ಇತ್ತೀಚಿನ ಸುದ್ದಿ
ಯಾರದೋ ಹಣ ಎಲ್ಲಮ್ಮನ ಜಾತ್ರೆ: ನೋಡಿ ಮಂಗಳೂರು ರಥಬೀದಿಯ ರಸ್ತೆ ಅವ್ಯವಸ್ಥೆ!
January 2, 2021, 11:09 AM

info.reporterkarnataka@gmail.com
ಅಭಿವೃದ್ಧಿಯ ಹೆಸರಿನಲ್ಲಿ ಸಾರ್ವಜನಿಕರ ಹಣ ಹೇಗೆ ಪೋಲಾಗುತ್ತಿದೆ ಎನ್ನುವುದಕ್ಕೆ ಇದೊಂದು ತಾಜ ನಿದರ್ಶನ. ಹಾಗೆಂತ ಇದು ಹೊರ ರಾಜ್ಯದ ಎಲ್ಲೋ ನಡೆಯುತ್ತಿರುವುದು ಅಲ್ಲ, ನಮ್ಮ ಮೂಗಿನಡಿಯಲ್ಲೇ ಮಂಗಳೂರಿನಲ್ಲೇ ಇದೆಲ್ಲ ನಡೆಯುತ್ತಿದೆ. ನಗರದ ರಥಬೀದಿಯ ಇಂದಿನ ದುಸ್ಥಿತಿಯ ಚಿತ್ರಣ ಇದು.
ಇಲ್ಲಿ ಕಾಂಕ್ರೀಟಿನ ರಸ್ತೆ ನಿರ್ಮಿಸಿ ನೆಟ್ಟಗೆ ಒಂದು ತಿಂಗಳು ಕಳೆದಿಲ್ಲ. ರಸ್ತೆ ನಿರ್ಮಾಣಕ್ಕೆ ಜನರ ತೆರಿಗೆಯ ಹಣವನ್ನು ಚೆಲ್ಲಿ ಅದರ ಬಿಸಿ ಆರುವ ಮುನ್ನವೇ ರಸ್ತೆಗೆ ಸರ್ಜರಿ ಶುರುವಾಗಿದೆ. ತಿಂಗಳು ಕಳೆಯುವ ಮುನ್ನವೇ ಕಾಂಕ್ರೀಟ್ ರಸ್ತೆಯನ್ನು ಇಂದು ಅಗೆದು ಹಾಕಲಾಗಿದೆ . ಇದು ಸಾರ್ವಜನಿಕರ ತೆರಿಗೆ ಹಣವನ್ನು ವ್ಯರ್ಥ ಮಾಡುವುದಲ್ಲದೆ ಮತ್ತೇನು ಎಂದು ನಗರದ ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುತ್ತಾರೆ.
ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ನೂತನ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿತ್ತು. ಅಷ್ಟೇ ಅಲ್ಲ,
ರಸ್ತೆಯ ಉದ್ಘಾಟನೆ ಕೂಡ ನಡೆದಿಲ್ಲ. ಅಷ್ಟರಲ್ಲೇ ಸರ್ಜರಿ ಆರಂಭವಾಗಿದೆ.
ಮಂಗಳೂರು ಮಹಾನಗರಪಾಲಿಕೆ ಆಡಳಿತಕ್ಕೂ, ಸ್ಮಾರ್ಟ್ ಸಿಟಿ ಕಂಪನಿಗೂ ಇರುವ ಸಂಪರ್ಕ ಕೊರತೆಯನ್ನು ಇದು ತೋರಿಸುತ್ತದೆ. ವ್ಯವಸ್ಥಿತವಾದ ಪ್ಲಾನ್ ಇಲ್ಲದೆ, ದೂರದೃಷ್ಟಿಯ ಯೋಜನೆ ಇಲ್ಲದೆ ಈ ಎಲ್ಲ ಎಡವಟ್ಟುಗಳು ನಡೆಯುತ್ತಿದೆ. ಹಾಗೆಂತ ಇದು ಮೊದಲ ಸಲ ಏನು ನಡೆಯುವುದಲ್ಲ. ಕಾಂಕ್ರೀಟ್ ನಡೆದು ಒಂದು ತಿಂಗಳೊಳಗೆ, ವರ್ಷದೊಳಗೆ ಕಾಂಕ್ರೀಟ್ ಅಗೆದ ಜೀವಂತ ಪ್ರಕರಣಗಳು ಪಾಲಿಕೆ ಇತಿಹಾಸದಲ್ಲಿ
ಸಾಕಷ್ಟಿವೆ. ಆದರೆ ಪಾಲಿಕೆಯ ಆಡಳಿತ ಇನ್ನೂ ಎಚ್ಚೆತ್ತುಕೊಂಡಿಲ್ಲ. ಅನುದಾನ ಬಿಡುಗಡೆಯಾದ ತಕ್ಷಣ ಅದನ್ನು ಮುಗಿಸಿ ತೋರಿಸುವಲ್ಲಿ ಮಾತ್ರ ಜನಪ್ರತಿನಿಧಿಗಳು ಮತ್ತು ಪಾಲಿಕೆಯ ಅಧಿಕಾರಿಗಳು ಆಸಕ್ತಿ ತೋರಿಸುತ್ತಿದ್ದಾರೆ. ಜನಪ್ರತಿನಿಧಿಗಳು ಕಟ್ಟುನಿಟ್ಟಾದರೆ ಇದಕ್ಕೆಲ್ಲ ಬ್ರೇಕ್ ಹಾಕಲು ಸಾಧ್ಯ.