5:50 PM Saturday20 - April 2024
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲಿ ಕರ್ಕಶ ಹಾರ್ನ್ ಗಳ ಕಿರಿಕಿರಿ ತಪ್ಪಿಸಲು ಪೊಲೀಸ್ ಕಾರ್ಯಾಚರಣೆ: ಹಾರ್ನ್ ಕಿತ್ತೆಸೆದು… ಎಡಪದವು: ಅಂಗಡಿಗೆ ಗುದ್ದಿದ ಲಾರಿಯಿಂದ ಸರಣಿ ಅಪಘಾತ; ಬಸ್, ಕಾರು, ಸ್ಕೂಟರ್ ಜಖಂ;… ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ…

ಇತ್ತೀಚಿನ ಸುದ್ದಿ

ನೀಲಾಕಾಶದಲ್ಲಿ ಸದಾ ಮಿನುಗುವ ತಾರೆ ಕಲ್ಪನಾ ಚಾವ್ಲಾ: ಭಾರತದ ಪ್ರಥಮ ಮಹಿಳಾ ಗಗನ ಯಾತ್ರಿ

22/05/2021, 09:27

ತೇಜಸ್ವಿ ಕೆ. ಪೈಲಾರು

info.reporterkarnataka@gmail.com

ನೀಲಾಕಾಶದಲ್ಲಿ ಮಿನುಗುವ ನಕ್ಷತ್ರ, ಮೋಡಗಳನ್ನು ಬೆರಗುಗಣ್ಣಿನಿಂದ ನೋಡದವರಾರು ಹೇಳಿ..? ಮೊಗೆದಷ್ಟು ಮುಗಿಯದ ವಿಸ್ಮಯಗಳ ಆಗರ ಬಾಹ್ಯಾಕಾಶ. ಚಿಕ್ಕ ಮಗುವಿನಿಂದ ಹಿಡಿದು ವಯೋವೃದ್ಧರವರೆಗೆ ಆಗಸದ ಮೇಲಿನ ಕುತೂಹಲ ಹೆಚ್ಚುತ್ತಲೇ ಸಾಗಿದೆ. ಆದರೆ ಆಕಾಶಕ್ಕೆ ಹಾರಿ ತನ್ನ ಕುತೂಹಲ ತಣಿಸಿಕೊಳ್ಳುವ ಸೌಭಾಗ್ಯ ಲಭಿಸಿದ್ದು ಕೆಲವರಿಗೆ ಮಾತ್ರ. ಅಂಥ ಒಂದು ಮಿನುಗುವ ನಕ್ಷತ್ರ ಕಲ್ಪನಾ ಚಾವ್ಲಾ. ಬಾಹ್ಯಕಾಶದೆಡೆಗಿನ ತನ್ನ ಕುತೂಹಲವನ್ನು ಬೆನ್ನಟ್ಟಿ ಬಾಹ್ಯಾಕಾಶ ಯಾನ ಮಾಡಿದ ಭಾರತದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಹಾನ್ ಸಾಧಕಿ ಮತ್ತು ಬಾಹ್ಯಾಕಾಶ ಯಾನದ ನಡುವೆಯೇ ಸಾವನ್ನಪ್ಪಿದ ದುರ್ದೈವಿ ಕೂಡ.

ಹರ್ಯಾಣದ ಕರ್ನಾಲ್ ನಲ್ಲಿ 17 ಮಾರ್ಚ್ 1962 ರಂದು ಜನಿಸಿದ ಕಲ್ಪನಾಗೆ  ಬಾಲ್ಯದಿಂದಲೇ ವಿಮಾನ  ಮತ್ತು ಹಾರಾಟದ ಬಗ್ಗೆ ತೀವ್ರ ಕುತೂಹಲ.ಬಿಡುವಾದಾಗಲೆಲ್ಲ ಪೆನ್ ಹಿಡಿದು ವಿಮಾನದ ಚಿತ್ರ ಬಿಡಿಸುತ್ತಿದ್ದಳು. ಹತ್ತಿರದ ಏರ್ ಪೋರ್ಟ್ ಗೆ ತಂದೆಯ ಜೊತೆ ಹೋಗಿ ವಿಮಾನದ ಹಾರಾಟ ವೀಕ್ಷಿಸುತ್ತಿದ್ದಳು.ಬಾಹ್ಯಾಕಾಶ,ಉಪಗ್ರಹಗಳ ಬಗ್ಗೆ ತನ್ನ ಜ್ಞಾನ ಹೆಚ್ಚಿಸುತ್ತಲೇ ಸಾಗಿದಳು ಕಲ್ಪನಾ.

 ಒಮ್ಮೆ ತರಗತಿಯಲ್ಲಿ ಶಿಕ್ಷಕಿ ಶೂನ್ಯದ ಪರಿಕಲ್ಪನೆಗೆ ಒಂದು ಉದಾಹರಣೆ ಕೊಡು ಎಂದು ಕಲ್ಪನಾಳನ್ನು ಪ್ರಶ್ನಿಸಿದಾಗ ಅವಳು “ಭಾರತೀಯ ಮಹಿಳೆ ಇದುವರೆಗೆ   ಬಾಹ್ಯಾಕಾಶ ಯಾನ ಮಾಡಿಲ್ಲ.ಈ ಕ್ಷೇತ್ರದಲ್ಲಿ ಅವರದು ಶೂನ್ಯ ಸಾಧನೆ. ಇದು ಶೂನ್ಯ ಪರಿಕಲ್ಪನೆಗೆ ಒಂದು ಉದಾಹರಣೆ” ಎನ್ನುತ್ತಾಳೆ. ಆಗ ಬಾಹ್ಯಾಕಾಶ ಕ್ಷೇತ್ರದಲ್ಲಿನ ಭಾರತದ ಸಾಧನೆಯ ಅರಿವು ಅವಳಿಗಿತ್ತು.ಬಾಹ್ಯಾಕಾಶ ಯಾನ ಮಾಡಬೇಕೆಂಬ ಮಹದಾಸೆಯನ್ನು ಶಾಲಾ ದಿನಗಳಿಂದಲೇ ಕಂಡಿದ್ದ ಕಲ್ಪನಾ  ಆಗಲೇ ತನ್ನ ಗುರಿಯನ್ನು ನಿಶ್ಚಯಿಸಿಕೊಂಡಿದ್ದಳು.

 ನಂತರ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಿಂದ ಏರೋನಾಟಿಕಲ್ ಇಂಜಿನಿಯರಿಂಗ್ ಪೂರ್ತಿ ಮಾಡುತ್ತಾಳೆ. ಉನ್ನತ ವಿದ್ಯಾಭ್ಯಾಸಕ್ಕಾಗಿ 1982ರಲ್ಲಿ ಅಮೆರಿಕಾಕ್ಕೆ ಹೋಗುತ್ತಾಳೆ.ಟೆಕ್ಸಾಸ್ ಯುನಿವರ್ಸಿಟಿಯಿಂದ ಏರೋಸ್ಪೇಸ್ ಇಂಜಿನಿಯರಿಂಗ್ ಪದವಿ ಪಡೆಯುತ್ತಾಳೆ. 1988ರಲ್ಲಿ ಕೊಲೆರೆಡೋ ಯುನಿವರ್ಸಿಟಿಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ನಲ್ಲಿ PhD ಕೂಡ ಮಾಡುತ್ತಾಳೆ. ಪದವಿ ಪೂರ್ತಿಗೊಳಿಸಿದೊಡನೆ ಕಲ್ಪನಾ ನಾಸಾ ಅಮೇಸ್ ಸಂಶೋಧನಾ ಕೇಂದ್ರದಲ್ಲಿ ಕೆಲಸ ಆರಂಭಿಸುತ್ತಾಳೆ. ಸಣ್ಣ ವಿಮಾನಗಳ ಟೇಕ್ ಆಫ್ ,ಲ್ಯಾಂಡಿಂಗ್ ಪರಿಕಲ್ಪನೆ ಕುರಿತು ಅಭ್ಯಸಿಸುತ್ತಾಳೆ. ಫ್ಲುಯಿಡ್ ಡೈನಾಮಿಕ್ಸ್ ಬಗ್ಗೆ ಕೂಡ ಸಂಶೋಧನೆ ನಡೆಸುತ್ತಾಳೆ.

ಈ ನಡುವೆ ಜೇನ್ ಫಿಯರಿ ಜೊತೆ ಕಲ್ಪನಾ ವಿವಾಹವಾಗುತ್ತದೆ. ಸಿಂಗಲ್ ಮತು ಮಲ್ಟಿ ಇಂಜಿನ್ ಪೈಲಟ್ ಲೈಸನ್ಸ್ ಪಡೆಯುತ್ತಾಳೆ. ಇದೆಲ್ಲದರ ನಡುವೆ ಬಾಹ್ಯಾಕಾಶದಲ್ಲಿ ಹಾರಬೇಕೆಂಬ ಕನಸು ಅವಳನ್ನು ಸುಮ್ಮನಿರಲು ಬಿಡುವುದಿಲ್ಲ. ಸದಾ ಕೊರೆಯುತ್ತಿರುವ ಮಹದಾಸೆ ಅವಳನ್ನು ಮತ್ತಷ್ಟು ಸಾಧನೆಗೆ ಪ್ರೇರೇಪಿಸುತ್ತದೆ.1991ರಲ್ಲಿ ಅಮೇರಿಕಾದ ಪೌರತ್ವ ಪಡೆದ ಕಲ್ಪನಾ, ನಾಸಾ ಬಾಹ್ಯಾಕಾಶ ಯಾನಕ್ಕೆ ಅರ್ಜಿ ಹಾಕುತ್ತಾಳೆ. ನಾಸಾ ಕಾರ್ಪೊರೇಟ್ ಆಸ್ಟ್ರೋನಾಟ್ ವಿಜ್ಞಾನಿಯಾಗಿ ಬಾಹ್ಯಾಕಾಶದ ಕುರಿತು ಸಂಶೋಧನೆ ನಡೆಸುತ್ತಾಳೆ. ಕಡೆಗೂ ಕಲ್ಪನಾ ಕನಸು ಈಡೇರುವ ಸಮಯ ಬರುತ್ತದೆ. ನಾಸಾದ ಬಾಹ್ಯಾಕಾಶ ಯಾನಕ್ಕೆ ಕಲ್ಪನಾ ಚಾವ್ಲಾ ಆಯ್ಕೆಯಾಗುತ್ತಾಳೆ ಮತ್ತು ಈ ಸಾಧನೆ ಮಾಡಿದ ಪ್ರಥಮ ಭಾರತೀಯ ಮಹಿಳೆ ಎಂಬ ಹಿರಿಮೆ ಅವಳಿಗೆ ಸಲ್ಲುತ್ತದೆ.

19 ನವೆಂಬರ್ 1997ರಂದು 6 ಜನ ಸಹಯಾನಿಗಳೊಂದಿಗೆ ಸ್ಪೇಸ್ ಷಟಲ್ ಕೊಲಂಬಿಯಾ STS-87ರಲ್ಲಿ ಕಲ್ಪನಾ ಬಾಹ್ಯಾಕಾಶ ಯಾನ ಆರಂಭಗೊಳ್ಳುತ್ತದೆ.ಬಾಹ್ಯಾಕಾಶದಲ್ಲಿದ್ದ 15 ದಿನಗಳಲ್ಲಿ 10.4 ಮಿಲಿಯನ್  ಮೈಲಿ ದೂರ ಕ್ರಮಿಸಿದ ನೌಕೆ ಒಟ್ಟು 252 ಮಾರಿ ಭೂ ಕಕ್ಷೆಯಲ್ಲಿ ಸುತ್ತುತ್ತದೆ. ಈ ಯಾನದ ನಂತರ ಕಲ್ಪನಾ ನಾಸಾದ ತಂತ್ರಜ್ಞಾನ ವಿಜ್ಞಾನಿಯಾಗುತ್ತಾಳೆ.

ತನ್ನ ಮಹದಾಸೆ ಈಡೇರಿಸಿಕೊಂಡ ಸಂತಸದಲ್ಲಿದ್ದ ಕಲ್ಪನಾ ಚಾವ್ಲಾಗೆ ಮತ್ತೊಮ್ಮೆ ಅದೃಷ್ಟ ಕಾದಿತ್ತು.ನಾಸಾದ ಮತ್ತೊಂದು ಬಾಹ್ಯಾಕಾಶ ಯಾನಕ್ಕೆ 2001ರಲ್ಲಿ ಕಲ್ಪನಾ ಆಯ್ಕೆಯಾಗುತ್ತಾಳೆ. ಅನೇಕ ಬಾರಿ  ತಾಂತ್ರಿಕ ವೈಫಲ್ಯದ ಕಾರಣ ಯಾನ ಮುಂದೆ ಸಾಗುತ್ತದೆ. ಕಡೆಗೂ 16 ಜನವರಿ  2003 ರಂದು  ಬಾಹ್ಯಾಕಾಶ ನೌಕೆ ಕೊಲಂಬಿಯಾ STS-107 ಆಗಸಕ್ಕೆ ನೆಗೆಯುತ್ತದೆ.ಕಲ್ಪನಾ ಮತ್ತು  ಇತರ 6 ಜನ ಸಹಯಾನಿಗಳು ಬಾಹ್ಯಾಕಾಶ ವಿಜ್ಞಾನದ ಬಗೆಗೆ ಈ ಬಾರಿ 80ಕ್ಕೂ ಅಧಿಕ ಪ್ರಯೋಗಗಳನ್ನು ಮಾಡುತ್ತಾರೆ.ಆದರೆ ಇವರಿದ್ದ ಬಾಹ್ಯಾಕಾಶ ನೌಕೆ ಹಿಂತಿರುಗಿ ಬರುವ ಸಂದರ್ಭ ಎದುರಾದ ತಾಂತ್ರಿಕ ಸಮಸ್ಯೆ ಅತಿ ದೊಡ್ಡ ದುರಂತಕ್ಕೆ ಕಾರಣವಾಗುತ್ತದೆ.ವೈಫಲ್ಯ ಗುರುತಿಸಲು ಇಂಜಿನಿಯರ್ ಗಳು ವಿಫಲರಾದ ಕಾರಣ 2 ಫೆಬ್ರವರಿ 2003ರಂದು STS-107 ಭೂಮಿಯ ವಾತಾವರಣಕ್ಕೆ ಹಿಂತಿರುಗುವ ಸಂದರ್ಭ ಹೊತ್ತಿ ಉರಿದು ಬೂದಿಯಾಗುತ್ತದೆ ಕಲ್ಪನಾ ಮತ್ತು 6 ಜನ ಸಹಯಾನಿಗಳು ಆಕಾಶದಲ್ಲೆ ಮರಣವನ್ನಪ್ಪುತ್ತಾರೆ. ನಾಸಾದ ಬಾಹ್ಯಾಕಾಶ ಚಟುವಟಿಕೆಗಳು ಕೆಲ ಕಾಲ ಸ್ತಬ್ಧಗೊಳ್ಳುತ್ತವೆ. ಕಲ್ಪನಾ ಚಾವ್ಲಾ ಆಶಯದಂತೆ ಜಿಯಾನ್ ನ್ಯಾಷನಲ್ ಪಾರ್ಕ್ ನಲ್ಲಿ ಅವಳ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ.

ಬಾಹ್ಕಾಕಾಶ ಯಾನಿಯಾಗಬೇಕೆಂಬ ಕನಸು ಕಂಡು, ತಾನು ಕಂಡ ಕನಸನ್ನು ಬೆನ್ನಟ್ಟಿ 2 ಬಾರಿ ಆಗಸಕ್ಕೆ ನೆಗೆಯುವ ಅವಕಾಶ ಗಿಟ್ಟಿಸಿಕೊಂಡ ಕಲ್ಪನಾ ಚಾವ್ಲಾ ಭಾರತದ “ರಾಷ್ಟ್ರೀಯ ಹೀರೋ” ಎನಿಸಿಕೊಳ್ಳುತ್ತಾಳೆ.

 ಭಾರತ ಸರ್ಕಾರ ತನ್ನ  ಸರಣಿ ಉಪಗ್ರಹಗಳಿಗೆ “ಕಲ್ಪನಾ ಚಾವ್ಲಾ”  ಹೆಸರು ನೀಡಿ ಗೌರವಿಸುತ್ತದೆ. ಕರ್ನಾಟಕ ಸರ್ಕಾರ ಯುವ ಪ್ರತಿಭಾವಂತ ಮಹಿಳಾ ವಿಜ್ಞಾನಿಗಳಿಗೆ ಕಲ್ಪನಾ ಚಾವ್ಲಾ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.ಭಾರತ ಸೇರಿದಂತೆ ವಿಶ್ವದಾದ್ಯಂತ ಅನೇಕ ವಿಶ್ವವಿದ್ಯಾನಿಲಯಗಳು ಕಲ್ಪನಾ ಚಾವ್ಲಾ ಹೆಸರಿನಲ್ಲಿ ವಿದ್ಯಾರ್ಥಿ ವೇತನಗಳನ್ನು ನೀಡುತ್ತಿವೆ,ತಮ್ಮ ಸಂವೋಧನಾ ಕೇಂದ್ರ ಗಳಿಗೆ ಕಲ್ಪನಾ ಚಾವ್ಲಾ ಹೆಸರಿಟ್ಟಿವೆ.

ಬಾಹ್ಯಾಕಾಶ ಯಾನ ಮಾಡಿದ ಭಾರತದ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರಳಾದ ಕಲ್ಪನಾ ಚಾವ್ಲಾ ತನ್ನ ಜೀವಮಾನದ ಗುರಿಯನ್ನು ಈಡೇರಿಸಿಕೊಂಡ ಜೊತೆಗೆ ದೇಶದ ಲಕ್ಷಾಂತರ ಯುವ ಸಮೂಹದ ಮಾರ್ಗದರ್ಶಿಯಾದಳು.ಕೇವಲ 40 ರ ಹರೆಯದ ಕಲ್ಪನಾ ಸಾಧನೆ ದೇಶದ ಬಾಹ್ಯಾಕಾಶ ಕ್ಷೇತ್ರದ ಮೈಲುಗಲ್ಲುಗಳಲ್ಲೊಂದಾಗಿ ದಾಖಲಾಯಿತು.ದೃಢ ಸಂಕಲ್ಪದ ಪ್ರತಿರೂಪ ಕಲ್ಪನಾ ಚಾವ್ಲಾ ಮಹಿಳಾ ಸಬಲೀಕರಣದ ಒಂದು ಅದ್ಭುತ ಮಾದರಿ.

ಇತ್ತೀಚಿನ ಸುದ್ದಿ

ಜಾಹೀರಾತು