ಧರ್ಮಸ್ಥಳ(reporterkarnataka news):

ಕೋವಿಡ್-19 ಕುರಿತು ಸರಕಾರ ಹೊರಡಿಸಿದ ಹೊಸ ಮಾರ್ಗಸೂಚಿಯ ಪ್ರಕಾರ

ಏ.29ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಯೋಜಿಸಲಾದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದ್ದು, ತಮ್ಮ ತಮ್ಮ ಊರಿನಲ್ಲೇ ಸರಳ ವಿವಾಹಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಸಾಮೂಹಿಕ ವಿವಾಹಕ್ಕೆ ನೋಂದಾಯಿಸಿಕೊಂಡಿರುವ ಎಲ್ಲ ಜೋಡಿಗಳಿಗೂ ಕ್ಷೇತ್ರದ ವತಿಯಿಂದ ಆಶೀರ್ವಾದಪೂರ್ವಕವಾಗಿ ನೀಡಲಾಗುವ ವಿವಾಹ ಸಂಬಂಧಿ ವಸ್ತುಗಳಾದ ಧೋತಿ, ಸೀರೆ, ರವಿಕೆ ಕಣ, ಮಂಗಳಸೂತ್ರ ಇತ್ಯಾದಿಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ಮುಖೇನ ವಧು-ವರರ ಮನೆಗೆ ಮುಟ್ಟಿಸಲಾಗುವುದು. ಏ.29 ರಂದು ನಿಗದಿತವಾಗಿರುವ ಗೋಧೋಳಿ ಲಗ್ನದಲ್ಲಿ ಅಥವಾ ತಮಗೆ ಅನುಕೂಲವಾದ ದಿನಾಂಕ ಮತ್ತು ಮುಹೂರ್ತದಲ್ಲಿ ನೋಂದಾಯಿಸಿಕೊಂಡಿರುವ ವಧು-ವರರು ತಮ್ಮ ತಮ್ಮ ಊರಿನ ಅಥವಾ ಕುಲದೇವರ ಸ್ಥಾನಗಳಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಳ್ಳಬಹುದು.

ಈ ಸಂದರ್ಭ ಯೋಜನೆಯ ಕಾರ್ಯಕರ್ತರೋರ್ವರು ಹಾಜರಿದ್ದು, ಮದುವೆಯನ್ನು ಸರಳವಾಗಿಯೂ, ಸರಕಾರದ ಕೋವಿಡ್ ಶರತ್ತುಬದ್ಧ ನಿಯಮಾವಳಿಯಂತೆ ಆಚರಿಸಿಕೊಳ್ಳುವಂತೆ ಸೂಚಿಸಲಾಗಿದೆ. ನಂತರ ಕಾನೂನಿನಂತೆ ತಾಲೂಕಿನ ಉಪ ನೋಂದಾವಣಾಧಿಕಾರಿಯವರಲ್ಲಿ ವಿವಾಹ ನೋಂದಣಿಯನ್ನು ಮಾಡಿಕೊಳ್ಳಬಹುದು. ವಿವಾಹ ದಾಖಲಾತಿ ಮಾಹಿತಿಯನ್ನು ಕ್ಷೇತ್ರಕ್ಕೆ ಕಳುಹಿಸಿಕೊಡಬೇಕು ಎಂದು ಶ್ರೀ ಕ್ಷೇತ್ರದ ಪತ್ರಿಕಾ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *