1:04 PM Saturday4 - December 2021
ಬ್ರೇಕಿಂಗ್ ನ್ಯೂಸ್
ಚಳ್ಳಕೆರೆ ಗಂಜಿಗುಂಟೆ ಲಂಬಾಣಿ ತಾಂಡದಲ್ಲಿ ಹೆಚ್ಚುತ್ತಿದೆ ಬೀದಿ ನಾಯಿಗಳ ಕಾಟ: ಶ್ವಾನ ಕಡಿತಕ್ಕೆ ಯುವಕ ಬಲಿ ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ ಅಪಘಾತ: ಓರ್ವ ಸಿಬ್ಬಂದಿಗೆ ತೀವ್ರ… ಮಲೆನಾಡಲ್ಲಿ ಮತ್ತೆ ಮಳೆ ಅಬ್ಬರ: ಬೆಳೆ ಕಳೆದುಕೊಳ್ಳುವ ಆತಂಕದಲ್ಲಿ ಕೃಷಿಕರು  ರಂಗಾಪುರ: ಇದು ಅಂಗನವಾಡಿ ಕಟ್ಟಡ ನಾ? ಅಥವಾ ಸಾರ್ವಜನಿಕ ಶೌಚಾಲಯ ನಾ? ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ ಸಹಾಯ ಧನ ಹಸ್ತಾಂತರ ಹೆತ್ತವರು ಮದುವೆ ಮಾಡಿಸದ ಬೇಸರ: ನೇಣು ಬಿಗಿದು ಪ್ರೇಮಿಗಳು ಆತ್ಮಹತ್ಯೆ  ಸರ್ವಧರ್ಮಿಯರು ಸಂದರ್ಶಿಸುವ ಪುಣ್ಯ ಕ್ಷೇತ್ರ ಧರ್ಮಸ್ಥಳ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್  ಚಳ್ಳಕೆರೆ ತಾಲೂಕಿನಲ್ಲಿ ಅಕ್ರಮ ಮದ್ಯದ ಹೊಳೆ: ಇಲ್ಲಿನ ಅಂಗಡಿ, ಹೋಟೆಲ್ ಗಳು ಕೂಡ… ಚಳ್ಳಕೆರೆ: ಶೇಂಗಾ ಸಾಗಾಟ ಮಾಡುತ್ತಿದ್ದ ಟಾಟಾ ಎಸಿಇ ಟೈರ್ ಸಿಡಿದು ಸ್ಥಳದಲ್ಲೇ ಚಾಲಕ ಸಾವು;… ಬಿಜೆಪಿಯಿಂದ ಮತ್ತೆ ಮುಖ್ಯಮಂತ್ರಿ ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್

ಇತ್ತೀಚಿನ ಸುದ್ದಿ

ವೀಣಾಶಾಂತೇಶ್ವರ ಅವರ ಕತೆಗಳಲ್ಲಿ ಸಾಮಾಜಿಕ ವಿವೇಚನೆ

09/05/2021, 09:56

ಡಾ ಸುಬ್ರಹ್ಮಣ್ಯ ಸಿ ಕುಂದೂರು
drsubramanyac1@gmail.com

ಸಮಾಜದ ಸ್ವರೂಪವನ್ನು ವಿಮರ್ಶೆಗೆ ಒಳಪಡಿಸಿದ ಕನ್ನಡಕಥಾ ಸಾಹಿತ್ಯವು ಮಾನವನ ವಿಕಾಸ, ಕೌಟುಂಬಿಕ ಪಲ್ಲಟ, ಹೆಣ್ಣು ಗಂಡುಗಳ ಸಂಬಂಧ ಹಾಗೂ ಸಮಾಜದ ರಚನೆಯ ಹಿಂದಿನ ಮೌಲ್ಯಗಳನ್ನು ಪರಂಪರೆ ಎಂದು ನಂಬಿಕೊಂಡು ಬರುವ ಕಾಲಮಾನದಲ್ಲಿ ಹೆಣ್ಣಿನ ಸಂವೇದನೆಯನ್ನು ಪುರಷ ಕೇಂದ್ರಿತ ಸಾಮಾಜಿಕ ವ್ಯವಸ್ಥೆಯಲ್ಲಿಯೇ ಕಟ್ಟುವ ಕಾರ್ಯವನ್ನು ಬಹುತೇಕ ಕನ್ನಡದ ಕತೆಗಾರ್ತಿಯರು ಮಾಡಿದ್ದಾರೆ. ನವ್ಯ ಕಥಾ ಸಾಹಿತ್ಯದ ಮಹತ್ವದ ಕತೆಗಾರ್ತಿ ಎನಿಸುವ ವೀಣಾಶಾಂತೇಶ್ವರ ತಮ್ಮ ಕತೆಗಳಲ್ಲಿ ಗಂಡು, ಹೆಣ್ಣುಗಳ ಮಾನಸಿಕ ನೆಲೆಯನ್ನು ಸಾಮಾಜಿಕ ವ್ಯವಸ್ಥೆಯಿಂದ ಶೋಧನೆಗೆ ಒಳಪಡಿಸುವುದರ ಜೊತೆಯಲ್ಲಿ ಪುರುಷನು ಸಾಮಾಜಿಕ ಮೌಲ್ಯವೆಂದು, ಹೆಣ್ಣಿನ ನೆಲೆಯಲ್ಲಿ ರೂಪಿಸಿರುವ ಸಂಪ್ರದಾಯ, ಜೀವನ ಮೌಲ್ಯ, ಮಡಿವಂತಿಕೆ, ಸಭ್ಯತೆಯಂತಹ ನೀತಿ, ನಿಯಮಗಳನ್ನು ಮೀರುವ ಮೂಲಕ ಸ್ತಿçà ಅಸ್ಮಿತೆಯನ್ನು ರೂಪಿಸುತ್ತಾರೆ. ವೀಣಾಶಾಂತೇಶ್ವರ ಅವರ ‘ಕೊನೆಯದಾರಿ’ ಕತೆಯು ಸಾಮಾಜಿಕವಾಗಿ ಚಲನೆಯಲ್ಲಿ ಇರುವ ಸಾಂಪ್ರದಾಯಿಕ ರೀತಿ, ನೀತಿಗಳನ್ನು ಸ್ತ್ರೀ ಒಬ್ಬಳು ಮೀರುವ ಮೂಲಕ ತನ್ನ ಸ್ವಂತಿಕೆಯನ್ನು ಕಾಪಾಡಿಕೊಂಡು ಬದುಕಿನ ಆಯ್ಕೆಗಳನ್ನು ತಾನೇ ನಿರ್ಧರಿಸುವ ಬಗೆಯು ಹೆಣ್ಣು ಗಂಡುಗಳ ಆಕರ್ಷಣೆ ಹಾಗೂ ವಿಕರ್ಷಣೆಗಳು ಸಾಮಾಜಿಕ ಭಿತ್ತಿಯನ್ನು ಕೂಡಿಕೊಂಡು ನಡೆಯುತ್ತದೆ.

ಲೀಲಾ ತಾನು ಮದುವೆಯಾದ ಗಂಡ ಕುಡುಕ, ತನ್ನನ್ನು ಕ್ರೂರವಾಗಿ ಹಿಂಸಿಸಿದ ಎಂಬ ಕಾರಣಕ್ಕಾಗಿ ಗಂಡನನ್ನು ಬಿಟ್ಟು ಸ್ವತಃ ಉದ್ಯೋಗವನ್ನು ಆರಂಭಿಸುತ್ತಾಳೆ. ಮತ್ತೊಂದು ಲಗ್ನವಾಗುವುದಕ್ಕೆ ನಿರಾಕರಿಸುವ ಲೀಲಾ ಪುರುಷ ಸಮುದಾಯವನ್ನು ಅತ್ಯಂತ ಕ್ರೂರವಾಗಿ ಗ್ರಹಿಸುವ ಮೂಲಕ ಪುರುಷನೆಂದರೆ ಪಶು ಎಂಬ ನಿಲುವಿಗೆ ಬರುತ್ತಾಳೆ. ಆದರೆ ಸಾಮಾಜಿಕ ವ್ಯವಸ್ಥೆಯು ಹೆಣ್ಣಿನ ಪರಿಪೂರ್ಣತೆ ಎಂದರೆ ಲಗ್ನ ಹಾಗೂ ಸಂಸಾರವೆಂದು ಸಂವಿಧಾನವಾಗಿಸಿರಿಕೊಂಡಿರುವುದರ ನಡುವೆ ಒಂದು ತಾಕಲಾಟವಿದೆ. ಲೀಲಾಳ ತಂದೆ, ತಂದೆಯ ಗೆಳೆಯ ಶಂಕರೇಗೌಡರು ಹೆಣ್ಣನ್ನು ಸಮಾಜದ ಸಾಂಪ್ರದಾಯಿಕ ನೆಲೆಯಿಂದಲೇ ವಿವೇಚಿಸುವುದರ ಕಾರಣ ಲೀಲಾಳನ್ನು ಮತ್ತೊಂದು ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಾರೆ. ಈ ಒತ್ತಾಯದಲ್ಲಿ ಪುರುಷನ ಬಗೆಗೆ ಗುಣಾತ್ಮಕತೆ ಇದೆ, “ಎಲ್ಲಾ ಗಂಡಸರೂ ಕೆಟ್ಟವರಲ್ಲ ಲೀಲಾ. ಬೇರೆ ಲಗ್ನ ಆಗು” ಎನ್ನುವರು. ಕತೆಗಾರ್ತಿ ಮಹಿಳೆಯನ್ನು ಲಗ್ನವೆಂಬ ಕಟ್ಟುಪಾಡುಗಳಿಂದ ಬಿಡಿಸಬೇಕೆಂದು ಯೋಚಿಸುವುದರಿಂದ ಲೀಲಾ ಲಗ್ನವೆಂಬುವುದನ್ನು ಒಪ್ಪಿಕೊಳ್ಳುವುದಿಲ್ಲ. ಲೀಲಾ ಉಳಿದುಕೊಂಡಿದ್ದ ಮನೆಯ ಬಳಿ ಇರುವ ಸುಂದರವಾದ ಮಗು ಮುನ್ಸಿಯನ್ನು ಕಂಡಾಗ ತನಗೂ ಒಂದು ಮಗು ಬೇಕು ಅನ್ನಿಸುತ್ತದೆ. ಲೀಲಾಳಿಗೆ ತನ್ನ ದೈಹಿಕ ಸುಖವನ್ನು ಪೂರೈಸಿಕೊಳ್ಳುವ, ಮಗುವನ್ನು ಪಡೆಯುವ, ಲಗ್ನವಾಗದಂತೆ ಸ್ವತಂತ್ರ್ಯವಾಗಿ ದುಡಿದು ಬದುಕುವ ಆಲೋಚನೆಗಳು ಲೋಕದ ಸಾಮಾಜಿಕ ನೀತಿ ನಿಯಮಗಳನ್ನು ಮೀರುವ, ಒಪ್ಪಿಕೊಳ್ಳುವ ತಾಕಲಾಟಗಳನ್ನು ಮೀರಿ ತನ್ನ ಬದುಕಿನ ನೆಲೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ. ತನ್ನ ಕೆಲಸದ ಸಮಯದಲ್ಲಿ ಎದುರಾಗುವ ಡಾ. ಗೋವಿಂದಮೂರ್ತಿ, ವಿನಯ ಸಾವಳಕರ, ಆಫೀಸ್ ಬಾಸ್, ವಿಲಿಯಮ್ಸ್, ಶಂಕರಗೌಡರು ಒಂದಲ್ಲ ಒಂದು ರೀತಿಯಲ್ಲಿ ಮುಖಾಮುಖಿಯಾಗುತ್ತಾರೆ. ಡಾ. ಗೋವಿಂದಮೂರ್ತಿಯು ವೃತ್ತಿಯಲ್ಲಿ ವೈದ್ಯನಾಗಿದ್ದ ಹಾಗೂ ಲೀಲಾಳನ್ನು ಕಂಡು ನಿನ್ನದು ಪರಿಪೂರ್ಣ ದೇಹ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದ. ಅವನು ವಾಸ್ತವವಾದಿ, ಚಾರ್ವಾಕರ ಥರ. ಆದರೆ ಇದು ಲೀಲಾಳಿಗೆ ವಾಕರಿಕೆ ತರಿಸುತ್ತಿದ್ದರೂ ಅವನ ಜೊತೆ ಕೂತು, ಸುತ್ತಾಡಿ, ಮಲಗಿದರೂ ಆಕೆಗೆ ಮೈ ಜುಮ್ಮೆನ್ನುವುದಿಲ್ಲ ಈ ಕಾರಣದಿಂದ ಇವನನ್ನು ಬಿಟ್ಟು ವಿನಯ ಸಾವಳಕರನನ್ನು ಸಂಧಿಸಲು ಆರಂಭಿಸುತ್ತಾಳೆ. ಸಾಮಾಜಿಕ ಲೋಕಗ್ರಹಿಕೆಯು ಗಂಡು ಮಾತ್ರ ತನಗೆ ಸುಖ ಕಾಣದ ಹೆಣ್ಣುಗಳನ್ನು ತೊರೆದು ಬೇರೆ ಹೆಣ್ಣುಗಳೊಂದಿಗೆ ತನ್ನ ಆಸೆಯನ್ನು ಪೂರೈಸಿಕೊಳ್ಳಲು ಪ್ರಯತ್ನಿಸಿ ಬಹುತೇಕ ಯಶಸ್ಸು ಕಾಣುತ್ತಾನೆ. ಆದರೆ ಸ್ತ್ರೀ ತನವನ್ನು ಕಾಣಿಸುವ ಕತೆಯು ಹೆಣ್ಣೊಬ್ಬಳು ತನ್ನ ಮನೋಕಾಮನೆಯನ್ನು ಪೂರೈಸಲು ಗಂಡು ವಿಫಲವಾದಾಗ ಅವನನ್ನು ಬಿಟ್ಟು ತನಗೆ ಬೇಕಾದ ಇನ್ನೊಬ್ಬ ಗಂಡಿನೊಂದಿಗೆ ಆಕರ್ಷಣೆಗೆ ಒಳಗಾಗುತ್ತಾಳೆ ಈ ರೀತಿಯ ಧೋರಣೆಯು ಪುರುಷ ಪ್ರಧಾನತೆಯ ನೆಲೆಯನ್ನು ಒಡೆಯುವ ಬಗೆಯಾಗಿದೆ. ಲೀಲಾ ಗೆಳೆತನ ಬೆಳೆಸುವ ವಿನಯ ಸಾವಳಕರನು ಕಾಲೇಜಿನಲ್ಲಿ ತತ್ವಶಾಸ್ತ್ರ ಬೋಧಿಸುವ ಅಧ್ಯಾಪಕ, ಬದುಕಿನ ನಿಷ್ಟೆ, ಹೆಣ್ಣಿನ ಪಾವಿತ್ರ್ಯತೆ, ಜೀವನ ಮೌಲ್ಯಗಳನ್ನು ಚರ್ಚಿಸುವ ಮತ್ತು ಪರಂಪರೆಯ ಬದುಕಿನ ನೆಲೆಯನ್ನು ಹೊಂದಿದ್ದರಿಂದ ಲೀಲಾ ತನಗೆ ಬೇಕಾದ ದೇಹಸುಖವನ್ನು ಜೊತೆಗೆ ಒಂದು ಮಗುವನ್ನು ಕೊಡಲಾರನು ಎಂದು ಭಾವಿಸಿ ನಿರಾಶೆಯಾಗುತ್ತಾಳೆ. ಆದರೆ ತನ್ನ ಕಛೇರಿಯ ಗೆಳೆಯ ವಿಲಿಯಮ್ಸ್ ತನ್ನ ಆಸೆಯನ್ನು ಪೂರೈಸಬಹುದೆಂದು ಅವನ ಜೊತೆ ತಿರುಗಾಡುತ್ತಾಳೆ. ಆದರೆ ಆತ ತನ್ನ ಆಂಟಿಯ ಆಸ್ತಿಯ ಮೋಹಕ್ಕೆ ಒಳಗಾಗಿ ಲೀಲಾಳನ್ನು ಬಿಟ್ಟು ದೂರ ಸರಿಯುತ್ತಾನೆ ಮತ್ತು ಆತನೂ “ ನಿನ್ನ ಜೊತೆ ಕಳೆದ ಸುಖದ ದಿನಗಳನ್ನು ಮರೆಯಲಾರೆ, ನಿನಗೆ ಒಳ್ಳೆಯದಾಗಲಿ ಎಂದು ಜೀಸಸ್‌ನಲ್ಲಿ ಪ್ರಾರ್ಥಿಸುತ್ತೇನೆ” ಎನ್ನುತ್ತಾನೆ. ಮಹಿಳೆಗೆ ಇರುವ ಪರಿಪೂರ್ಣತೆಯು ಪುರುಷನಲ್ಲಿ ಇಲ್ಲ ಎಂಬ ನಿಲುವು ತಾತ್ವಿಕವಾಗಿಯೇ ಕಾಣುತ್ತದೆ. ಲೀಲಾಳನ್ನು ಸಂಧಿಸಿದ ಪುರುಷರು ತೃಪ್ತಿ ಪಡುತ್ತಾರೆ ಮತ್ತು ಈ ದಿನಗಳನ್ನು ನೆನಪು ಮಾಡುತ್ತಾರೆ. ಗಂಡಿಗೆ ದೇಹದ ಸುಖ ಮಾತ್ರ ಮುಖ್ಯವಾಗುವುದು ಸಾಮಾಜಿಕ ಅಭಿವ್ಯಕ್ತಿಯಾದರೆ ಹೆಣ್ಣಿಗೆ ದೇಹ ಸುಖಕ್ಕಿಂತ ಉನ್ನತವಾದದ್ದು ಒಂದು ಇದೆ ಎಂಬುವುದನ್ನು ಸ್ತ್ರೀತನದ ಮೀಮಾಂಸೆಯಾಗಿ ಗುರುತಿಸಿಕೊಳ್ಳುತ್ತದೆ. ಲೀಲಾ ಸುಂದರವಾದ ಮಗುವನ್ನು ವಿಲಿಯಮ್ಸ್ ನಿಂದ ಪಡೆಯಲು ಮಾಡಿದ ಶ್ರಮವು ವ್ಯರ್ಥವಾದಾಗ ತನ್ನ ಕಛೇರಿಯ ಬಾಸ್ ಸಾಬಿ ಮುದುಕನಿಂದ ತನ್ನ ಆಸೆ ಪೂರೈಕೆಯಾಗುವುದೆ ಎಂದು ಯೋಚಿಸುತ್ತಾಳೆ. ಸಾಬಿ ಮುದುಕ ಚಪಲ ಹಾಗೂ ತನ್ನ ಹೆಂಡತಿ ತವರು ಮನೆಗೆ ಹೋದಾಗ ಲೀಲಾಳನ್ನು ಮನೆಗೆ ಬರುವಂತೆ ಹೇಳುತ್ತಾನೆ, ಬಾಸ್‌ನ ಈ ವರ್ತನೆಯು ಲೀಲಾಳಿಗೆ ಸರಿತೋರದಿದ್ದರೂ ಅವನಿಂದ ಮಗುವನ್ನು ಪಡೆಯಬಹುದೆಂದು ಯೋಚಿಸಿ ತನಗೆ ನಿಮ್ಮಿಂದ ಮಗು ಬೇಕು ಎಂದು ಕೇಳುತ್ತಾಳೆ. ಆಗ ಆತ. “ಇನ್ನೂ ಮದುವೆ ಆಗದ ಹುಡುಗಿ ನೀನು, ನಮ್ಮಿಂದ ಇಂತಹ ಪಾಪದ ಕೆಲಸ ಆಗೋದಿಲ್ಲ. ಇದನ್ನು ಅಲ್ಲಾ ಕ್ಷಮಿಸುವುದಿಲ್ಲ” ಎನ್ನುತ್ತಾನೆ. ಮದುವೆಯಾಗದ ಹೆಣ್ಣಿನ ಜೊತೆ ಹೆಂಡತಿ ಇಲ್ಲದಾಗ ಮಲಗಲು ಸಿದ್ಧನಿರುವ ಹಾಗೂ ಮಗು ಕೊಡಲು ಒಪ್ಪದ ವ್ಯಕ್ತಿಯು ಲೀಲಾಳಿಗೆ ಒಪ್ಪಿಗೆಯಾಗದೆ ಈ ತಾಕಲಾಟವೇ ಅವಳ ಉದ್ಯೋಗವನ್ನು ಕಳೆದುಕೊಳ್ಳುವುದರಲ್ಲಿ ಕೊನೆಗೊಳ್ಳುತ್ತದೆ. ಪುರುಷನು ರೂಪಿಸಿರುವ ಸಾಮಾಜಿಕ ವ್ಯವಸ್ಥೆಯನ್ನು ಆತನೇ ಅಪ್ಪಿಕೊಂಡು ಪಾಲಿಸುತ್ತಾನೆ ಹಾಗೂ ಮಹಿಳೆಯೂ ಪಾಲಿಸುವಂತೆ ಮಾಡುತ್ತಾನೆ. ಆ ನಿಯಮವನ್ನು ಮೀರಿ ಯಾವುದೇ ಮಹಿಳೆ ಪುರುಷನಲ್ಲಿ ತನ್ನ ಆಕಾಂಕ್ಷೆಯನ್ನು ಬೇಡಿದರೆ ಅದನ್ನು ಒಪ್ಪಿಕೊಳ್ಳುವ ಮನಸು ಪರುಷ ಪ್ರಭುತ್ವಕ್ಕೆ ಇಲ್ಲ ಎನ್ನುವ ಗ್ರಹಿಕೆಯನ್ನು ಕತೆ ಕಾಪಿಟ್ಟುಕೊಳ್ಳುತ್ತದೆ.
ಲೀಲಾಳಿಗೆ ಮೂರು ಗಂಡುಗಳ ಸಂಬಂಧದಿಂದ ಮಗು ಪಡೆಯಲು ಸಾಧ್ಯವಾಗದಿದ್ದಾಗ ನಿರಾಶೆಯಾಗದೆ ಮುಂದಿನ ದಾರಿಗಾಗಿ ಯೋಚಿಸುತ್ತಾಳೆ. ತನ್ನ ಬಾಲ್ಯದ ಗೆಳೆಯನಾದ ಶಂಕರಗೌಡ ನೆನಪು ಕಾಡುತ್ತದೆ ಮತ್ತು ಮಗುವನ್ನು ಪಡೆದುಕೊಳ್ಳಲು ಅವನೇ ಸೂಕ್ತವೆಂದು ನಿರ್ಧರಿಸುತ್ತಾಳೆ. “ನನ್ನನ್ನು ಆಜಾನುಬಾಹು ಹೆಗಲ ಮೇಲೆ ಹೊತ್ತು ಮೂರು ಸುತ್ತು ಕುಣಿದಾಗ, ಹೇಗಿದ್ದರೋ ಇನ್ನೂ ಹಾಗೆಯೇ ಇದ್ದಾರೆ. ಅವರ ಜೀವನದಲ್ಲಿ ಎಂದೂ ಏನೂ ಬದಲಾಗಲಿಲ್ಲ. ಆ ಅರ್ಧಾಂಗ ವಾಯುವಿನಿಂದ ಹಾಸಿಗೆ ಹಿಡಿದ ಹೆಂಡತಿ, ಮನೆಯಲ್ಲಿ ನಿತ್ಯ ದಾಸೋಹ, ನೂರಾ ಎಂಟು ಕಮಿಟಿಗಳ ಮೆಂಬರಶಿಪ್ಪು, ತೋಟಕ್ಕೆ ಹೊಸಬಾವಿ, ಹೊಲಕ್ಕೆ ಟ್ರಾಕ್ಟರ್, ಆ ಜೋಡು ನಳಿಕೆಯ ಬಂದೂಕು ಎಲ್ಲ ಹಾಗೇ ಇವೆ. ‘ನಿನ್ನ ಜೀವನ ಸುಖೀ ಆಗಲಿಕ್ಕೆ ನನ್ನ ಜೀವಾ ಕೊಟ್ಟೇನು”. ಎನ್ನುವ ವಿಚಾರಗಳು ನೆನಪಿಗೆ ಬಂದಾಗ ಲೀಲಾಳ ಮನಸು ನಿದ್ದೆಯಲ್ಲೂ ಶಂಕರಗೌಡರು ಕನವರಿಕೆಯಾಗುತ್ತಾರೆ. “ನಾ ಇದ್ದೀನಿ ನಿನ್ನ ಕೂಡ. ಎಂದೂ ನಿನ್ನ ಕೈ ಬಿಡೋಲ್ಲ. ನಿನಗೆ ಬೇಕಾದ್ದೆಲ್ಲ ಕೊಡ್ತೀನಿ. ಹಾ ಮಗು ಕೂಡು. ಎಷ್ಟು ಬೇಕು ಹೇಳು? ಒಂದು? ನಾಲ್ಕು? ಅಂದ ಹಾಗೆ. ಕನಸಿನ ಆ ಬಿಗಿಯಾದ, ಬೀಸಾದ ತೋಳುಗಳ ಅಪ್ಪುಗೆಯಲ್ಲಿ ನನ್ನ ಸುತ್ತಲೆಲ್ಲ ಸಣ್ಣ ಸಣ್ಣ ಮಕ್ಕಳು. ಎಷ್ಟೊಂದು ಮುದ್ದಾಗಿದ್ದ ಮಕ್ಕಳು.. ಎಲ್ಲ ನನ್ನವೇ. ಎಲ್ಲನನ್ನವೇ. ಎಲ್ಲ ನನ್ನವೇ. ಅವುಗಳ ಮಧ್ಯೆ ಆ ಮಕ್ಕಳನ್ನು ನನಗೆ ಕೊಟ್ಟ ಆ ಅಗಲ ಎದೆಯ ಗಂಡಸು ಯಾರು”. ಲೀಲಾ ಶಂಕರಗೌಡನನ್ನು ಕೂಡಿಕೊಳ್ಳುವುದರಿಂದ ತನ್ನ ಗುರಿ ಸಾಧಿಸಲು ಸಾಧ್ಯ ಎಂಬುವುದನ್ನು ಯೋಚಿಸುವ ಜೊತೆಗೆ ಗೌಡರ ವ್ಯಕ್ತಿತ್ವವು ಅವಳಲ್ಲಿ ಪುರುಷರೂ ಒಳ್ಳೆಯವರಿರುತ್ತಾರೆ ಎಂಬ ಗುಣಾತ್ಮಕ ನಿಲುವಿಗೆ ಬರುತ್ತಾಳೆ. ಕತೆಗಾರ್ತಿ ಸ್ತ್ರೀವಾದವನ್ನು ಮಂಡಿಸುವಾಗ ಸಾಮಾಜಿಕ ನೆಲೆಯಲ್ಲಿ ಸ್ತ್ರೀ ಮತ್ತು ಪುರುಷ ಇಬ್ಬರು ಸಮಾನರು ಎಂಬುವುದನ್ನು ಅಭಿವ್ಯಕ್ತಿಸುವ ಜೊತೆಗೆ ಪುರುಷನಲ್ಲಿ ಅಡಗಿರುವ ಪ್ರಭುತ್ವದ ನೆಲೆಗಳನ್ನು ವಿರೋಧಿಸುವ ಮೂಲಕ ಸಮಾನ ಬದುಕಿನ ಮೀಮಾಂಸೆಯನ್ನು ಕತೆಯಲ್ಲಿ ಕಟ್ಟುತ್ತಾರೆ. ಲೀಲಾ ಶಂಕರಗೌಡರಿಗೆ ತನ್ನನ್ನು ಕರೆದುಕೊಂಡು ಹೋಗಲು ಪತ್ರವೊಂದನ್ನು ಬರೆಯುತ್ತಾಳೆ. ಗೌಡರು ಪತ್ರ ತಲುಪಿದೊಡನೆ ಲೀಲಾಳನ್ನು ಕರೆದುಕೊಂಡು ಹೋಗುತ್ತಾರೆ. ಸಾಮಾಜಿಕ ವ್ಯವಸ್ಥೆಯಲ್ಲಿ ಪುರುಷ ಮಹಿಳೆಯನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಪದ್ಧತಿಯನ್ನು ಪುರುಷನಿಂದಲೇ ಬಿಡಿಸಿಕೊಳ್ಳುವ ತಾತ್ವಿಕತೆಯನ್ನು ಈ ಕತೆಯು ವಿವೇಚಿಸುತ್ತದೆ. ಮಹಿಳಾ ಸುಧಾರಣೆ ಎಂಬುವುದು ಮಹಿಳೆಯರ ಸ್ಥಾನಮಾನದಲ್ಲಿ ಪಲ್ಲಟವನ್ನು ರೂಪಿಸುವುದು ಮಾತ್ರವಲ್ಲ, ಸಾಮಾಜಿಕವಾಗಿ ಮಹಿಳೆಯರ ಬಗ್ಗೆ ಪುರುಷನು ಹೊಂದಿರುವ ಗ್ರಹಿಕೆಯನ್ನು ಬದಲಿಸುವ ನೆಲೆಯಲ್ಲಿ ಹೆಣ್ಣಿನ ಸಂವೇದನೆಯನ್ನು ಪುರುಷನ ಸಮಾನಾಗಿ ಗುರುತಿಸಬೇಕೆಂಬ ಆಶಯು ಈ ಕತೆಯಲ್ಲಿ ಪ್ರತಿಧ್ವನಿಸುತ್ತದೆ. “ಕಾಯುತಲಿದ್ದ ಕರೀಯ” ಎಂಬ ಕತೆಯು ಸಾಮಾಜಿಕ ಅಭಿವ್ಯಕ್ತಿಯನ್ನು ಮಂಡಿಸುವ ಮಹತ್ವದ ಕತೆಯಾಗಿ ಕಾಣುತ್ತದೆ. ವೀಣಾ ಅವರು ಹೆಣ್ಣು ಗಂಡುಗಳ ಸಂಬಂಧವನ್ನು ಶೋಧನೆಯ ಭಾಗವಾಗಿ ಸಾಮಾಜಿಕ ವ್ಯವಸ್ಥೆಯನ್ನು ವಿಮರ್ಶೆಗೆ ಒಳಪಡಿಸುವ ಸಂದರ್ಭದಲ್ಲಿ ಸಾಮಾಜಿಕ ವಾಸ್ತವವು ಒಳಗೊಂಡಿರುವ ಸಂಪ್ರದಾಯ, ನೀತಿ, ನಿಯಮ ಹಾಗೂ ಅಸಮಾನವಾದ ಪರಂಪರೆಯ ಕಟ್ಟುಪಾಡುಗಳನ್ನು ಒಡೆದು ಸ್ತ್ರೀ ಬದುಕಿನ ಸಂವೇದನೆಯನ್ನು ಲೋಕದ ಮುಂದಿಡುವ ಕೆಲಸವನ್ನು ಮಾಡುತ್ತಾರೆ. ಸಾಮಾಜಿಕ ರಚನೆಯಲ್ಲಿ ಮೇಲು ವರ್ಗದ ಪುರುಷರು ಕೆಳವರ್ಗದ ಮಹಿಳೆಯರ ಮೇಲೆ ಲೈಂಗಿಕ ಸಂಬಂಧವನ್ನು ಹೊಂದುವ ಮತ್ತು ಅವರನ್ನು ನಿಯಂತ್ರಣದಲ್ಲಿಟ್ಟುಕೊಂಡು ಬಳಸಿಕೊಳ್ಳುವುದು ಸಾಮಾನ್ಯವಾಗಿದೆ. ಈ ಕಾಲಮಾನದಲ್ಲಿ ಕೆಳವರ್ಗದ ಪುರುಷನು ಮೇಲುವರ್ಗದ ಹೆಣ್ಣಿನ ಜೊತೆಯಲ್ಲಿ ದೇಹ ಸಂಬಂಧವನ್ನು ಹೊಂದುವ ಮತ್ತು ತಾಯಿಯ ಸ್ಥಾನವನ್ನು ಪುರುಷ ಹೊತ್ತುಕೊಂಡು