8:07 AM Sunday25 - July 2021
ಬ್ರೇಕಿಂಗ್ ನ್ಯೂಸ್
ಮಹಾರಾಷ್ಟ್ರದಲ್ಲಿ ಮಹಾ ಪ್ರವಾಹ : ಮೃತರ ಸಂಖ್ಯೆ ಏರಿಕೆ, ಹಲವು ಮಂದಿ ನಾಪತ್ತೆ ಕೇಂದ್ರ ಮಾಜಿ ಸಚಿವ ಆಸ್ಕರ್ ಆರೋಗ್ಯಕ್ಕೆ ಮಂಜುನಾಥ ಸ್ವಾಮಿ ಪ್ರಸಾದ; ಧರ್ಮಸ್ಥಳದಿಂದ ತಂದ ಡಾ.… ಗೃಹಿಣಿಯ ಜತೆ ಅನೈತಿಕ ಸಂಬಂಧ: ಹಾಡಹಗಲೇ ಯುವಕನ ಕೊಡಲಿಯಿಂದ ಕೊಚ್ಚಿ ಭೀಕರ ಕೊಲೆ ಕೊಯ್ನಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ: ಬೆಳಗಾವಿ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ… OLYMPICS | ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮೀರಾಬಾಯಿ ಚಾನು Olympics | ಬಿಲ್ಲುಗಾರಿಕೆ ಮಿಶ್ರ ಡಬಲ್ಸ್‌ನಲ್ಲಿ ಕ್ವಾಟರ್‌ಫೈನಲ್‌ಗೆ ಲಗ್ಗೆ ಇಟ್ಟ ದೀಪಿಕಾ ಕುಮಾರಿ… ಬಂಡಿಪೋರಾದಲ್ಲಿ ಎನ್‌ಕೌಂಟರ್ : ಇಬ್ಬರು ಉಗ್ರರನ್ನು ಸದೆಬಡಿದ ಭಾರತೀಯ ಸೈನಿಕರು Olympics | ಗೆಲುವಿನೊಂದಿಗೆ ಪಯಣ ಆರಂಭಿಸಿದ ಭಾರತೀಯ ಹಾಕಿ ತಂಡ : ಕೀವೀಸ್… ಗೆದ್ದು ಬಾ ಭಾರತ: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಜಪಾನಿನ ಟೋಕಿಯೋದಲ್ಲಿ ವೈಭವದ ಚಾಲನೆ ಬೆಳಗಾವಿ: ಉಕ್ಕಿ ಹರಿಯುತ್ತಿದೆ ನದಿಗಳು; ಹೆದ್ದಾರಿ ಸೇತುವೆ ಜಲಾವೃತ, ಪ್ರಯಾಣಿಕರ ಪರದಾಟ

ಇತ್ತೀಚಿನ ಸುದ್ದಿ

ಕೇಂದ್ರ ಸಂಪುಟದಲ್ಲಿ ಶೋಭಾ ಕರಂದ್ಲಾಜೆಗೆ ಸಚಿವ  ಸ್ಥಾನ: ಕರಾವಳಿ ಬಿಜೆಪಿಯಲ್ಲಿ ಮಾತ್ರ ಘೋರ ಮೌನ !!

09/07/2021, 20:26

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಕರಾವಳಿ ಬಿಜೆಪಿ ಪಾಳಯದಿಂದ ಶೋಭಾ ಕರಂದ್ಲಾಜೆ ಅವರು ಕೇಂದ್ರ ಸಂಪುಟ ಅಲಂಕರಿಸಿದ್ದಾರೆ. ದೀರ್ಘಕಾಲದ ಬಳಿಕ ಕೇಂದ್ರದಲ್ಲಿ ಕರಾವಳಿಗೆ ಸ್ಥಾನ ಲಭಿಸಿದೆ. ಆದರೆ ಕಮಲ ಪಾಳಯದಲ್ಲಿ ಕೊಂಚವೂ ಸಂಭ್ರಮವಿಲ್ಲ. ಒಂದು ಪಂಚಾಯಿತಿ ಗೆದ್ದರೂ ಪಟಾಕಿ ಸಿಡಿಸಿ, ಸ್ವೀಟ್ ಹಂಚಿ ಸಂಭ್ರಮಿಸುವ ಕರಾವಳಿಯ ಕೇಸರಿ ಪಡೆ ಮೌನಕ್ಕೆ ಜಾರಿದೆ. ಖುಷಿ, ಸಂಭ್ರಮ ಹಂಚಿಕೊಳ್ಳುವವರು ಎಲ್ಲೂ ಕಾಣುತ್ತಿಲ್ಲ.

ಯಾಕೆ ಹೀಗೆ ಎಂಬ ಪ್ರಶ್ನೆ  ಕರಾವಳಿ ಮಾತ್ರವಲ್ಲದೆ ಇಡೀ ರಾಜ್ಯವನ್ನೇ ಕಾಡುತ್ತಿದೆ. ಕೇಳಿದರೆ ಪಕ್ಷದ ಕಡೆಯಿಂದ ಕೊರೊನಾ ಕಡೆಗೆ ಬೆರಳು ತೋರಿಸಲಾಗುತ್ತದೆ. ಕೇವಲ ಪತ್ರಿಕಾ ಹೇಳಿಕೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ನೂತನ ಸಚಿವೆಗೆ ಅಭಿನಂದನೆ ಹೇಳಿದೆ.

ವಾಸ್ತವದಲ್ಲಿ ಇದೇ ಕೊರೊನಾ ಸಂದರ್ಭದಲ್ಲೇ ಈಶಾನ್ಯ ರಾಜ್ಯದಲ್ಲಿ  ಒಂದು ಸೀಟು ಗೆದ್ದರೂ ಬಿಜೆಪಿ ಮಂಗಳೂರು, ಉಡುಪಿಯಲ್ಲಿ ವಿಜಯೋತ್ಸವ ಆಚರಿಸುತ್ತಿತ್ತು. ಹಾಗಾದರೆ ಶೋಭಾ ಕರಂದ್ಲಾಜೆ ವಿಷಯದಲ್ಲಿ ಬಿಜೆಪಿ ಮೌನ ವಹಿಸಿರುವುದಕ್ಕೆ ಕಾರಣ ಏನು?

ಕಾರಣವೂ ಇದೆ. ಶೋಭಾ ಕರಂದ್ಲಾಜೆ ಸಂಸದೆಯಾಗಿದ್ದಾಗಲೇ ಜನಸಾಮಾನ್ಯರ ಬಿಡಿ, ಪಕ್ಷದ ನಾಯಕರ ಕೈಗೆ ಸಿಗುತ್ತಿರಲಿಲ್ಲ ಎಂಬ ಅಪವಾದ ಇತ್ತು. ಸಂಸದೆ ದಿಲ್ಲಿ, ಬೆಂಗಳೂರಿನಲ್ಲೇ ಕಾಲ ಕಳೆಯುತ್ತಿದ್ದರು. ಕೇವಲ ಟ್ವೀಟ್ ಗಷ್ಟೇ ಸೀಮಿತವಾಗಿದ್ದರು ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜನತೆ ಹೇಳುತ್ತಾರೆ. ಸಚಿವೆಯಾದ ತಕ್ಷಣ ಕರಂದ್ಲಾಜೆ ಅವರು ಟ್ವೀಟ್ ಡಿಲಿಟ್ ಮಾಡಿರುವುದನ್ನು ಕಾಣುವಾಗ ಮತದಾರರ ಆರೋಪದಲ್ಲಿಯೂ ವಾಸ್ತವಾಂಶವಿದೆ ಎನ್ನುವುದು ಸ್ಪಷ್ಟವಾಗುತ್ತದೆ.ಸಾಮಾನ್ಯವಾಗಿ ಉಡುಪಿಯ ಮತದಾರರು ತಮ್ಮ ಅಗತ್ಯತೆಗೆ ಸಂಸದೆಗೆ ಕರೆ ಮಾಡಿದರೆ ತಾನು ಚಿಕ್ಕಮಗಳೂರಿನಲ್ಲಿದ್ದೇನೆ, ಹಾಗೆ ಚಿಕ್ಕಮಗಳೂರಿನವರು ಕರೆ ಮಾಡಿದರೆ ತಾನು ಉಡುಪಿಯಲ್ಲಿದ್ದೇನೆ ಎಂದು ಶೋಭಾ ತಪ್ಪಿಸಿಕೊಳ್ಳುತ್ತಿದ್ದರು ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಾರೆ. ಸಂಸದೆ ಜನರಿಗೆ ಸುಲಭದಲ್ಲಿ ಲಭ್ಯವಾಗದಿರುವ ಬಗ್ಗೆ ಮತದಾರರಲ್ಲಿ ಮಾತ್ರವಲ್ಲದೆ ಪಕ್ಷದ ಸ್ಥಳೀಯ ನಾಯಕರಲ್ಲೂ ಅಸಮಾಧಾನವಿದೆ.

ಶೋಭಾ ಕರಂದ್ಲಾಜೆಗೆ ಈಗ  ಕೇಂದ್ರದಲ್ಲಿ ಖಾತೆ ಸಿಕ್ಕಿದೆ. ಕಳೆದ ಚುನಾವಣೆಯಲ್ಲಿ ಅವರು ಅತೀ ಹೆಚ್ಚು ಮತಗಳ ಅಂತರದಿಂದ ಸಂಸತ್ತಿಗೆ ಆಯ್ಕೆಗೊಂಡಿದ್ದರು. ಇದೆಲ್ಲ ಏನೇ ಇದ್ದರೂ ಸ್ವಕ್ಷೇತ್ರದ ಜನರ ಮನಸ್ಸಿನಲ್ಲಿ ಮಾತ್ರ ಅಸಮಾಧಾನ ಮಡುಗಟ್ಟಿ ನಿಂತಿರುವುದು ಬಿಜೆಪಿ ಮೌನಕ್ಕೆ ಜಾರಲು ಪ್ರಮುಖ ಕಾರಣವಾಗಿದೆ.

ಕರಂದ್ಲಾಜೆ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಭಾರಿ ಅಂತರದಿಂದ ಸಂಸತ್ ಗೆ ಆಯ್ಕೆಗೊಳ್ಳಲು ಅವರ ವರ್ಚಸ್ಸು ಕಾರಣವಲ್ಲ. ಬದಲಿಗೆ ಪ್ರಧಾನಿ ಮೋದಿ ಅವರ ಜನಪ್ರಿಯತೆ ಹಾಗೂ ಹಿಂದುತ್ವದ ಅಲೆ ಆಗಿತ್ತು ಎನ್ನುವುದು ಕೂಡ ಗೋಡೆ ಬರಹದಷ್ಟೇ ಸ್ಪಷ್ಟ. ಶೋಭಾ ಬದಲಿಗೆ ಒಬ್ಬ ಗ್ರಾಪಂ ಸದಸ್ಯನನ್ನು ಚುನಾವಣೆಗೆ ನಿಲ್ಲಿಸುತ್ತಿದ್ದರೂ ಅಷ್ಟೇ ಮತಗಳ ಅಂತರದಲ್ಲಿ ಆತ ಗೆಲ್ಲುತ್ತಿದ್ದ. ಆದರೆ ಕರಂದ್ಲಾಜೆ ಅವರು ಗೆದ್ದ ಬಳಿಕ ಮತದಾರರ ಯಾವುದೇ ಕಷ್ಟ ಸುಖದಲ್ಲಿ  ಭಾಗಿಯಾಗಿಲ್ಲ ಎಂದು ಬಿಜೆಪಿ ಸ್ಥಳೀಯ ನಾಯಕರೊಬ್ಬರು ಹೇಳುತ್ತಾರೆ.

ಪುತ್ತೂರಿನ ಚಾರ್ವಾಕದ ಕರಂದ್ಲಾಜೆ  ಅವರು 2004ರಲ್ಲಿ ವಿಧಾನ ಪರಿಷತ್ ಗೆ ಆಯ್ಕೆಗೊಂಡರು. ನಂತರ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿ ಪ್ರಾತಿನಿಧ್ಯ ಪಡೆದಿದ್ದರು. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವೆಯಾಗಿ, ಇಂಧನ ಸಚಿವೆಯಾಗಿ ಸಾಕಷ್ಟು ಒಳ್ಳೆಯ ಕೆಲಸವನ್ನು ಕೂಡ ಅವರು ಮಾಡಿದ್ದಾರೆ. ಪಂಚಾಯಿತಿಗಳಿಗೆ ಪಿಡಿಒ ಆಯ್ಕೆ ಕರಂದ್ಲಾಜೆ  ಅವರ ಆಡಳಿತ ಕಾಲದಲ್ಲೇ ನಡೆಯಿತು. ವಿದ್ಯುತ್ ಇಲಾಖೆಯಲ್ಲಿಯೂ ಸಾಕಷ್ಟು ಸುಧಾರಣೆಗಳನ್ನು ತಂದರು. ಅಷ್ಟೇ ಅಲ್ಲದೆ ರಾಜ್ಯ ರಾಜಕಾರಣದಲ್ಲಿ ಪ್ರಭಾವಿಯಾಗಿದ್ದರು. ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಕರಾವಳಿಗೆ ಅವರ ಕೊಡುಗೆ ಮಾತ್ರ ಹೇಳಿಕೊಳ್ಳುವಂತದ್ದು ಏನೂ ಇರಲಿಲ್ಲ.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಶೋಭಾ ಕರಂದ್ಲಾಜೆ ಅವರು ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಸ್ಥಳಾಂತರಗೊಂಡರು. 2014ರ ಸಂಸತ್ ಚುನಾವಣೆಯಲ್ಲಿ ಅವರು ಉಡುಪಿ- ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದರು. ಆದರೆ ಗೆದ್ದ ಬಳಿಕ ಅವರು ಕ್ಷೇತ್ರಕ್ಕೆ ಕಾಲಿಟ್ಟದ್ದು ಬಹಳ ಕಡಿಮೆ ಎಂದು ಮತದಾರರು ನೆನಪಿಸಿಕೊಳ್ಳುತ್ತಾರೆ. ಪರ- ವಿರೋಧದ ನಡುವೆ 2019ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಅವರನ್ನೇ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು. ಎರಡನೇ ಬಾರಿ ಅವಕಾಶ ನೀಡುವ ಬಗ್ಗೆ ಪಕ್ಷದಲ್ಲೇ ಅಪಸ್ವರ ಕೇಳಿ ಬಂದರೂ ಅನಿವಾರ್ಯವಾಗಿ ಒಪ್ಪಿಕೊಳ್ಳುವ ಪರಿಸ್ಥಿತಿ ಉದ್ಭವಿಸಿತ್ತು. ಮೋದಿ ಆಲೆಯಲ್ಲಿ ಕರಂದ್ಲಾಜೆ ಅವರು ಮತ್ತೆ ನಿರಾಯಾಸವಾಗಿ ಸಂಸತ್ ಮೆಟ್ಟಿಲೇರಿದರು. ಮುಂದಿನದ್ದು ಚರಿತ್ರೆ. ಇದೀಗ ಕೇಂದ್ರದಲ್ಲಿ ಅವರು ಸಚಿವೆ, ಕರಾವಳಿಯಲ್ಲಿ ಮಾತ್ರ ನೀರವ ಮೌನ.

ಇತ್ತೀಚಿನ ಸುದ್ದಿ

ಜಾಹೀರಾತು