ಇತ್ತೀಚಿನ ಸುದ್ದಿ
ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳುತ್ತಿದ್ದರೆ ಮಣಿಪಾಲ ಡ್ರಗ್ಸ್ ಜಾಲಕ್ಕೆ ಎಂದೋ ಬ್ರೇಕ್ ಬೀಳುತ್ತಿತ್ತು!
October 7, 2020, 7:44 PM

ಉಡುಪಿ(reporterkarnataka news): ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಮಣಿಪಾಲದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಿಕ್ಷಣ ಪಡೆಯುತ್ತಿರುವ ಉತ್ತರ ಪ್ರದೇಶ ಮೂಲದ 20ರ ಹರೆಯದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಇದರೊಂದಿಗೆ ಡ್ರಗ್ಸ್ ಜತೆಗಿನ ಮಣಿಪಾಲದ ನಂಟು ಮತ್ತೊಮ್ಮೆ ಬಹಿರಂಗವಾಗಿದೆ.
ಮಣಿಪಾಲದ ಎಂದರೆ ಶಿಕ್ಷಣ, ಬ್ಯಾಂಕಿಂಗ್ ಹಾಗೂ ಆರೋಗ್ಯ ಕ್ಷೇತ್ರದ ತವರು ಇದ್ದ ಹಾಗೆ. ಅದೇ ರೀತಿ ವಿದ್ಯಾರ್ಥಿಗಳ ಮೋಜು – ಮಸ್ತಿಗೂ ಇದು ಬಹಳಷ್ಟು ಪ್ರಖ್ಯಾತಿಯನ್ನು ಪಡೆದಿದೆ. ಇಲ್ಲಿನ ವಿದ್ಯಾರ್ಥಿಗಳ ಡ್ರಗ್ಸ್ ನಂಟಿಗೆ ದಶಕಗಳ ಇತಿಹಾಸವೇ ಇದೆ. ಪಬ್, ಲಾಡ್ಜ್ ಗಳಲ್ಲಿ ಪಾರ್ಟಿ ನಡೆಯುವುದು ಸರ್ವೇ ಸಾಮಾನ್ಯವಾಗಿದೆ.
ಆದರೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಇದೆಲ್ಲ ತಮಗೆ ಸಂಬಂಧಿಸಿದ್ದಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದದ್ದು ಮಾದಕ ದ್ರವ್ಯ ವ್ಯವಹಾರ ಲಂಗುಲಗಾಮಿಲ್ಲದೆ ಬೆಳೆಯಲು ಕಾರಣವಾಗಿದೆ ಎಂದು ಮಣಿಪಾಲದ ಪ್ರತಿಯೊಬ್ಬ ನಾಗರಿಕರೂ ಹೇಳುತ್ತಾರೆ.

ಇದೀಗ ಮಣಿಪಾಲ ಎಂಐಟಿ ವಿದ್ಯಾರ್ಥಿ ಉತ್ತರ ಪ್ರದೇಶದ ನೋಯ್ಡಾ ಮೂಲದ ಹಿಮಾಂಶು ಜೋಷಿ ಎಂಬಾತನನ್ನು ಬಂಧಿಸಲಾಗಿದೆ. ಈತನಿಂದ ಸುಮಾರು 15 ಲಕ್ಷ ರೂ. ಮೌಲ್ಯದ ನಿಷೇಧಿತ ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಳ್ಳಾಗಿದೆ. ಆನ್ ಲೈನ್ ಮೂಲಕ ನಿಷೇಧಿತ ಮಾತ್ರೆಗಳನ್ನು ತರಿಸಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಮಣಿಪಾಲದಲ್ಲಿ ಸುಮಾರು 20 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಸುಮಾರು 56 ದೇಶಗಳ ವಿದ್ಯಾರ್ಥಿಗಳು ಇಲ್ಲಿದ್ದಾರೆ. ದೇಶೀಯ ವಿದ್ಯಾರ್ಥಿಗಳಲ್ಲಿ ಉತ್ತರ ಭಾರತದವರು ಸಿಂಹಪಾಲು.
ಕೊರೊನಾ ಹಿನ್ನೆಲೆಯಲ್ಲಿ ಅವರೆಲ್ಲ ತವರು ಸೇರಿದ್ದಾರೆ. ಆದರೂ ಸುಮಾರು ಒಂದು ಸಾವಿರದಷ್ಟು ವಿದ್ಯಾರ್ಥಿಗಳು ಇದ್ದಾರೆ.
ಬಂಧಿತ ವಿದ್ಯಾರ್ಥಿಯನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಬೆಂಗಳೂರಿನಲ್ಲಿ ಆನ್ ಲೈನ್ ಮೂಲಕ ಡ್ರಗ್ಸ್ ವ್ಯವಹಾರ ಮಾಡುತ್ತಿದ್ದ ಪೆಡ್ಲರ್ ವೊಬ್ಬನ ಬಂಧನದ ಹಿನ್ನೆಲೆಯಲ್ಲಿ ಮಣಿಪಾಲದ ಪ್ರಕರಣ ಬೆಳಕಿಗೆ ಬಂದಿದೆ.