10:40 AM Friday19 - April 2024
ಬ್ರೇಕಿಂಗ್ ನ್ಯೂಸ್
ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ… ಕಾರು ಬಿಟ್ಟು ಆಟೋ ಏರಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ: ಗಮನ…

ಇತ್ತೀಚಿನ ಸುದ್ದಿ

ಶ್ರಮ ದರ್ಶನ ಮೀಮಾಂಸೆಯ ಮೇರು ಕವಿ ಡಾ. ಸಿದ್ಧಲಿಂಗಯ್ಯ

13/06/2021, 12:02

ಡಾ ಸುಬ್ರಹ್ಮಣ್ಯ ಸಿ ಕುಂದೂರು
info.reporterkarnataka.com

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ದಲಿತ ಕವಿ ಎಂದು ಕರೆಸಿಕೊಂಡು, ಸಾಮಾಜಿಕ ಹೋರಾಟದ ಮೂಲಕ ಜನರ ಮನಸಿನಲ್ಲಿ ನೆಲೆನಿಂತ ಕವಿ ಸಿದ್ಧಲಿಂಗಯ್ಯ. ಅವರು ಬದುಕಿ ಬರೆಹ ಮಾಡಿದ್ದು ಶ್ರಮ ಪರಂಪರೆಯ ಮೂಲಸತ್ವವನ್ನು. ಬಡತನದಲ್ಲಿ ಬದುಕಿ, ಸಾಮಾಜಿಕ ಅಸಮಾನತೆಯ ಸ್ಪರ್ಶಕ್ಕೆ ಸಿಕ್ಕಿ ಅನೇಕ ಅಪಮಾನಕ್ಕೆ ತನ್ನನ್ನು ಒಗ್ಗಿಸಿಕೊಂಡು ಬೆಳೆದ ಕಾರಣ ಇವರ ಬರೆಹವು ತುಳಿತಕ್ಕೆ ಒಳಗಾದ, ಹಸಿವಿಗೆ ಬಲಿಯಾದ, ದುಡಿಮೆಯಲ್ಲಿ ದೇಹದ ಕಸುವನ್ನು ಕಳೆದುಕೊಂಡ ಹೆಣ್ಣು, ಗಂಡುಗಳ ಸಂವೇದನೆಯು ಆಪ್ತವಾಗಿ ಕಾಣಿಸುತ್ತದೆ. ಕೇರಿಯಲ್ಲಿ ಬಾಲ್ಯವನ್ನು ಕಳೆದು ಊರಿನ ಸಾಂಸ್ಕೃತಿಕ ಪಡಿಯಚ್ಚುಗಳ ಪ್ರಭುತ್ವದ ಪ್ರತಿರೋಧಕ್ಕೆ ಒಳಗಾಗುವ ಮೂಲಕ ತನ್ನ ಜನರ ಅಸ್ಮಿತೆಯನ್ನು ಲೋಕದ ವಾಸ್ತವತೆಗೆ ಮುಖಾಮುಖಿಯಾಗಿಸಿ ಕ್ರಾಂತಿಯ ತಾತ್ವಿಕತೆಯನ್ನು ದಟ್ಟವಾಗಿ ಪ್ರತಿಪಾದಿಸಿದ ಕವಿ ಸಿದ್ಧಲಿಂಗಯ್ಯ. ಹನ್ನೆರಡನೇ ಶತಮಾನದ ವಚನ ಸಾಹಿತ್ಯವು ಶ್ರಮವನ್ನು ಕಾಯಕ ಎಂಬ ಪರಿಕಲ್ಪನೆಯಾಗಿಸಿತು. ಸಾಮಾನ್ಯ ಜನರು ಕಾಯಕದ ನೆಲೆಯಲ್ಲಿ ದೇವರನ್ನು ಅನುಸಂಧಾನಕ್ಕೆ ಆಗು ಮಾಡಿಕೊಳ್ಳಬಹುದೆಂಬ ಭಕ್ತಿಯ ತಾತ್ವಿಕತೆಯನ್ನು ಬಹುಸ್ತರವಾಗಿಸಿತ್ತು. ಈ ಕಾಲಮಾನದಲ್ಲಿ ಬಹುತೇಕ ದುಡಿಯುವ ಜನರು ಶರಣರಾದರು. ಶ್ರಮ ಭಕ್ತಿಯ ಘಮಲನ್ನು ಪಡೆದುಕೊಂಡಿತು. ನಂತರ ದಿನಮಾನದಲ್ಲಿ ಗಾಂಧೀಜಿ ದಲಿತ ವರ್ಗವನ್ನು ಹರಿಜನ ಎಂದು ಕರೆಯುವ ನೆಲೆಯಲ್ಲಿ ದೇಹಶುದ್ಧಿ, ಆತ್ಮಶುದ್ಧಿಗೆ ಆಧ್ಯತೆ ನೀಡುವ ಮೂಲಕ ಮೂಢನಂಬಿಕೆಯಿAದ ಜೀವನ ಮೀಮಾಂಸೆಯನ್ನು ಮೀರುವುದನ್ನು ಪ್ರತಿಪಾದಿಸಿದರು. ಎಪ್ಪತ್ತರ ದಶಕದಲ್ಲಿ ಕನ್ನಡ ಸಾಹಿತ್ಯದಲ್ಲಿ ಹುಟ್ಟಿಕೊಂಡ ದಲಿತ ಚಳುವಳಿಯು ದುಡಿಯುವ ವರ್ಗಗಳ ಶ್ರಮವನ್ನು ಕೇಂದ್ರವಾಗಿ ಬಳಸಿಕೊಂಡಿತು. ಸಾಮಾಜಿಕ ರೂಪವನ್ನು ಶೋಷಕ ಮತ್ತು ಶೋಷಿತ ಎಂಬ ನೆಲೆಯಲ್ಲಿ ಅಭಿವ್ಯಕ್ತಿಸಿತು. ಸಿದ್ಧಲಿಂಗಯ್ಯ ದಲಿತ ಚಳುವಳಿಯ ಧಾರೆಯಲ್ಲಿ ಕಾವ್ಯವನ್ನು ಕಟ್ಟಿದರೂ. ಕಾವ್ಯದ ತಾತ್ವಿಕೆಯು ಈ ನೆಲದ ಸತ್ವವನ್ನು ಅಪ್ಪಿಕೊಂಡಿರುವ ಶ್ರಮ ಸಮುದಾಯದ ಹಸಿವು, ದುಡಿಮೆ, ಜೀವ ಸಂಬAಧ, ದೇಹ ಸಂಬAಧ, ಸಾವು, ನೋವು, ಹೋರಾಟ, ಬೆವರು, ಬಟ್ಟೆ, ದಬ್ಬಾಳಿಕೆಯನ್ನು ಒಳಗೊಳ್ಳುವ ಮೂಲಕ ಕ್ರಾಂತಿಯ ಕಾವನ್ನು ಆಪ್ತವಾಗಿ ಒಗ್ಗಿಸಿಕೊಂಡಿದೆ.
ಕವಿಯು ದುಡಿಯುವ ಸಮುದಾಯದ ನೋವುಗಳನ್ನು ತನ್ನ ನೋವೆಂದು ಗ್ರಹಿಸುವ ನೆಲೆಯಲ್ಲಿ ಅವರನ್ನೆಲ್ಲ ತನ್ನ ಜನರೆಂದು ಭಾವಿಸುತ್ತಾರೆ. ಮತ್ತು ಶ್ರಮ ಸಂಸ್ಕೃತಿಯ ಶ್ರೇಣಿಯನ್ನು ಪಲ್ಲಟಿಸುವ ನೆಲೆಯಿಂದ ಸಮಾನತೆಯ ದಾರಿಗೆ ಬೆಳಕು ಹಿಡಿಯುತ್ತಾರೆ. ಶ್ರಮವೇ ಭಾವನೆಯ ರೂಪಗಳಾಗಿ ಕಾವ್ಯದಲ್ಲಿ ಉಸಿರಾಡುತ್ತದೆ ಮತ್ತು ದುಡಿಯುವ ವರ್ಗಗಳ ಸಂವೇದನೆಗಳು ಮೌಲ್ಯವನ್ನು ಪಡೆಯುವ ಮೂಲಕ ಸಾಂಪ್ರದಾಯಿಕ ಪ್ರಭುತ್ವ ವ್ಯವಸ್ಥೆಯಲ್ಲಿ ಗೆಲುವು ಪಡೆಯುವ ತಾತ್ವಿಕತೆ ಕವಿಯೊಬ್ಬನ ಲೋಕದೃಷ್ಟಿಯಾಗಿದೆ.
ಕಾಲ್ಗೆ ಮೆಟ್ಟುಗಲಿಲ್ಲ ಕೈಗಳಿಗೆ ಬಳೆಯಿಲ್ಲ
ಮೈಯೆಲ್ಲ ಬೆವರೆದ್ದು ನಾರುತ್ತಿತ್ತು
ಬವಣೆಯಲಿ ಬೆಂದತನು ಕೊಳೆಯ ಗೆಳೆತನ ಮಾಡಿ
ಮೂಳೆಯುಳಿದಿವೆ ಎಂದು ಸಾರುತಿತ್ತು.
ದೇಹ ಮತ್ತು ಮನಸ್ಸಿನ ಉನ್ನತಿಕೆಯ ನೆಲೆಯಲ್ಲಿ ಚಲನೆಗೊಳ್ಳುವ ಶ್ರಮವು ಮನುಷ್ಯನ ಸಾಂಸ್ಕೃತಿ ರಚನೆಗಳನ್ನು ಬಹುಸ್ತರವಾಗಿಸುತ್ತದೆ. ಸಾಮಾಜಿಕವಾಗಿ, ಆರ್ಥಿಕವಾಗಿ ವ್ಯಕ್ತಿಯು ಬಲವಾಗುತ್ತಾನೆ ಎನ್ನುವ ಲೋಕಸತ್ಯವು ದುಡಿಯುವ ವರ್ಗಗಳಿಂದ ಬಹುದೂರಕ್ಕೆ ಪಲ್ಲಟವಾದ ರಾಜಕಾರಣವನ್ನು ಕವಿತೆ ಅನುಸಂಧಾನಕ್ಕೆ ಒಳಗು ಮಾಡುವ ಮೂಲಕ ದುಡಿಮೆಯನ್ನು ಮೈಮೇಲೆ ಹೊತ್ತುಕೊಂಡವನ (ಶ್ರಮಿಕ) ನೈಜರೂಪವನ್ನು ಕಾಣಿಸುತ್ತದೆ. ದುಡಿಮೆ ಬಡತನಕ್ಕೆ ದಾರಿಯಾಗಿದೆ ಮತ್ತು ದೇಹದ ಕಸುವನ್ನೆಲ್ಲ ಬಯಲಾಗಿಸಿದೆ ಎಂಬ ನಿರೂಪಣೆಯ ಹಿಂದೆ ದುಡಿಮೆಗೆ ಒಳಗಾಗುತ್ತಿರುವ ಸಮುದಾಯದ ಚರಿತ್ರೆಯಿದೆ. ಜೀತ ವ್ಯವಸ್ಥೆಗೆ ಬಲಿಯಾಗುತ್ತಿರುವ ಜೀವಗಳ ಜೀವನವನ್ನು ಅಭಿವ್ಯಕ್ತಿಸುವ ಕವಿ. ದುಡಿಮೆಗೆ ಅಂಟಿಕೊAಡ ಜೀವಗಳ ಮೌಲ್ಯವನ್ನು ಲೋಕದ ಮುಂದೆ ಮೌಲ್ಯಮಾಪನಕ್ಕೆ ಆಗು ಮಾಡುತ್ತಾರೆ. ಶ್ರಮ ಸಾಮಾನ್ಯರನ್ನು ಬಂಧನವಾಗಿಸಿ, ಶೋಷಣೆಗೆ ಗುರಿಮಾಡಿದೆ ಎಂಬ ಬಿಗುವಾದ ನಿಲುವು ಕವಿತೆಯಲ್ಲಿ ಕಾಣುತ್ತದೆ.

ಇವರು ಬಾಯಿ ಬಿಟ್ಟೊಡನೆ
ಅವರ ಬಾಯಿ ಕಟ್ಟಿತು
ಇವರ ಕಂಠ ಕೇಳಿದೊಡನೆ
ಅವರ ದನಿ ಇಂಗಿತು.

ಹೋರಾಟದ ಸತ್ವವನ್ನು ಮೈಗೂಡಿಸಿಕೊಂಡಿದ್ದ ಸಿದ್ಧಲಿಂಗಯ್ಯನವರು ತನ್ನ ಬರೆಹದಲ್ಲೂ ಅದನ್ನು ಕಾಪಿಟ್ಟುಕೊಂಡಿದ್ದು ವಿಶೇಷ. ದುಡಿಯುವ ಜನರು ಸಾವಿರಾರು ವರ್ಷಗಳಿಂದ ಬಹುಬಗೆಯ ಹಿಂಸೆ ಮತ್ತು ಶೋಷಣೆಗೆ ಒಳಗಾಗುತ್ತ ಬಂದರು. ಈ ನಡುವೆ ಈ ಶೋಷಿತರ ಧ್ವನಿಯನ್ನು ಸಾಂಸ್ಕೃತಿಕ ಪ್ರಜ್ಞೆಯ ಭಾಗವಾಗಿ ಶೋಧಿಸುವ ಮೂಲಕ ಸಮಾನತೆಯ ರಚನೆಗೆ ಕ್ರಾಂತಿಯ ತಾತ್ವಿಕತೆಯನ್ನು ರೂಪಿಸಿದ್ದನ್ನು ಕಾಣಬಹುದು. ಈ ಕವಿತೆಯ ಅಭಿವ್ಯಕ್ತಿಯು “ಅವರು ಮತ್ತು ಇವರು” ಎನ್ನುವ ನಿರೂಪಣೆಯನ್ನು ಕಾಣಿಸುತ್ತದೆ. ದುಡಿಯುವ ವರ್ಗಗಳ ಗೆಲುವನ್ನು ಅವರ ಶಾರೀಕ ಶಕ್ತಿಯ ನೆಲೆಯಲ್ಲಿ ಅನುಸಂಧಾನಕ್ಕೆ ಒಗ್ಗಿಸುತ್ತದೆ. ಬುದ್ಧ, ಬಸವ, ಗಾಂಧಿಯAತಹ ಚಿಂತಕರು ಕೆಳ ಸಮುದಾಯದ ಸುಧಾರಣೆಯನ್ನು ಸಾಮಾಜಿಕ ನೆಲೆಗೆ ಅಂಟಿಸಿಕೊAಡು ಸೈದ್ಧಾಂತಿಕರಿಸಿದ್ದಾರೆ ಆದರೆ ಇದರ ಫಲಿತವು ದುಡಿಯುವ ವರ್ಗಗಳನ್ನು ಉನ್ನತೀಕರಿಸಲು ಸಾಧ್ಯವಾಗಲಿಲ್ಲ. ಸಿದ್ಧಲಿಂಗಯ್ಯ ಅವರ ದುಡಿಮೆ ಮತ್ತು ದುಡಿಯುವ ಜನರ ಸುಧಾರಣೆಯ ದೃಷ್ಟಿಯು ವ್ಯವಸ್ಥೆಯ ಪ್ರಭುತ್ವವನ್ನು ಪಲ್ಲಟಿಸುವುದಾಗಿದೆ. “ದಲಿತರು ಬರುವರು ದಾರಿ ಬಿಡಿ’ ಎನ್ನುವ ಧೋರಣೆಯು ದಲಿತರಿಗೆ ಲೋಕದ ಎಲ್ಲ ವಲಯದ ಅಧೀಕಾರನ್ನು ಪಡೆಯುವಂತೆ ಮಾಡುವುದು ಮತ್ತು ಶತಶತಮಾನಗಳಿಂದ ಅಧಿಕಾರವನ್ನು ಅನುಭವಿಸುತ್ತ ಬಂದಿರುವ ವರ್ಗಗಳನ್ನು ತನ್ನ ಅಧೀನವಾಗಿಸಿಕೊಂಡು ಬದುಕುವ ನಿಲುವು ಕಾಣಿಸುತ್ತದೆ. ಇಲ್ಲಿ ಅಧೀಕಾರದ ಒಗ್ಗುವಿಕೆಗೆ ಕವಿತೆಯು ತುಡಿಯುವುದಿಲ್ಲ ಬದಲಿಗೆ ಶೋಷಕ ವರ್ಗಕ್ಕೆ ತನ್ನವರ ನೋವು, ಸಂಕಟಗಳನ್ನು ಅರಿವಿನ ಪ್ರಜ್ಞೆಯಾಗಿಸುವುದಕ್ಕೆ ತುಡಿಯುತ್ತದೆ.

ಅವರ ತೋಟದ ತೆಂಗಿನಲ್ಲಿ
ನಮ್ಮ ರಕ್ತದ ಎಳನೀರು
ಅವರ ಅಮಲಿನ ಗುಂಗಿನಲ್ಲಿ
ಕೂಲಿ ಹೆಣ್ಣಿನ ಕಣ್ಣಿರು

ಶ್ರಮವನ್ನು ಜೀವಪರವಾಗಿ ನೋಡುವ ಸಿದ್ಧಲಿಂಗಯ್ಯ ದುಡಿಯುವ ಜನರ ಶೋಷಣೆಯನ್ನು ನೈಸರ್ಗಿಕ ತತ್ವದ ನೆಲೆಯಲ್ಲಿ ವಿವೇಚಿಸುತ್ತಾರೆ. ಮಣ್ಣಿನ ಸತ್ವಸಾರವನ್ನು ಬಳಸಿಕೊಂಡು ಬೆಳೆಯು ಮರವು ತನ್ನ ಫಲವನ್ನು ಮಣ್ಣಿಗೆ ನೀಡುತ್ತದೆ, ಮರದ ರಚನೆಯ ರೂಪ ಹಾಗೂ ಅದರ ಬೆಳವಣಿಗೆಯ ದರವು ಮಣ್ಣಿನ ಫಲವಂತಿಕೆಯನ್ನು ಅವಲಂಭಿಸಿರುತ್ತದೆ. ಇಲ್ಲಿ ಮರ ಮತ್ತು ಮಣ್ಣಿನ ನಡುವೆ ತಾಯಿ ಮಗುವಿನ ಸಂಬAಧವಿದೆ. ಸಾಮಾಜಿಕ ವ್ಯವಸ್ಥೆಯ ಒಳಗೆ ಜೀತಕ್ಕೆ ಒಳಗಾಗುವ ಬಹುತೇಕ ಜನರು ತಮ್ಮ ದುಡಿಮೆಯನ್ನು, ದೇಹವನ್ನು ಧಣಿಯ ಸುಖಕ್ಕೆ ಅರ್ಪಿಸುವ ಮೂಲಕ ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುತ್ತಾರೆ. ಧಣಿ ಮಾತ್ರ ದುಡಿಯುವವನ ಶ್ರಮವನ್ನು ತನ್ನ ಹಕ್ಕೆಂದು ಭಾವಿಸುವ ಮೂಲಕ ಮಾಲೀಕ ಎನ್ನಿಸಿಕೊಳ್ಳುವ ಮಾದರಿಯ ಕ್ರೂರತೆಯನ್ನು ಕವಿತೆ ಭಾವನ್ಮಾಕವಾಗಿ ಧ್ವನಿಸುತ್ತದೆ. ಜೇಡರ ದಾಸಿಮಯ್ಯನು ಆತನ ಕಾಲಮಾನದ ರಾಜಪ್ರಭುತ್ವವು ತನ್ನ ಹಕ್ಕು ಮತ್ತು ತಾನೇ ದೇವರು ಎಂದು ಭಾವಿಸಿಕೊಂಡಿದ್ದ ನೆಲೆಯನ್ನು “ಸುಳಿಯುವ ಗಾಳಿ ಸುಳಿಯದಿದ್ದಡೆ, ಬರುವ ಮಳೆ ಬಾರದಿದ್ದಡೆ ಅವರೇತರಲ್ಲಿ ನೀಡುವರಯ್ಯ” ಎಂಬ ನಿರ್ವಚನದ ಮೂಲಕ ಒಡೆಯುತ್ತಾನೆ. ಇಲ್ಲಿಯೂ ಕವಿತೆ ಎಳನೀರಿನ ಸತ್ವ ಜೀತನೊಬ್ಬನ ರಕ್ತದ ಮೊತ್ತ ಎಂಬ ಲೋಕಸತ್ಯವನ್ನು ಕೇಂದ್ರೀಕರಿಸುವುದರಿAದ ತನ್ನ ಶಕ್ತಿಯನ್ನು ಉಳಿಸಿಕೊಂಡಿದೆ.

ಗುಡಿಸಲು ಬೀಳುವಾಗ ಬಂಗಲೆ ನಗುತ್ತಿದ್ದೊ
ನಮ್ಮೂರ ಮೋರಿ ಹೆಣತುಂಬಿ / ಹರಿಯಿತು
ರಕ್ತದ ಕೋಡಿ ಊರೆಲ್ಲ

ಶ್ರಮ ಸಂಸ್ಕೃತಿಯನ್ನು ಅಪ್ಪಿಕೊಂಡು ಬದುಕುವ ಜನರ ಸಂವೇದನೆಯನ್ನು ಹಾಗೂ ದುಡಿಯುವ ಜನರ ಕುರಿತು ಲೋಕದ ನಿಲುವುಗಳನ್ನು ಗ್ರಹಿಸುವ ಕವಿ. ಗುಡಿಸಲು ಮತ್ತು ಬಂಗಲೆಯನ್ನು ರೂಪಕವಾಗಿ ನೋಡುವ ಕ್ರಮವಿದೆ. ಇಲ್ಲಿ ಉಳ್ಳವರೂ ಇಲ್ಲದವರ ಮೇಲೆ ನಡೆಸುವ ಬಹುಬಗೆಯ ಕೃತ್ಯದ ಫಲಿತವನ್ನು ಕವಿತೆ ಕಟುವಾಗಿ ಅಭಿವ್ಯಕ್ತಿಸುತ್ತದೆ. ನಗು ಇಲ್ಲಿ ಶೋಷಣೆಯ ಮಾಪನವಾಗಿ ಕಾಣಿಸುತ್ತದೆ. ಲೋಕದಲ್ಲಿ ಬಂಗಲೆಯನ್ನು, ರಸ್ತೆಯನ್ನು, ಬಹು ಬಗೆಯ ಭೌತರೂಪಗಳನ್ನು ಕಟ್ಟಿದ ಶ್ರಮಿಕನ ವಾಸವು ಗುಡಿಸಲಾಗಿ ಬಡತನವನ್ನು ಹೊದ್ದು ಮಲಗುವ ಸ್ಥಿತಿ ಮತ್ತು ಅವನ ಮೇಲೆ ನಡೆಯುವ ಸಾಂಸ್ಕೃತಿಕ ದಬ್ಬಾಳಿಕೆಯನ್ನು ಜಾಣ್ಮೆಯಿಂದ ಅರಿವಿನ ಭಾಗವಾಗಿಸಿದ ಕವಿ ಸಿದ್ಧಲಿಂಗಯ್ಯ. ತನ್ನ ಜನರು ಎಂಬ ಅಭಿವ್ಯಕ್ತಿಯ ನೆಲೆಯನ್ನು ಸತ್ವವಾಗಿಸಿಕೊಂಡು ದುಡಿಮೆಯನ್ನು ದರ್ಶನ ಕ್ರಾಂತಿಯ ಚೌಕಟ್ಟಿನಲ್ಲಿ ವಿವೇಚಿಸಿದ್ದು ಕನ್ನಡ ಸಾಹಿತ್ಯದ ಹೆಚ್ಚುಗಾರಿಕೆಯಾಗಿದೆ.
ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆಯ ಮೂಲಕ ದಲಿತ ಧ್ವನಿಯನ್ನು ಗಟ್ಟಿಯಾಗಿ ಬಿತ್ತಿದ ಕವಿ ಸಿದ್ಧಲಿಂಗಯ್ಯ. ಬರೆಹ, ಹೋರಾಟ ಮತ್ತು ರಾಜಕೀಯ ಚಟುವಟಿಕೆಯಿಂದ ಕನ್ನಡ ಸಾಹಿತ್ಯ ಪರಂಪರೆಗೆ ಹೊಸ ದಿಕ್ಕನ್ನು ನೀಡುವ ಮೂಲಕ ಕಾವ್ಯಕ್ಕೆ ಬಂಡಾಯದ ಮಾದರಿಯನ್ನು ಒದಗಿಸಿ ಜನಮಾನಸದಲ್ಲಿ ಉಳಿದ ಕವಿಗೆ ನೂರೊಂದು ನಮನ.

ಇತ್ತೀಚಿನ ಸುದ್ದಿ

ಜಾಹೀರಾತು