9:05 AM Thursday25 - April 2024
ಬ್ರೇಕಿಂಗ್ ನ್ಯೂಸ್
ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್… ಬಹಿರಂಗ ಪ್ರಚಾರದ ಕೊನೆಯ ದಿನ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರಿಂದ ಪಂಪ್’ವೆಲ್’… ಪಂಪ್ ವೆಲ್ ನಿಂದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಉರಿ… ನಂಜನಗೂಡು: ಮಾಜಿ ಶಾಸಕ ಹರ್ಷವರ್ಧನ್ ಅವರಿಂದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಪರ ಮತಯಾಚನೆ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಪ್ರಣಾಳಿಕೆ ಬಿಡುಗಡೆ ಹಿಂದೂ ಧರ್ಮ ಸಾಮರಸ್ಯದ ಬದುಕು ಹೇಳಿಕೊಟ್ಟಿದೆ: ಬೈಕಂಪಾಡಿ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ… ಮೋರ್ಗನ್ಸ್ ಗೇಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಮತ… ಪ್ರಿಯಾಂಕಾ ಗಾಂಧಿ ಇಂದು ರಾಜ್ಯಕ್ಕೆ: ಚಿತ್ರದುರ್ಗದಲ್ಲಿ ಬಹಿರಂಗ ಸಭೆ; ಹಗರಿಬೊಮ್ಮನಹಳ್ಳಿಯಲ್ಲಿ ಸೌಮ್ಯಾ ರೆಡ್ಡಿ… ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏ.26ರಂದು ವಿಜಯಪುರಕ್ಕೆ: ರಾಜು ಆಲಗೂರ ಪರ ಚುನಾವಣಾ… ಬರ ಪರಿಹಾರ ನೀಡದಿದ್ದರೆ ಪ್ರಧಾನಿ ಹಾಗೂ ಗೃಹ ಸಚಿವರಿಗೆ ರಾಜ್ಯಕ್ಕೆ ಬರಲು ಜನತೆ…

ಇತ್ತೀಚಿನ ಸುದ್ದಿ

ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನರ್ಮ್ ಬಸ್: ಸ್ವಾಮಿ, ಓಡಿಸುವುದಾದರೆ ಸರಿಯಾಗಿ ಓಡಿಸಿ, ಇಲ್ಲಾಂದ್ರೆ ನಿಲ್ಲಿಸಿಬಿಡಿ!!

