ಇತ್ತೀಚಿನ ಸುದ್ದಿ
ವಿದೇಶಗಳಿಂದಲೂ ಡ್ರಗ್ಸ್ ಸರಬರಾಜು ತಳ್ಳಿ ಹಾಕುವಂತಿಲ್ಲ: ಮಂಗಳೂರು ಪೊಲೀಸ್ ಕಮಿಷನರ್
September 7, 2020, 8:59 AM

ಮಂಗಳೂರು(reporterkarnataka news): ವಿದೇಶಗಳಿಂದಲೂ ಡ್ರಗ್ಸ್ ಸರಬರಾಜು ಆಗುವುದನ್ನು ತಳ್ಳಿ ಹಾಕುವಂತಿಲ್ಲ. ಇದರ ಬಗ್ಗೆ ಪೊಲೀಸ್ ಇಲಾಖೆಗೂ ಮಾಹಿತಿ ಇದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಹೇಳಿದರು.
ನಗರದಲ್ಲಿ ಸೋಮವಾರ ನಡೆದ ರೌಡಿಗಳ ಪರೇಡ್ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಅಂತರ್ ರಾಜ್ಯದಿಂದಲೂ ಡ್ರಗ್ಸ್ ರವಾನೆಯಾಗುವ ಮಾಹಿತಿ ಇದೆ ಎಂದರು.
ಮಂಗಳೂರು ಮೂಲದ ಪ್ರಥ್ವಿ ಎಂಬಾತನನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಬಂಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಕಮಿಷನರ್, ಈ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತಿದ್ದೇವೆ. ಡ್ರಗ್ಸ್ ಪ್ರಕರಣದಲ್ಲಿ ಯಾರಾದರು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷ ಒಬ್ಬರ ಮೇಲೆ ಗೂಂಡಾ ಕಾಯಿದೆ ಹಾಕಲಾಗಿದೆ. ಒಂದು ತಿಂಗಳ ಕಾಲ ರೌಡಿಗಳ ಚಲನವಲನ ಗಮನಿಸಿ
ಮತ್ತೆ ಗೂಂಡಾ ಕಾಯಿದೆ ಜಾರಿಗೊಳಿಸಲಾಗುವುದು. ಗಡಿಪಾರು
ಶಿಕ್ಷೆಯನ್ನೂ ನೀಡಲಾಗುವುದು ಎಂದು ಅವರು ನುಡಿದರು.ಮಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಡ್ರಗ್ಸ್ ಸರಬರಾಜು ಆಗುವ ಕುರಿತು ರೌಡಿ ಪರೇಡ್ ನಡೆಸಲಾಗಿದೆ. ಇದು ಡ್ರಗ್ಸ್ ವಿರುದ್ಧ ಸಮರವಾಗಿದೆ. ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಇದರಲ್ಲಿ ಭಾಗಿಯಾಗಿರುವ ಯುವ ಜನಾಂಗಕ್ಕೆ ಇದೊಂದು ಕಠಿಣ ಎಚ್ಚರಿಕೆಯಾಗಿದೆ. ತಪ್ಪಿತಸ್ಥರೆಂದು ಕಂಡು ಬಂದರೆ ಗೂಂಡಾ ಕಾಯಿದೆ ಹಾಕಿ ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಸಿದರು.