8:20 PM Friday3 - May 2024
ಬ್ರೇಕಿಂಗ್ ನ್ಯೂಸ್
ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:…

ಇತ್ತೀಚಿನ ಸುದ್ದಿ

ದ.ಕ. ಲೋಕಸಭೆ ಕ್ಷೇತ್ರ: 3 ದಶಕಗಳ ಕಾಂಗ್ರೆಸ್ ಸೋಲಿಗೆ ಕಾರಣವೇನು? ಪದ್ಮರಾಜ್ ವೇಗಕ್ಕೆ ಕೈ ನಾಯಕರು ಸ್ಪಂದಿಸುತ್ತಿದ್ದಾರೆಯೇ?

20/04/2024, 12:52

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಕರಾವಳಿಯ ಬಿಸಿಲ ಝಳದೊಂದಿಗೆ ಚುನಾವಣೆ ಕಾವು ಮತ್ತಷ್ಟು ಏರಲಾರಂಭಿಸಿದೆ. ತಂತ್ರ- ಪ್ರತಿತಂತ್ರ- ಕುತಂತ್ರ ಎಲ್ಲ ನಡೆಯುತ್ತಿದೆ. ಗೆಲುವಿಗಾಗಿ ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ತೀವ್ರ ಕಾದಾಟದಲ್ಲಿದೆ.
ವಾಸ್ತವದಲ್ಲಿ ಕರಾವಳಿ ಎನ್ನುವುದು ಕಾಂಗ್ರೆಸ್ಸಿನ ಭದ್ರಕೋಟೆ. ಆದರೆ ಕಳೆದ 3 ದಶಕಗಳಿಂದ ಅದು ಬಿಜೆಪಿಯ ವಶವಾಗಿದೆ. 3 ದಶಕಗಳ 6ಕ್ಕೂ ಅಧಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಒಂದು ಬಾರಿ ಸೋಲಿಸಲೂ ಕಾಂಗ್ರೆಸ್ಸಿಗೆ ಸಾಧ್ಯವಾಗಲಿಲ್ಲ. ಸಾರ್ವಜನಿಕ ಜೀವನದಲ್ಲಿ ಯಾವುದೇ ಕಳಂಕವಿಲ್ಲದ ಬಿ. ಜನಾರ್ದನ ಪೂಜಾರಿಯಂತಹ ಮೇರು ರಾಜಕಾರಣಿ, ಹಿರಿಯ ಮುತ್ಸದ್ದಿಯನ್ನು ಸೋಲಿಸಿದ ಅಪಕೀರ್ತಿಯೂ ಕರಾವಳಿಗಿದೆ. ಒಂದು ಕಾಲದಲ್ಲಿ ಲೈಟ್ ಕಂಬವನ್ನೂ ನಿಲ್ಲಿಸಿದರೂ ನಿರಾಯಸವಾಗಿ ಗೆಲ್ಲುತ್ತಿದ್ದ ಕಾಂಗ್ರೆಸ್ ಗೆ ಪೂಜಾರಿ ಅವರಂತ ಪ್ರಾಮಾಣಿಕ, ದಕ್ಷ ನಾಯಕನನ್ನು ಗೆಲ್ಲಿಸಲು ಯಾಕೆ ಸಾಧ್ಯವಾಗಲಿಲ್ಲ? ಭದ್ರಕೋಟೆಯಾಗಿದ್ದ ಕರಾವಳಿಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಏನು ಕಾರಣ? ಬಿಜೆಪಿ ಕಾರಣವೇ? ಮತದಾರರು ಕಾರಣರೇ ? ಕಾಂಗ್ರೆಸ್ಸಿನ ವೈಫಲ್ಯ ಕಾರಣವೇ?
ಬ್ಯಾಂಕ್ ರಾಷ್ಟ್ರೀಕರಣ, ಉಳುವವನೇ ಹೊಲದೊಡೆಯ, ಸಾಲ ಮೇಳ, ಪಡಿತರ ಸುಧಾರಣೆ, ಟೆಲಿಫೋನ್ ಕ್ರಾಂತಿ, ಆರ್ಥಿಕ ಉದಾರೀಕರಣ ಮುಂತಾದ ಜನಪರ ಯೋಜನೆಗಳನ್ನು ಸಾಲುಸಾಲಾಗಿ ನೀಡಿದ ಕಾಂಗ್ರೆಸ್ ಪಕ್ಷದ ಸೋಲಿಗೆ ನಿಜವಾದ ಕಾರಣವೇನು? ಕೇವಲ ನಾಯಕತ್ವದ ಆಧಾರದಲ್ಲಿ ರೂಪುಗೊಂಡ ಕಾಂಗ್ರೆಸ್ ತಳಮಟ್ಟದಲ್ಲಿ ವೀಕ್ ಆಗಿರುವುದೇ ಪಕ್ಷದ ಅವನತಿಯ ಬಾಗಿಲನ್ನು ತೆರೆಯಲಾರಂಭಿಸಿತೇ?.



ನಿಜವಾಗಿಯೂ ವಾಸ್ತವದಲ್ಲಿ ಕಾಂಗ್ರೆಸ್ ಸೋಲಿಗೆ ಬಿಜೆಪಿ ಅಥವಾ ಮತದಾರರು ಕಾರಣರಲ್ಲ.
ಎಲ್ಲರೂ ನಾಯಕರಾಗಿ ವೇದಿಕೆಯೇರಿದರೆ ಕೆಳಗಡೆ ಕುಳಿತುಕೊಳ್ಳುವವರು ಯಾರು? ಎಲ್ಲರೂ ಆದೇಶ ಕೊಡುವವರೇ ಆದರೆ ಪೋಸ್ಟರ್, ಬ್ಯಾನರ್ ಕಟ್ಟುವವರು ಯಾರು? ಕಾರ್ಯಕರ್ತರನ್ನು ಬೆಳಸದಿರುವುದೇ ಕಾಂಗ್ರೆಸ್ಸಿನ ಅವನತಿಗೆ ಕಾರಣವೂ ಒಂದಾಗಿದೆ ಎನ್ನುವುದು ರಾಜಕೀಯ ಲೆಕ್ಕಾಚಾರ. ಇವತ್ತಿಗೂ ಪಕ್ಷದಲ್ಲಿ ಹೆಚ್ಚಿನ ಕಡೆಗಳಲ್ಲಿ ಮನೆ ಮನೆಗೆ ಹೋಗಿ ನೆಟ್ಟಗೆ ನಾಲ್ಕು ಮಾತುಗಳನ್ನಾಡಿ ಮತ ಕೇಳುವ ಕಾರ್ಯಕರ್ತರು ಇಲ್ಲ. ಹೆಚ್ಚಿನ ಕಡೆಗಳಲ್ಲಿ ಕಾಂಗ್ರೆಸ್ ನ ಚುನಾವಣಾ ಪ್ರಚಾರದ ಕರಪತ್ರವನ್ನು ಜಾತ್ರೆಯ ನೋಟಿಸ್ ಕೊಟ್ಟ ಹಾಗೆ ಕೈಗಿಟ್ಟು ಹೋಗುತ್ತಿದ್ದಾರೆ ಎಂಬ ಆರೋಪ ರಿಪೋರ್ಟರ್ ಕರ್ನಾಟಕಕ್ಕೆ ಕೇಳಿ ಬಂದಿದೆ.
ಇನ್ನು ಪಕ್ಷದೊಳಗೆ ಗುಪ್ತಗಾಮಿನಿ ತರಹದ ಭಿನ್ನಮತ, ಒಳಜಗಳ, ಕಾಲೆಳೆಯುವ ಪ್ರವೃತ್ತಿ ಕಳೆದ 30 ವರ್ಷಗಳಿಂದ ನಡೆಯುತ್ತಲೇ ಬಂದಿದೆ. ಒಂದು ಬಣದ ನಾಯಕನಿಗೆ ಟಿಕೆಟ್ ಸಿಕ್ಕಿದರೆ ಇನ್ನೊಂದು ಬಣದವರು ತಟಸ್ಥರಾಗುವುದು ಹಲವು ಚುನಾವಣೆಗಳಲ್ಲಿ ನಡೆದಿವೆ. ಪ್ರತಿ ಚುನಾವಣೆಯಲ್ಲೂ ಸೋಲಲಿ, ಗೆಲ್ಲಲಿ ಟಿಕೆಟ್ ಕೊಟ್ಟವರಿಗೇ ಮತ್ತೆ ಮತ್ತೆ ಟಿಕೆಟ್ ನೀಡಿರುವುದು ಪಕ್ಷದ ಸಂಘಟನೆಯನ್ನು ಸಡಿಲಗೊಳಿಸುವಂತೆ ಮಾಡಿತು ಎನ್ನುವ ಆರೋಪವೂ ರಿಪೋರ್ಟರ್ ಕರ್ನಾಟಕಕ್ಕೆ ಲಭ್ಯವಾಗಿದೆ. ಹಾಗೆ ಕಾಂಗ್ರೆಸ್ ಜಾರಿಗೆ ತಂದ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವೇ ನಡೆಯಲಿಲ್ಲ. ಇಂದಿರಾ ಗಾಂಧಿ ಪ್ರಧಾನಿಯಾಗಿರುವಾಗ
ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ, ಬ್ಯಾಂಕ್ ಗಳ ರಾಷ್ಟ್ರೀಕರಣ, ದೊಡ್ಡ ದೊಡ್ಡ ಖಾಸಗಿ ಬಸ್ ಕಂಪನಿಗಳ ರಾಷ್ಟ್ರೀಕರಣ, ಪಡಿತರ ವ್ಯವಸ್ಥೆಯಲ್ಲಿ ಸುಧಾರಣೆ, ಹಾಗೆಯೇ ರಾಜೀವ್ ಗಾಂಧಿ ಅವರು ದೇಶದಲ್ಲಿ ಮಾಡಿದ ಟೆಲಿಫೋನ್ ಕ್ರಾಂತಿ, ಎಲೆಕ್ಟ್ರಾನಿಕ್ ಮಾಧ್ಯಮದ ಕ್ರಾಂತಿ, ಪಿ.ವಿ. ನರಸಿಂಹ ರಾವ್, ಡಾ. ಮನಮೋಹನ್ ಸಿಂಗ್ ಜಾರಿಗೆ ತಂದ ಆರ್ಥಿಕ ಉದಾರೀಕರಣ, ಬಿ. ಜನಾರ್ದನ ಪೂಜಾರಿ ಅವರು ಅರ್ಥ ಸಚಿವರಾಗಿದ್ದಾಗ ನಡೆಸಿದ ಸಾಲಮೇಳ, ಎಂ. ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಜಾರಿಗೆ ತಂದ ಸಿಇಟಿ ಮುಂತಾದವುಗಳ ಬಗ್ಗೆ ಪಕ್ಷದ ನಾಯಕ ರಮಾನಾಥ ರೈ ಮತ್ತು ಇನ್ನು ಕೆಲವರು ಬಿಟ್ಟರೆ ಹೆಚ್ಚಿನ ಕಾಂಗ್ರೆಸ್ ನಾಯಕರು ಜನರಿಗೆ ತಿಳಿಸುವ ಕೆಲಸ ಮಾಡಿಲ್ಲ. ಕಾಂಗ್ರೆಸ್ಸಿನ ಸಾಧನೆಗಳ ಬಗ್ಗೆ ಒಂದು ಸಣ್ಣ ಮಗ್ಗಿ ಪುಸ್ತಕದ ತರಹ ಪುಸ್ತಕ ಹೊರ ತಂದು ಮತದಾರರಿಗೆ ಮುಟ್ಟಿಸಿ ಮನವರಿಕೆ ಮಾಡಿಸುತ್ತಿದ್ದರೂ ದ.ಕ. ಜಿಲ್ಲೆಯಲ್ಲಿ ಕಳೆದ 3 ದಶಕಗಳಲ್ಲಿ ಕಾಂಗ್ರೆಸ್ ಇಷ್ಟು ಹೀನಾಯ ಸೋಲು ಅನುಭವಿಸುತ್ತಿರಲಿಲ್ಲ.
ದಕ್ಷಿಣ ಕನ್ನಡದ ಮಟ್ಟಿಗೆ ಮಾಜಿ ಸಚಿವ ಬಿ. ರಮಾನಾಥ ರೈ ಅವರಂತಹ ಕೆಲವೇ ಕೆಲವು ನಾಯಕರನ್ನು ಬಿಟ್ಟರೆ ಸೈದ್ದಾಂತಿಕವಾಗಿ ಪಕ್ಷದೊಂದಿಗೆ ಗಟ್ಟಿಯಾಗಿ ನಿಲ್ಲುವ ನಾಯಕರು ಎಷ್ಟು ಮಂದಿ ಇದ್ದಾರೆ? ಇಲ್ಲಿನ ಬಹುತೇಕ ಕಾಂಗ್ರೆಸ್ ನಾಯಕರು ಮತ್ತು ಮುಖಂಡರು ಹೊಂದಾಣಿಕೆ ರಾಜಕಾರಣದಲ್ಲಿ ಸುಖ ಕಾಣುತ್ತಿದ್ದಾರೆ. ಬಿಜೆಪಿ ಸಂಸದರು ಹಾಗೂ ಬಿಜೆಪಿ ಶಾಸಕರುಗಳ ಆಡಳಿತದ ಚಿಪ್ಪಿನೊಳಗೆ ಬಹುತೇಕ ಕಾಂಗ್ರೆಸ್ಸಿಗರು ತಮಗೆ ಬೇಕಾದ ಕೆಲಸವನ್ನು ಮಾಡಿಕೊಂಡು ಹಾಯಾಗಿದ್ದಾರೆ. ಇವರಿಗೆ ಕಾಂಗ್ರೆಸ್ ಸಂಸದರು, ಕಾಂಗ್ರೆಸ್ ಶಾಸಕರು ಬೇಕಾಗಿಲ್ಲ. ದ.ಕ. ಲೋಕಸಭೆ ಕ್ಷೇತ್ರದಲ್ಲಿ ಕಳೆದ 3 ದಶಕಗಳಿಂದ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದರೂ ಇನ್ನೂ ಹೆಚ್ಚಿನ ಕಾಂಗ್ರೆಸ್ ನಾಯಕರು ಹಾಗೂ ಮುಖಂಡರು ಪಾಠ ಕಲಿತಂತೆ ಕಾಣುವುದಿಲ್ಲ. ಪ್ರಸ್ತುತ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರಿಗೆ ಸಾಕಷ್ಟು ಜನಬೆಂಬಲ ವ್ಯಕ್ತವಾಗುತ್ತಿದೆ. ಪದ್ಮರಾಜ್ ಹೋದ ಕಡೆಗಳಲ್ಲೆಲ್ಲ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಹಿಂದ ಮತಗಳನ್ನು ಸೆಳೆಯುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ಆದರೆ ಅವರ ಪ್ರಚಾರದ ವೇಗಕ್ಕೆ ಎಷ್ಟು ಮಂದಿ ಜಿಲ್ಲೆಯ ನಾಯಕರು ಹೆಗಲು ಕೊಡುತ್ತಿದ್ದಾರೆ ಎಂಬುವುದನ್ನು ಅವಲೋಕಿಸಿದರೆ ಸ್ಪಷ್ಟವಾಗುತ್ತದೆ. ಬೆರಳೆಣಿಕೆಯ ನಾಯಕರು, ಮುಖಂಡರು ಕ್ರಿಯಾಶೀಲರಾಗಿ ಓಡಾಡುವುದನ್ನು ಬಿಟ್ಟರೆ ಉಳಿದ ನಾಯಕರು, ಮುಖಂಡರು ಒಂದೆರಡು ಕಡೆ ಮುಖ ತೋರಿಸಿ ಕಾಣೆಯಾಗಿದ್ದಾರೆ. ಅವರೆಲ್ಲ
ಎಲ್ಲಿದ್ದಾರೆ? ಎಷ್ಟು ಮಂದಿ ಕಾಂಗ್ರೆಸ್ ಮಾಜಿ ಶಾಸಕರು ಪಕ್ಷದ ಗೆಲುವಿಗೆ ದುಡಿಯುತ್ತಿದ್ದಾರೆ?. ಎಷ್ಟು ಮಂದಿ ಮಾಜಿ ಶಾಸಕರು ತಾವು ಪ್ರತಿನಿಧಿಸಿದ ಕ್ಷೇತ್ರದ ಮತದಾರರ ಭೇಟಿಯಾಗಿ ಪಕ್ಷದ ಅಭ್ಯರ್ಥಿಗೆ ಓಟು ಕೇಳುತ್ತಿದ್ದಾರೆ?, ಕಾರ್ನರ್ ಮೀಟಿಂಗ್ ಮಾಡುತ್ತಿದ್ದಾರೆ? ಎಷ್ಟು ಮಂದಿ ಕಾಂಗ್ರೆಸ್ ಜಿಪಂ ಮಾಜಿ ಸದಸ್ಯರು ತಾವು ಪ್ರತಿನಿಧಿಸಿದ ಮತದಾರರ ಭೇಟಿಯಾಗುತ್ತಿದ್ದಾರೆ? ಎಷ್ಟು ಮಂದಿ ಮಾಜಿ ಮೇಯರ್ ಗಳು ತಾನು ಪ್ರತಿನಿಧಿಸಿದ ಮಂಗಳೂರು ಜನತೆಯ ಮತ ಯಾಚಿಸುತ್ತಿದ್ದಾರೆ? ಎಷ್ಟು ಮಂದಿ ಹಾಲಿ ಹಾಗೂ ಮಾಜಿ ಕಾರ್ಪೋರೇಟರ್ ಗಳು ಕಾಂಗ್ರೆಸ್ ಗೆಲ್ಲಿಸಲು ಸೆಣಸಾಡುತ್ತಿದ್ದಾರೆ? ಎನ್ನುವ ಮಾಹಿತಿಯನ್ನು ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರು ಸಂಗ್ರಹಿಸಿದರೆ ಎಲ್ಲವೂ ಬಟ್ಟಾಬಯಲಾಗುತ್ತದೆ. ಹಾಗಾದರೆ, ಈಗ ಹೇಳಿ 3 ದಶಕಗಳ ಕಾಂಗ್ರೆಸ್ ಸೋಲಿಗೆ ಕಾರಣವೇನು?

ಇತ್ತೀಚಿನ ಸುದ್ದಿ

ಜಾಹೀರಾತು