ಮಗುವನ್ನು ಬೆಳೆಸುವ ಯೋಚನೆಯೇ ಈ ಕತೆಯ ಮಹತ್ವವನ್ನು ಹೆಚ್ಚಿಸುತ್ತದೆ. ಕತೆಯಲ್ಲಿ ಕತೆಗಾರ್ತಿ ಮಗುವನ್ನು ಪಾಲನೆ ಮಾಡುವ ಮತ್ತು ಸಾಮಾಜೀಕರಣ ನೀಡುವ ಕಾರ್ಯವನ್ನು ಹೆಣ್ಣಿನಿಂದ ಗಂಡಿಗೆ ಪಲ್ಲಟಿಸುತ್ತಾರೆ. ಇದು ಮಹಿಳಾ ಬದುಕಿನ ಸಂರಚನೆಯನ್ನು ಕಟ್ಟುವ ಬಗೆಯಾಗಿದೆ. ಗೌಡರ ಮಗಳು ತನ್ನ ಮನೆಯ ಜೀತದ ಆಳಾದ ಕರೀಯನ್ನು ನೆಚ್ಚಿ, ಅವನೊಂದಿಗೆ ಕೂಡಿಕೊಳ್ಳುತ್ತಾಳೆ. ಈ ರೀತಿಯ ಸಂಬಂಧವು ಗೌಡರ ಮಗಳು ಲಗ್ನವಾಗದೆ ಗರ್ಭವತಿಯಾಗಲು ಕಾರಣವಾಗುತ್ತದೆ. ಈ ನಡುವೇ ಗೌಡರು ತನ್ನ ಮಗಳ ವಿಚಾರವು ಊರಿನ ತುಂಬ ಹರಡುತ್ತದೆ ಎಂಬ ಕಾರಣದಿಂದ ನಗರದ ಸಂಬಂಧಿಯ ಮನೆಯಲ್ಲಿ ಬಿಟ್ಟು, ನಗರದ ಆಸ್ಪತ್ರೆಯಲ್ಲಿಯೇ ಮಗಳು ಹೆರಿಗೆಯಾಗುತ್ತಾಳೆ. ಗೌಡರು ಮಗುವನ್ನು ದಾನ ಮಾಡಿ, ಮಗಳಿಗೆ ಮದುವೆ ಮಾಡುವ ವಿಚಾರವನ್ನು ಜೀತದ ಆಳಾದ ಕರೀಯನಲ್ಲಿ ಹೇಳಿದಾಗ, ಕರೀಯ ತನಗೆ ಹುಟ್ಟಿದ ಮಗುವನ್ನು ನಾನೇ ಸಾಕುತ್ತೇನೆಂದು ಯೋಚಿಸಿ ಗೌಡರಲ್ಲಿ ಮಗು ತನಗೆ ಬೇಕೆಂದು ಕೇಳುತ್ತಾನೆ. ಗೌಡರು ತನ್ನ ಕಣ್ಣೆದುರೇ ಮಗು ಬೆಳೆಯುತ್ತದೆ ಎಂದು ತಿಳಿದು ಕರೀಯನಿಗೆ ಮಗುವನ್ನು ನೀಡುತ್ತಾರೆ. ಕತೆಗಾರ್ತಿ ಮಹಿಳೆಯ ಅಸ್ಮಿತೆಯನ್ನು ಸಾಮಾಜಿನ ರಚನೆಯ ಒಳಗಿನಿಂದಲೇ ಉನ್ನತಿಕರೀಸಲು ಪ್ರಯತ್ನಿಸುತ್ತಾರೆ. ಗೌಡರ ಮಗಳು ಲಗ್ನವಾಗದೆ ಗರ್ಭವತಿಯಾದಾಗ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಭ್ರೂಣವನ್ನು ಕೊಲ್ಲದೆ, ಜೀವ ಉಳಿಸುವ ಮತ್ತೊಂದು ಹೆಣ್ಣಿಗೆ ಜನ್ಮ ಒದಗಿಸುವ ಕಾರ್ಯವನ್ನು ಪುರುಷ ವ್ಯವಸ್ಥೆಯಿಂದನೇ ನಿರೂಪಿಸುತ್ತಾರೆ. ಕರೀಯ ಮಗುವನ್ನು ಪಡೆದುಕೊಂಡು ಮಗುವಿಗೆ ಲಕ್ಷ್ಮಿ ಎಂದು ನಾಮವಿಟ್ಟು ಬೆಳೆಸುತ್ತಾನೆ. ತನಗೆ ಲಗ್ನವಾಗಿ ಸಂಸಾರ ನಡೆಸುವ ತುಂಬು ವಯಸ್ಸು ಇದ್ದರೂ ಲಕ್ಷ್ಮಿಯೇ ತನ್ನ ಸರ್ವಸ್ವವೆಂದು ತೀಳಿದು ಲಗ್ನವಾಗದೆ ಲಕ್ಷ್ಮಿಯನ್ನೆ ಉತ್ತಮ ರೀತಿಯಲ್ಲಿ ಬೆಳೆಸಲು ಪ್ರಾರಂಭಿಸುತ್ತಾನೆ. ಸಾಮಾಜಿಕವಾಗಿ ಕೆಳವರ್ಗದ ಕರೀಯ ಅದರಲ್ಲೂ ಜೀತನಾಗಿರುವವನು ತನ್ನ ಮನೆಯನ್ನು ಶುದ್ದವಾಗಿಸಿ, ಅನ್ನ ಮಾಡಿಕೊಳ್ಳುವ, ಸ್ನಾನ ಮಾಡುವ, ಮನೆಯಲ್ಲಿ ಊದುಗಡ್ಡಿ ಬೆಳಗುವ ನೆಲೆಯಿಂದ ತನ್ನ ಬದುಕಿನ ವಿನ್ಯಾಸವನ್ನು ಉನ್ನತವಾಗಿಸಿಕೊಳ್ಳುತಾನೆ, ಲಕ್ಷ್ಮಿಯ ವಿದ್ಯಾಭ್ಯಾಸದ ನೆಲೆಯಿಂದ ಹೆಚ್ಚು ಕೆಲಸ ಮಾಡುತ್ತಾನೆ. ಗೌಡರು ತನ್ನ ಮೊಮ್ಮಗಳೆಂದು ಪ್ರೀತಿಯಿಂದ ಬೆಳೆಸುತ್ತಾರೆ. ಲಕ್ಷ್ಮಿಗೆ ಕರೀಯ ನೆಚ್ಚಿಯಾಗುವುದೇ ಇಲ್ಲ, ಅಪ್ಪ ಎಂದು ಕರೆಯಲು ಯೋಚಿಸುತ್ತಾಳೆ. ಗೌಡರ ಮನೆ ಅಲ್ಲಿನ ಸದಸ್ಯರೇ ಅವಳಿಗೆ ನೆಚ್ಚಿಕೆಯ ಪ್ರಪಂಚವಾಗುತ್ತದೆ. ಉತ್ತಮವಾಗಿ ಬಹು ಚುರುಕಿನಿಂದ ಓದುವ ಲಕ್ಷ್ಮಿಯು ವೈದ್ಯಕೀಯ ಶಿಕ್ಷಣವನ್ನು ಪೂರೈಸಿ, ವಿದೇಶದಲ್ಲಿ ವೈದ್ಯಕೀಯ ವೃತ್ತಿಯನ್ನು ಆರಂಭಿಸುತ್ತಾಳೆ. ಕರೀಯ ‘ತನ್ನ ಮಗಳು ಲಕ್ಷ್ಮಿಯು ನನ್ನ ನೋಡಲು, ಮಾತನಾಡಿಸಲು ಬರುತ್ತಾಳೆ ಎಂದು ಪ್ರತಿದಿನ ಕಾಯುತ್ತಲೇ ದಿನ ಕಳೆಯುತ್ತಾನೆ.
ಹೆಣ್ಣಿನ ಸಂಪ್ರದಾಯಿಕ ಗುಣಗಳನ್ನು ಗಂಡಿನ ನೆಲೆಯಲ್ಲಿ ಇಟ್ಟು ನಿರೂಪಿಸುವ ಕತೆಗಾರ್ತಿ ಮಕ್ಕಳನ್ನು ಬೆಳೆಸುವುದರ ಹಿಂದಿರುವ ನೋವು, ಸಂಕಟ, ತಾಯಿತನದ ಸಂವೇದನೆಯನ್ನು ಪುರುಷ ಲೋಕಕ್ಕೆ ತಿಳುವಳಿಕೆಯ ಭಾಗವಾಗಿಸಲು ಕರೀಯನ ಮೂಲಕ ಅಭಿವ್ಯಕ್ತಿಸುತ್ತಾರೆ. ಸಾಮಾಜಿಕವಾದ ಜಾತಿ ವ್ಯವಸ್ಥೆ ಹಾಗೂ ಕೆಳಮಟ್ಟದ ಜೀವನ ಮೀಮಾಂಸೆಯು ಹೆಣ್ಣಿನ ಉನ್ನತೀಕರಣಕ್ಕೆ ತಡೆಯಾಗುತ್ತದೆ ಎಂಬ ನೆಲೆಯಲ್ಲಿಯೇ ಹೆಣ್ಣಿಗೆ ಶಿಕ್ಷಣವನ್ನು ಒದಗಿಸುವ ಮೂಲಕ ಅವಳ ಅಸ್ಮಿತೆಯನ್ನು ಉಳಿಸಿಕೊಳ್ಳು ಸಾಧ್ಯವೆಂಬ ತಾತ್ವಿಕತೆಯು ಸ್ತ್ರೀವಾದಕ್ಕೆ ಬಹು ಹತ್ತಿರವಾಗಿದೆ ಎನ್ನಿಸುತ್ತದೆ. ಲಕ್ಷ್ಮಿಯ ಬೆಳವಣಿಗೆ, ಬದುಕಿನ ತಾಕಲಾಟಗಳು, ಸಾಧಿಸಬೇಕೆಂಬ ಹಂಬಲಗಳು ಸಾಮಾಜಿಕ ವ್ಯವಸ್ಥೆಯನ್ನು ಬಹುಸ್ತರದಲ್ಲಿ ಶೋಧನೆಗೆ ಒಳಪಡಿಸಿರುವುದೇ ಈ ಕತೆಯ ಸಾಧ್ಯತೆಯಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು