7:20 PM Monday8 - August 2022
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಗೋ ಹತ್ಯೆ ಮಾಡುತ್ತಿದ್ದ ಮನೆಗೆ ನಗರಸಭೆ ದಾಳಿ; ವಿದ್ಯುತ್ ಸಂಪರ್ಕ ಕಟ್;… ಹಂದಾಡಿ: ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕ ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿ… ತ್ರಾಸಿ: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 10 ಲಕ್ಷ ರೂ. ವಂಚನೆ; ರಾಜಕಾರಣಿಗಳ… ಅರಣ್ಯ ಸಚಿವ ಉಮೇಶ್ ಕತ್ತಿ ಎಡವಟ್ಟು: ಶೂ ಧರಿಸಿ ಗಜಪಡೆಗೆ ಪೂಜೆ ಸಲ್ಲಿಕೆ!;… ಮತೀಯ ಸಂಘರ್ಷ: ಗೃಹ ಸಚಿವ ಅರಗ ಜ್ಞಾನೇಂದ್ರ ತಲೆದಂಡ?: ಯಾರು ಹೊಸ ಹೋಮ್… ನೆರೆ ಹಾವಳಿಗೆ ಕೇಂದ್ರದ ಅನುದಾನ ಕೇಳಲು ರಾಜ್ಯ ಬಿಜೆಪಿಗೆ ದಮ್ಮು ಇಲ್ಲ; ಪ್ರತಿಪಕ್ಷದ… ಕಳಸ: ಗುಡ್ಡ ಕುಸಿತ ಆಯ್ತು, ಇದೀಗ ಭತ್ತದ ಗದ್ದೆ ಕುಸಿತ!: 60 ಅಡಿಯಷ್ಟು… ಅವ್ಯವಹಾರ, ಅನಾಚಾರ ಮರೆಮಾಚುವ ತಂತ್ರ: ಸರಕಾರಿ ಹಾಸ್ಟೆಲ್ ಗಳ ಸಿಸಿ ಕ್ಯಾಮೆರಾ ಬಂದ್.!? ಮುಖ್ಯಮಂತ್ರಿ ಬೊಮ್ಮಾಯಿಗೆ ಕೊರೊನಾ ಪಾಸಿಟಿವ್: ದೆಹಲಿ ಭೇಟಿ ದಿಢೀರ್ ರದ್ದು; ಸಂಪುಟ ವಿಸ್ತರಣೆಗೆ… ಕೊಟ್ಟಿಗೆಹಾರ: ಮನೆಯ ಹಿಂಭಾಗದಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ; ಕಾರಣ ಇನ್ನೂ ನಿಗೂಢ 

