4:53 PM Thursday24 - June 2021
ಬ್ರೇಕಿಂಗ್ ನ್ಯೂಸ್
ಚಲನಚಿತ್ರ, ಕಿರುತೆರೆ ರಂಗದ ಕಲಾವಿದರಿಗೆ, ಕಾರ್ಮಿಕರಿಗೆ 3 ಸಾವಿರ ರೂ. ಆರ್ಥಿಕ ನೆರವು  ಪುಂಜಾಲಕಟ್ಟೆ; ಅಪ್ರಾಪ್ತ ವಯಸ್ಸಿನ ಪುತ್ರನನ್ನು ಕತ್ತಿಯಿಂದ ಕಡಿದು ಕೊಂದ ತಂದೆ; ಕೊನೆಗೆ ತಾನೂ… ಅನ್ ಲಾಕ್: ಮಕ್ಕಳ ಜತೆ ಮಂಗಳೂರು ಸುತ್ತಿದ ಹೆತ್ತವರು: ಮಧ್ಯಾಹ್ನ 2.45 ಕಳೆದರೂ ತೆರವಾಗದ… ಮುಂಬರುವ ವಿಧಾನಸಭೆ ಚುನಾವಣೆ:ಕಾಂಗ್ರೆಸ್ ಗೆ ಕಾಯಕಲ್ಪ ನೀಡಲು ಡಿಕೆಶಿ ಚಿಂತನೆ; ಜಿಲ್ಲಾಧ್ಯಕ್ಷರುಗಳ ಬದಲಾವಣೆ? ಬಸವಣ್ಣನ ನಾಡು ವಿಜಯಪುರದಲ್ಲಿ ಮರ್ಯಾದಾ ಹತ್ಯೆ: ತಂದೆಯಿಂದಲೇ ಅಪ್ರಾಪ್ತ ಪುತ್ರಿ ಮತ್ತು ಆಕೆಯ… ಸೆಮಿ ಲಾಕ್ ಡೌನ್: ಮಂಗಳೂರಿನಲ್ಲಿ ಹೆಚ್ಚಿದ ವಾಹನ ದಟ್ಟಣೆ; ಸ್ವತಃ ಫೀಲ್ಡಿಗಿಳಿದ ಪೊಲೀಸ್… ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಸಹಾಯಕತೆ: ಖಾಸಗಿ ಶಾಲೆಗಳ ಫೀಸ್ ಮಾಫಿಯಾಕ್ಕೆ ಕುಮ್ಮಕ್ಕು? ಸುಕ್ಷೇತ್ರ ಮೈಲಾರ ಲಿಂಗೇಶ್ವರದಲ್ಲಿ ಭವಿಷ್ಯ ಹೇಳುವ ಕಾರ್ಣಿಕದ ಗೊರವಯ್ಯ ಮಾಲತೇಶಪ್ಪ ಇನ್ನಿಲ್ಲ ದ.ಕ.: ವಿದ್ಯುತ್ ದರ ಏರಿಕೆ ವಿರುದ್ಧ ಚಿಮಿನಿ, ದೊಂದಿ, ಲಾಟೀನು ಪ್ರದರ್ಶಿಸಿ ಪ್ರತಿಭಟನೆ. ಬ್ರಹ್ಮಾವರ ಸಮೀಪದ ಕ್ಯಾಶ್ಯು ಇಂಡಸ್ಟ್ರೀಸ್ ಗೆ ಗುಜರಾತ್ ವ್ಯಾಪಾರಿಯಿಂದ 40 ಲಕ್ಷ ರೂ.…

ಇತ್ತೀಚಿನ ಸುದ್ದಿ

ಉಸ್ತುವಾರಿ ಸಚಿವರಿಗೆ ಜನರ ಸಂಕಷ್ಟಗಳ ಅರಿವಿಲ್ಲ: ಲಾಕ್ ಡೌನ್ ವಿಸ್ತರಣೆಗೆ ಡಿವೈಎಫ್ಐ ಟೀಕೆ

10/06/2021, 21:11

ಮಂಗಳೂರು(reporterkarnataka news): ಕೊರೊನಾ ಸೋಂಕು ಹರಡುವಿಕೆಯನ್ನು ಇನ್ನಷ್ಟು ನಿಯಂತ್ರಣಕ್ಕೆ ತರಲು ದ ಕ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಸುವ ಉಸ್ತುವಾರಿ ಸಚಿವರ ಪ್ರಸ್ತಾಪ ವಾಸ್ತವದ ಅರಿವಿಲ್ಲದ, ಜನವಿರೋಧಿ ಧೋರಣೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಈಗಾಗಲೇ ಗಂಭೀರಾವಸ್ಥೆಗೆ ತಲುಪಿರುವ ಜಿಲ್ಲೆಯ ಜನರ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಲಿದೆ. ಯಾವುದೇ ಪರಿಹಾರ ಪ್ಯಾಕೇಜ್ ಗಳಿಲ್ಲದೆ ಲಾಕ್ ಡೌನ್ ಮುಂದುವರಿಕೆ ಸಂಪಾದನೆ ಇಲ್ಲದೆ ಕೈ ಖಾಲಿ ಮಾಡಿ ಕೂತಿರುವ ಜನ ವಿಭಾಗದಲ್ಲಿ ಖಿನ್ನತೆ ಹಾಗೂ ಸಾವು ನೋವುಗಳಿಗೆ ಕಾರಣವಾಗಲಿದೆ. ಸಚಿವ ಕೋಟಾ ಕೇವಲ ಹೇಳಿಕೆಗಳಿಗೆ ಸೀಮಿತರಾಗದೆ ವಸ್ತು ಸ್ಥಿತಿ ಅರಿತು ತಮ್ಮ ಅವಾಸ್ತವಿಕ ನಿಲುವುಗಳನ್ನು ಬದಲಾಯಿಸಿಕೊಳ್ಳಲಿ. ಅಗತ್ಯ ನಿರ್ಬಂಧಗಳೊಂದಿಗೆ ಲಾಕ್ ಡೌನ್ ತೆರವುಗೊಳಿಸಲು ಮುಂದಾಗಲಿ ಎಂದು ಅವರು ಆಗ್ರಹಿಸಿದ್ದಾರೆ.

ಈಗಾಗಲೆ ಎರಡು ತಿಂಗಳ ಕಾಲದ ಲಾಕ್ ಡೌನ್ ನಿಂದ ಕರಾವಳಿ ಜಿಲ್ಲೆಗಳು ತತ್ತರಿಸಿ ಹೋಗಿವೆ. ಹೆಚ್ಚಿನ  ಜನರು ದಿನಸಿ ಕೊಂಡುಕೊಳ್ಳಲೂ ಆಗದ ಸ್ಥಿತಿ ತಲುಪಿದ್ದಾರೆ. ಮನೆ ಬಾಡಿಗೆ, ಮುಂದಿನ ದಿನಗಳಲ್ಲಿ ಪಾವತಿಸಬೇಕಾದ ಮನೆ ತೆರಿಗೆ, ಶಾಲಾ ಫೀಸು, ವಿದ್ಯುತ್ ಬಿಲ್ ಗಳ ಬಾಕಿ ಅವರನ್ನು ನಿದ್ರೆಯಿಲ್ಲದ ರಾತ್ರಿಗಳಿಗೆ ದೂಡಿದೆ. ಜವಳಿ, ಪಾದರಕ್ಷೆ, ಶೃಂಗಾರ, ಆಹಾರ ಸಹಿತ ವಿವಿಧ ವ್ಯಾಪಾರಗಳಲ್ಲಿ  ಬ್ಯಾಂಕ್ ಸಾಲ, ಕೈ ಸಾಲ ಮಾಡಿ ಬಂಡವಾಳ ಹಾಕಿ ಈಗ ವ್ಯಾಪಾರ ಮಾಡಲಾಗದೆ ಕೈ ಸುಟ್ಟುಕೊಂಡು ಕೂತಿರುವ ಸಾವಿರಾರು ಜನರು ಬದುಕೇ ಮುಗಿದು ಹೋದಂತೆ ಕಂಗೆಟ್ಟಿದ್ದಾರೆ. ಬಸ್ಸು, ಟ್ಯಾಕ್ಸಿ ಸಹಿತ ಸಾರ್ವಜನಿಕ ಸಾರಿಗೆಯಲ್ಲಿ ತೊಡಗಿಸಿಕೊಂಡಿರುವ ಮಾಲೀಕರು, ನೌಕರರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತಾರು ಸಾವಿರ ಸಂಖ್ಯೆಯಲ್ಲಿ ಇದ್ದಾರೆ. ಇವರ್ಯಾರಿಗೂ ಯಾವುದೇ ಆದಾಯ, ಪರಿಹಾರ, ರಿಯಾಯಿತಿಗಳನ್ನು ಸರಕಾರ ಘೋಷಿಸಿಲ್ಲ. ಇಂತಹ ಜನ ವಿಭಾಗಗಳ ಸಮಸ್ಯೆ ಅಕ್ಕಿ, ಬೇಳೆ, ತರಕಾರಿ ಮಾತ್ರ ಅಲ್ಲ. ಇನ್ನಷ್ಟು ದಿನ ಈ ವಿಭಾಗಗಳ ದುಡಿಮೆ, ವ್ಯಾಪಾರಕ್ಕೆ ಲಾಕ್ ಡೌನ್ ಹೆಸರಿನಲ್ಲಿ ಜಿಲ್ಲಾಡಳಿತ ನಿಷೇಧ ಮುಂದುವರಿಸಿದರೆ ಮುಂದಕ್ಕೆ ಚೇತರಿಸಿಕೊಳ್ಳಲಾರದಷ್ಟು ಹೊಡೆತ ತಿನ್ನಲಿದ್ದಾರೆ.

