡಿಕೂಟ್ಟರೂ ಹಲವು ವಿದ್ಯಾರ್ಥಿಗಳನ್ನು ಶಿಕ್ಷಕಣದಲ್ಲಿ ಅವಕಾಶ ವಂಚಿತರನ್ನಾಗಿ ಮಾಡಿದೆ. ಬಹಳಷ್ಟು ವಿದ್ಯಾರ್ಥಿಗಳು ತಮ್ಮಲ್ಲಿ ಸಂಕೀರ್ಣ ವ್ಯವಸ್ಥೆಯ (ನೆಟ್ ವರ್ಕ್) ತೊಂದರೆಯ ಬಗ್ಗೆ ಹೇಳಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಮುಖ್ಯವಾಗಿ ಈ ಸಮಸ್ಯೆಯು ಬಹಳಷ್ಟು ಕಾಣಸಿಗುತ್ತಿದೆ. ಇದಲ್ಲದೆ ಪ್ರಾಥಮಿಕ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳನ್ನು ಆನ್ಲೈನ್ ತಂತ್ರಜ್ಞಾನಕ್ಕೆ ಹೊಂದಿಸುವುದು ಹೆತ್ತವರಿಗೆ ಒಂದು ತಲೆನೋವಾಗಿ ಪರಿಣಮಿಸಿದೆ. ಏಕೆಂದರೆ ಸ್ವಾಭಾವಿಕವಾಗಿ ಬಾಲ್ಯಾವಸ್ಥೆಯು ಹೆಚ್ಚು ಚಂಚಲ ಚಿತ್ತವಾಗಿರುತ್ತದೆ. ಈ ಸ್ಥಿತಿಯಲ್ಲಿ ಅವರಿಗೆ ಮೊಬೈಲ್ ಅನ್ನು ನೀಡಿ ಹೇಗೆ ಓದಿನ  ಕಡೆಗೆ ಪ್ರೇರೇಪಿಸುವುದು ? ಎಂಬುವುದು ಅನೇಕ ಹೆತ್ತವರ ಹಾಗೂ ಪೋಷಕರ ವಾದ ! 

ಈ ರೀತಿ ಸಾಧಕ ಹಾಗೂ ಬಾಧಕಗಳನ್ನು ಒಳಗೊಂಡಿರುವ ಆನ್ಲೈನ್ ತಂತ್ರಜ್ಞಾನವು ಈ ಸಾಂಕ್ರಾಮಿಕ ರೋಗದ ಕಾಲದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಅತ್ಯಗತ್ಯವಾಗಿದೆ ಹಾಗೂ ಪ್ರಾಯೋಗಿಕವಾಗಿ ಇದನ್ನು ಬಳಕೆ ಮಾಡುವ ಬಳಕೆದಾರರ ಕೆಲವು ಅನಿಸಿಕೆಗಳು ಇಂತಿವೆ.

ಸಂಕೀರ್ಣ ವ್ಯವಸ್ಥೆ : ಸಂಕೀರ್ಣ ವ್ಯವಸ್ಥೆ (ನೆಟ್ ವರ್ಕ್) ಯು ಶಿಕ್ಷಕ ಹಾಗೂ ವಿದ್ಯಾರ್ಥಿಗೆ ಆನ್ಲೈನ್ ಶಿಕ್ಷಣ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖವಾದ ಅಂಶವಾಗಿದೆ. ‌‌‍‌ಹಲವು ವಿದ್ಯಾರ್ಥಿಗಳು ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂಪರ್ಕ ಸಿಗದೆ ಅಡೆ-ತಡೆಗಳ ಮೂಲಕ ತರಗತಿಗೆ ಹಾಜರಾಗುತ್ತಿದ್ದಾರೆ. 

ಸಮಯದ ಇಳಿಕೆ : ಕೆಲವು ವಿಷಯಗಳು ಹೆಚ್ಚು ಸಮಯವನ್ನು ಬೇಡುತ್ತದೆ. ಮುಖ್ಯವಾಗಿ ಗಣಿತ, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರದಂತಹ ವಿಷಯಗಳನ್ನು ಬೋಧಿಸುವ ಉಪನ್ಯಾಸಕರಿಗೆ ಸಹಜವಾಗಿ ಹೆಚ್ಚು ಸಮಯದ ಅಗತ್ಯವಿರುತ್ತದೆ. ಆದರೆ ವಿದ್ಯಾರ್ಥಿಯು ಅತೀ ಹೆಚ್ಚು ಸಮಯವನ್ನು ಗಣಕಯಂತ್ರದೊಂದಿಗೆ ಕಳೆಯುವುದರಿಂದ ವಿದ್ಯಾರ್ಥಿಯ ಆರೊಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ಈ ದೃಷ್ಟಿಯಲ್ಲಿ ಸಮಯದ ಇಳಿಕೆಯು ಅನಿವಾರ್ಯವಾಗಿದೆ.

ಏಕಾಗ್ರತೆಯ‌ ಕೊರತೆ : ಮತ್ತೊಂದು ಬಹು ಮುಖ್ಯವಾದ ಅಂಶವೆಂದರೆ ವಿದ್ಯಾರ್ಥಿಗಳ ಏಕಾಗ್ರತೆ. ಅದರಲ್ಲೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಅತ್ಯುತ್ತಮ ಸ್ಮರಣಾ ಶಕ್ತಿಯನ್ನು ಹೊಂದಿದ್ದರೂ ಅವು ಮನಸ್ಸು ಬಹಳಷ್ಟು ಚಂಚಲವಾಗಿ ಇರುತ್ತದೆ. ತರಗತಿಯಲ್ಲಿ ಶಿಕ್ಷಕನು ಮೇಲ್ವಿಚಾರಣೆಯ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡುವುದಷ್ಟೇ ಅಲ್ಲದೆ ಅವರನ ಮನಸ್ಸನ್ನು ಕೂಡ ಹಿಡಿತದಲ್ಲಿ ಇಟ್ಟುಕೊಂಡಿರುತ್ತಾನೆ. ಆದರೆ ಇದು ಆನ್ಲೈನ್ ತಂತ್ರಜ್ಞಾನದಲ್ಲಿ ಸ್ವಲ್ಪ ಕಷ್ಟವೇ ಸರಿ !

ಪ್ರಾಯೋಗಿಕ ತಂತ್ರಜ್ಞಾನ : ಆನ್ಲೈನ್ ತಂತ್ರಜ್ಞಾನವು ಕೆಲವು ವಿಷಯಗಳಲ್ಲಿ ಅಷ್ಟೊಂದು ಹೊಂದಿಕೆ ಆಗದೆ ಇದ್ದರೂ ಇನ್ನು ಕೆಲವು ವಿಷಯಗಳಲ್ಲಿ ಬಹಳಷ್ಟು ಪರಿಣಾಮಕಾರಿಯಾಗಿದೆ. ಭೂಗೋಳ, ವಿಜ್ಞಾನ, ಜೀವಶಾಸ್ತ್ರ  ಮುಖ್ಯವಾಗಿ ಇಂತಹ ವಿಷಯಗಳಲ್ಲಿ ನಕ್ಷೆಗಳು, ಚಿತ್ರಗಳು,‌ ೩ಡಿ ತಂತ್ರಜ್ಞಾನ, ಹಾಗೂ ಹಾಗೂ ಇತರ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಉಪನ್ಯಾಸದ ಗುಣಮಟ್ಟವನ್ನು ಹೆಚ್ಚಿಸಿ ಉಪನ್ಯಾಸಕರ ದಕ್ಷತೆಯನ್ನು ಹೆಚ್ಚಿಸಿದೆ.

ಕೊನೆಯದಾಗಿ ಹೇಳುವುದಾದರೆ ಆನ್ಲೈನ್ ತಂತ್ರಜ್ಞಾನ ನಮಗೆ ಬೇಕೆ ಅಥವಾ ಬೇಡವೇ? ಎಂದು ಚರ್ಚಿಸುವುದರ ಬದಲು, ಇದನ್ನು ಬಳಸುವ ಬಗೆ ಹೇಗೆ ಎಂಬುದರ ಬಗೆ ವಿಚಾರ ಮಾಡುವುದು ಅಗತ್ಯವಾಗಿದೆ. ಏಕೆಂದರೆ ಅನಿರ್ಧಿಷ್ಟವಾದ ಈಗಿನ ಶೈಕ್ಷಣಿಕ ಕಾಲಘಟ್ಟದಲ್ಲಿ ಇದು ಬಹಳ ಅನಿವಾರ್ಯವಾಗಿದೆ. ಎಷ್ಟೋ ಸಂಸ್ಥೆಗಳು ಆನ್ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಬೋಧಿಸಿ ತಮ್ಮ ವ್ಯವಹಾರವನ್ನು ನಿರ್ವಹಿಸುತ್ತಿವೆ. ಕೆಲವೊಮ್ಮೆ ಈ ತಂತ್ರಜ್ಞಾನವು ಬಹಳ ವೆಚ್ಚಭರಿತವಾಗಿರುತ್ತದೆ. ಆದರೆ ಸಮಯವನ್ನು ಉಳಿಸಲು ಬಹು ಸಹಕಾರಿಯಾಗಿದೆ. ಹೇಗೋ! ಈಗ ತರಗತಿಗಳು ಆನ್ಲೈನ್ ಮೂಲಕ ನಡೆಯುತ್ತಿದ್ದರೂ ಅನೇಕ ವಿದ್ಯಾರ್ಥಿಗಳು ಮೊದಲಿನ ರೀತಿಯಲ್ಲೇ ತರಗತಿಗಳಿಗೆ ಬರಲು ಒಲವನ್ನು ತೋರುತ್ತಿದ್ದಾರೆ. ಅವರು ತಮ್ಮ ಪಾಠ-ಪ್ರವಚನಗಳಿಂದ ವಂಚಿತರಾಗದೆ ಇದ್ದರೂ, ತಮ್ಮ ವಿದ್ಯಾಲಯವನ್ನು, ಶೈಕ್ಷಣಿಕ ಪ್ರವಾಸ ಹಾಗೂ ಹಬ್ಬಗಳನ್ನು, ಸ್ನೇಹಿತರನ್ನು, ಶಿಕ್ಷಕ ಹಾಗೂ ಶಿಕ್ಷಕೇತರರನ್ನು, ಮುಖ್ಯವಾಗಿ ಹಿಂದಿನ ತಮ್ಮ ನೆನಪುಗಳನ್ನು ಖಂಡಿತವಾಗಿಯೂ ಸ್ಮರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ನಾವು ಒಂದು ಜವಾಬ್ದಾರಿಯುತ ಪ್ರಜೆಯಾಗಿ, ಈ ಮಹಾಮಾರಿಯ‌ ನಿರ್ಮೂಲನೆಗೆ ಸಾಮಾಜಿಕ ಅಂತರದಂತಹ ಕೆಲವು ಅಗತ್ಯ ನಿಯಮಗಳನ್ನು ಪಾಲಿಸಿ, ಮತ್ತೆ ಸಮಾಜ ಹಾಗೂ ಶೈಕ್ಷಣಿಕ ವ್ಯವಸ್ಥೆಯು ಮೊದಲಿನಂತಾಗಲಿ ಎಂದು ಪ್ರಾರ್ಥಿಸಬೇಕು.

ಹಿತೇಶ್ ಕುಮಾರ್
ಅಸಿಸ್ಟೆಂಟ್ ಪ್ರೊಫೆಸರ್ ಬೆಸೆಂಟ್ ಸಂಧ್ಯಾ ಕಾಲೇಜು ಮಂಗಳೂರು

ಇತ್ತೀಚಿನ ಸುದ್ದಿ

ಜಾಹೀರಾತು