ಇತ್ತೀಚಿನ ಸುದ್ದಿ

ಕನಕದಾಸರ ಕೀರ್ತನೆಗಳು;ಸಾಮಾಜಿಕ ವಾಸ್ತವ

23/05/2021, 11:35

ಡಾ. ಸುಬ್ರಹ್ಮಣ್ಯ ಸಿ ಕುಂದೂರು

drsubramanyac1@gmail.com

ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಭಕ್ತಿ ಮೀಮಾಂಸೆಗೆ ಕೀರ್ತನೆಯ ದ್ರವ್ಯವನ್ನು ಒದಗಿಸಿದ ಸಂತ ಕನಕದಾಸರು, ಇವರ ಕೀರ್ತನೆಗಳು ಸಮಾಜವನ್ನು ಕಟ್ಟುವ ಹಾಗೂ ಸಾಮಾಜಿಕ ವಾಸ್ತವವನ್ನು ಅನುಸಂಧಾನ ಮಾಡುವ ನೆಲೆಯಿಂದ ಸತ್ಯಶೋಧನೆಯ ದಾರಿಯನ್ನು ಕಾಣಿಸುತ್ತದೆ. ಲೋಕವು ಅನೇಕ ಕೇಡುಗಳನ್ನು ಹೊಂದಿರುವ ಕಾರಣ ಆ ಕೇಡುಗಳಿಂದ ಸಮಾಜ ಹಾಗೂ ಮನುಷ್ಯನನ್ನು ಬಿಡಿಸುವ ಅಭಿವ್ಯಕ್ತಿಯೇ ಕೀರ್ತನೆಯ ಆಶಯವಾಗಿದೆ. ನಮ್ಮ ಸಾಮಾಜಿಕ ಪರಿಸರವು ಆಧುನಿಕತೆಯ ಪ್ರವೇಶದಿಂದ ಭ್ರಷ್ಟವಾಗಿ ಮೌಲ್ಯರಹಿತವಾದ ಸತ್ವವನ್ನು ಪಡೆದುಕೊಳ್ಳುತ್ತಿರುವಾಗ ಕನಕದಾಸರ ಕೀರ್ತನೆಯ ವಾಸ್ತವನ್ನು, ಸಾಮಾಜಿಕ ವಾಸ್ತವದೊಂದಿಗೆ ವಿವೇಚಿಸುವುದು ಅಗತ್ಯವೆಂದು ಕಾಣುತ್ತದೆ. ಸಮಾಜದ ವಾಸ್ತವನ್ನು ಗ್ರಹಿಕೆಯಾಗಿಸಿಕೊಂಡ ಕೀರ್ತನೆಗಳು ಲೋಕದ ಕೇಡುಗಳನ್ನು ಮೀರಿ ಮಾನವ ಪ್ರೀತಿಯನ್ನು ಕಟ್ಟುವ ಕಡೆಗೆ ತುಡಿಯುತ್ತದೆ. ಜಾತಿ, ಲಿಂಗ, ವರ್ಣಗಳನ್ನು ಮೀರಿ ಅನೇಕ ಅನುಭಾವಿಗಳಿಗೆ ಜೀವ ಸಂಬAಧವನ್ನು ಕಟ್ಟುವ ನುಡಿಗಟ್ಟಾಗಿ, ಗಾದೆಯ ರೂಪವಾಗಿ ಕನಕನ ಕೀರ್ತನೆಯ ಸಾಲುಗಳು ಬಳಕೆಯಾಗಿವೆ. ಆದರೆ ಅವರಿಗೆ ಆ ಸಾಲುಗಳು ಕನಕನ ಕೀರ್ತನೆಗಳೆಂಬ ಅರಿವಿರುವುದಿಲ್ಲ. ಆ ಮಟ್ಟದಲ್ಲಿ ಕೀರ್ತನೆಗಳು ಜನಮಾನಸದಲ್ಲಿ ತುಂಬಿಕೊAಡು ಸಮಾಜಕ್ಕೆ ಚಿಕಿತ್ಸೆ ನೀಡುವ ದ್ರಾವಕವಾಗಿ ಬಳಕೆಯಾಗುತ್ತಿರುವುದು ಕೀರ್ತನೆಯ ಹೆಚ್ಚುಗಾರಿಕೆಯನ್ನು ಗುರುತ್ತಿಸುತ್ತದೆ.
ಆಧುನಿಕ ಸಮಾಜವು ಪ್ರಕೃತಿಯ ಸತ್ಯವನ್ನು ಮೀರಿ, ಭೌತಿಕ ಸತ್ಯವನ್ನು ಶೋಧಿಸಿ ಅದರ ಹಿಂದೆಯೇ ಸುಖದ ಬದುಕನ್ನು ಕಟ್ಟಿಕೊಳ್ಳುವ ಭ್ರಮೆ. ಅಭಿವೃಧ್ಧಿ ಪರಿಕಲ್ಪನೆಗಳು ಪ್ರಕೃತಿಯಿಂದ ಮಾನವನನ್ನು ದೂರಿಕರಿಸಿವೆ. ಪ್ರಕೃತಿಯ ಸತ್ವವು ಬದುಕಿನ ಮೀಮಾಂಸೆಯಾಗದೆ. ವ್ಯಕ್ತಿ ಸಮಸ್ಯೆಯ ಗೂಡಾಗಿ ಅನಾಥವಾಗುತ್ತ. ಒಂದಲ್ಲ ಒಂದು ಹತ್ಯೆ, ಹಿಂಸೆಗಳಿಗೆ ಗುರಿಯಾಗುತ್ತಿದ್ದಾನೆ. ಈ ನಡುವೆ ಉಂಟಾದ ಮಾನಸಿಕ ತಲ್ಲಣ ಹಾಗೂ ಪ್ರಕೃತಿಯ ತಲ್ಲಣವು ನಮ್ಮ ಬಾಳ್ವೆಯನ್ನು ನಾಶವಾಗಿಸುತ್ತದೆ ಎಂಬ ಎಚ್ಚರವನ್ನು ಕನಕದಾಸರು ಪ್ರಕೃತಿ ಮೀಮಾಂಸೆಯ ನೆಲೆಯಿಂದ ಗುರುತಿಸುತ್ತಾರೆ.
ತಲ್ಲಣಿಸದಿರು ಕಂಡ್ಯ ತಾಳು ಮನವೆ.
ಎಲ್ಲಾವನು ಸಲಹುವನು ಇದಕ್ಕೆ ಸಂಶಯವಿಲ್ಲ.