ಹಾಗಾಗಿ ಈ ಯಾವ ಸಾಮಾಜಿಕ, ಆರ್ಥಿಕ ಬಿಕ್ಕಟ್ಟುಗಳ ಕುರಿತೂ ಅಧ್ಯಯನಗಳನ್ನು ನಡೆಸದೆ, ಈಗಾಗಲೆ ಇಳಿಕೆ ಪ್ರವೃತ್ತಿಯಲ್ಲಿರುವ ಸೋಂಕನ್ನು ನಿಯಂತ್ರಣಕ್ಕೆ ತರಲು ಬೇರೆ ಹಲವು ದಾರಿಗಳು ಇದ್ದರೂ ಅವುಗಳ ಕುರಿತು ಚರ್ಚಿಸದೆ, ರಾಜ್ಯ ಸರಕಾರದ ಮುಂದೆ ಜಿಲ್ಲೆಗೆ ಸೀಮಿತವಾಗಿ ಲಾಕ್ ಡೌನ್ ಮುಂದುವರಿಸಲು ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ ಮನವಿ ಮಾಡುವುದು ಅವರ ಘೋರ ವೈಫಲ್ಯ ಹಾಗೂ ರಾಜಕೀಯ ಉಡಾಫೆತನವನ್ನು ಎತ್ತಿ ತೋರಿಸುತ್ತದೆ.

ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಉಳಿದ ಜಿಲ್ಲೆಗೆ ಹೋಲಿಸಿದರೆ ಇನ್ನೂ ಹೆಚ್ಚಿರುವುದಕ್ಕೆ ಅಧಿಕಾರಿಗಳ ಜೊತೆಗೆ ತಂಡವಾಗಿ ನಿಂತು ಕಾರ್ಯಾಚರಣೆಗೆ ಇಳಿಯದ ಸಚಿವರ, ಜನಪ್ರತಿನಿಧಿಗಳ ನಿರಾಶಾದಾಯಕ ಪ್ರವೃತ್ತಿಯೂ ಪ್ರಧಾನ ಕಾರಣ. ಆಡಳಿತ ಪಕ್ಷದ ಬೆಂಬಲವುಳ್ಳ ಮಂಗಳೂರಿನ ಪ್ರಬಲ ಖಾಸಗಿ ಮೆಡಿಕಲ್ ಲಾಬಿ ಸರಕಾರದ ನಿಯಮಗಳನ್ನು ಸಾರ ಸಗಟಾಗಿ ಕಡೆಗಣಿಸಿ ಸೋಂಕಿತರಿಗೆ ಸರಕಾರಿ ಕೋಟಾ ಹಾಗು ದರದಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿ ತೀರಾ ದುಬಾರಿ ಬಿಲ್ ಗಳನ್ನು ನೀಡತೊಡಗಿದ್ದೇ ಸೋಂಕಿತರು ಆಸ್ಪತ್ರೆಗಳತ್ತ ಬರಲು ಭಯ ಪಡುವಂತಾಯಿತು. ಮನೆಗಳಲ್ಲೇ ಉಳಿದು ಸೋಂಕು ವ್ಯಾಪಕಗೊಳ್ಳಲು ಕಾರಣವಾಯಿತು.  ಅಂತಹ ಸಂದರ್ಭದಲ್ಲಿ  ಸರಕಾರಿ ಕೋಟಾದಲ್ಲಿ ಅಥವಾ ನಿಗದಿ ಪಡಿಸಿದ ದರದಲ್ಲಿ ಸೋಂಕಿತರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಜೊತೆಗೆ ಏಗಾಡುತ್ತಿದ್ದ ಜಿಲ್ಲಾಡಳಿತದ ಆಧಿಕಾರಿಗಳಿಗೆ ಉಸ್ತುವಾರಿ ಸಚಿವರ ಸಹಿತ ಜಿಲ್ಲೆಯ ಜನಪ್ರತಿನಿಧಿಗಳು ರಾಜಕೀಯ ಬಲವನ್ನು ಒದಗಿಸಲೆ ಇಲ್ಲ. ಇದು ಅಧಿಕಾರಿಗಳ ಅಸಹಯಾಕತೆಗೆ, ಖಾಸಗಿ ಆಸ್ಪತ್ರೆಗಳ ಮೆರೆದಾಟಕ್ಕೂ ಕಾರಣವಾಯಿತು. ಇಂತಹ ಸಂದರ್ಭದಲ್ಲಿ ಸಚಿವರು ಕೇವಲ ಕಾರ್ಯರೂಪಕ್ಕೆ ಬರದ ಸರಣಿ ಹೇಳಿಕೆಗಳಿಗಷ್ಟೇ ಸೀಮಿತರಾದರು ಎಂದು ಅವರು ತಿಳಿಸಿದ್ದಾರೆ.

ಮಂಗಳೂರು ನಗರ ವ್ಯಾಪ್ತಿಯಲ್ಲಿ ತೀವ್ರ ತರದ ಪರೀಕ್ಷೆ, ಸೋಂಕಿತರನ್ನು ಪ್ರತ್ಯೇಕಗೊಳಿಸುವುದು, ನೂಕು ನುಗ್ಗಲಿಲ್ಲದೆ ವ್ಯಾಕ್ಸಿನ್ ವಿತರಣೆ, ಸುಸಜ್ಜಿತ ಕೊರೊನಾ ಕೇರ್ ಸೆಂಟರ್ ಗಳನ್ನು ತೆರೆದು ಗಂಭೀರ ಲಕ್ಷಣಗಳಿಲ್ಲದ ಸೋಂಕಿತರಿಗೆ ವಿಶ್ವಾಸ ತುಂಬಿ ಕೇರ್ ಸೆಂಟರ್ ಗೆ ಸೇರಿಸುವಲ್ಲಿನ ವೈಫಲ್ಯದಲ್ಲಿ ಸಚಿವರ ಕೊಡುಗೆ ದೊಡ್ಡದಿದೆ. ಜಿಲ್ಲೆಯ ಜನಪ್ರತಿನಿಧಿಗಳ ಇಂತಹ ರಾಜಕೀಯ ವೈಫಲ್ಯಗಳನ್ನು  ಲಾಕ್ ಡೌನ್ ಮುಂದುವರಿಸುವ ಅಗ್ಗದ ಗಿಮಿಕ್ ಮೂಲಕ ಸಚಿವರು ಮರೆಮಾಚಲು ಹೊರಟಿದ್ದಾರೆ. ತೀರಾ ಗಂಭೀರ ಆರ್ಥಿಕ, ಸಾಮಾಜಿಕ ಬಿಕ್ಕಟ್ಟುಗಳಿಗೆ ಕಾರಣವಾಗಲಿರುವ ಜಿಲ್ಲೆಗೆ ಸೀಮಿತವಾದ ಲಾಕ್ ಡೌನ್ ಮುಂದುವರಿಕೆಯ ಆಲೋಚನೆಗಳನ್ನು  ಉಸ್ತುವಾರಿ ಸಚಿವರು ಕೈ ಬಿಡಬೇಕು. ಬೆಂಗಳೂರು ಸಹಿತ ರಾಜ್ಯದ ವಿವಿಧೆಡೆಗಳ ರೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಲಾಕ್ ಡೌನ್ ತೆರವುಗೊಳಿಸಬೇಕು. ಕೊರೊನಾ ಪೂರ್ಣ ನಿಯಂತ್ರಣಕ್ಕಾಗಿ ಲಾಕ್ ಡೌನ್ ಹೊರತಾದ,ಜನರ ದುಡಿಮೆಗೆ ಆವಕಾಶ ನಿರಾಕರಿಸದ ಇನ್ನಿತರ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ‌ ಮುಂದುವರಿಸಬೇಕು ಎಂದು ಡಿವೈಎಫ್ಐ ಆಗ್ರಹಿಸುತ್ತದೆ ಎಂದು ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು