ಇತ್ತೀಚಿನ ಸುದ್ದಿ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನಿಯೋಗದಿಂದ ಮುಖ್ಯಮಂತ್ರಿ ಭೇಟಿ
December 12, 2020, 9:06 AM

ಬೆಂಗಳೂರು(reporterkarnataka news):ಹೊಸ ಶಿಕ್ಷಣ ನೀತಿಯಲ್ಲಿ ಒಂದನೆಯ ತರಗತಿಯಿಂದ ಐದನೆಯ ತರಗತಿಯವರೆಗೆ ಕೊಂಕಣಿ ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣದ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು.
6ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಕೊಂಕಣಿ ಭಾಷೆಯಲ್ಲಿ ಕಲಿಕೆ, ಡಿ.ಎಡ್, ಬಿ.ಎಡ್, ಎಂ.ಎಡ್. ತರಗತಿಗಳಲ್ಲಿ ಕೊಂಕಣಿ ಭಾಷೆ ಅಳವಡಿಕೆ, ವಿವಿಧ ಹಂತಗಳಲ್ಲಿ ಕೊಂಕಣಿ ಭಾಷಾ ಶಿಕ್ಷಕರ ನೇಮಕಾತಿಯೇ ಮೊದಲಾದ ಬೇಡಿಕೆಗಳನ್ನು ಮುಖ್ಯ ಮಂತ್ರಿ ಯಡಿಯೂರಪ್ಪ ಆಲಿಸಿದರು. ಹೊಸ ಶಿಕ್ಷಣ ನೀತಿಯನ್ವಯ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣದ ಬೇಡಿಕೆ ಸಮಂಜಸವಾದುದು ಎಂದು ತಿಳಿಸಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಕೆ. ಜಗದೀಶ್ ಪೈ ಅವರ ನೇತೃತ್ವದ ಮುಖ್ಯಮಂತ್ರಿಗಳನ್ನು ಭೇಟಿಯಾದ ನಿಯೋಗದಲ್ಲಿ, ಅಕಾಡೆಮಿಯ ಸದಸ್ಯರಾದ ಸಾಣೂರು ನರಸಿಂಹ ಕಾಮತ್, ಅರುಣ್ ಶೇಟ್, ನವೀನ್ ನಾಯಕ್ ಮತ್ತು ಗುರುಮೂರ್ತಿ ಶೇಟ್ ರವರು ಉಪಸ್ಥಿತರಿದ್ದರು.