8:00 PM Friday19 - April 2024
ಬ್ರೇಕಿಂಗ್ ನ್ಯೂಸ್
ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ…

ಇತ್ತೀಚಿನ ಸುದ್ದಿ

ಕನ್ನಡ ಸಾಹಿತ್ಯದ ಒಲವು : ರಾಜಕಾರಣ

06/06/2021, 11:19

ಡಾ. ಸುಬ್ರಹ್ಮಣ್ಯ ಸಿ ಕುಂದೂರು Drsubramanyac1@gmail.com

ಕನ್ನಡ ಭಾಷೆ ಹಾಗೂ ಸಾಹಿತ್ಯ ನಾಡು-ನುಡಿ-ನಾಡವರ ಸಾಂಸ್ಕೃತಿಕ ಅಭಿವ್ಯಕ್ತಿಯ ಭಾಗವಾಗಿ, ರಾಜಕೀಯ ವ್ಯವಸ್ಥೆಯೊಂದಿಗೆ ಬೆಸೆದುಕೊಳ್ಳುವ ಮತ್ತು ಮೀರುವ ಒಲವನ್ನು ರೂಪಿಸುತ್ತ ಬಂದಿದೆ. ಕನ್ನಡ ಸಾಹಿತ್ಯದ ಗಟ್ಟಿತನ, ಕನ್ನಡ ಪರಂಪರೆಯೊಳಗಿನ ನೈಜ್ಯ ಮೀಮಾಂಸೆಯು ಇಂದಿನ ಅನೇಕ ಸಾಹಿತಿಗಳಿಂದ ದೂರವಿರುವುದು ಕನ್ನಡದ ಅಸ್ಮಿತೆಯ ದುರಂತದ ಭಾಗವಾಗಿದೆ. ಇಂದಿನ ಅನೇಕ ಸಾಹಿತ್ಯ ಸಂಘಟನೆಗಳು, ಸಾಹಿತಿಗಳು, ಪ್ರಶಸ್ತಿಗಳು, ಸನ್ಮಾನಗಳು ರಾಜಕೀಯ ಪ್ರಜ್ಞೆಯೊಳಗೆ ಪ್ರವೇಶ ಪಡೆದಿವೆ. ಸಾಹಿತ್ಯದ ಒಲವು ರಾಜಕಾರಣದ ಒಲವಾಗಿ ಬದಲಾಗುತ್ತಿರುವುದು ಬೂಸ ಸಾಹಿತ್ಯಕ್ಕೆ ಅಧಿಕೃತವಾದ ದಾರಿಯನ್ನು ಮಾಡಿಕೊಟ್ಟಿದೆ. ನಮ್ಮ ಕನ್ನಡದ ಅನೇಕ ಸಾಹಿತಿಗಳ ಸಾಹಿತ್ಯ ಪ್ರಜ್ಞೆಯ ಅಜ್ಞಾನ ಹಾಗೂ ಪ್ರಚಾರದ ನೆಲೆಯ ಬೂಟಾಟಿಕೆಯೂ ಸಾಹಿತ್ಯ ಪರಂಪರೆ ಭ್ರಷ್ಟವಾಗಲು ಕಾರಣವಾಗಿದೆ. ಅಂದು ಕನ್ನಡ ಸಾಹಿತ್ಯದ ಅಭಿವ್ಯಕ್ತಿಯು ರಾಜಕೀಯ ಪ್ರಭುತ್ವದಲ್ಲಿ ರೂಪುಗೊಂಡರೂ ಸಾಹಿತ್ಯವೇ ರಾಜಕಾರಣವಾಗಿರಲಿಲ್ಲ. ರಾಜಪ್ರಭುತ್ವದಲ್ಲಿ ಸಾಹಿತ್ಯ ರಚಿಸಿದ ಪಂಪ,ರನ್ನ,ಜನ್ನ ಇತ್ಯಾದಿ ಕವಿಗಳು ಪಾಂಡಿತ್ಯವನ್ನು ಹೊಂದಿದ್ದರಲ್ಲದೆ ಹೊಸ ಹೊಸ ಪ್ರಯೋಗವನ್ನು ಕನ್ನಡ ಪರಿಸರದಲ್ಲಿ ರೂಪಿಸಿದ್ದರು. ಇವರಿಗೆ ಕಾವ್ಯವೇ ಧರ್ಮವಾಗಿತ್ತು. ೧೨ನೇ ಶತಮಾನಕ್ಕಾಗುವಾಗ ರಾಜಕಾರಣವೇ ಕಾವ್ಯದ ಆಶಯವಾಗುವಂತಹ ಸ್ಥಿತಿ ನಿಮಾರ್ಣವಾಗಿ ಸಾಹಿತ್ಯ ಒಂದು ವರ್ಗದ ಸ್ವತ್ತಾಗಿ ಭ್ರಷ್ಟತೆಯನ್ನು ಗಳಿಸಿಕೊಂಡಾಗ ಶರಣರು ರಾಜಕೀಯ ವ್ಯವಸ್ಥೆಯನ್ನು ನಿರಾಕರಿಸಿ ಸೃಜಶೀಲವಾದ ಸಾಹಿತ್ಯ ಚಳುವಳಿಯನ್ನು ಹುಟ್ಟುಹಾಕಿ ಕನ್ನಡ ಸಾಹಿತ್ಯ ಪರಂಪರೆಗೆ ಮೌಲ್ಯವನ್ನು, ಅನುಭಾವ ಪ್ರಜ್ಞೆಯನ್ನು ನೀಡಿದರು. ಜಾತಿ, ಲಿಂಗ ಹಾಗೂ ವ್ಯಯುಕ್ತಿಕ ಪ್ರತಿಷ್ಠೆಯ ಸಾಹಿತ್ಯ ಅಭಿವ್ಯಕ್ತಿಯನ್ನು ಬೇರು ಸಮೇತ ಕಿತ್ತು ಎಸೆದ ಕಿರ್ತಿ ಶರಣರದ್ದು. ನೈಜ್ಯವಾದ ವೃತ್ತಿ ಹಾಗೂ ಕಲಾಪ್ರಜ್ಞೆ ಇರುವ ಎಲ್ಲರೂ ಶರಣರಾಗಿ ಸಾಹಿತ್ಯ ಚಳುವಳಿಯನ್ನು ರೂಪಿಸುವ ಮೂಲಕ ಕನ್ನಡದ ಸಾಹಿತ್ಯದ ಒಲವನ್ನು ಜೀವಪರವಾಗಿಸಿ. ಜಡ್ಡುಗಟ್ಟಿದ ಹಾಗೂ ಟೊಳ್ಳು ವಂಚಕ ಸಾಹಿತಿಗಳಿಗೆ ಚಾಟಿ ಬೀಸಿದನ್ನು ನೆನಪು ಮಾಡಬಹುದು. ಆನಂತರ ೧೮ನೇ ಶತಮಾದಲ್ಲಿ ತತ್ವಪದಕಾರರು ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜಕಾರಣದಿಂದ ಸಾಹಿತ್ಯವನ್ನು ಬಿಡುಗಡೆಗೊಳಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿ ಜನಮುಖಿಯಾದ ಬಯಲು ಆಲಯವಾಗಿಸುವ ಅನುಭಾವಿ ಮೀಮಾಂಸೆಯನ್ನು ಸಾಹಿತ್ಯದ ಒಲವಾಗಿಸಿದ್ದು ಕನ್ನಡ ಸಾಧನೆ.
ರಾಜಪ್ರಭುತ್ವ ನಾಶವಾಗಿ ಪ್ರಜಪ್ರಭುತ್ವ ರೂಪುಗೊಂಡ ಮೇಲೆ ಕನ್ನಡ ಸಾಹಿತ್ಯದ ಒಲವು ಸಾಂಸ್ಕೃತಿಕ ಪರಂಪರೆಯನ್ನು ಕಾಪಿಟ್ಟುಕೊಳ್ಳುವ ಹಾಗೂ ಸಾಮಾಜಿಕ ಪರಿವರ್ತನೆಯನ್ನು ತರುವ ಮೂಲಕ ಜೀವಪರವಾದ ಅಭಿವ್ಯಕ್ತಿಯನ್ನು ರೂಪಿಸುವುದಾಗಿತ್ತು. ಬಿ.ಎಂ.ಶ್ರೀ, ಕುವೆಂಪು, ಬೇಂದ್ರೆ, ಮಾಸ್ತಿ, ಪು.ತೀ.ನ, ಡಿ.ವಿ.ಜಿ ಇನ್ನು ಹತ್ತು ಹಲವು ಕವಿಗಳು ರಾಜಕಾರಣದಿಂದ ಸಾಹಿತ್ಯವನ್ನು ಆಳಲಿಲ್ಲ. ಬದಲಿಗೆ ಸಾಹಿತ್ಯದಿಂದ ರಾಜಕಾರಣವನ್ನು ಆಳಿದರು. ನವೋದಯ, ನವ್ಯ, ದಲಿತ ಚಳುವಳಿಯ ಮೂಲಕ ಹುಟ್ಟಿಕೊಂಡ ಸಾಹಿತ್ಯದ ಒಲವು ಬಹುತೇಕ ಕವಿಗಳ ಪಾಂಡಿತ್ಯವನ್ನು ಹೆಚ್ಚಿಸಿತ್ತು. ನಾಡು-ನುಡಿ-ನಾಡವರ ಸಾಹಿತ್ಯ ಪರಂಪರೆಯನ್ನು ಉಳಿಸು ನೆಲೆಯಲ್ಲಿ ಜೀವಪಡೆದ ಅನೇಕ ಸಂಸ್ಥೆಗಳು ಕನ್ನಡದ ಅಸ್ಮಿತೆಯನ್ನು ತನ್ನ ಆಶಯವಾಗಿಸಿಕೊಂಡವು. ಕನ್ನಡ ಸಾಹಿತ್ಯ ಪರೀಷತ್ತು, ವಿದ್ಯಾವರ್ಧಕ ಸಂಘ, ನಾಟಕ ಮಂಡಲಿ ಇನ್ನಿತರ ಸಂಘಟನೆಗಳು ಕನ್ನಡದ ಪರಿಸರದಲ್ಲಿ ಹುಟ್ಟಿಕೊಂಡು ರಾಜಕಾರಣ ರಹಿತವಾಗಿ ಕೆಲಸ ಮಾಡಿದವು. ೧೯೮೦ರ ನಂತರದ ಕಾಲಮಾನದಲ್ಲಿ ಸಾಹಿತ್ಯ ಸಂಘಟನೆಗಳು ಸರ್ಕಾರದ ಅನುದಾನಕ್ಕೆ ಒಳಪಟ್ಟವು ಹಾಗೂ ಸರ್ಕಾರ ಕನ್ನಡ ಕೆಲಸಕ್ಕೆಂದು ಅನೇಕ ಇಲಾಖೆಯನ್ನು, ಯೋಜನೆಗಳನ್ನು, ಪ್ರಶಸ್ತಿಗಳನ್ನು ರೂಪಿಸಿ ಲಕ್ಷಾಂತರ ರೂಪಾಯಿ ಹಣವನ್ನು ನೀಡುವ ಮೂಲಕ ಸಾಹಿತ್ಯ ಕ್ಷೇತ್ರವನ್ನು ಭ್ರಷ್ಟವಾಗಲು ದಾರಿ ಮಾಡಿಕೊಟ್ಟಿತು. ಸಾಹಿತ್ಯ ಸಂಘಟನೆಯ ಪ್ರಮುಖ ಹುದ್ದೆಗಳು ಸಾಹಿತ್ಯದ ಒಲವವನ್ನು ಕಾಣದ ಅದರ ಅರಿವಿನ ಸ್ವರ್ಶವಿಲ್ಲದ ರಾಜಕೀಯ ಬೆಂಬಲವಿರುವ ವ್ಯಕ್ತಿಗಳ ಕೈಯಲ್ಲಿದೆ. ಪ್ರಶಸ್ತಿಗಳಂತು ನಿಜವಾಗಿ ಸಾಹಿತ್ಯ ಕೃಷಿಮಾಡಿದ ವ್ಯಕ್ತಿಗೆ ಸಲ್ಲದೆ ರಾಜಕೀಯ ಲಾಬಿಯಲ್ಲಿ ಇರುವ ಷೋಕಿ ಮಾಡಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುವವರ ಮುಡಿಗೇರುತ್ತಿದೆ. ಸಾಹಿತ್ಯ ಸಮ್ಮೇಳನ, ಸಾಹಿತ್ಯಗೋಷ್ಠಿ ಇತರ ಕಾರ್ಯಕ್ರಮದಲ್ಲಿ ರಾಜಕಾರಣಿಗಳೇ ಮುಖ್ಯ ಭಾಷಣಕಾರರಾಗಿ, ಅತಿಥಿಗಳಾಗಿ, ಅಧ್ಯಕ್ಷರಾಗಿ, ಕವಿಗಳಾಗಿ ಆರ್ಭಟಿಸುತ್ತಿದ್ದಾರೆ. ನೈಜ್ಯ ಬರೆಹಗಾರರು ಪುಸ್ತಕ ಮಾರಿಕೊಂಡು, ನುಡಿಚಿತ್ರ ಕಟ್ಟಿಕೊಂಡು, ಕನ್ನಡ ಮಾತನಡುತ್ತ ಕನ್ನಡ ಜೀವಸತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಂದು ಕನ್ನಡ ಸಾಹಿತ್ಯ ಹಾಗೂ ಸಾಹಿತಿಗಳ ಒಲವು ರಾಜಕೀಯವಾಗಿ ಓದು, ಬರೆಹದಂತಹ ಅಭಿವ್ಯಕಿಯೇ ದೂರವಾಗಿ ರಾಜಕೀಯ ಸಿದ್ಧಾಂತವೇ ಸಾಹಿತ್ಯ ಸಂಘಟನೆಯ ಸಿದ್ಧಾಂತವಾಗಿ ರೂಪುಗೊಳ್ಳುತ್ತಿರುವುದು ಸಾಹಿತ್ಯ ಜನರಿಂದ ದೂರವಾಗುವುದಕ್ಕೆ ಕಾರಣವಾಗಿದೆ. ಆಧುನಿಕ ಪರಿಸರದಲ್ಲಿ ಕನ್ನಡದ ಪರಂಪರೆಯನ್ನು ಮನಸಿನಲ್ಲಿಟ್ಟುಕೊಂಡು ಶೋಧಿಸುತ್ತ ಬರೆಹ ಮಾಡುತ್ತಿರುವ ಅನೇಕ ಲೇಖಕರನ್ನು, ದುಡಿಯುವ ಬದುಕಿನ ಮೀಮಾಂಸೆಯನ್ನೆ ಜಾನಪದವಾಗಿ ಉಳಿಸಿಕೊಂಡು ಬರುತ್ತಿರುವ ಅನೇಕ ಜಾನಪದ ಜೀವಿಗಳನ್ನು, ನಾಟಕ, ಸಿನಿಮಾದ ಮೂಲಕ ಹಳ್ಳಿ ಹಳ್ಳಿಯಲ್ಲಿ ಕನ್ನಡ ಕಂಪನ್ನು ಕಟ್ಟುತ್ತಿರುವ ಹಲವರನ್ನು ಸಾಹಿತ್ಯ ವೇದಿಕೆಗಳು ಬಳಸಿಕೊಳ್ಳದೆ ರಾಜಕೀಯ ಮಾಡುತ್ತಿರುವುದೆ ಕನ್ನಡ ನಾಡು-ನುಡಿಯ ದುರಂತಕ್ಕೆ ಕಾರಣವಾಗಿದೆ ಎಂಬುದನ್ನು ಅರಿಯುದು ಅಗತ್ಯವಿದೆ.

************************

ಇತ್ತೀಚಿನ ಸುದ್ದಿ

ಜಾಹೀರಾತು