ಇತ್ತೀಚಿನ ಸುದ್ದಿ
100 ಎಕರೆ ವಿಸ್ತೀರ್ಣದ ‘ಎಸ್-ವ್ಯಾಸ’ ಉನ್ನತ ಅಧ್ಯಯನ ಸಂಸ್ಥೆ ಕ್ಯಾಂಪಸ್ ಉದ್ಘಾಟನೆ
04/01/2025, 12:11
*ಆಯುರ್ವೇದ ವಿಸ್ತರಿಸಲು 103 ದೇಶಗಳೊಂದಿಗೆ ಒಪ್ಪಂದ- ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ*
ಬೆಂಗಳೂರು(reporterkarnataka.com): ಆಯುರ್ವೇದ ಸೇರಿದಂತೆ ಪರ್ಯಾಯ ವೈದ್ಯಕೀಯ ಪದ್ಧತಿಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಭಾರತವು 103 ದೇಶಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಶುಕ್ರವಾರ ಹೇಳಿದರು.
ಇಲ್ಲಿನ ಮೈಸೂರು ರಸ್ತೆಯ ಸತ್ವ ಗ್ಲೋಬಲ್ ಪಾರ್ಕ್ ನ ಸುಮಾರು 100 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ‘ಎಸ್-ವ್ಯಾಸ ಉನ್ನತ ಅಧ್ಯಯನ ಶಿಕ್ಷಣ ಸಂಸ್ಥೆ’ ಕ್ಯಾಂಪಸ್ (ಡೀಮ್ಡ್) ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು,.
ದೇಶದಲ್ಲಿ ಪರ್ಯಾಯ ಚಿಕಿತ್ಸಾ ಪದ್ಧತಿ-ಆಯುಷ್ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇದನ್ನು ಮುಖ್ಯವಾಹಿನಿಗೆ ತರಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಆರೋಗ್ಯ ವಲಯದಲ್ಲಿ ಸುಧಾರಣೆಗೆ ಒತ್ತು ನೀಡಲಾಗಿದೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಸಂಖ್ಯೆಯನ್ನು 22ಕ್ಕೆ ಏರಿಸಲಾಗಿದೆ. ಈ ಎಲ್ಲಾ ಏಮ್ಸ್ ಗಳಲ್ಲೂ ಆಯುಷ್ ಘಟಕ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.
ಪರ್ಯಾಯ ಚಿಕಿತ್ಸಾ ಪದ್ಧತಿಗಳಲ್ಲಿ ದಾಖಲೀಕರಣ ಮತ್ತು ಸಂಶೋಧನೆಗೆ ಆದ್ಯತೆ ನೀಡಲಾಗಿದ್ದು, ಹರಿಯಾಣದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗಿದೆ. ನೂತನ ಆರೋಗ್ಯ ನೀತಿಯಡಿ ರೋಗಗಳ ತಡೆಗಟ್ಟುವಿಕೆ ಬಗ್ಗೆ ಗಮನ ಕೇಂದ್ರೀಕರಿಸಲಾಗಿದೆ. ಇದರಲ್ಲಿ ಯೋಗ ಮತ್ತು ಆಯುರ್ವೇದ ಮಹತ್ವದ ಪಾತ್ರ ವಹಿಸಲಿವೆ ಎಂದು ನಡ್ಡಾ ಅಭಿಪ್ರಾಯಪಟ್ಟರು.
ಎಸ್-ವ್ಯಾಸ ಸಂಸ್ಥೆಯು ಪಾರಂಪರಿಕ ಜ್ಞಾನದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯ ಸಮನ್ವಯತೆ ಮೂಲಕ ಸಾಮಾಜಿಕವಾಗಿ ಹೆಚ್ಚು ಪ್ರಸ್ತುತವಾಗಿದೆ. ಸುಧಾರಿತ ಮೂಲಸೌಕರ್ಯ ಹೊಂದಿರುವ ಈ ಶಿಕ್ಷಣ ಸಂಸ್ಥೆಯ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆಯಬೇಕು ಎಂದು ಸಲಹೆ ನೀಡಿದರು.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅಧ್ಯಕ್ಷರಾದ ಪ್ರೊ. ಟಿ.ಜಿ. ಸೀತಾರಾಮ್, ಯುವಜನರಲ್ಲಿ ಕೌಶಲ್ಯ ಅಭಿವೃದ್ಧಿಪಡಿಸುವಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ ಎಂದರು.
