10:29 PM Thursday27 - January 2022
ಬ್ರೇಕಿಂಗ್ ನ್ಯೂಸ್
ಡಾ. ಅಂಬೇಡ್ಕರ್‌ಗೆ ಅವಮಾನ: ಸೇವೆಯಿಂದ ವಜಾ ಮಾಡಲು ದಲಿತ ಸಂಘಟನೆಗಳ ಮಹಾ  ಒಕ್ಕೂಟ ಒತ್ತಾಯ ಹಾಡು ನಿಲ್ಲಿಸಿದ ಪ್ರಸಿದ್ಧ ಸಂಗೀತ ಕಲಾವಿದೆ, ಆರ್ಯಭಟ ಪ್ರಶಸ್ತಿ ವಿಜೇತೆ ಶೀಲಾ ದಿವಾಕರ್  ಗಣರಾಜ್ಯೋತ್ಸವ ಪರೇಡ್‌ ನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ನಿರಾಕರಣೆ: ಮಂಗಳೂರಿನಲ್ಲಿ ಸ್ವಾಭಿಮಾನ ನಡಿಗೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗರಿಗೆದರಿದ ಗಣರಾಜ್ಯೋತ್ಸವ: ರಾಜ್ಯಪಾಲರಿಂದ ಧ್ವಜಾರೋಹಣ ಆಡಳಿತದಲ್ಲಿ ಮೇಜರ್ ಸರ್ಜರಿ: ರಾಜ್ಯದ 19 ಹಿರಿಯ ಐಎಎಸ್ ಅಧಿಕಾರಿಗಳ ವರ್ಗಾವಣೆ ಗಣರಾಜ್ಯೋತ್ಸವ ಪಥ ಸಂಚಲನ: ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆಯ 6 ಮಂದಿ… ಏಪ್ರಿಲ್ 27ರಂದು ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಎತ್ತಿನಹೊಳೆ ಯೋಜನೆ ಸೆಪ್ಟೆಂಬರ್ ಒಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸಿಎಂ ತಾಕೀತು ಚಳ್ಳಕೆರೆ: ಪದೇ ಪದೇ ಬಣವೆಗಳಿಗೆ ಬೆಂಕಿ: ಗಾಡಿ ಗಾಡಿ ಶೇಂಗಾ ಬೆಂಕಿಗಾಹುತಿ; ಆತಂಕದಲ್ಲಿ… ಲಸಿಕೆ ಒಲ್ಲದ ಯುವಕನಿಂದ ಹೈಡ್ರಾಮ: ಅಧಿಕಾರಿಗಳ ಸಮ್ಮುಖದಲ್ಲೇ ಮನೆಯ ಛಾವಣಿ ಏರಿದ ಭೂಪ

ಇತ್ತೀಚಿನ ಸುದ್ದಿ

ಶಾಲಾ ಫೀಸು; ಸರಕಾರಿ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು; ಎಲ್ಲವೂ ಖಾಸಗಿ ಶಾಲೆಗಳದ್ದೇ ಕರಾಮತ್ತು; ದಲ್ಲಾಳಿಗಳ ತರಹ ವರ್ತಿಸುವ ಡಿಡಿಪಿಐ, ಬಿಇಒಗಳು !

15/07/2021, 14:48

ಚಿತ್ರ ಸಾಂದರ್ಭಿಕ

RK Exclusive

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka news@gmail.com

ಸುಪ್ರೀಂಕೋರ್ಟ್ ಏನೇ ಹೇಳಿದರೂ, ಶಿಕ್ಷಣ ಇಲಾಖೆ, ಜಿಲ್ಲಾಧಿಕಾರಿ ಏನೇ ಎಚ್ಚರಿಕೆ ನೀಡಿದರೂ ರಾಜ್ಯಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳು ಫೀಸಿಗಾಗಿ ಹೆತ್ತವರ ಪ್ರಾಣ ಹಿಂಡುವ ಕೆಲಸವನ್ನು ಮುಂದುವರಿಸಿವೆ. ಇವರ ಅಟ್ಟಹಾಸ ಎಲ್ಲಿಯ ವರೆಗೆ ಮುಂದುವರಿದಿದೆ ಅಂದ್ರೆ ಕೆಲವು ಶಿಕ್ಷಣ ಸಂಸ್ಥೆಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಹಾಲ್ ಟಿಕೆಟ್ ನೀಡುವುದಿಲ್ಲ ಎಂದು ಹೆತ್ತವರಿಗೆ ಬೆದರಿಕೆ ಹಾಕಿವೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಬಹುತೇಕ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಈ ವಿಷಯದಲ್ಲಿ ಏಕತೆಯನ್ನು ಪ್ರದರ್ಶಿಸಿವೆ. ರಿಪೋರ್ಟರ್ ಕರ್ನಾಟಕಕ್ಕೆ ಪ್ರತಿ ದಿನ ಹೆತ್ತವರಿಂದ ಬರುವ ಅವರ ಕಣ್ಣೀರ ಕರೆಗಳೇ ಇದಕ್ಕೆ ಸಾಕ್ಷಿಯಾಗಿದೆ. ಡಿಡಿಪಿಐ, ಬಿಇಒಗಳಿಗೆ ದೂರು ನೀಡಿದರೆ ಅವರು ಶಿಕ್ಷಣ ಸಂಸ್ಥೆಗಳ ಕಷ್ಟವನ್ನೇ ಹೇಳುತ್ತಾರೆ ಹೊರತು ನಮ್ಮ ಕಷ್ಟವನ್ನು ಆಲಿಸುವುದಿಲ್ಲ ಎಂದು ರಾಜ್ಯಾದ್ಯಂತದ ಹೆಚ್ಚಿನ ಪೋಷಕರು ಹೇಳುತ್ತಾರೆ. ಹಾಗೆಂತ ಹೆತ್ತವರಿಗೆ ಸ್ಪಂದಿಸುವ ಶಿಕ್ಷಣ ಅಧಿಕಾರಿಗಳು ಕೂಡ ಇದ್ದಾರೆ. ಆದರೆ ಅವರೆಲ್ಲ ಈ ಭ್ರಷ್ಟ ವ್ಯವಸ್ಥೆಯಡಿ ಅಸಹಾಯಕರಾಗಿದ್ದಾರೆ. ತಮ್ಮ ಕೆಲಸ ಉಳಿಸಿಕೊಂಡು ಪ್ರಮೋಶನ್ ಪಡೆಯುವಲ್ಲಿ ಉತ್ಸುಕರಾಗಿದ್ದಾರೆ.

ಮೊನ್ನೆ ಮೊನ್ನೆ ತಲೆ ಎತ್ತಿದ ಶಿಕ್ಷಣ ಸಂಸ್ಥೆಗಳಿಂದ ಆರಂಭಗೊಂಡು ದಶಕಗಳಿಂದ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಮಂದಿಯ ವರೆಗೆ ಎಲ್ಲರೂ ಬಡಪಾಯಿ ಹೆತ್ತವರ/ ಪೋಷಕರ ಕತ್ತು ಹಿಚುಕುವವರೇ ಆಗಿದ್ದಾರೆ.

ಮೊದಲೇ ಕೊರೊನಾ ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಹೈರಾಣವಾಗಿರುವ ಹೆತ್ತವರು ಶಿಕ್ಷಣ ಸಂಸ್ಥೆಗಳ ಅಮಾನುಷ ವರ್ತನೆಗೆ ಪ್ರಾಣ ಬಿಡುವ ಸ್ಥಿತಿಗೆ ಬಂದು ತಲುಪಿದ್ದಾರೆ. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಶಿಕ್ಷಕರ ಮೂಲಕ ಫೀಸು ಕಟ್ಟದ ಮಕ್ಕಳ ಆನ್ ಲೈನ್ ಕ್ಲಾಸ್ ಸ್ಥಗಿತಗೊಳಿಸುವ ಬೆದರಿಕೆ ಹಾಕುತ್ತಿವೆ. ಇನ್ನೂ ಕೆಲವು ಶಾಲೆಗಳು ಫೀಸ್ ಕಟ್ಟದೆ ಪುಸ್ತಕ ನೀಡಲು ನಿರಾಕರಿಸುತ್ತಿವೆ. ಫೀಸು ಕಟ್ಟದಕ್ಕೆ ಟಿಸಿ ಕೊಟ್ಟ ಪ್ರಕರಣಗಳು ಕೂಡ ರಾಜ್ಯದ ಹಲವೆಡೆ ನಡೆದಿದೆ. ಫೀಸು ಕಟ್ಟಲಾಗದ ಹೆತ್ತವರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುತ್ತೇನೆ ಎಂದು ಅಂಗಲಾಚಿದರೂ ಶಾಲಾ ಆಡಳಿತ ಮಂಡಳಿ ಟಿಸಿ ಕೊಡಲು ನಿರಾಕರಿಸುತ್ತಿವೆ.

ಶಿಕ್ಷಣ ಸಂಸ್ಥೆ ನಡೆಸಿ ತಮ್ಮ ಮಕ್ಕಳು, ಮೊಮ್ಮಕ್ಕಳ ವ್ಯಾಸಂಗವನ್ನು ವಿದೇಶದಲ್ಲಿ ಮಾಡುತ್ತಿರುವ ಸಂಸ್ಥೆಗಳ ಮುಖ್ಯಸ್ಥರಿಂದ ಆರಂಭಗೊಂಡು ಮೊನ್ನೆ ಮೊನ್ನೆ ಕಣ್ಣು ತೆರೆದು ತಗಡು ಚಪ್ಪರದಲ್ಲಿ ತರಗತಿ ನಡೆಸುವ ಶಿಕ್ಷಣ ಸಂಸ್ಥೆಗಳ ವರೆಗೆ ಎಲ್ಲರೂ ಕೊಡುವ ಉತ್ತರ ಒಂದೇ. ಅದೇನೆಂದರೆ ಶಿಕ್ಷಕರಿಗೆ ಸಂಬಳ ಕೊಡಲು ಹಣ ಇಲ್ಲ, ಫೀಸು ಕಟ್ಟಿ ಎನ್ನುವ ಆದೇಶ ನುಡಿ. ಆದರೆ ವಾಸ್ತವದಲ್ಲಿ ಬೆರಳೆಣಿಕೆಯ ಹೊಸ ಶಿಕ್ಷಣ ಸಂಸ್ಥೆಗಳನ್ನು ಬಿಟ್ಟರೆ ಉಳಿದ ಎಲ್ಲ ಶಿಕ್ಷಣ ಸಂಸ್ಥೆಗಳ ಟ್ರಸ್ಟ್ ನಲ್ಲಿ ಕೊಳೆಯುವಷ್ಟು ಹಣ ಇದೆ. ಆದರೆ ಇವರು ಟ್ರಸ್ಟ್ ನಿಂದ ಹಣ ಬಿಚ್ಚಲು ಸಿದ್ಧರಿಲ್ಲ. ಹೆಚ್ಚಿನ ಶಿಕ್ಷಣ ಸಂಸ್ಥೆಗಳ ಟ್ರಸ್ಟ್ ಕೆಲವು ಕುಟುಂಬಗಳಿಗೆ ಮಾತ್ರ ಸೀಮಿತವಾಗಿದೆ. ಈ ಟ್ರಸ್ಟ್ ನಡೆಸುವವರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. ಶಿಕ್ಷಣವನ್ನು ವ್ಯಾಪಾರಿಕರಣ ಮಾಡಿ ಹಣ ಮಾಡುವುದು ಮತ್ತು ತಮ್ಮ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳಿಗೆ ವಿದೇಶದಲ್ಲಿ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲ ಅವಕಾಶ ಸಿಕ್ಕಿದಾಗಲೆಲ್ಲ ದೇಶೀಯ ಶಿಕ್ಷಣ, ದೇಶದ ಸಂಸ್ಕೃತಿಯ ಬಗ್ಗೆ ತಾಸುಗಟ್ಟಲೆ ಭಾಷಣ ಬಿಗಿಯುತ್ತಾರೆ. ಸರಕಾರದ ನೇತೃತ್ವದಲ್ಲಿ ನಿಷ್ಪಕ್ಷಪಾತವಾಗಿ ಈ ಟ್ರಸ್ಟ್ ಗಳ ಬಗ್ಗೆ ತನಿಖೆ ನಡೆಸಿದರೆ ಎಲ್ಲ ಬಂಡವಾಳ ಹೊರಬೀಳುವ ಸಾಧ್ಯತೆಯಿದೆ.

ಅಷ್ಟೇ ಅಲ್ಲದೆ ಕೊರೊನಾದಿಂದ ಶಾಲೆಗಳನ್ನು ಮುಚ್ಚಿರುವುದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಖರ್ಚು ವೆಚ್ಚ ಕೂಡ ಕಡಿಮೆಯಾಗಿದೆ. ಕರೆಂಟ್ ಬಿಲ್, ನೀರಿನ ಬಿಲ್, ಇಂಧನ ವೆಚ್ಚ, ನಿರ್ವಹಣೆ ವೆಚ್ಚ ಎಲ್ಲವೂ ಉಳಿತಾಯವಾಗಿದೆ. ಶಿಕ್ಷಕರಿಗೆ ಸಂಬಳ ಕೊಡುವುದು ಬಿಟ್ಟರೆ ಬೇರೆ ಯಾವುದೇ ಖರ್ಚು ಆಡಳಿತ ಮಂಡಳಿಯ ಹೆಗಲ ಮೇಲೆ ಬರುವುದಿಲ್ಲ. ಅದಲ್ಲದೆ ಹೆಚ್ಚಿನ ಖಾಸಗಿ ಶಾಲೆಗಳು 6ರಿಂದ 10 ಸಾವಿರದೊಳಗೆ ಸಂಬಳ ಕೊಟ್ಟು ಶಿಕ್ಷಕರನ್ನು ದುಡಿಸುತ್ತಿದ್ದಾರೆ. ಇದೀಗ ಕೊರೊನಾ ಬಂದ ನಂತರ ಅವರಿಗೆಲ್ಲ ಅರ್ಧ ಸಂಬಳ. ಅಂದ್ರೆ ಒಬ್ಬ ಶಿಕ್ಷಕನಿಗೆ ಗರಿಷ್ಠವೆಂದರೂ 5 ಸಾವಿರಕ್ಕಿಂತ ಹೆಚ್ಚು ಸಂಬಳವನ್ನು ಆಡಳಿತ ಮಂಡಳಿ ನೀಡುತ್ತಿಲ್ಲ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡೇ ಸುಪ್ರೀಂಕೋರ್ಟ್ ಶೇ. 70ರಷ್ಟು ಮಾತ್ರ ಶಾಲಾ ಫೀಸು ಸಂಗ್ರಹಿಸಲು ಸೂಚಿಸಿದೆ. ಆದರೆ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಇದನ್ನು ಕೂಡ ಪಾಲಿಸುತ್ತಿಲ್ಲ. ಕೆಲವು ಶಾಲೆಗಳು ತಾವು ನಾಲ್ಕೈದು ವರ್ಷಗಳಿಂದ ಫೀಸು ಜಾಸ್ತಿ ಮಾಡಿಲ್ಲ, ಹಾಗಾಗಿ ಶೇ. 30ರಷ್ಟು ಕಡಿಮೆ ಮಾಡುವುದಿಲ್ಲ ಎಂದು ಹೆತ್ತವರನ್ನು ದಬಾಯಿಸುತ್ತಿದೆ. ಡಿಡಿಪಿಐ, ಬಿಇಒಗಳು ಇದರ ಮೇಲೆ ನಿಗಾ ಇಡುತ್ತಿಲ್ಲ. ನಿಜವಾಗಿ ಜನರ ಮತದಿಂದ ಗೆದ್ದು ಬಂದು ಶಾಸಕರು, ಸಂಸದರು ಹೆತ್ತವರ ಪರವಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕು. ಅದರೆ ನಮ್ಮ ಜನಪ್ರತಿನಿಧಿಗಳಲ್ಲಿ ಎಷ್ಟು ಮಂದಿ ಪೋಷಕರ ಪರ ನಿಂತು ಶಾಲಾ ಆಡಳಿತ ಮಂಡಳಿಯನ್ನು ಎದುರು ಹಾಕಿಕೊಳ್ಳಲು ಸಿದ್ದರಿದ್ದಾರೆ?.

ಇತ್ತೀಚಿನ ಸುದ್ದಿ

ಜಾಹೀರಾತು