20/10/2021, 15:38

ಮಂಗಳೂರು(reporterkarnataka.com):  ಹಲವು ಅನಿಶ್ಚಿತತೆ ನಡುವೆ ದಶಕಗಳ ಹೋರಾಟದ ಫಲವಾಗಿ ನಗರದ ದೇರೆಬೈಲ್ ಕೊಂಚಾಡಿಯ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನಿಂದ ಆರಂಭವಾದ ಸರಕಾರಿ ಸಿಟಿ ಬಸ್ ಸೇವೆ ಬಾಲಾಗ್ರಹಪೀಡಿತವಾಗಿದೆ. ಬಸ್ ಸೇವೆ ಆರಂಭವಾಗಿ ಇನ್ನೂ ಒಂದು ತಿಂಗಳು ಆಗುವ ಮುಂಚೆಯೇ ಸಮಸ್ಯೆ ಶುರುವಾಗಿದೆ. ಬಸ್ ಟೈಮ್ ಗೆ ಸರಿಯಾಗಿ ಓಡಾಟ ನಡೆಸುತ್ತಿಲ್ಲ. ನಡು ನಡುವೆ ಕೆಲವೊಂದು ಟ್ರಿಪ್ ಗಳೇ ಇದ್ದಕ್ಕಿದ್ದ ಹಾಗೆ ಕ್ಯಾನ್ಸಲ್ ಆಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನಿಂದ  ಬಜಾಲ್ ಪಡ್ಪುವಿಗೆ ಸೆ.29ರಿಂದ ಎರಡು ನರ್ಮ ಬಸ್ ಗಳ ಓಡಾಟ ಶುರು ಮಾಡಲಾಯಿತು. ಏಕಕಾಲದಲ್ಲಿ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ಹಾಗೂ ಬಜಾಲ್ ಪಡ್ಪುವಿನಿಂದ ಬಸ್ ಓಡಾಟ ಶುರುವಾಗುತ್ತದೆ. ಬಜಾಲ್ ಪಡ್ಪುನಿಂದ 15 ಟ್ರಿಪ್ ಹಾಗೂ ಲ್ಯಾಂಡ್ ಲಿಂಕ್ಸ್ ನಿಂದ 14 ಟ್ರಿಪ್ ಸಿದ್ಧಪಡಿಸಿ ಟೈಮಿಂಗ್ಸ್ ಬೋರ್ಡ್ ಕೂಡ ಹಾಕಲಾಗಿದೆ. ಆದರೆ ಈ ನರ್ಮ್ ಬಸ್ ಗಳು ಬೆಳಗ್ಗಿನ ಎರಡು ಮೂರು ಟ್ರಿಪ್ ಸರಿಯಾಗಿ ಓಡಾಟ ನಡೆಸಿದರೂ ಮತ್ತೆ ಕೆಲವು ಟ್ರಿಪ್ ಗಳು ಇದ್ದಕ್ಕಿದ್ದ ಹಾಗೆ ಕ್ಯಾನ್ಸಲ್ ಆಗುತ್ತದೆ. ಪೇಟೆಗೆ ಹೋಗಿ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ಗೆ ವಾಪಸ್ಸಾಗುವವರು ಬಸ್ಸಿಗಾಗಿ ಜ್ಯೋತಿ, ಪಿವಿಎಸ್, ಲಾಲ್ ಬಾಗ್, ಬಿಜೈಯಲ್ಲಿ ಕಾದು ಕುಳಿತಿರುತ್ತಾರೆ. ಆದರೆ ಸದ್ದಿಲ್ಲದೆ ಬಸ್ ಕ್ಯಾನ್ಸಲ್ ಆಗುವುದರಿಂದ ಲ್ಯಾಂಡ್ ಲಿಂಕ್ಸ್ ನಿವಾಸಿಗಳು ಗಂಟೆಗಟ್ಟಲೆ ಬಸ್ಸಿಗಾಗಿ ಕಾಯುವ ಪ್ರಮೇಯ ಎದುರಾಗುತ್ತದೆ. 

ಇಂದು (ಅ.20) ಕೂಡ ಇಂತಹದ್ದೇ ಘಟನೆ ನಡೆದ ಬಗ್ಗೆ ಲ್ಯಾಂಡ್ ಲಿಂಕ್ಸ್ ನಿವಾಸಿಗಳು ರಿಪೋರ್ಟರ್ ಕರ್ನಾಟಕಕ್ಕೆ ತಿಳಿಸಿದ್ದಾರೆ. ಇವತ್ತು ಬೆಳಗ್ಗೆ 11.45ಕ್ಕೆ ಬಜಾಲ್ ಪಡ್ಪುವಿನಿಂದ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ಗೆ ಹೊರಡಬೇಕಿದ್ದ ಬಸ್ ಕಾಣೆಯಾಗಿದೆ. ಅರ್ಥಾತ್ ಬಸ್ ಬರಲೇ ಇಲ್ಲ. ಬಿಜೈ ಬಸ್ ಸ್ಟಾಪ್ ನಲ್ಲಿ ಚಿಕ್ಕ ಮಗುವನ್ನು ಸೊಂಟದಲ್ಲಿಟ್ಟುಕೊಂಡು ಮಧ್ಯಾಹ್ನ 12.45ರ ವರೆಗೆ ಕಾದು ಕುಳಿತ್ತಿದ್ದ ಮಹಿಳೆಯೊಬ್ಬರು ಈ ವಿಷಯವನ್ನು ರಿಪೋರ್ಟರ್ ಕರ್ನಾಟಕದ ಗಮನಕ್ಕೆ ತಂದಿದ್ದರು. ಅವರೊಬ್ಬರು ಮಾತ್ರವಲ್ಲದೆ ಹಿರಿಯ ನಾಗರಿಕರು ಕೂಡ ನರ್ಮ್ ಬಸ್ಸಿಗಾಗಿ ಕಾದು ಕುಳಿತ್ತಿದ್ದರು ಎಂದು ಮಹಿಳೆ ತಿಳಿಸಿದ್ದಾರೆ. ಇವರೆಲ್ಲ ನಂತರ ಕಟೀಲಿಗೆ ತೆರಳುವ ಸರ್ವಿಸ್ ಬಸ್ ನಲ್ಲಿ ಕೊಂಚಾಡಿವರೆಗೆ ಬಂದು ಅಲ್ಲಿಂದ ಎರಡು ಆಟೋದಲ್ಲಿ ಲ್ಯಾಂಡ್ ಲಿಂಕ್ಸ್ ಗೆ ಹೋಗಿರುವುದಾಗಿ ಮಾಹಿತಿ ನೀಡಿದ್ದಾರೆ. 

ಲ್ಯಾಂಡ್ ಲಿಂಕ್ಸ್ ನಿಂದ ಸರಕಾರಿ ಸಿಟಿ ಬಸ್  ಸೇವೆ ಪ್ರಾರಂಭಿಸುವಾಗ ಆರಂಭದಲ್ಲೇ ಹಲವು ಎಡರು ತೊಡರುಗಳಿದ್ದವು. ಸೆ. 27ರಂದು ನರ್ಮ್ ಬಸ್ ಪ್ರಾಯೋಗಿಕ ಸಂಚಾರ ಲ್ಯಾಂಡ್ ಲಿಂಕ್ಸ್ ನಿಂದ ಆರಂಭವಾಗಿತ್ತು. 28ರಂದು ಅಧಿಕೃತ ಉದ್ಘಾಟನೆ ಎಂದು ಘೋಷಿಸಲಾಗಿತ್ತು. ಆದರೆ 28ರಂದು ಅದು ನೆರವೇರಲಿಲ್ಲ. ಮತ್ತೆ 29ರಂದು ಅಂತ ದಿನ ನಿಗದಿ ಮಾಡಲಾಯಿತು. 28ರಂದು ಸಂಜೆ ವೇಳೆಗೆ ಸರಕಾರಿ ಬಸ್ ಬರೋಲ್ಲ ಎಂಬ ಸಂದೇಶ ಬಂತು. ಖಾಸಗಿ ಲಾಬಿಗೆ ನಮ್ಮ ಜನಪ್ರತಿನಿಧಿಗಳು ಮಣಿದರು ಎಂಬ ಮಾತು ಟೌನ್ ಶಿಪ್ ನಲ್ಲಿ ಕೇಳಿ ಬಂತು. ಕೆಸ್ಸಾರ್ಟಿಸಿಯಲ್ಲಿ ವಿಚಾರಿಸಿದರೆ, ಟೆಕ್ನಿಕಲ್ ಪ್ರಾಬ್ಲೆಂ ಸದ್ಯ ಆರಂಭಿಸಲಾಗುವುದಿಲ್ಲ ಎಂಬ ಉತ್ತರ ಬಂತು. ಇದರ ವಿರುದ್ಧ ಹಕ್ಕೊತ್ತಾಯ ಮಂಡಿಸಲಾಯಿತು. ಪ್ರತಿಭಟನೆಗೂ ಇಲ್ಲಿನ ನಿವಾಸಿಗಳು ಸಿದ್ಧತೆ ನಡೆಸಿದರು. ಇವೆಲ್ಲದರ ಫಲಶ್ರುತಿ ಎನ್ನುವಂತೆ ಬಸ್ ಉದ್ಘಾಟನೆ ನಡೆಸುವುದನ್ನು ಖಾತ್ರಿಪಡಿಸುವ ಅಧಿಕೃತ ಪ್ರಕಟಣೆ ಸೆ.28ರಂದು ರಾತ್ರಿ ವೇಳೆ ಹೊರಬಿತ್ತು. ಅದರಂತೆ

ಸೆ.29ರಂದು ಬೆಳಗ್ಗೆ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಬಸ್ ಸಂಚಾರವನ್ನು ಉದ್ಘಾಟಿಸಿದರು.

ಇದೀಗ ಸರಕಾರಿ ಬಸ್ ಸೇವೆ ಆರಂಭವಾಗಿ ಇನ್ನೂ ಭರ್ತಿ ಒಂದು ತಿಂಗಳಾಗಿಲ್ಲ. ಬಸ್ ಸಮಯಕ್ಕೆ ಸರಿಯಾಗಿ ಓಡಾಡುತ್ತಿಲ್ಲ. ರಾತ್ರಿ 7.30ಕ್ಕೆ ಬಜಾಲ್ ಪಡ್ಪುವಿನಿಂದ ಬಿಡುವ ಟ್ರಿಪ್ ಲ್ಯಾಂಡ್ ಲಿಂಕ್ಸ್ ಗೆ ಇದುವರೆಗೆ ತಲುಪಿಲ್ಲ. ಸಂಜೆ 6.30ಕ್ಕೆ ಲ್ಯಾಂಡ್ ಲಿಂಕ್ಸ್ ಒಳಗೆ ಬರುವ ಟ್ರಿಪ್ಪೇ ಕೊನೆಯ ಟ್ರಿಪ್. ಅದೂ ಕೂಡ ಕೆಲವೊಮ್ಮೆ ಕೊಂಚಾಡಿಯಿಂದಲೇ ತಿರುಗಿ ಹೋಗುತ್ತದೆ.

ಎರಡು ವಾರದ ಹಿಂದೆ ಲ್ಯಾಂಡ್ ಲಿಂಕ್ಸ್ ನಿವಾಸಿಯೊಬ್ಬರು ಕುಂದಾಪುರಕ್ಕೆ ಹೋಗಿದ್ದರಂತೆ. ಸಂಜೆ ಮಂಗಳೂರಿಗೆ ವಾಪಸ್ ಆದ ಅವರು ಸಂಜೆ 6.15ರ ವೇಳೆಗೆ ಬಿಜೈಯಲ್ಲಿ ಲ್ಯಾಂಡ್ ಲಿಂಕ್ಸ್ ಗೆ ಹೋಗುವ ನರ್ಮ್ ಬಸ್ ಏರಿ ಲ್ಯಾಂಡ್ ಲಿಂಕ್ಸ್ ಟಿಕೆಟ್ ಕೇಳಿದರು. ಕೊನೆಯ ಟ್ರಿಪ್ ಲ್ಯಾಂಡ್ ಲಿಂಕ್ಸ್ ಒಳಗೆ ಹೋಗುವುದಿಲ್ಲ, ಕೊಂಚಾಡಿಯಲ್ಲಿ ತಿರುಗುತ್ತದೆ ಎಂದರಂತೆ ಕಂಡೆಕ್ಟರ್. ಹೌದಾ, ಕೆಎಸ್ಸಾರ್ಟಿಸಿ ಡಿಸಿಯವರಲ್ಲಿ ಮಾತನಾಡುತ್ತೇನೆ ಎಂದು ಪ್ರಯಾಣಿಕರು ಹೇಳಿದರು. ಕಂಡೆಕ್ಟರ್ ಸೀದಾ ಚಾಲಕನ ಬಳಿ ಹೋಗಿ ವಾಪಸ್ ಹಿಂದೆ ಬರುವಾಗ, ‘ಇಲ್ಲ, ಒಳಗೆ ಹೋಗುತ್ತೆ’ ಅಂತ ಹೇಳಿದರಂತೆ. ಸರಕಾರದ ಸೌಲಭ್ಯವನ್ನು ಸರಕಾರಿ ಸಿಬ್ಬಂದಿಗಳೇ ಹೇಗೆ ತಪ್ಪಿಸುತ್ತಾರೆ, ಖಾಸಗಿ ವ್ಯವಸ್ಥೆ ಜತೆ ಹೇಗೆ ಕೈಜೋಡಿಸುತ್ತಾರೆ ಎನ್ನುವುದಕ್ಕೆ ಇದು ಸಣ್ಣ ಉದಾಹರಣೆ ಅಷ್ಟೇ. ಕೆಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಈ ಕುರಿತು ಈಗಿಂದೀಗಲೇ ಕ್ರಮ ಕೈಗೊಳ್ಳಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು