7:51 AM Sunday25 - July 2021
ಬ್ರೇಕಿಂಗ್ ನ್ಯೂಸ್
ಮಹಾರಾಷ್ಟ್ರದಲ್ಲಿ ಮಹಾ ಪ್ರವಾಹ : ಮೃತರ ಸಂಖ್ಯೆ ಏರಿಕೆ, ಹಲವು ಮಂದಿ ನಾಪತ್ತೆ ಕೇಂದ್ರ ಮಾಜಿ ಸಚಿವ ಆಸ್ಕರ್ ಆರೋಗ್ಯಕ್ಕೆ ಮಂಜುನಾಥ ಸ್ವಾಮಿ ಪ್ರಸಾದ; ಧರ್ಮಸ್ಥಳದಿಂದ ತಂದ ಡಾ.… ಗೃಹಿಣಿಯ ಜತೆ ಅನೈತಿಕ ಸಂಬಂಧ: ಹಾಡಹಗಲೇ ಯುವಕನ ಕೊಡಲಿಯಿಂದ ಕೊಚ್ಚಿ ಭೀಕರ ಕೊಲೆ ಕೊಯ್ನಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ: ಬೆಳಗಾವಿ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ… OLYMPICS | ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮೀರಾಬಾಯಿ ಚಾನು Olympics | ಬಿಲ್ಲುಗಾರಿಕೆ ಮಿಶ್ರ ಡಬಲ್ಸ್‌ನಲ್ಲಿ ಕ್ವಾಟರ್‌ಫೈನಲ್‌ಗೆ ಲಗ್ಗೆ ಇಟ್ಟ ದೀಪಿಕಾ ಕುಮಾರಿ… ಬಂಡಿಪೋರಾದಲ್ಲಿ ಎನ್‌ಕೌಂಟರ್ : ಇಬ್ಬರು ಉಗ್ರರನ್ನು ಸದೆಬಡಿದ ಭಾರತೀಯ ಸೈನಿಕರು Olympics | ಗೆಲುವಿನೊಂದಿಗೆ ಪಯಣ ಆರಂಭಿಸಿದ ಭಾರತೀಯ ಹಾಕಿ ತಂಡ : ಕೀವೀಸ್… ಗೆದ್ದು ಬಾ ಭಾರತ: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಜಪಾನಿನ ಟೋಕಿಯೋದಲ್ಲಿ ವೈಭವದ ಚಾಲನೆ ಬೆಳಗಾವಿ: ಉಕ್ಕಿ ಹರಿಯುತ್ತಿದೆ ನದಿಗಳು; ಹೆದ್ದಾರಿ ಸೇತುವೆ ಜಲಾವೃತ, ಪ್ರಯಾಣಿಕರ ಪರದಾಟ

ಇತ್ತೀಚಿನ ಸುದ್ದಿ

ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರಕ್ಕೆ ಪಾಲಿಕೆ ಮತ್ತೆ ಸಜ್ಜು; ನೀರು ಸರಬರಾಜು ವಿಭಾಗದ 40 ಹೊರಗುತ್ತಿಗೆ ಸಿಬ್ಬಂದಿಗಳ ಕೈಬಿಡಲು ಹುನ್ನಾರ! 

19/07/2021, 07:30

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಆದಾಯ ಸೋರಿಕೆಯನ್ನು ತಡೆಗಟ್ಟುವಲ್ಲಿ ದಶಕಗಳಿಂದ ವಿಫಲವಾಗಿರುವ ಮಂಗಳೂರು ಮಹಾನಗರಪಾಲಿಕೆ ಮತ್ತೊಮ್ಮೆ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆಸಿದೆ. ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ತಿಂಗಳಿಗೆ ಕೇವಲ 12 ಸಾವಿರ ರೂ. ಸಂಬಳಕ್ಕೆ ದುಡಿಯುವ ನೀರು ಸರಬರಾಜು ವಿಭಾಗದ ಸುಮಾರು 40 ಮಂದಿ ಸಿಬ್ಬಂದಿಗಳಿಗೆ ಕೊರೊನಾದ ಕಷ್ಟಕಾಲದಲ್ಲಿ ಗೇಟ್ ಪಾಸ್ ನೀಡಲು ತಯಾರಿ ನಡೆಸಿದೆ. ವಿಶೇಷವೆಂದರೆ ಈ ಸಿಬ್ಬಂದಿಗಳೆಲ್ಲ ಸುಮಾರು10- 15 ವರ್ಷಗಳಿಂದ ತಮ್ಮರಕ್ತವನ್ನು ಬೆವರಿನ ರೂಪದಲ್ಲಿ ಸುರಿಸಿ ಇಲ್ಲಿ ದುಡಿಯುತ್ತಿದ್ದಾರೆ.

ಪಾಲಿಕೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ನಾಗರಿಕ ಸಮಿತಿಯ ಹನುಮಂತ ಕಾಮತ್, ಸಾಮಾಜಿಕ ಹೋರಾಟಗಾರ ಜೆರಾಲ್ಡ್ ಟವರ್ ಮುಂತಾದವರು ನಿರಂತರ ಹೋರಾಟ ನಡೆಸುತ್ತಿದ್ದರೂ ಪಾಲಿಕೆಯ ಆಡಳಿತ ಮಾತ್ರ ಈ ವಿಷಯದಲ್ಲಿ ಬಂಡೆಕಲ್ಲಿನ ತರಹ ನಿಂತಿದೆ. ಭ್ರಷ್ಟಾಚಾರವನ್ನು ತಡೆಯಲು ಕಾಂಗ್ರೆಸ್ ಗೆ ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ಮಂಗಳೂರು ಜನತೆ ಬಿಜೆಪಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದ್ದಾರೆಯೇ ಹೊರತು ಬಿಜೆಪಿಯು ಭಾಗ್ಯದ ಬಾಗಿಲನ್ನೇ ತೆರೆದಿಡುತ್ತದೆ ಎಂಬ ಭ್ರಮೆಯಿಂದ ಅಲ್ಲ. ಆದರೆ ‘ಹಿರಿಯಕ್ಕನ ಚಾಳಿ ಮನೆ ಮಂದಿಗೆ’ ಎನ್ನುವಂತೆ ಬಿಜೆಪಿ ಆಡಳಿತ ಕೂಡ ಕಾಂಗ್ರೆಸ್ ಹಾದಿಯಲ್ಲೇ ಮುಂದುವರಿಯುತ್ತಿದೆ. ಆದಾಯ ಸೋರಿಕೆ ತಡೆಗಟ್ಟಲು, ನೌಕರರಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು, ಬ್ರೋಕರ್ ಹಾವಳಿ ತಪ್ಪಿಸಲು ಯಾವುದೇ ಕ್ರಮಕೈಗೊಂಡಿಲ್ಲ. ಬದಲಿಗೆ ಪಾಲಿಕೆಯಲ್ಲಿ ದಶಕಗಳಿಂದ ಕೆಲಸ ಮಾಡುತ್ತಿರುವ ಹೊರ ಗುತ್ತಿಗೆ ಸಿಬ್ಬಂದಿಗಳನ್ನು ಕೈಬಿಡುವಲ್ಲಿ ಉತ್ಸುಕವಾಗಿದೆ ಎಂಬ ಮಾಹಿತಿ ಲಭಿಸಿದೆ.

ಪಾಲಿಕೆಯ ನೀರು ಸರಬರಾಜು ವಿಭಾಗದಲ್ಲಿ ಕಳೆದ 10-15 ವರ್ಷಗಳಿಂದ ದುಡಿದು ಇದೀಗ ಮಧ್ಯ ವಯಸ್ಸಿನ ಜೀವನ ನಡೆಸುತ್ತಿರುವ ಹೊರಗುತ್ತಿಗೆ ನೌಕರರನ್ನು ಕಾಯಂ ಆಗಿ ಪಾಲಿಕೆಯಿಂದ ಹೊರ ಹಾಕಲು ಸ್ಕೆಚ್ ಹಾಕಲಾಗಿದೆ. ಇದಕ್ಕೆ ಪಾಲಿಕೆ ಅಧಿಕಾರಿಗಳು ಸಿ ಆ್ಯಂಡ್  ಆರ್( ಕೇಡರ್ ಆಂಡ್ ರಿಕ್ರ್ಯೂಟ್ ಮೆಂಟ್) ಪ್ರಕಾರ ಸಿಬ್ಬಂದಿಗಳು ಇರಬೇಕು ಎನ್ನುವ ಸಾಬೂಬು ನೀಡುತ್ತಿದ್ದಾರೆ. ಪ್ರಸ್ತುತ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಿ ಆ್ಯಂಡ್  ಆರ್ ನಿಯಮಕ್ಕಿಂತ ಹೆಚ್ಚು ಸಿಬ್ಬಂದಿಗಳಿದ್ದಾರೆ ಎನ್ನುವ ನೆಪ ಮುಂದಿಟ್ಟುಕೊಂಡು 10- 15 ವರ್ಷಗಳಿಂದ ಪಾಲಿಕೆಯಲ್ಲಿ ದುಡಿದ ನುರಿತ ಸಿಬ್ಬಂದಿಗಳನ್ನು ಕೈಬಿಡಲು ತಂತ್ರಗಾರಿಕೆ ಹೆಣೆಯಲಾಗಿದೆ. ಹಾಗೆ ಹೊಸ ಟೆಂಡರ್ ಸಿದ್ಧವಾಗಿದೆ ಎಂದು ತಿಳಿದು ಬಂದಿದೆ.

ಹಾಗಾದರೆ ಪಾಲಿಕೆಯಲ್ಲಿರುವ ಸಿ ಆ್ಯಂಡ್ ಆರ್ ಆದರೂ ಯಾವಾಗದ್ದು? ಪಾಲಿಕೆ ಯಾವ ಇಸವಿಯ ಸಿ ಆ್ಯಂಡ್ ಆರ್ ಪ್ರಕಾರ ಇದೀಗ ಲೆಕ್ಕಾಚಾರ ಹಾಕುತ್ತಿದೆ?  ಎನ್ನುವ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ವಾಸ್ತವದಲ್ಲಿ ಪಾಲಿಕೆಯಲ್ಲಿ ಪ್ರಸ್ತುತವಿರುವುದು ಓಬಿರಾಯನ ಕಾಲದ ಸಿ ಆ್ಯಂಡ್ ಆರ್ ಆಗಿದೆ. ಮಂಗಳೂರು ಮುನ್ಸಿಪಾಲಿಟಿ ಅಸ್ತಿತ್ವದಲ್ಲಿರುವಾಗ ಸಿದ್ಧಪಡಿಸಿದ ಸಿ ಆ್ಯಂಡ್  ಆರ್ ಇದಾಗಿದೆ ಎಂದು ತಿಳಿದು ಬಂದಿದೆ. ಆಗ ಮಂಗಳೂರಿನಲ್ಲಿ 1 ಲಕ್ಷ ಜನಸಂಖ್ಯೆಯೂ ಇರಲಿಲ್ಲ. ಇದೀಗ ಮಹಾನಗರಪಾಲಿಕೆಯಾಗಿ ಸ್ಮಾರ್ಟ್ ಸಿಟಿಯ ಗರಿಯನ್ನೂ ಮುಡಿಗೇರಿದೆ. 7 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಜನಸಂಖ್ಯೆ ಹೆಚ್ಚಾದ್ದಂತೆ ಸಿಬ್ಬಂದಿಗಳ ಸಂಖ್ಯೆಯಲ್ಲಿ ಏರಿಕೆಯಾಗಬೇಕೇ ಹೊರತು ಕಡಿಮೆಯಾಗುವುದಲ್ಲ. ಹಾಗಿರುವಾಗ ಪಾಲಿಕೆಯ ನೀರು ಸರಬರಾಜು ವಿಭಾಗಕ್ಕೆ 40 ಮಂದಿ ಸಿಬ್ಬಂದಿಗಳು ಹೆಚ್ಚಾಗುವುದಾದರೂ ಹೇಗೆ 
ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಆದರೆ ಇಲ್ಲಿ ಬಲು ಜಾಣತನದಿಂದ ತಂತ್ರಗಾರಿಕೆ ಹೆಣೆಯಲಾಗಿದೆ. ಇದರಲ್ಲಿ ಕೆಲವು ಅಧಿಕಾರಿಗಳು ಹಾಗೂ ಎಂಜಿನಿಯರ್ ಶಾಮೀಲಾಗಿರುವ ಬಗ್ಗೆ ಮಾಹಿತಿ ರಿಪೋರ್ಟರ್ ಕರ್ನಾಟಕಕ್ಕೆ ಲಭಿಸಿದೆ.

ಅದೇನೇ ಇರಲಿ, ದಶಕಗಳಿಂದ ಪಾಲಿಕೆಯಲ್ಲಿ ಹೊರಗುತ್ತಿಗೆಯಲ್ಲಿ ದುಡಿಯುತ್ತಿರುವ ಈ ಸಿಬ್ಬಂದಿಗಳಲ್ಲಿ ಹೆಚ್ಚಿನವರು 40 ವರ್ಷ ಮೇಲ್ಪಟ್ಟವರಾಗಿದ್ದಾರೆ. ಪಾಲಿಕೆ ಇವರನ್ನು ಕೈಬಿಟ್ಟರೆ ಕೊರೊನಾದ ಈ ಕಷ್ಟಕಾಲದಲ್ಲಿ ಅವರಿಗೆ ಬೇರೆ ಎಲ್ಲೂ ಕೆಲಸ ಸಿಗುವ ಸಾಧ್ಯತೆ ಬಹಳ ಕಡಿಮೆ. ಇವರ ದುಡಿಮೆಯನ್ನೇ ನಂಬಿದ ಕುಟುಂಬಗಳು ಬೀದಿಗೆ ಬೀಳುತ್ತದೆ ಎನ್ನುವುದನ್ನು ಪಾಲಿಕೆಯ ಆಡಳಿತ ನೆನಪಿನಲ್ಲಿಟ್ಟುಕೊಳ್ಳಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು