ಮಂಗಳೂರು(reporterkarnataka news): ಚೆನ್ನಾಗಿರುವ ರಸ್ತೆಯನ್ನು ಅಗೆದು ಮತ್ತೆ ಕಾಂಕ್ರೀಟ್ ಹಾಕುತ್ತಾರೆ, ಕೆಡಹಿದ ಕ್ಲಾಕ್ ಟವರ್ ನ ಜಾಗದಲ್ಲಿ ಮೊಡರ್ನ್ ಕ್ಲಾಕ್ ಟವರ್ ಕಟ್ಟಿಸುತ್ತಾರೆ.

ಆದರೆ ಜನ ಸಾಮಾನ್ಯರು ಓಡಾಡುವ ಫುಟ್ ಪಾತ್ ಮಾತ್ರ ಅಲ್ಲಲ್ಲಿ ಬಾಯಿ ಬಿಟ್ಟು ಬಲಿಗಾಗಿ ಕಾಯುತ್ತಿದೆ.

ಸ್ಮಾರ್ಟ್ ಸಿಟಿ ಎಂದು ಕರೆಸಿಕೊಳ್ಳುವ ಮಂಗಳೂರಿನಲ್ಲಿ ಫುಟ್ ಪಾತ್ ಅವ್ಯವಸ್ಥೆ ಹೇಳಿ ತೀರದು. ಪ್ರಭಾವಿ ವ್ಯಕ್ತಿಗಳ ಮನೆ, ಕಚೇರಿ ಇರುವ ಪ್ರದೇಶದಲ್ಲಿ 5 ವರ್ಷಕ್ಕೊಮ್ಮೆ ಬೇಕಾದರೂ ಫುಟ್ ಪಾತ್ ಚಪ್ಪಡಿ ಕಲ್ಲು ಬದಲಾಯಿಸಲಾಗುತ್ತದೆ. ಉಳಿದ ಕಡೆಗಳಲ್ಲಿ 20- 30 ವರ್ಷಗಳಿಂದ ಶಿಥಿಲಾವಸ್ಥೆಯಲ್ಲೇ ಫುಟ್ ಪಾತ್ ಗಳಿವೆ. ಮಂಗಳೂರಿನ ಬಡ ಹಾಗೂ ಕೆಳ ಮಧ್ಯಮ ವರ್ಗದವರು ನಗರದಲ್ಲಿ ನಡೆದಾಡಲು ಫುಟ್ ಪಾತ್ ಬಳಸುತ್ತಾರೆ. ಆದರೆ ಇಲ್ಲಿನ ಶ್ರೀಮಂತರು ತಮ್ಮ ಕಾರು ಪಾರ್ಕ್ ಮಾಡಲು ಫುಟ್ ಪಾತ್ ಉಪಯೋಗಿಸುತ್ತಾರೆ. ಮಂಗಳೂರು ಮಹಾನಗರಪಾಲಿಕೆ ಆಡಳಿತಕ್ಕೆ ತನ್ನ 60 ವಾರ್ಡ್ ಗಳ ಪೈಕಿ ಕನಿಷ್ಠ 30 ವಾರ್ಡ್‌ಗಳಲ್ಲಿ ಸುಸಜ್ಜಿತ ಫುಟ್ ಪಾತ್ ನಿರ್ಮಿಸಲು ಇದುವರೆಗೆ ಸಾಧ್ಯವಾಗಲಿಲ್ಲ.

ಪ್ರಸ್ತುತ ನಾವು ಈ ವರದಿಯಲ್ಲಿ ಹೇಳಲು ಹೊರಟಿರುವುದು ಲೇಡಿಹಿಲ್ ಪ್ರದೇಶದ ಫುಟ್ ಪಾತ್ ಅವ್ಯವಸ್ಥೆ. ಉರ್ವ ಚಿಲಿಂಬಿಯ ರಿಲಯನ್ಸ್ ಸೂಪರ್ ಮಾರ್ಕೆಟ್ ಬಳಿ ಫುಟ್ ಪಾತ್ ಗಳು ಬಾಯಿಬಿಟ್ಟಿವೆ. ಕಳೆದ ಎರಡು ವರ್ಷಗಳಿಂದ ನಾಗರಿಕರು ದೂರುಗಳನ್ನು ನೀಡಿದರೂ ಜನಪ್ರತಿನಿಧಿಗಳಾಗಲಿ, ಮಂಗಳೂರು ಮಹಾನಗರಪಾಲಿಕೆ ಅಧಿಕಾರಿ ಕ್ಯಾರೇ ಎನ್ನುತ್ತಿಲ್ಲ. ಹಾಗೆ ಲೇಡಿಹಿಲ್ ಶಾಲೆಯ ಪಕ್ಕದ ರಸ್ತೆಯ ಫುಟ್ ಪಾತ್ ಪರಿಸ್ಥಿತಿಯೂ ತೀರಾ ಕೆಟ್ಟು ಹೋಗಿದೆ. ಅದೇ ರೀತಿ ಲಾಲ್ ಭಾಗ್ ಭಾರತ್ ಮಹಲ್ ಪಕ್ಕ ಫುಟ್ ಪಾತ್ ಅಪಾಯಕಾರಿ ಸ್ಥಿತಿಯಲ್ಲಿ ಬಾಯಿ ತೆರದುಕೊಂಡಿದೆ. ವಿಶೇಷವೆಂದರೆ ಈ ಪ್ರದೇಶಗಳು ಪಾಲಿಕೆ ಕಚೇರಿಯ ಸನಿಹದಲ್ಲಿಯೇ ಇದೆ. ಇನ್ನು ಸ್ಟೇಟ್ ಬ್ಯಾಂಕ್ ಸಿಟಿ ಬಸ್ ಗಳು ನಿಲ್ಲುವ ಜಾಗದಲ್ಲಿ ಜನರು ಫುಟ್ ಪಾತ್ ಮೇಲೆ ತಂತಿಯಲ್ಲಿ ಸವಾರಿ ಮಾಡಿದಂತೆ ಬಹಳ ಎಚ್ಚರಿಕೆಯಿಂದ ನಡೆದಾಡಬೇಕಾಗುತ್ತದೆ. ಚರಂಡಿಯ ಎರಡು ಬದಿಗೆ ಕಟ್ಟಿದ ಕಲ್ಲು ಕುಸಿದು ಬಿದ್ದು ಮೇಲಿನ ಹಾಸು ಅಲುಗಾಡುತ್ತಿದೆ. ಕುದ್ರೋಳಿ, ಅಳಕೆ, ಬಂದರು, ಪಾಂಡೇಶ್ವರ, ಪಳ್ನೀರ್, ಹಂಪನಕಟ್ಟೆ ಪ್ರದೇಶ, ಜಪ್ಪು, ಮಾರ್ಗನ್ಸ್ ಗೇಟ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ಫುಟ್ ಪಾತ್ ಬಾಯಿ ತೆರೆದಿರುವುದನ್ನು ಕಾಣಬಹುದು.

Leave a Reply

Your email address will not be published. Required fields are marked *