ಇತ್ತೀಚಿನ ಸುದ್ದಿ
1.6೦ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಗುದ್ದಲಿ ಪೂಜೆ
September 8, 2020, 1:20 PM

ಮಂಗಳೂರು( reporterkarnataka news):
ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿ. ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮಾದರಿ ನಗರವನ್ನಾಗಿಸುವ ಕನಸ್ಸು ನನ್ನದು ಎಂದು ಶಾಸಕ ಡಿ. ವೇದವ್ಯಾಸ
ಕಾಮತ್ ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ದ್ವಾರಕನಗರ, ತಂತ್ರಿಲೇನ್ ಹಾಗೂ ಕೊಟ್ಟಾರ ಶಾಲೆಯ ಪರಿಸರದಲ್ಲಿ 1.60 ಕೋಟಿ ವೆಚ್ಚದಲ್ಲಿ ಹೊಸದಾಗಿ ಒಳಚರಂಡಿ ವ್ಯವಸ್ಥೆಯ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರುಮಾತನಾಡಿದರು.
ದೇಶದ ಪ್ರಮುಖ ನಗರಗಳಲ್ಲಿ ಮಂಗಳೂರು
ಒಂದಾಗಿ ಗುರುತಿಸಿಕೊಂಡಿದೆ. ಆಧುನಿಕತೆಯತ್ತ ವೇಗವಾಗಿ ಸಾಗುತ್ತಿರುವ ಮಂಗಳೂರು ನಗರದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಕುರಿತು ಹೆಚ್ಚಿನ ಗಮನ ನೀಡಲಾಗುವುದು ಎಂದರು.
ದ್ವಾರಕಾ ನಗರ, ತಂತ್ರಿಲೇನ್ ಪ್ರದೇಶ ಮತ್ತು ಕೊಟ್ಟಾರ ಶಾಲೆಯ ಬಳಿ ಒಳಚರಂಡಿ ವ್ಯವಸ್ಥೆ ಈ ಪರಿಸರದಜನರ ಬಹುಕಾಲದ ಬೇಡಿಕೆಯಾಗಿತ್ತು. ಸದ್ಯ ಅಮೃತ್ ಯೋಜನೆಯಡಿ 1.60 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದು, ಈ ಪರಿಸರದ ಬಹುಕಾಲದ ಬೇಡಿಕೆ ಈಡೇರಿಸಿದಂತಾಗಿದೆ ಎಂದು ಅವರು ನುಡಿದರು.
ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ ಮಾತನಾಡಿ, ಮಂಗಳೂರಿನ ಅಭಿವೃದ್ಧಿಯ ವಿಚಾರವಾಗಿ ಶಾಸಕ ವೇದವ್ಯಾಸ್ ಕಾಮತ್ ಅವರ ಕಾರ್ಯ ವೈಖರಿ ಅದ್ಭುತವಾಗಿದೆ. ಸಾರ್ವಜನಿಕರ ಬೇಡಿಕೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಪ್ರವಾಸೋದ್ಯಮ, ಪ್ರಮುಖ ಕಾರ್ಯಗಳ ಬಗ್ಗೆ ವಿಶೇಷ ಗಮನ ನೀಡುತ್ತಿದ್ದಾರೆ. ಪಾಲಿಕೆಯ ಅಭಿವೃದ್ಧಿ ಕಾರ್ಯಗಳ ಕುರಿತು ಶಾಸಕರ ಸಹಕಾರ, ಅನುದಾನ ತರುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂದರು.
ಪಾಲಿಕೆ ದೇರೆಬೈಲ್ ಪಶ್ಚಿಮ ವಾರ್ಡ್ ಸದಸ್ಯರಾದ ಜಯಲಕ್ಷ್ಮಿ ಶೆಟ್ಟಿ, ಸ್ಥಾಯಿ ಸಮಿತಿ ಅದ್ಯಕ್ಷರಾದ ಜಗದೀಶ್ ಶೆಟ್ಟಿ ಬೇಳೂರು, ಪೂರ್ಣಿಮಾ,ಕಿರಣ್ ಕುಮಾರ್, ಮನಪಾ ಸದಸ್ಯರಾದ ಶಶಿಧರ್ ಹೆಗ್ಡೆ, ಮನೋಜ್ ಕುಮಾರ್, ಗಣೇಶ್ ಕುಲಾಲ್, ಬಿಜೆಪಿ ಮುಖಂಡರಾದ ಸುಧೀರ್ ಶೆಟ್ಟಿ ಕಣ್ಣೂರು, ರಮೇಶ್ ಹೆಗ್ಡೆ, ಸುರೇಖಾ ಹೆಗ್ಡೆ,ಅಮಿತ್ ರಾಜ್,ವಿನಯ್ ನೇತ್ರ ದಡ್ಡಲ್ಕಾಡ್, ಚರಿತ್ ಪೂಜಾರಿ, ಸಚಿನ್ ರಾಜ್ ರೈ, ಗೀತಾ ಭವಾನಿ ಶಂಕರ್, ಸುಮಾ ಚರಣ್, ಉಮೇಶ್ ಶೆಟ್ಟಿ ಹಾಗೂ ಬಿಜೆಪಿ ಕಾರ್ಯಕರ್ತರು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.