ಕನಕದಾಸರು ನಮ್ಮ ಪರಂಪರೆಯ ತಾಳುವಿಕೆಯ ಸತ್ವವನ್ನೆ ಮಾನವ ಜೀವನಕ್ಕೆ ಮುಖಾಮುಖಿ ಮಾಡುವ ಮೂಲಕ ಬದುಕಿನ ದಾರಿಯನ್ನು ಪ್ರಕೃತಿಯೊಂದಿಗೆ ಸಮನ್ವಯ ಮಾಡುವ ಕಾರ್ಯವನ್ನು ಮಾಡುತ್ತಾರೆ.
ನಮ್ಮ ಸಮಾಜ ಶ್ರೇಣಿಕೃತ ವ್ಯವಸ್ಥೆಯನ್ನು ಹೊಂದಿದ್ದ ಕಾರಣ ಕುಲ, ಜಾತಿ, ಧರ್ಮಗಳು ಮನುಷ್ಯನ ಬಂಧನಕ್ಕೆ ಕಾರಣವಾಗಿದ್ದವು. ಕುಲವೆನ್ನುವುದು ಜಾತಿರೂಪ ಪಡೆದು ಒಂದು ಪರಿಕಲ್ಪನೆಯಾಗಿ ಜೀವಪಡೆದಾಗ, ರಾಜ್ಯ ಕಟ್ಟುವ, ಯುದ್ಧ ಮಾಡುವ, ದೇವರನ್ನು ಅನುಸಂಧಾನ ಮಾಡುವ, ದಾನ ಧರ್ಮವನ್ನು ಪಡೆಯುವ ವಿಭಿನ್ನ ಸಾಂಸ್ಕೃತಿಕ ವಿಧಾನಗಳು ಕುಲವನ್ನು ಕೇಂದ್ರೀಕರಿಸಿದೆ. ಅದು ಸಾಮಾಜಿಕ ಸಂಘರ್ಷದ ವ್ಯವಸ್ಥೆಯಾಗಿದೆ. ಕನಕದಾಸರು ಕುಲದ ಪ್ರಜ್ಞೆಯನ್ನು ಜನರ ಅರಿವಿನ ಪ್ರಜ್ಞೆಯಾಗಿಸುವ ಮೂಲಕ ಕುಲವನ್ನು ಮೀರುವ ತಾತ್ವಿಕ ನೆಲೆಯನ್ನು ಕೀರ್ತನೆಯಲ್ಲಿ ಮಂಡಿಸುತ್ತಾರೆ. ಕನಕದಾಸರು ತಮ್ಮ ಜೀವಿತ ಕಾಲದಲ್ಲಿ ಮೂಲ ವೃತ್ತಿಯನ್ನು ಬಿಟ್ಟು ಭಕ್ತಿಯ ದಾರಿಯಲ್ಲಿ ಮುಕ್ತಿಯನ್ನು ಕಾಣಲು ಊರೂರು ಸಂಚರಿಸಿದರು. ಈ ಕಾಲಮಾನದಲ್ಲಿ ಕನಕದಾಸರಿಗೆ ಎದುರಾದ ಕುಲದ ಸಂಘರ್ಷವು ಕುಲವನ್ನು ಮೀರುವ ಹಾಗೂ ಕುಲದ ನೆಲೆಯಲ್ಲಿ ರೂಪಗೊಂಡಿರುವ ವ್ಯವಸ್ಥೆಯನ್ನು ದಾಟಿದಾಗ ಭಕ್ತಿಯ ಮಾರ್ಗ ಸಾಧ್ಯವಾಗುತ್ತದೆ ಎಂದು ಕುಲದ ಕುರಿತ ವಾಸ್ತವ ಗ್ರಹಿಕೆಯನ್ನು ವಿವೇಚಿಸುತ್ತಾರೆ.

ಕುಲ ಕುಲವೆಂದು ಹೊಡೆದಾಡುವಿರಿ
ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ

ಕೆಳವರ್ಗದ ಸಂತರಿಗೆ ಕುಲದ ಪ್ರಶ್ನೆ ಎದುರಾಗಿದ್ದು ಆ ಕಾಲಮಾನದ ಸಾಮಾಜಿಕ ವಾಸ್ತವದಿಂದ ಎಂದು ತೋರುತ್ತದೆ. ಕುಲದ ನೆಲೆಯಲ್ಲಿ ವ್ಯಕ್ತಿಗಳನ್ನು ಶ್ರೇಷ್ಟ, ಕನಿಷ್ಟವೆಂದು ವರ್ಗಿಕರಿಸಿ ಪ್ರಭುತ್ವವನ್ನು ಸಾಧಿಸಿ. ಒಂದು ಕುಲವನ್ನು ಗುಲಾಮತೆಯಾಗಿಸಿದ ಉನ್ನತ ಕುಲದವರಿಗೂ. ಕೀಳೆಂದು ಭಾವಿಸಿ ಸಾಮಾಜಿಕ ಅನಿಷ್ಟಗಳನ್ನು ತಲೆಯ ಮೇಲೆ ಇರಿಸಿಕೊಂಡಿರುವ ಕುಲದವರಿಗೂ. ಕುಲದ ಮೀಮಾಂಸೆಯನ್ನು ನಿರೂಪಿಸುವ ಕನಕದಾಸರು ಕುಲವನ್ನು ಮೀರುವ ನೆಲೆಯಿಂದ ಜೀವಪರತೆಯನ್ನು ಘನೀಕರಿಸುತ್ತಾರೆ.

