ಮಂಗಳೂರು(reporterkarnataka news): ನಗರದ ಹೊರವಲಯ ವಳಚ್ಚಿಲ್ ನಲ್ಲಿರುವ ಎಕ್ಸ್‌ಪರ್ಟ್ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಊರಿಗೆ ತೆರಳಲು ಅವಕಾಶ ನೀಡದೆ, ವಿದ್ಯಾರ್ಥಿಗಳ ಪಾಲಕರು ಕಾಲೇಜು ಎದುರು ಜಮಾಯಿಸಲು ಕಾರಣರಾದ ಸಂಸ್ಥೆಯ ಮುಖ್ಯಸ್ಥ ಡಾ. ನರೇಂದ್ರ ನಾಯಕ್ ಹಾಗೂ ಆಡಳಿತ ಸಮಿತಿಯ ವಿರುದ್ಧ ರಾಜ್ಯ ಸರಕಾರ ಹಾಗೂ ಜಿಲ್ಲಾಧಿಕಾರಿಯವರ ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಂಗಳೂರು ಗ್ರಾಮಾಂತರ ಠಾಣೆಯ ಪಿಎಸ್ ಐ ಮಂಜುಳಾ ಪಿ. ಅವರು ತಮ್ಮ ಸಿಬ್ಬಂದಿಗಳ ಜತೆ ಏಪ್ರಿಲ್ 29ರಂದು ರೌಂಡ್ಸ್ ಹೊರಟಾಗಿ ವಳಚ್ಚಿಲ್ ಎಕ್ಸ್ ಪರ್ಟ್ ಕಾಲೇಜು ಎದುರು ಸುಮಾರು 20- 30 ಜನರು ಸೇರಿದ್ದರು. ಲಾಕ್ ಡೌನ್ ಅವಧಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜನರ ಗುಂಪುಗೂಡುವುದು ಕಾನೂನಿಗೆ ವಿರುದ್ಧವಾಗಿರುವುದರಿಂದ ಪಿಎಸ್ ಐ ಮಂಜುಳಾ ಅವರು ಈ ಕುರಿತು ಗುಂಪು ಸೇರಿದವರಲ್ಲಿ ವಿಚಾರಿಸಿದ್ದರು. ಆಗ ನೆರೆದ ಜನರು, ನಮ್ಮ ಮಕ್ಕಳು ಹಾಸ್ಟೆಲ್ ನಲ್ಲಿದ್ದುಕೊಂಡು ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಲಾಕ್ ಡೌನ್ ಇರುವುದರಿಂದ ನಾವು ಮಕ್ಕಳನ್ನು ನಮ್ಮ ಜತೆ ಊರಿಗೆ ಕರೆದುಕೊಂಡು ಹೋಗಲು ಬಂದಿದ್ದೇವೆ. ಆದರೆ ಸಂಸ್ಥೆಯ ಮುಖ್ಯಸ್ಥರಾದ ಡಾ. ನರೇಂದ್ರ ನಾಯಕ್ ಅವರು ನಮ್ಮ ಮಕ್ಕಳನ್ನು ನಮ್ಮ ಜತೆ ಕಳುಹಿಸುತ್ತಿಲ್ಲ. ನಾವು ಏನು ಮಾಡುವುದು ಎಂದು ತಿಳಿಯದೆ ಇಲ್ಲಿ ನಿಂತಿದ್ದೇವೆ ಎಂದು ಉತ್ತರಿಸಿದ್ದರು. ಮಂಗಳೂರು ಗ್ರಾಮಾಂತರ ಠಾಣೆಯ ಪಿಎಸ್ ಐ ಅವರು ಈ ಕುರಿತು ವೀಡಿಯೊ ಚಿತ್ರೀಕರಣ ಕೂಡ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಹಾಗೂ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದ ಎಕ್ಸ್‌ಪರ್ಟ್ ಸಂಸ್ಥೆಯ ಡಾ. ನರೇಂದ್ರ ನಾಯಕ್ ಹಾಗೂ ಆಡಳಿತ ಸಮಿತಿಯ ವಿರುದ್ದ ಕರ್ನಾಟಕ ಎಪಿಡಮಿಕ್ ಡಿಸಿಸ್ ಕಾಯಿದೆ 2020ರ ಕಲಂ 5(1), 5(4)ರ ಪ್ರಕಾರ ಪ್ರಕರಣ ದಾಖಲಿಸಲಾಗುವುದು ಎಂದು ಪಿಎಸ್ ಐ ತಿಳಿಸಿದ್ದಾರೆ.

Leave a Reply

Your email address will not be published. Required fields are marked *