ಇತ್ತೀಚಿನ ಸುದ್ದಿ
ಕೃಷಿ ವಿಧೇಯಕ ನೀವು ತಡೆ ಹಿಡಿಯುತ್ತೀರೋ, ಅಲ್ಲ ನಾವೇ ತಡೆ ಹಿಡಿಯಬೇಕೇ?: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
January 11, 2021, 8:51 PM

ನವದೆಹಲಿ(reporterkarnatakanews): ನಾವು ಕೃಷಿ ಮತ್ತು ಅರ್ಥಶಾಸ್ತ್ರದ ತಜ್ಞರಲ್ಲ. ನೀವು ಕೃಷಿ ಕಾಯಿದೆಗಳನ್ನು ತಡೆ ಹಿಡಿಯುತ್ತೀರೋ, ಇಲ್ಲದಿದ್ದರೆ ನಾವೇ ಅದನ್ನು ಮಾಡುತ್ತೇವೆ. ಇಲ್ಲಿ ಪ್ರತಿಷ್ಠೆಯ ವಿಚಾರ ಎಲ್ಲಿದೆ? ಎಂದು ಸುಪ್ರೀಂ ಕೋರ್ಟ್ ಮುಖ್ಯ ನಾಯಾಧೀಶ ಬೊಬ್ಡೆ ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ.
ಕೇಂದ್ರ ಜಾರಿಗೊಳಿಸಿರುವ ಕೃಷಿ ಕಾನೂನುಗಳ ವಾಪಸಾತಿಗೆ ಆಗ್ರಹಿಸಿ ಕಳೆದ ಕೆಲವು ವಾರಗಳಿಂದ ದಿಲ್ಲಿಯ ಹೊರ ವಲಯದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳ ಕುರಿತಂತೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಚಾಟಿಯೇಟು ಬೀಸಿದೆ.
ಮುಂದೊಂದು ದಿನ ಶಾಂತಿ ಭಂಗವಾಗುವ ಭಯ ನಮಗಿದೆ. ಏನಾದರೂ ತಪ್ಪಾದರೆ ನಮ್ಮಲ್ಲಿ ಪ್ರತಿಯೊಬ್ಬರೂ ಜವಾಬ್ದಾರರಾಗುತ್ತೇವೆ. ನಮ್ಮ ಕೈಗಳಲ್ಲಿ ಯಾವುದೇ ಗಾಯಗಳು ಹಾಗೂ ರಕ್ತ ನಮಗೆ ಬೇಡ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕೃಷಿ ವಿಧೇಯಕದ ಕುರಿತಂತೆ ಸರಕಾರ ನಿಭಾಯಿಸಿದ ರೀತಿಯಿಂದ ನಿರಾಸೆಯಾಗಿದೆ. ನೀವು ಈ ವಿಚಾರವನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತಿರುವುದು ನಮಗೆ ಕಾಣಿಸುತ್ತಿಲ್ಲ. ಕಾನೂನು ಜಾರಿಗೊಳಿಸುವ ಮುನ್ನ ಯಾವ ಸಲಹಾ ಪ್ರಕ್ರಿಯೆ ನೀವು ಅನುಸರಿಸಿದ್ದೀರೆಂದು ನಮಗೆ ತಿಳಿದಿಲ್ಲ, ಈ ವಿಚಾರವನ್ನು ಸೌಹಾರ್ದಯುತವಾಗಿ ಪರಿಹರಿಸುವುದು ನಮ್ಮ ಉದ್ದೇಶ ಎಂದು ಕೋರ್ಟ್ ಹೇಳಿದೆ.