ದೇಶದಲ್ಲಿ 1ರಿಂದ 5ನೇ ತರಗತಿವರೆಗಿನ ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಸುಮಾರು 25.5 ಕೋಟಿ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಸ್ನಾತಕೋತ್ತರ ಶಿಕ್ಷಣದಲ್ಲಿ 4.3 ಕೋಟಿ ವಿದ್ಯಾರ್ಥಿಗಳಿದ್ದಾರೆ. ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ವ್ಯಾಸಂಗಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಸೇರ್ಪಡೆಯಾಗಲಿದ್ದು, ಇದಕ್ಕೆ ಪೂರಕವಾಗಿ ಇಂತಹ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಗೊಳ್ಳಬೇಕು ಎಂದು ಅವರು ಹೇಳಿದರು.
ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು, ಪ್ರಸ್ತುತ 4ನೇ ಕೈಗಾರಿಕಾ ಯುಗದಲ್ಲಿರುವ ಸಮಾಜಕ್ಕೆ ತಾಂತ್ರಿಕ ಶಿಕ್ಷಣದ ಜತೆಗೆ ಆಧ್ಯಾತ್ಮಿಕ ಶಿಕ್ಷಣವೂ ಅತ್ಯವಶ್ಯ ಎಂದರು.
ಎಸ್-ವ್ಯಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಚ್.ಆರ್. ನಾಗೇಂದ್ರ ಅವರು ಮಾತನಾಡಿ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಪ್ರಸಕ್ತ ಯುಗದಲ್ಲಿ ಎಲ್ಲ ಸವಾಲುಗಳಿಗೆ ಅಧ್ಯಾತ್ಮದಲ್ಲಿ ಪರಿಹಾರವಿದೆ; ಸನಾತನ ಧರ್ಮದ ಶಿಕ್ಷಣ ವ್ಯವಸ್ಥೆಗೆ ಅಧ್ಯಾತ್ಮವೇ ತಳಹದಿ ಎಂದು ಹೇಳಿದರು.
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಪರ್ಯಾಯ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್, ವಿಧಾನಸಭೆ ಪ್ರತಿ ಪಕ್ಷದ ನಾಯಕ ಆರ್.ಅಶೋಕ್, ಸಂಸದರಾದ ಡಾ.ಸಿ.ಎನ್. ಮಂಜುನಾಥ್, ತೇಜಸ್ವಿ ಸೂರ್ಯ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಉದ್ಯಮಿ ಕ್ರಿಸ್ ಗೋಪಾಲಕೃಷ್ಣನ್ ಮತ್ತಿತರ ಗಣ್ಯರು ಹಾಜರಿದ್ದರು. ಕುಲಪತಿ ಡಾ. ಮಂಜುನಾಥ್ ಶರ್ಮ ಸ್ವಾಗತಿಸಿದರು.
ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಎಂಜಿನಿಯರಿಂಗ್, ಇತರ ತಾಂತ್ರಿಕ ಕೋರ್ಸ್ ಗಳು, ವೈದ್ಯಕೀಯ ಸೇರಿದಂತೆ ಹಲವು ಕೋರ್ಸ್ ಗಳ ವ್ಯಾಸಂಗಕ್ಕೆ ಈ ಕ್ಯಾಂಪಸ್ ನಲ್ಲಿ ಸೌಲಭ್ಯವಿದ್ದು, ಪ್ರಸಕ್ತ ಸಾಲಿನಲ್ಲಿ 900 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.