ಮಧ್ಯಕಾಲೀನ ಸಂತರಿಗೆ ಭಕ್ತಿಯೇ ಬಿಡುಗಡೆಯ ದಾರಿಯಾಗಿ ಕಂಡಾಗ ಅದನ್ನು ಶೋಧಿಸಲು ಕೀರ್ತನೆಗಳನ್ನು ದ್ರವ್ಯವಾಗಿಸಿಕೊಳ್ಳುತ್ತಾರೆ. ಕನಕದಾಸರಿಗೆ ಆ ಕಾಲಮಾನದ ಪ್ರಭುತ್ವವನ್ನು ಅದರ ಧೋರಣೆಯನ್ನು ಮೀರಬೇಕಾದಾಗ, ಭಕ್ತಿಯೇ ಮೀರುವ ಸಾಧನವಾಯಿತು. ಕನಕದಾಸರ ಭಕ್ತಿ ಎನ್ನುವುದು ತನ್ನನ್ನು ಭವ, ಬಂಧನದಿAದ ಬಿಡಿಸಿಕೊಳ್ಳುವುದು ಹಾಗೂ ದೇವರನ್ನು ಸಾಂಸ್ಕೃತಿಕ ಬಂಧನದಿAದ ಬಿಡಿಸುವುದರ ಮಾರ್ಗವಾಯಿತು. ಭಕ್ತನ ಭಕ್ತಿ ಎನ್ನುವುದು ರಾಜನ ನಿರ್ದೇಶನದ ನೆಲೆಯಲ್ಲಿ ಅಭಿವ್ಯಕ್ತವಾಗುತ್ತಿತ್ತು ಅಂದರೆ ರಾಜ ಯಾವ ಧರ್ಮ, ಪಂಥವನ್ನು ನಂಬುವನೋ ಮತ್ತು ಭಕ್ತಿಯ ಸ್ವರೂಪವನ್ನು ಅದೇಶಿಸುವನೋ ಹಾಗೇಯೇ ರಾಜ್ಯದ ಜನರು ಭಕ್ತರಾಗಿ ದೇವರನ್ನು ಆರಾಧಿಸುವವರು ಏಕೆಂದರೆ ರಾಜನೆ ದೇವರು ಎನ್ನುವ ಪ್ರಭುತ್ವದ ಸಿದ್ಧಾಂತ. ಭಕ್ತಿಯನ್ನು ಬಂಧನದಲ್ಲಿ ಇರಿಸಿತ್ತು. ಸಾಮಾನ್ಯರಿಗೆ ಭಕ್ತಿಯು ಭಯದ ಸಂಕೇತವಾಗಿ ದೇವರು ಸಹ ಉನ್ನತ ವರ್ಗದ ರಾಜಕೇಂದ್ರಿತ ವ್ಯವಸ್ಥೆಯ ಒಳಗೆಯೇ ಚಲನೆಯನ್ನು ಪಡೆದುಕೊಂಡು ಸಾಮಾನ್ಯ ಜನರ ಮನಸಿಗೆ ನಿಲುಕದ ವಸ್ತುವಾಗಿದ್ದರು. ಭಕ್ತಿಯ ಪ್ರಭುತ್ವವನ್ನು ಸಾಧಿಸಿಕೊಂಡಿದ್ದ ಕೆಲವು ವರ್ಗಗಳು ಆ ಕಾಲಮಾನದಲ್ಲಿ ದೇವರನ್ನು ಬಂಡವಾಳವಾಗಿಸಿಕೊAಡು ಸಂಘರ್ಷದಲ್ಲಿ ನಿರತರಾಗಿದ್ದಾಗ ಕನಕದಾಸರು ನೈಜ್ಯ ಭಕ್ತಿಯ ಶೋಧನೆಯನ್ನು ಮಾಡುವ ಅನುಭಾವಿಕ ನೆಲೆಯನ್ನು ತನ್ನದಾಗಿಸಿಕೊಂಡಿದ್ದು ಆ ಕಾಲಮಾನದ ಭಕ್ತಿಪಂಥದ ಬಹುದೊಡ್ಡ ಸಾಧನೆಯಾಗಿದೆ.
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ಬರಿದು ಮಾತೀಕಿನ್ನು ಅರಿತು ಪೇಳುವೆನಯ್ಯ

ಕನಕದಾಸರು ಸಾಮಾಜಿಕವಾಗಿ ಅಸ್ಥಿತ್ವದಲ್ಲಿದ್ದ ಅನೇಕ ದೇವರು ಹಾಗೂ ದೈವಗಳನ್ನು ಮೀರಿ ಹರಿಯನ್ನು ಆರಾಧಿಸುತ್ತಾರೆ. ಈ ಆರಾಧನೆಯು ಜೀವನದ ಭಾಗವಾಗಿ ದೇವರನ್ನು ಅರಿತುಕೊಂಡು ಅನುರಕ್ತವಾಗುವ ಭಾವವೇ ಪ್ರಧಾನ ಸತ್ವವಾಗಿ ಸಮಾಜಕ್ಕೆ ಮಾದರಿಯಾಗುತ್ತದೆ. ಹಸಿವಿನ ಮೀಮಾಂಸೆಯನ್ನು ಅನುಸಂಧಾನ ಮಾಡುವ ಕನಕದಾಸರ ಕೀರ್ತನೆಗಳು ಹೊಟ್ಟೆ, ಬಟ್ಟೆಗಿಂತ ಮಿಗಿಲಾಗಿ ಬದುಕಬೇಕಾದ ತಾತ್ವಿಕತೆಯನ್ನು ಮಂಡಿಸುತ್ತದೆ. ಜನರು ಆ ಕಾಲಮಾನದಲ್ಲಿ ಭಕ್ತಿ ಮಾಡುತ್ತಿದ್ದದ್ದು ದೈವ, ದೇವರನ್ನು ಪೂಜಿಸುತ್ತಿದದ್ದು. ಹೊಟ್ಟೆ ಬಟ್ಟೆ ಹಾಗೂ ಸಂಸಾರದ ಚಾಲನೆಗಾಗಿ ಎಂಬ ಸಾಮಾಜಿಕ ವಾಸ್ತವನ್ನು ನಿರಾಕರಿಸುವ ಮೂಲಕ ಸಂಪತ್ತಿನ ಕ್ರೂಡೀಕರಣದ ನೆಲೆಗಳನ್ನು ಮೀರಿ ಭಕ್ತಿಯ ದಾರಿಯನ್ನು ಹಿಡಿಯಬೇಕೆಂಬ ಸತ್ವವು ದಟ್ಟವಾಗಿ ಕಾಣುತ್ತದೆ.

ಎಲ್ಲಾರ ಮಾಡುವುದು ಹೊಟೆಗಾಗಿ
ಗೇಣು ಬಟ್ಟೆಗಾಗಿ, ತುತ್ತು ಹಿಟ್ಟಿಗಾಗಿ

ಮಾನವನ ಜೀವನ ಹೊಟ್ಟೆ ಹಾಗೂ ಬಟ್ಟೆಗಿಂತ ಮೀರಿ ಸಾಧಿಸುವ ಅವಕಾಶವಿದೆ ಎಂಬ ಗುಣಾತ್ಮಕ ನಿಲುವನ್ನು ಸಮಾಜ ಒಳಗಡೆ ಸೇರಿಕೊಂಡಿದ್ದು, ಹೊಟ್ಟೆ ತುಂಬಿಸುವ ವಿಭಿನ್ನ ಡಾಂಭಿಕ ನೆಲೆಗಳನ್ನು ವಿಢಂಬಿಸುವ ಮೂಲಕ ಸಂಪತ್ತಿನ ಕೂಡಿಕೆಯನ್ನು ನಿರಾಕರಿಸುತ್ತಾರೆ. ಕನಕದಾಸರ ದಿನಮಾನದ ಚರಿತ್ರೆಯು ಸಂಪತ್ತನ್ನು ಕೇಂದ್ರೀಕರಿಸುವ ಮೂಲಕವೇ ಯುದ್ಧ, ಒಪ್ಪಂದ, ವ್ಯವಹಾರಗಳು ನಡೆದು ಬಂದಿತ್ತು. ಕನಕದಾಸರು ಸಹ ಸಂಪತ್ತಿನ ಕ್ರೂಢೀಕರಣದ ಜೀವನ ಸಂಸ್ಕೃತಿಯನ್ನು ಬಿಟ್ಟು ದಾಸರಾದರಿಂದ ಲೋಕದ ವಾಸ್ತವನ್ನು ಮೀರುವ ಮೂಲಕ ಕೇಡನ್ನು ದೂರಗಾಣಿಸುವ ಕಡೆಗೆ ನೋಡುತ್ತಾರೆ. ಕನಕದಾಸರು ಭವಬಂಧನವನ್ನು ಕಳೆದುಕೊಂಡು ಕೀರ್ತನೆಗಳನ್ನು ಹಾಡುತ್ತ ದಾಸರಾಗಿ ಸಂಚಾರ ಮಾಡುವಾಗ ಗ್ರಹಿಸಿದ್ದು ದಾನ, ಧರ್ಮಗಳು ಲೋಕದಲ್ಲಿ ಕೆಲವು ವರ್ಗಗಳಲ್ಲಿ ನೆಲೆಯಾಗಿದ್ದವು ಅಂದರೆ ರಾಜಕೇಂದ್ರಿತ ವ್ಯವಸ್ಥೆಯಲ್ಲಿ ರಾಜ ತಾನೇ ದೇವರೆಂಬ ಭ್ರಮೆಯಲ್ಲಿ ಬ್ರಾಹ್ಮಣ ಹಾಗು ಕ್ಷತ್ರೀಯ ವರ್ಗಕ್ಕೆ ದಾನ ನೀಡುವ ಕಾರ್ಯವನ್ನು ಮಾಡುತ್ತಿದದ್ದು. ಇನ್ನೂಳಿದ ವರ್ಗಗಳು ದಾನವನ್ನು ಪಡೆಯುವ ನೆಲೆಯನ್ನು ಕಳೆದುಕೊಂಡಿದ್ದವು. ಈ ನಡುವೆ ಸಮಾಜವು ನೈಜ್ಯವಾದ ಮೌಲ್ಯಗಳನ್ನು ಕಳೆದುಕೊಂಡು ಹಣವನ್ನು ಕೇಂದ್ರವಾಗಿಸಿಕೊAಡು ನಡೆಯುವಾಗ ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಸಮಾಜದ ನಡೆಯನ್ನು ಖಂಡಿಸುವ ಜೊತೆಗೆ ದಾನ, ಧರ್ಮದ ಮಹತ್ವವನ್ನು ಚರ್ಚಿಸುತ್ತಾರೆ.
ಏನು ಇಲ್ಲದ ಎರಡು ದಿನದ ಸಂಸಾರ
ಜ್ಞಾನದಲ್ಲಿ ದಾನ, ಧರ್ಮವ ಮಾಡಿರಯ್ಯ.

ಕನಕದಾಸರ ಲೋಕಾನುಭವ ಹಾಗೂ ಸಂಸಾರದ ಶೂನ್ಯತೆಯು ಜೀವನದ ತಾತ್ವಿಕತೆಯಾಗಿ ಅಭಿವ್ಯಕ್ತವಾಗಿರುವ ಕೀರ್ತನೆಗಳು ದಾನ, ಧರ್ಮದ ಅಸ್ಮಿತೆಯನ್ನು ಲೋಕದಲ್ಲಿ ರೂಢಿಸುವ ಮೂಲಕ ಭಕ್ತಿಯನ್ನು ಜನರ ಮನಸಿಗೆ ಇಳಿಸುವ ನೆಲೆಯನ್ನು ಪರಂಪರೆಯ ಸತ್ವವನ್ನು ಗುಣಾತ್ಮಕವಾಗಿಯೇ ಕಾಪಿಟ್ಟುಕೊಳ್ಳುವುದನ್ನು ಗುರುತಿಸಬಹುದು.

ಅರಸನಂತೆ ಬಂಟನೋ, ಹನುಮರಾಯ
ದೊರೆಯಂತೆ ಸೇವಕನೋ..

ಲೋಕದ ವಸ್ತು ಸ್ಥಿತಿಯನ್ನು ಸೂಕ್ಷö್ಮವಾಗಿ ನಿರೂಪಿಸಿದ ಅನುಭಾವಿ ಕನಕದಾಸರು. ರಾಜಪ್ರಭುತ್ವದ ನೆಲೆಯಲ್ಲಿ ಜನರ ಸ್ವಭಾವವು ರೂಪುಗೊಂಡಿತ್ತೆ ವಿನಾಹ: ಸ್ವಂತ ಚಿಂತನಾಶೀಲ ಬುದ್ಧಿ ಇರಲಿಲ್ಲ ಎಂಬ ತಾತ್ವಿಕತೆಯನ್ನು ಕೀರ್ತನೆಯ ಮೂಲಕ ನಿರೂಪಿಸುತ್ತಾರೆ. ರಾಜಪ್ರಭುತ್ವದ ಅಧಿಕಾರ ದಾಹ ಜನರನ್ನು ಬಳಸಿಕೊಳ್ಳುತ್ತಿದ್ದ ಬಗೆಯನ್ನು ವಿವೇಚಿಸುವ ಕನಕದಾಸರು ಸಾಮಾನ್ಯ ಜನರ ಸಂವೇದನೆಗಳನ್ನು ಸ್ಫರ್ಶಿಸಲು ಯೋಚಿಸುತ್ತಾರೆ. ವಾಸ್ತವ ಸಮಾಜದಲ್ಲಿ ಸಾಮಾಜಿಕ ಬದುಕಿಗೆ ಕೇಡನ್ನು ಉಂಟು ಮಾಡುವ ಪ್ರಮುಖರು ಅಂದರೆ, ರಾಜನ ಬಂಟರು ಎಂಬ ತಿಳುವಳಿಕೆಯ ಚರಿತ್ರೆಯ ಮೂಲಕವೇ ಗ್ರಹಿಸುತ್ತಾರೆ.ಈ ಗ್ರಹಿಕೆಯನ್ನು ಲೋಕದ ಮುಂದಿಡುವ ಕೀರ್ತನೆಯು ರಾಜಕೀಯ ಪ್ರಭುತ್ವವನ್ನು ವಿಶ್ಲೇಷನೆ ಮಾಡುವ ಜೊತೆಗೆ ಮಾನವನ ಸ್ವಭಾವವನ್ನು ಅನುಸಂಧಾನಕ್ಕೆ ಒಳಗು ಮಾಡುತ್ತದೆ.

ಜಪವ ಮಡಿದರೇನು, ತಪವ ಮಾಡಿದರೇನು
ವಿಪರೀತ ಕಪಟಗುಣ ಕಲುಷವಿದ್ದವರ

ದೇವರ ಆರಾಧನೆ ಹಾಗೂ ಭಕ್ತಿಯ ಸ್ವರೂಪವು ಭವ ಬಂಧನವನ್ನು ಕಳೆಯದೆ ಕೇವಲ ಬಾಹ್ಯ ನಿರೂಪಣೆಯ ಭಕ್ತಿಯಾಗಿ ಜಪ, ತಪ, ಪೂಜೆ ಹಾಗೂ ಸನ್ಯಾಸಗಳೆಂಬುವುದು ಕಾಮವನ್ನು ಪೂರೈಕೆ ಮಾಡಿಕೊಳ್ಳುವ ಸಾಧನಗಳಾಗಿ ಸಮಾಜದ ಆರೋಗ್ಯವನ್ನು ಪಲ್ಲಟಗೊಳಿಸುತ್ತಿದ್ದ ಸಂದರ್ಭದ ಸಮಾಜದ ವಾಸ್ತವ ಅಭಿವ್ಯಕಿಯನ್ನು ಗುರುತಿಸುವ ಕನಕದಾಸರು ಜಪ, ತಪದ ಭ್ರಷ್ಟತೆಯ ಗ್ರಹಿಕೆಯನ್ನು ಕೀರ್ತನೆಯ ಮೂಲಕ ನಿರೂಪಿಸುವ ಜೊತೆಗೆ ಭಾರತೀಯ ಪರಂಪರೆಯ ನೆಲೆಯಿಂದ ಜಪ, ತಪ ಹಾಗೂ ದೈವಿಕ ಮೀಮಾಂಸೆಯ ಗುಣಾತ್ಮಕತೆಯನ್ನು ಲೋಕದ ಮುಂದಿಡುವ ಮೂಲಕ ಅಧ್ಯಾತ್ಮಿಕ ನೆಲೆಯ ಅರ್ಥವನ್ನು ಬಹುತ್ವವಾಗಿಸುವ ಕಡೆಗೆ ಹೆಜ್ಜೆ ಹಾಕುವುದನ್ನು ಕಾಣಬಹುದು.

ನೀ ಮಾಯೆಯೊಳಗೊ
ನಿನ್ನೊಳು ಮಾಯೆಯೊ
ನೀ ದೇಹದೊಳಗೋ, ನಿನ್ನಳು ದೇಹವೋ ಹರಿಯೇ

ಮಾಹೆಯ ಕುರಿತಂತೆ ಅನೇಕ ಸಂತರು ಪ್ರತಿಕ್ರಿಯಿಸಿದ್ದಾರೆ. ಮಾಹೆ ಎಂಬುವುದನ್ನು ಹೆಣ್ಣು ಎಂದು. ಚಂಚಲವಾದ ಜಗತ್ತು ಎಂದು ಬಹುನೆಲೆಯಲ್ಲಿ ಅನುಸಂಧಾನ ಮಾಡಿದೆ. ಆದರೆ ಕನಕದಾಸರು ದೇಹ ಹಾಗೂ ದೇವರ ನೆಲೆಯನ್ನು ಮಾಹೆ ಎಂದು ಗ್ರಹಿಸುವ ಜೊತೆಗೆ ಈ ಮಾಹೆಯನ್ನು ಕಳೆದು ದೇವರಲ್ಲಿ ಒಂದಾಗುವ ಕಡೆಗೆ ವಿವೇಚಿಸುತ್ತಾರೆ. ಆ ಕಾಲಮಾನದ ಸಾಮಾಜಿಕ ವಾಸ್ತವವು ಪ್ರಕೃತಿಯನ್ನು, ದೇವರನ್ನು ಮಾಹೆ ಎಂಬ ನೆಲೆಯಲ್ಲಿ ಗ್ರಹಿಸಿತ್ತು. ದೇವರನ್ನು ಸಂಪ್ರದಾಯದ ನೆಲೆಯಲ್ಲಿ ದೇವಾಲಯದಲ್ಲಿಟ್ಟು ಸಾಮಾನ್ಯರಿಗೆ ದೇವರು ಮಾಹೆಯ ರೂಪಿಯಾಗಿದ್ದಾನೆಂದು ವಿವರಿಸಿದ ಕೆಲವು ಡಾಂಭಿಕ ಜನರು ತಮ್ಮ ದೇವರನ್ನು ಮಾಹೆ ಎಂದು ತಿಳಿದುಕೊಂಡು ದೇವರ ಸ್ಪರ್ಶವನ್ನು ನೈಜ್ಯವಾದ ಭಕ್ತಿಯ ಅಭಿವ್ಯಕ್ತಿಯನ್ನು ಕಳೆದುಕೊಂಡು, ಭವಬಂಧನದಲ್ಲಿ ಕಳೆಯುತ್ತಿದ್ದ ಪರಿಸರದಲ್ಲಿ ಕನಕದಾಸರು ಮಾಹೆಯಿಂದ ದೇವರನ್ನು, ಜನರನ್ನು ಬಿಡಿಸಿ. ಅದ್ವೆöÊತ ಮೀಮಾಂಸೆಯನ್ನು ಜನರ ಮುಂದಿಡುವ ಮೂಲಕ ದೇವರು ಎಲ್ಲರ ದೇಹದೊಳಗೆ ಇದ್ದಾನೆ ಹಾಗೂ ನಾವು ದೇವರ ಪ್ರಜ್ಞೆಯನ್ನು ನಮ್ಮೊಳಗೆ ಜಾಗೃತವಾಗಿಸಿಕೊಳ್ಳುವ ನೆಲೆಯಲ್ಲಿ ದೇವರ ಅಸ್ಮಿತೆಯನ್ನು ಕಾಣಬಹುದೆಂಬ ಭಕ್ತಿಯ ಸ್ವರೂಪವನ್ನು ಕೀರ್ತನೆಯ ಮೂಲಕ ಅಭಿವ್ಯಕ್ತಿಸುತ್ತಾರೆ.
ಕನಕದಾಸರು ಸಾಮಾಜಿಕ ಚಳುವಳಿಯನ್ನು ಕೀರ್ತನೆಯ ಮೂಲಕ ಮಾಡಿದ್ದರಲ್ಲದೆ ದುಡಿಯುವ ವರ್ಗಗಳ ಸಂವೇದನೆಯನ್ನು ಕೇಂದ್ರಿಕರಿಸುವ ನೆಲೆಯಿಂದ ಸಮಾಜದ ಕೇಡನ್ನು ಕಳೆಯಲು ಮಾನವಿಯ ಮೌಲ್ಯಗಳನ್ನು ಜೀವನ ಮೀಮಾಂಸೆಯ ಮೂಲಕ ತಾತ್ವಿಕರಿಸುತ್ತಾರೆ, ಸಾಮಾಜಿಕ ವಾಸ್ತವವನ್ನು ಚಿಕಿತ್ಸೆ ದೃಷ್ಠಿಯಿಂದ ನೋಡುವ ಕನಕದಾಸರು ಜಾತಿ, ಧರ್ಮ, ಲಿಂಗ-ಬೇಧವನ್ನು ಮೀರಿ ಸಾಮಾನ್ಯತೆಯನ್ನು ನಿರೂಪಿಸುವ ಜೊತೆಗೆ ದೇವರ ನೆಲೆಯನ್ನು ಭಕ್ತನ ಭಕ್ತಿಯ ಜೊತೆಗೆ ಮುಖಾಮುಖಿಯಾಗಿಸುವ ಮೂಲಕ ರಾಜಕೇಂದ್ರಿತ ಭಕ್ತಿಯ ಸ್ವರೂಪವನ್ನು, ಪ್ರಭುತ್ವದ ಧೋರಣೆಯನ್ನು ದಾಟುವ ನಡೆಯಿಂದ ಕನಕದಾಸರ ಕೀರ್ತನೆಗಳು ಪ್ರಸ್ತುತವಾಗಿ ಕಾಣುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು