ಇತ್ತೀಚಿನ ಸುದ್ದಿ
ಬೀಚ್ ಗಳ ಸ್ವಚ್ಛತೆ ಜತೆಗೆ ಸುರಕ್ಷತೆಗೆ ಸೂಕ್ತ ಕ್ರಮ: ಚಿತ್ರಾಪುರ ಬೀಚ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಡಿಸಿಪಿ ಸಿದ್ದಾರ್ಥ ಗೋಯಲ್ ಭರವಸೆ
19/11/2023, 22:20

ಮಂಗಳೂರು(reporterkarnataka.com): ಬೀಚ್ ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದರ ಜತೆಗೆ ಇಲ್ಲಿಗೆ ಆಗಮಿಸುವ ಜನರ ಸುರಕ್ಷತೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು.
ಮಾದಕ ದ್ರವ್ಯ ಸೇವನೆ, ಕಾನೂನು ಬಾಹಿರ ಚಟುವಟಿಕೆಗಳ ವಿರುದ್ದ ಕಠಿಣ ಕ್ರಮ ವಹಿಸಲಾಗುವುದೆಂದು ಡಿಸಿಪಿ ಸಿದ್ಧಾರ್ಥ ಗೋಯಲ್ ಹೇಳಿದರು.
ದ.ಕ.ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘ, ದ.ಕ.ಜಿಲ್ಲಾ ಡಳಿತ, ದ.ಕ. ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ, ಕ್ರೆಡೈ ಮಂಗಳೂರು ಘಟಕ ಮತ್ತು ಶಕ್ತಿ ಶಿಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ ಚಿತ್ರಾಪುರ ಬೀಚ್ ನಲ್ಲಿ ಭಾನುವಾರ ನಡೆದ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾಗೃತಿ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಜನತೆಯ ಸಹಭಾಗಿತ್ವದಲ್ಲಿ ನಿರಂತರವಾಗಿ ನಡೆಯಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಚಿತ್ರಾಪುರ ಮೊಗವೀರ ಮಹಾಸಭಾದ ಅಧ್ಯಕ್ಷ ಮಾಧವ ಸುವರ್ಣ ಮಾತನಾಡಿ ಬೀಚ್ ನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಅತೀ ಅಗತ್ಯವಿದೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದರು.
ಮೊಗವೀರ ಸಭಾದ ಮುಖಂಡರಾದ ಕೆ.ಎಲ್. ಬಂಗೇರ,ಯತೀಶ್ ಬೈಕಂಪಾಡಿ, ದೇವೇಂದ್ರ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಶಕ್ತಿ ಕಾಲೇಜಿನ ಉಪ ಪ್ರಾಂಶುಪಾಲ ದೀಪಕ್ ಕುಡ್ವ , ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಪಿ. ಸುಧಾಂಶು ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ವಂದಿಸಿದರು. ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್. ಕಾರ್ಯ ಕ್ರಮ ನಿರೂಪಿಸಿದರು.ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜೇಶ್ ದಡ್ಡಂಗಡಿ, ಸದಸ್ಯರಾದ ಲಕ್ಷ್ಮೀ ನಾರಾಯಣ, ಲೋಕೇಶ್ ಸುರತ್ಕಲ್ ಉಪಸ್ಥಿತರಿದ್ದರು.